ಶ್ರೀ ದುರ್ಗಾ ಸಪ್ತಶತಿಯ ಕನ್ನಡ ಅನುವಾದ ‘ಶ್ರೀ ದುರ್ಗಾವಿಜಯ’
ಲೇಖಕರು: ಮುಕ್ಕಣ್ಣ ಕರಿಗಾರ
ಮಾರ್ಕಂಡೇಯ ಮುನಿಗಳಿಂದ ರಚಿತವಾದ ‘ ಶ್ರೀ ದುರ್ಗಾ ಸಪ್ತಶತೀ’ ಯು ಉಪಾಸಕರಿಗೆ ಐಹಿಕಾಮುಷ್ಮಿಕ ಫಲಗಳನ್ನು ನೀಡುವ ಗ್ರಂಥ.ದುರ್ಗಾಸಪ್ತಶತಿಯ ಪಾರಾಯಣ ಅನುಷ್ಠಾನದಿಂದ ಭಕ್ತರು ತಮ್ಮ ಮನದಭೀಷ್ಟಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದು.ನಾಲ್ಕು ವೇದಗಳಲ್ಲಿ ಯಾವ ಶಕ್ತಿ ಇದೆಯೋ,ನಾಲ್ಕು ವೇದಗಳಲ್ಲಿ ಯಾವ ತತ್ತ್ವವು ಅಡಕಗೊಂಡಿದೆಯೋ ಆ ಶಕ್ತಿ,ಆ ತತ್ತ್ವ ದುರ್ಗಾಸಪ್ತಶತಿಯಲ್ಲಿದೆ.ವಿಶ್ವೇಶ್ವರಿ ದುರ್ಗಾದೇವಿಯ ಅನುಗ್ರಹ,ಸಾಕ್ಷಾತ್ಕಾರಗಳನ್ನು ಪಡೆಯುವ ಸುಲಭೋಪಾಯವೇ ದುರ್ಗಾಸಪ್ತಶತಿಯ ಪಾರಾಯಣ.ದುರ್ಗಾಸಪ್ತಶತಿಯು ಸಂಸ್ಕೃದಲ್ಲಿದ್ದುದರಿಂದ ನಾಡಜನರಿಗೆ ಅದು ಸುಲಭವಾಗಿ ಅರ್ಥವಾಗದು ಎಂದು ಚಿದಾನಂದಾವಧೂತರು ಸಿದ್ಧಪರ್ವತದಲ್ಲಿ ದೇವಿ ಬಗಳಾಮುಖಿಯನ್ನು ಸಾಕ್ಷಾತ್ಕರಿಸಿಕೊಂಡು ಆ ದೇವಿಯ ಅನುಗ್ರಹದಂತೆ ದುರ್ಗಾಸಪ್ತಶತಿಯನ್ನು ‘ ಶ್ರೀ ಪಾರ್ವತಿ ದೇವಿ ಮಹಾತ್ಮೆ’ ಎಂದು ಕನ್ನಡದಲ್ಲಿ ಭಾಮಿನೀ ಷಟ್ಪದಿಯಲ್ಲಿ ರಚಿಸಿದ್ದಾರೆ.ಚಿದಾನಂದಾವಧೂತರ ಕೃತಿಯು ‘ದೇವಿಪುರಾಣ’ ವೆಂದೇ ಪ್ರಸಿದ್ಧಿಗೊಂಡು ನಾಡಿನಾದ್ಯಂತ ಅದರ ಪೂಜೆ- ಪಾರಾಯಣ,ನಿತ್ಯ ಜಪಾನುಷ್ಠಾನಗಳು ನಡೆಯುತ್ತಿವೆ.ಮೈಸೂರು ಭಾಗದಲ್ಲಿ ಎರಡು ಪ್ರತ್ಯೇಕ ದೇವಿ ಪುರಾಣಗಳಿವೆ.ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ ಲ .ಶರ್ಮ ಅವರ ‘ ಶ್ರೀ ದುರ್ಗಾ ವಿಜಯ’ ಎನ್ನುವ ದುರ್ಗಾ ಸಪ್ತಶತಿಯ ಸರಳಗನ್ನಡ ರೂಪ.
