ದೇವಿ ಬಗಳಾಮುಖಿ– ಒಂದಿಷ್ಟು ವಿವರಣೆ : ಮುಕ್ಕಣ್ಣ ಕರಿಗಾರ

ದೇವಿ ಬಗಳಾಮುಖಿ– ಒಂದಿಷ್ಟು ವಿವರಣೆ

ಲೇಖಕರು: ಮುಕ್ಕಣ್ಣ ಕರಿಗಾರ

‘ ಮಹಾಶೈವ ಸಾಹಿತ್ಯ ಮಂಟಪ’ ವಾಟ್ಸಾಪ್ ಗುಂಪಿನ‌ ಕ್ರಿಯಾಶೀಲ ಸದಸ್ಯರಲ್ಲೊಬ್ಬರಾಗಿರುವ ಮಲ್ಲಿಕಾರ್ಜುನ ಬಾಗಲವಾಡ ಅವರು ‘ ಬಗಳಾಮುಖಿ ದೇವಿ’ ಯ ಬಗ್ಗೆ ಮಾಹಿತಿ ಕೇಳಿದ್ದಾರೆ.ವೃತ್ತಿಯಿಂದ ಶಿಕ್ಷಕರಾಗಿರುವ ಅವರು ಆಧ್ಯಾತ್ಮಿಕ ವಿಷಯದಲ್ಲಿ ತೀವ್ರ ಆಸಕ್ತಿಉಳ್ಳವರಾಗಿದ್ದು ವಚನಸಾಹಿತ್ಯ,ಶರಣಸಾಹಿತ್ಯದಲ್ಲಿ ಆಸಕ್ತಿ ಉಳ್ಳವರು.ಮಹಾಶೈವ ಧರ್ಮಪೀಠದ ಸಾಂಸ್ಕೃತಿಯ ಸಮಿತಿಯ ಸದಸ್ಯರಲ್ಲೊಬ್ಬರಾಗಿರುವ ಮತ್ತು ನನ್ನ ನಿಕಟವರ್ತಿಗಳೂ ಆಗಿರುವ ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಭೋಗಾವತಿಯವರ ಮೂಲಕ ನನಗೆ ಪರಿಚಿತರಾದ ಮಲ್ಲಿಕಾರ್ಜುನ ಬಾಗಲವಾಡ ಅವರು ಮಹಾಶೈವ ಸಾಹಿತ್ಯ ಮಂಟಪ ವಾಟ್ಸಾಪ್ ಗುಂಪಿನಲ್ಲಿ ಹಾಗೂ ವೈಯಕ್ತಿಕವಾಗಿ ನನಗೆ ಮೆಸೇಜ್ ಮಾಡಿ ಕೇಳುತ್ತಿರುವ ಧಾರ್ಮಿಕ,ಆಧ್ಯಾತ್ಮಿಕ ಪ್ರಶ್ನೆಗಳು ಸಾಧನಾಪಥದಿ ಮುನ್ನಡೆದ ಒಬ್ಬ ಆಧ್ಯಾತ್ಮಿಕ ಸಾಧಕನ‌ ಪ್ರಶ್ನೆಗಳಾಗಿ ಕಂಡಿದ್ದರಿಂದ ಉತ್ತರಿಸುತ್ತಿರುತ್ತೇನೆ ಅವರ ಪ್ರಶ್ನೆಗಳಿಗೆ.ಮಾನ್ವಿ ತಾಲೂಕಿನ ಬಾಗಲವಾಡದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿರುವ ಮಲ್ಲಿಕಾರ್ಜುನ ಬಾಗಲವಾಡ ಅವರು ಧರ್ಮ,ಆಧ್ಯಾತ್ಮಿಕ ಸಂಗತಿಗಳಲ್ಲಿ ಆಸಕ್ತಿಯುಳ್ಳವರಾಗಿ ವಿಶಿಷ್ಟರಾಗಿದ್ದಾರೆ,ಮಾದರಿಯಾಗಿದ್ದಾರೆ ಶಿಕ್ಷಕರಿಗೆ.

