ಸಿರವಾರ: ಕುರಕುಂದ ಗ್ರಾಮದಲ್ಲಿ ನಟ ಸುದೀಪ್ ದೇವಸ್ಥಾನ ನಿರ್ಮಾಣ!

ಸಿರವಾರ ಡಿ.02: ತಾಲೂಕಿನ ಕುರಕುಂದ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿಯ ಜೊತೆಗೆ ಖ್ಯಾತ ನಟ ಸುದೀಪ್ ಅವರ ಮೂರ್ತಿ ಇರುವ ದೇವಸ್ಥಾನ ನಿರ್ಮಾಣ ಮಾಡಲು ಅಭಿಮಾನಿಗಳು ಮುಂದಾಗಿದ್ದಾರೆ. ಕುರಕುಂದ ಗ್ರಾಮದಲ್ಲಿ ಮೊದಲು ಮಹರ್ಷಿ ವಾಲ್ಮೀಕಿ ದೇವಸ್ಥಾನ ನಿರ್ಮಾಣ ಮಾಡಲು ಗ್ರಾಮದ ಮುಖಂಡರು ನಿರ್ಧರಿಸಿದ್ದರು. ನಂತರ ಗ್ರಾಮದ ಯುವಕರ ಮನವಿ ಮೇರೆಗೆ ಕನ್ನಡದ ಖ್ಯಾತ ನಟ ಸುದೀಪ್ ಅವರ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದಾರೆ. 30×40 ಅಡಿ ಅಳತೆಯ ನಿವೇಶನದಲ್ಲಿ 6 ಅಡಿ ಎತ್ತರದ ಮಹರ್ಷಿ ವಾಲ್ಮೀಕಿ ಮೂರ್ತಿ, 4 ಅಡಿ ಎತ್ತರದ ಸುದೀಪ್ ಅವರ ಮೂರ್ತಿ ಸ್ಥಾಪಿಸಲಾಗುತ್ತಿದೆ. ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರವನ್ನು ಎಲ್ ಇಡಿ ಮಾದರಿಯಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ದೇವರಾಜ ನಾಯಕ ಕುರಕುಂದ ತಿಳಿಸಿದ್ದಾರೆ.
ದೇಣಿಗೆ: ದೇವಸ್ಥಾನ ನಿರ್ಮಾಣಕ್ಕೆ ಗ್ರಾಮಸ್ಥರು , ದಾನಿಗಳು ದೇಣಿಗೆ ನೀಡಿದ್ದಾರೆ. ಕೆಲವರು ಸ್ವಯಂ ಪ್ರೇರಣೆಯಿಂದ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಙಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಉದ್ಯಾನ‌ ನಿರ್ಮಿಸುವ ಉದ್ದೇಶ ಇದೆ ಎಂದು ಅವರು ಹೇಳಿದ್ದಾರೆ. ದೇವಸ್ಥಾನ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಸಂಪೂರ್ಣ ಚಿತ್ರಣವನ್ನು ನಟ ಸುದೀಪ್ ಅವರಿಗೆ ತೋರಿಸಲಾಗುವುದು. ಮಹರ್ಷಿ ವಾಲ್ಮೀಕಿ ಹಾಗೂ ಸುದೀಪ್ ದೇವಸ್ಥಾನ ಉದ್ಘಾಟನೆಗೆ ವಾಲ್ಮೀಕಿ ಸಮಾಜದ ಗುರುಗಳು ಹಾಗೂ ಚಿತ್ರ ನಟ ಕಿಚ್ಚ ಸುದೀಪ್ ಆಗಮಿಸುವ ನಿರೀಕ್ಷೆ ಇದೆ  ಎಂದು ದೇವರಾಜ ನಾಯಕ ಕುರಕುಂದ ತಿಳಿಸಿದ್ದಾರೆ.