ಕಾವ್ಯಲೋಕ: ದ್ಯಾವಣ್ಣ ಸುಂಕೇಶ್ವರ ಅವರ ಕವನ ‘ ನಿವೇದನೆ’

ನಿವೇದನೆ

* ದ್ಯಾವಣ್ಣ ಸುಂಕೇಶ್ವರ

ಮೊದಲ ನೋಟದಲಿ
ಭಾವನೆಗಳು ಗರಿಗೆದರಿದವು!
ಭೇಟಿಯಾಗುವ ತವಕದಲಿ
ವರ್ಷಗಳೇ, ಉರುಳಿ ಹೋದವು!

ನಿನ್ನ ಕಾಣಲು
‘ಚಾತಕ ಪಕ್ಷಿ’ಯಂತೆ ನಿತ್ಯ ಕಾದೆ
ನೀ ಕಾಣದಿರಲು
ನಿಶೆಯೆಲ್ಲ ನಶೆಯಲ್ಲಿ ಕಳೆದಿರುವೆ!

ನಿನ್ನ ಪಡೆಯಲು
‘ಚಂದ್ರಚಕೋರಿ’ಯಂತೆ ಬದುಕಿದೆ
ಹಸಿದ ಒಡಲು
ಹುಸಿ ಹೇಳದು, ನೆನಪಲ್ಲಿ ಸೊರಗಿರುವೆ!

ನಿನ್ನ ಬಯಸಲು
‘ಮಯೂರ’ನಂತೆ ಕಂಬನಿ ಸುರಿಸಿದೆ
ನೀ ದೂರಾಗಲು
ನಾ ತೊರೆಯದೆ, ಮನದಲಿ ಸೋತಿರುವೆ!

ನಿನ್ನ ಶೋಧಿಸಲು
‘ಮೃಗಜಲ’ದಂತೆ ಅಲೆದಲೆದು ಬಳಲಿದೆ
ನಿರಾಶೆಯಾಗಲು
ನೀರವದಲಿದ್ದು ಬದುಕನ್ನೇ, ಮರೆತಿರುವೆ!

ನಿನ್ನ ಸೇರಲು
‘ಇರುವೆ’ಯಂತೆ ಜಾಡುಹಿಡಿದು ಸಾಗಿದೆ
ನೀ ಮರೆಯಾಗಲು
ಅದನರಿಯದೆ, ಕಾಲ್ತುಳಿತಕ್ಕೆ ನರಳಿರುವೆ!

ಓ.. ನನ್ನ ಚಲುವೆ,
ನೀ ಕೊಟ್ಟಭಾಷೆಯನು ಪಾಲಿಸು..!
ಮರತೆಯಾದರೆ,
ನನ್ನೀ ಹೃದಯದ ನಿವೇದನೆಯನಾಲಿಸು..!

ದ್ಯಾವಣ್ಣ ಸುಂಕೇಶ್ವರ
ಮುಖ್ಯಸ್ಥರು, ಕಲಾ‌ ವಿಭಾಗ,
ಲೊಯೋಲ ಪದವಿ ಕಾಲೇಜು, ಮಾನ್ವಿ.
ಮೊ:9880123488