ಮೊನ್ನೆ ನಾನು ‘ ಪುಸ್ತಕ ಪರಿಚಯ’ ವಿಭಾಗದಲ್ಲಿ ಲ.ಶರ್ಮ ಅವರು ಅನುವಾದಿಸಿದ ‘ಶ್ರೀ ದುರ್ಗಾಸಪ್ತಶತಿ’ ಯ ಬಗ್ಗೆ ಪ್ರಸ್ತಾಪಿಸುತ್ತ ಚಿದಾನಂದಾವಧೂತರು ದುರ್ಗಾಸಪ್ತಶತಿಯನ್ನು ‘ ಪಾರ್ವತಿ ದೇವಿ ಮಹಾತ್ಮೆ’ ಎಂದು ಭಾಮಿನೀ ಷಟ್ಪದಿಯಲ್ಲಿ ರಚಿಸಿದ್ದನ್ನು ವಿವರಿಸಿದ್ದೆ.ಆ ಸಂದರ್ಭದಲ್ಲಿ ಚಿದಾನಂದಾವಧೂತರು ಸಿದ್ಧಪರ್ವತದಲ್ಲಿ ಬಗಳಾಮುಖಿ ದೇವಿಯ ಸಾಕ್ಷಾತ್ಕಾರ ಪಡೆದು ದೇವಿಯ ಆಣತಿಯಂತೆ ‘ ದೇವಿ ಮಹಾತ್ಮೆ’ ರಚಿಸಿದ್ದಾರೆ ಎನ್ನುವ ವಿವರಗಳನ್ನು ನೀಡಿದ್ದನ್ನು ಓದಿ,ಕುತೂಹಲಗೊಂಡ ಮಲ್ಲಿಕಾರ್ಜುನ ಬಾಗಲವಾಡ ಅವರು ‘ ಬಗಳಾಮುಖಿದೇವಿಯ’ ಕುರಿತು ಮಾಹಿತಿ ಬಯಸಿದ್ದಾರೆ.ಚಿದಾನಂದಾವಧೂತರು ಉತ್ತರ ಕರ್ನಾಟಕದ ಎತ್ತರದ ಯೋಗಸಾಧಕರು,ಶಾಕ್ತ ಪರಂಪರೆಯಲ್ಲಿ ಬಹುದೊಡ್ಡ ಸಾಧನೆ ಮಾಡಿದವರು.ಅವರ ಗುರುವಿನ ಹೆಸರು ಕೂಡ ಚಿದಾನಂದರು ಎಂಬುದೇ.ತಮ್ಮ ಗುರು ಚಿದಾನಂದರನ್ನು ರಾಜಯೋಗಿ ಎಂದು ಕರೆದು ಗೌರವಿಸಿ’ ಗುರು ಚಿದಾನಂದಾತ್ಮ ಬಗಳೆ’ ಎಂದು ಬಗಳಾಮುಖಿಯನ್ನು ಕರೆದಿದ್ದಾರೆ.ಅವರು ತಮ್ಮ ಗುರು ಚಿದಾನಂದರನ್ನು ಶಿವಾದ್ವೈತಭಾವದಿಂದ ಕಂಡಿದ್ದಾರೆ ಪರಮಹಂಸ ಎಂದು ಗುರುವನ್ನು ಗೌರವಿಸಿದ್ದಲ್ಲದೆ ಚಿದಾನಂದಾತ್ಮ ಬಗಳೆ ಎನ್ನುವ ಮೂಲಕ ಬಗಳಾಮುಖಿ ದೇವಿಯು ಪರಶಿವನ ಚಿಚ್ಛಕ್ತಿ ಎನ್ನುವುದನ್ನು ಸಾರಿದ್ದಾರೆ.ಸಿದ್ಧಪರ್ವತವು ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುತ್ತಿದ್ದು ಅಲ್ಲಿರುವ ಬಗಳಾಮುಖಿ ದೇವಿಯ ದೇವಸ್ಥಾನವನ್ನು ‘ ಅಂಬಾಮಠ’ ಎಂದು ಕರೆಯುತ್ತಾರೆ.ಪ್ರತಿವರ್ಷ ಅಂಬಾದೇವಿಯ ಜಾತ್ರೆಯಲ್ಲಿ ನಾಡು ಹೊರನಾಡುಗಳಿಂದ ಅಸಂಖ್ಯಾತ ಸಾಧುಗಳು ಆಗಮಿಸಿ,ಸಿದ್ಧಪರ್ವತ ಎನ್ನುವ ಹೆಸರನ್ನು ಸಾರ್ಥಕಗೊಳಿಸಿದ್ದಾರೆ.ಹಿಂದೆ ಸಿದ್ಧರುಗಳು ಆ ಪರ್ವತದಲ್ಲಿ ಬಗಳಾಮುಖಿ ದೇವಿಯ ಉಪಾಸನೆ- ಆರಾಧನೆಗಳ ಮೂಲಕ ಸಾಕ್ಷಾತ್ಕರಿಸಿಕೊಂಡು ಮಹಿಮೆ ಮೆರೆದದ್ದರಿಂದ ಅದು ‘ ಸಿದ್ಧ ಪರ್ವತ’ ಎಂದು ಖ್ಯಾತಿ ಪಡೆದಿದೆ.

