ಕಾವ್ಯಲೋಕ: ದೀಪಕ್ ಶಿಂಧೆ ಅವರ ಕವನ ‘ ಬಿಟ್ಟು ಬಿಡು ನನ್ನ’

ಬಿಟ್ಟು ಬಿಡು ನನ್ನ

*ದೀಪಕ್ ಶಿಂಧೆ

ಸಾಧ್ಯವಾದರೆ ಬಿಟ್ಟುಬಿಡು ಸ್ವಲ್ಪ ನನ್ನ ಪಾಡಿಗೆ ನನ್ನ ಬದುಕಬೇಕಿದೆ ನಾನೂ
ನಿನ್ನ ನೆನಪುಗಳಿಗೂ ತಿಳಿಸು ಈ ಪಾಪಿಯ
ಸತಾಯಿಸದಿರಿ ಎಂದು ಕಾರಣ
ಬದುಕಬೇಕಿದೆ ನಾನೂ…

ಇರಲಿ ಒಂದಷ್ಟು ಏಕಾಂತ
ಈ ಆತ್ಮದ ತುಮುಲಗಳ ತಣಿಸಲು,ವಾದ-ವಿವಾದ ಜಗಳ-ಮುನಿಸುಗಳು ಸಾಕು
ಜೊತೆಯಾಗಿ ನಡೆವುದರ ನಡುವೆ ಒಂದಷ್ಟು ಏಕಾಂತಗಳೂ ಬೇಕು ಸಾಧ್ಯವಾದರೆ ಬಿಟ್ಟು ಬಿಡು ಬದುಕಬೇಕಿದೆ ನಾನು.

ನಕ್ಕ ನಲಿವಿಗಿಂತ ಅತ್ತದ್ದೆ ಹೆಚ್ಚಿದೆ ನಾವು.ಪರಸ್ಪರ ಶಪಿಸಿದ್ದು ಸಾಕು ಸಖಿ ಸಾಧ್ಯವಾದರೆ ಬಿಟ್ಟು ಬಿಡು ಸ್ವಲ್ಪ ನನ್ನ ಪಾಡಿಗೆ ನನ್ನ ಬದುಕಬೇಕಿದೆ ನಾನೂ..

ಈ ಅತ್ತತ್ತು ಬತ್ತಿದ ಕಣ್ಣುಗಳಲ್ಲಿ
ಮೊದಲ ಹೊಳಪಿಲ್ಲ ಬಿಡು.
ಈ ಮುಷ್ಟಿ ಹೃದಯದಲ್ಲಿ
ಜಗದ ನೋವು ಹಿಡಿಸದು ಗೆಳತಿ ಸಾಧ್ಯವಾದರೆ ಬಿಟ್ಟು ಬಿಡು ನನ್ನ
ಬದುಕಬೇಕಿದೆ ನಾನು.

ಬಿಡುವದೆಂದರೆ??
ದೂರ ತಳ್ಳುವದಲ್ಲ ದೂರ ಸಾಗುವದಲ್ಲ ಈಗ ಇರುವಂತೆ ಇರಲು ಬಿಡು ಸಾಕು ಬದುಕಬೇಕಿದೆ ನಾನು.

ನೆನಪಿರಲಿ
ನಿಷ್ಠೆಯ ನಾಯಿಗಳು ರೊಟ್ಟಿ ಹಾಕದೆ ಇದ್ದರೂ ಮನೆ ಬಿಟ್ಟು ಕದಲುವದಿಲ್ಲ.ಈ ಜೀವದ ಆತ್ಮಕ್ಕೂ ದೊರೆಯಾಗಿರುವೆ ನೀನು ಸದ್ಯ ಯಾವ ದೂರುಗಳೂ ನನಗಿಲ್ಲ
ಸಾಧ್ಯವಾದರೆ ಬಿಟ್ಟುಬಿಡು ಸ್ವಲ್ಪ ಬದುಕಬೇಕಿದೆ ನಾನೂ.

ಇಲ್ಲಿ ಯಾರು ಯಾವುದನ್ನೂ ಮರೆಯುವದಿಲ್ಲ ಮರೆತಂತೆ ಬದುಕುತ್ತಾರಷ್ಟೇ.
ಒಮ್ಮೊಮ್ಮೆ ಬಾರದ ನಗುವನ್ನೂ ಮುಖದ ಮೇಲೆ ತರಿಸಬೇಕು.ಅಳು ನುಂಗಿ ನಗಿಸುವ ಪ್ರಯತ್ನ ನಿರಂತರ ನಮ್ಮದಾಗಿರಬೇಕು.ಸಾಧ್ಯವಾದರೆ ಬಿಟ್ಟುಬಿಡು ಸ್ವಲ್ಪ ಬದುಕಬೇಕಿದೆ ನಾನೂ.

ಕಾಲಚಕ್ರವೂ ಬಿಡದೆ ಪಲ್ಲಟವಾಗುತ್ತದೆ ಒಮ್ಮೊಮ್ಮೆ.
ಮೇಲೇರಿದವರು ಕೆಳಗೆ ಇಲ್ಲಿ ಬರಲೇಬೇಕು.
ಇನ್ನೂ ತೀರಿಸಲು ಯಾವ ಬಾಕಿಗಳೂ ಉಳಿದಿಲ್ಲ.
ನಿನ್ನ ದ್ವೇಷಕ್ಕೂ ಪ್ರೀತಿಯ ಧಾರೆ ಎರೆದಿದ್ದೇನೆ ನಾನು
ಬಹುಶಃ ಋಣಮುಕ್ತನಾಗಿದ್ದೇನೆ ಈಗೀಗ
ಸಾಧ್ಯವಾದರೆ ಬಿಟ್ಟು ಬಿಡು ಬದುಕಬೇಕಿದೆ ನಾನೂ…

ದೀಪಕ್ ಶಿಂಧೆ, ಪತ್ರಕರ್ತ, ಅಥಣಿ
ಮೊ:9482766018