ಬಗಳಾಮುಖಿ ದೇವಿಯು ದಶಮಹಾವಿದ್ಯೆಯರಲ್ಲಿ ಒಬ್ಬಳು.’ ಮಹಾವಿದ್ಯೆ’ ಎನ್ನುವುದು ಉತ್ಕೃಷ್ಟ ಜ್ಞಾನ ಎನ್ನುವ ಅರ್ಥ ನೀಡುತ್ತಿದ್ದು ತಾಂತ್ರಿಕೋಪಾಸನೆಯಲ್ಲಿ ದಶಮಹಾವಿದ್ಯೆಯರಿಗೆ ಮಹತ್ವದ ಸ್ಥಾನವಿದೆ.ಕಾಳಿ,ತಾರಾ,ತ್ರಿಪುರಸುಂದರಿ (ಷೋಡಶಿ)ಭುವನೇಶ್ವರಿ,ಛಿನ್ನಮಸ್ತಾ,ಭೈರವಿ,ಧೂಮಾವತಿ,ಬಗಳಾಮುಖಿ,ಮಾತಂಗಿ ಮತ್ತು ಕಮಲಾ ಇವರುಗಳು ದಶಮಹಾವಿದ್ಯೆಯರು.ಹಿಮಾಲಯದ ಋಷಿಗಳಲ್ಲಿ ಕೆಲವರು ಈ ದಶಮಹಾವಿದ್ಯೆಯರನ್ನು ಉಪಾಸಿಸುತ್ತಿದ್ದಾರೆ.ದಶಮಹಾವಿದ್ಯೆಯಲ್ಲಿ ಒಬ್ಬಳು ಮತ್ತು ಮೊದಲನೆಯ ದೇವಿ ಆದ ಕಾಳಿಯ ಉಪಾಸನೆಯ ಬಲದಿಂದಲೇ ರಾಮಕೃಷ್ಣ ಪರಮಹಂಸರು ಜಗದ್ವಂದ್ಯ ಯೋಗಿಯಾದರು ಎನ್ನುವುದನ್ನು ನೆನೆಯಬಹುದು.ಶಾಕ್ತಸಾಧಕರು ಈ ದಶ ಮಹಾವಿದ್ಯೆಯರಲ್ಲಿ ತಮಗೆ ಇಷ್ಟವಾದ ವಿದ್ಯಾರೂಪಿಣಿ ದೇವಿಯನ್ನು ಧ್ಯಾನಿಸಿ,ಭಜಿಸುತ್ತಾರೆ.ದಶಮಹಾವಿದ್ಯೆಯರು ಒಂದೊಂದು ವಿಶಿಷ್ಟ ಶಕ್ತಿಯ ಪ್ರತೀಕ.ಪರಶಿವನ ಪ್ರಪಂಚ ಲೀಲಾ ತತ್ತ್ವವನ್ನನುಸರಿಸಿ ಪಾರ್ವತಿ ದೇವಿಯು ತೋರಿದ‌ ಲೀಲೆಯೇ ದಶಮಹಾವಿದ್ಯೆಯರು.ಬಗಳಾಮುಖಿಯು ಸ್ತಂಭನ ವಿದ್ಯೆಯ ಅಧಿದೇವಿ ಆಗಿದ್ದು ಶತ್ರುಸ್ತಂಭನಕ್ಕೆ ಆ ದೇವಿಯನ್ನು ಆರಾಧಿಸಲಾಗುತ್ತಿದೆ.ಉಗ್ರಭಯಂಕರಿ ಆಗಿರುವ ಬಗಲಾಮುಖಿಯು ತನ್ನ ನಾಲಗೆಯನ್ನು ಹೊರಚಾಚಿ ಶತ್ರುವಿನ ಜಿಹ್ವೆಯನ್ನು ಹಿಡಿದು ಕತ್ತಿಯಿಂದ ಅದನ್ನು ಕತ್ತರಿಸುತ್ತಿರುವ ಭಯಂಕರಿಯಾಗಿ ಕಾಣಿಸಿಕೊಂಡಿದ್ದಾಳೆ.ಬಗಳಾಮುಖಿಯ ಏಕಾಕ್ಷರಿ ಮಂತ್ರ ಹ್ಲೀಂ ಎನ್ನುವುದು.” ಓಂ” ಕಾರ ಪ್ರಣವವು ಪರಶಿವ ವಾಚಕವಾಗಿರುವಂತೆ ” ಹ್ರೀಂ” ಕಾರವು ಪರಾಶಕ್ತಿವಾಚಕ.” ಕ್ರೀಂ” ಎನ್ನುವುದು ಮಹಾಕಾಳಿಯ ಏಕಾಕ್ಷರಿ ಮಂತ್ರವಾದರೆ ” ದುಂ” ಎನ್ನುವುದು ದುರ್ಗಾದೇವಿಯ ಏಕಾಕ್ಷರಿ ಮಂತ್ರ.ಹಾಗೆಯೇ ” ಶ್ರೀಂ” ಎನ್ನುವುದು ಮಹಾಲಕ್ಷ್ಮೀಯ ಏಕಾಕ್ಷರಿಯಾದರೆ ” ಐಂ” ಕಾರವು ಸರಸ್ವತಿಯ ಏಕಾಕ್ಷರಿ ಮಂತ್ರ.ಈ ಎಲ್ಲ ಏಕಾಕ್ಷರಿ ಮಂತ್ರಗಳಂತೆ ” ಹ್ಲೀಂ” ಕಾರವು ಬಗಳಾಮುಖಿಯ ಏಕಾಕ್ಷರಿ ಮಂತ್ರ.ಏಕಾಕ್ಷರಿ ಮಂತ್ರಗಳು ಆಯಾ ದೇವ ದೇವಿಯರ ಮೂಲ ಮಂತ್ರಗಳಾಗಿದ್ದು ಆ ದೇವ ದೇವಿಯರ ಶಕ್ತಿಯು ಏಕಾಕ್ಷರಿಯಲ್ಲಿ ಪ್ರಕಟಗೊಂಡಿರುತ್ತದೆ.

ಮಾರ್ಕಂಡೇಯ ಋಷಿಗಳವರ ” ದುರ್ಗಾಸಪ್ತಶತಿ” ಯು ಶಾಕ್ತರ ಪ್ರಮಾಣಗ್ರಂಥ,ಶಾಕ್ತತಂತ್ರ.ಶಕ್ತಿಯ ಉಪಾಸನೆಗೆ ಸಂಬಂಧಿಸಿದ ಎಲ್ಲ ಮಂತ್ರ,ತಂತ್ರ,ಕ್ರಿಯೆ- ಉಪಾಸನೆಗಳೆಲ್ಲ ಅಡಕಗೊಂಡಿವೆ ದುರ್ಗಾಸಪ್ತಶತಿಯಲ್ಲಿ.ದೇವಿಭಾಗವತದ ಏಳನೇ ಸ್ಕಂದವು ” ದೇವಿಗೀತೆ” ಎಂದೇ ಪ್ರಸಿದ್ಧಿಯಾಗಿದೆ.

ಬಗಳಾಮುಖಿ ದೇವಿಯ ಅವತಾರಕ್ಕೆ ಸಂಬಂಧಿಸಿ ಹಲವು ಕಥಾನಕಗಳಿದ್ದು ಅವುಗಳಲ್ಲಿ ಎರಡು ಕಥೆಗಳು ಮಹತ್ವವಾದವು.ಹಿಂದೆ ಸತ್ಯಯುಗದಲ್ಲಿ ಒಮ್ಮೆ ಪ್ರಚಂಡವಾದ ಬಿರುಗಾಳಿ ಎದ್ದು ಸೃಷ್ಟಿಕಾರ್ಯದಲ್ಲಿ ಬಹಳ ದೊಡ್ಡ ವಿಪ್ಲವವನ್ನುಂಟು ಮಾಡಿತು.ಸೃಷ್ಟಿಗೊಂಡ ಜೀವಿಗಳೆಲ್ಲ ಬಿರುಗಾಳಿಯ ಹೊಡೆತಕ್ಕೆ ಸಿಕ್ಕು ಸಾಯತೊಡಗಿದವು.ಸ್ಥಿತಿಕರ್ತನಾದ ವಿಷ್ಣುವು ಈ ಪ್ರಪಂಡ,ಪ್ರಳಯಕಾರಿ ಬಿರುಗಾಳಿಯನ್ನು ಶಮನ ಮಾಡುವುದೆಂತು ಎಂದು ಚಿಂತಿತನಾಗಿ ಪಾರ್ವತಿದೇವಿಯನ್ನು ಕುರಿತು ತಪಸ್ಸನ್ನಾಚರಿಸುತ್ತಾನೆ ಹರಿದ್ರಾಸರೋವರದ ತಟದಿ.ವಿಷ್ಣುವಿನ ಭಕ್ತಿಗೆ ಮೆಚ್ಚಿದ ಪಾರ್ವತಿಯು ಸರೋವರದಿಂದೆದ್ದು ಬಗಳಾಮುಖಿ ರೂಪ ತಳೆದು ಸುಂಟರಗಾಳಿಯನ್ನು ನಿಯಂತ್ರಿಸುತ್ತಾಳೆ.ಬಿರುಗಾಳಿ ಇಲ್ಲವೆ ಸುಂಟರಗಾಳಿಯನ್ನು ನಿಯಂತ್ರಿಸಿದವಳಾದ್ದರಿಂದ ಆಕೆ ಬಗಳಾಮುಖಿ ಎನ್ನಿಸಿಕೊಂಡಳು.ವಗಲಾ ಎನ್ನುವುದು ಬಗಳಾ ಆಗಿ ಬಗಳಾಮುಖಿ ಆಗಿದೆ.’ ವಗಲಾ’ ಎಂದರೆ ಭಯಂಕರ ರೂಪ ಉಳ್ಳವಳು.ಉಗ್ರಮುಖವನ್ನು ಉಳ್ಳವಳೇ ಬಗಳಾಮುಖಿ.

ಇನ್ನೊಂದು ಕಥೆಯಂತೆ ಮದನ ಎನ್ನುವ ರಾಕ್ಷಸನು ಘೋರ ತಪಸ್ಸನ್ನಾಚರಿಸಿ ‘ ವಾಕ್ಸಿದ್ಧಿ’ ಯನ್ನು ಪಡೆಯುತ್ತಾನೆ.ಆದರೆ ಆ ಮದನ ರಾಕ್ಷಸನು ತನ್ನ ವಾಕ್ಸಿದ್ಧಿಬಲವನ್ನು ಲೋಕೋಪಕಾರಕ್ಕಾಗಿ ಬಳಸದೆ ಉನ್ಮತ್ತನಾಗಿ ನರರು- ಸುರರುಗಳನ್ನು ‘ ಸಾಯಲಿ’ ಎಂದು ನುಡಿಯುತ್ತ ನರ- ಸುರರಗಳನ್ನು ಕೊಲ್ಲತೊಡಗುವನು.ಇದರಿಂದ ಭಯಾಕ್ರಾಂತರಾದ ದೇವತೆಗಳು ಪಾರ್ವತಿದೇವಿಯ ಮೊರೆಹೋಗೆ ದೇವಿ ಪಾರ್ವತಿಯು ದೇವತೆಗಳ ಪ್ರಾರ್ಥನೆಯಂತೆ ಬಗಳಾಮುಖಿಯ ರೂಪತಾಳಿ ಮದನನ ನಾಲಿಗೆಯನ್ನು ಹಿಡಿದೆಳೆದು ಅದನ್ನು ಸ್ತಂಭಿಸುತ್ತಾಳೆ.ಈ ಎರಡು ಕಥೆಗಳು ಬಗಳಾಮುಖಿ ದೇವಿಯು ನಿಗ್ರಹಸಮರ್ಥಳು,ಸ್ತಂಭನದೇವಿ ಎನ್ನುವುದನ್ನು ಸೂಚಿಸುತ್ತವೆ.ಬಗಳಾಮುಖಿ ದೇವಿಯನ್ನು ಶತ್ರುಸ್ತಂಭನ ಮತ್ತು ಪರಪೀಡನೆಯಿಂದ ರಕ್ಷಣೆಗಾಗಿ ಉಪಾಸಿಸಲಾಗುತ್ತದೆ.ಹಳದಿವಸ್ತ್ರಶೋಭಿತಳಾದ ಬಗಳಾಮುಖಿಯನ್ನು ಉತ್ತರ ಭಾರತದಲ್ಲಿ ‘ ಪೀತಾಂಬರ ಮಾತೆ’ ಎಂದು ಪೂಜಿಸುತ್ತಾರೆ.ಹಿಂದೆ ತಾಂತ್ರಿಕ ಸಿದ್ಧರು ಬಗಳಾಮುಖಿ ಸಾಧ‌ನೆಯಿಂದ ರಾಜ ಮಹಾರಾಜರು ಮತ್ತು ಅವರ ಆಸ್ಥಾನದ ಸಭಿಕರುಗಳನ್ನೆಲ್ಲ ಸ್ತಂಭನ‌ಮಾಡಿ ತಮ್ಮ ಕಾರ್ಯಸಾಧಿಸಿಕೊಳ್ಳುತ್ತಿದ್ದರು.ಶತ್ರುರಾಜರ ಮೇಲೆ ಯುದ್ಧಹೂಡಿದಾಗ ಅರಸರುಗಳು ಕೂಡ ಬಗಳಾಮುಖಿ ದೇವಿಯ ಪೂಜೆ ಮಾಡಿ,ಆ ದೇವಿಯ ಆಶೀರ್ವಾದ ಕೋರುತ್ತಿದ್ದರು.

ಬಗಳಾಮುಖಿ ದೇವಿಯ ಮೂಲಪೀಠವು ಮಧ್ಯಪ್ರದೇಶದ ನಳಖೇಡದಲ್ಲಿದ್ದು ಛತ್ತೀಸ್ಘಡ್,ಉತ್ತರಾಖಂಡ ಮತ್ತು ಅಸ್ಸಾಂಮಿನ ಗುಹಾವತಿಯ ಕಾಮಾಖ್ಯಾದೇವಿಯ ದೇವಸ್ಥಾನ ಪ್ರದೇಶದಲ್ಲಿ ಬಗಳಾಮುಖಿ ಪೀಠಗಳಿವೆ.ಸಿಂಧನೂರಿನ ಸಿದ್ಧಪರ್ವತವು ಕರ್ನಾಟಕದ ಬಗಳಾಮುಖಿ ಪೀಠವು.

ಮುಕ್ಕಣ್ಣ ಕರಿಗಾರ
ಮೊ: 94808 79501

30.11.2021