ಶ್ರೀ ದುರ್ಗಾಸಪ್ತಶತಿಯು ಏಳು ನೂರು ಶ್ಲೋಕಗಳ ದುರ್ಗಾ ಮಹಾತ್ಮೆ.ಅದನ್ನೇ ಲ.ಶರ್ಮ ಅವರು’ ಶ್ರೀ ದುರ್ಗಾ ವಿಜಯ’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ.ಲ.ಶರ್ಮರ ಕನ್ನಡ ಅನುವಾದದ ಕೃತಿಯು ದುರ್ಗಾಸಪ್ತಶತಿಯ ಮೂಲವಲ್ಲದ ಮತ್ತೊಂದು ಪಾಠಾಂತರದ ಅನುವಾದ ಎಂಬಂತೆ ತೋರುತ್ತದೆ.’ ಶ್ರೀ ದುರ್ಗಾ ಸಪ್ತಶತೀ’ ಪುಸ್ತಕದ ಹಲವು ಪಾಠಾಂತರಗಳಿವೆಯಾದರೂ ಗೋರಖಪುರದ ಗೀತಾಪ್ರೆಸ್ ನವರು ಮುದ್ರಿಸಿದ ‘ ಶ್ರೀ ದುರ್ಗಾಸಪ್ತಶತೀ’ ಯೇ ಪ್ರಮಾಣಿತ ಪುಸ್ತಕ.ರಾಮಕೃಷ್ಣಾಶ್ರಮದ ಸ್ವಾಮಿಗಳು ದುರ್ಗಾಸಪ್ತಶತಿಯನ್ನು ಪ್ರಕಟಿಸಿದ್ದಾರಾದರೂ ಅದು ರಾಮಕೃಷ್ಣಾಶ್ರಮದ ಪರಂಪರೆಗೆ ಅನುಗುಣವಾಗಿದೆ.ಇನ್ನೂ ಕೆಲವರು ಅವರವರ ಮತಧರ್ಮಗಳಿಗನುಗುಣವಾದ ದುರ್ಗಾಸಪ್ತಶತೀ ಕೃತಿಯನ್ನು ಪ್ರಕಟಿಸಿದ್ದಾರೆ.ಆದರೆ ಅವಾವೂ ದುರ್ಗಾಸಪ್ತಶತೀಯ ನೈಜನಿರೂಪಣೆಯ ಕೃತಿಗಳಲ್ಲವಾದ್ದರಿಂದ ದುರ್ಗಾದೇವಿಯ ಉಪಾಸಕರು ಗೋರಖಪುರದ ಗೀತಾ ಪ್ರೆಸ್ಸಿನವರು ಪ್ರಕಟಿಸಿದ ಪುಸ್ತಕವನ್ನೇ ಪ್ರಮಾಣ ಎಂದು ಪರಿಗಣಿಸಬೇಕು.
ದುರ್ಗಾಸಪ್ತಶತಿಯಲ್ಲಿ ಈಗಿರುವ ಸಪ್ತಶತೀ ವಿಧಿಃ, ಚಂಡೀಕವಚ,ಅರ್ಗಲಾ ಸ್ತೋತ್ರ ಮತ್ತು ಕೀಲಕಗಳು ನಂತರದ ಸೇರ್ಪಡೆ.ಮೂಲಮಾರ್ಕಂಡೇಯ ಪುರಾಣದಲ್ಲಿ ನೇರವಾದ ಕಥೆ,ದುರ್ಗಾವಿಜಯ ಗೀತೆಯ ಪ್ರಸ್ತಾಪ ಇದೆ.ದುರ್ಗಾಸಪ್ತಶತಿಯಲ್ಲಿರುವ ಚಂಡೀಕವಚ,ಅರ್ಗಲಾ ಸ್ತೋತ್ರ ಮತ್ತು ಕೀಲಕಗಳು ಪಾರಾಯಣಕ್ಕೆ ಪೂರಕವಾಗಿದ್ದರಿಂದ ಅವುಗಳನ್ನು ಓದಬೇಕು.ಈ ಕ್ರಮವನ್ನು ಅನುಸರಿಸಿಯೇ ಲ.ಶರ್ಮ ಅವರು ಕನ್ನಡ ಅನುವಾದ ಮಾಡಿದ್ದಾರೆ.ಮೂಲದುರ್ಗಾ ಸಪ್ತಶತಿಯನ್ನು ಕನ್ನಡಕ್ಕೆ ಅನುವಾದಿಸುವುದು ಬಹು ಕಷ್ಟದ ಕೆಲಸ.ದುರ್ಗಾಸಪ್ತಶತಿಯ ಪ್ರತಿ ಶ್ಲೋಕವೂ ಮಂತ್ರವೆ! ಇಂತಹ ಮಂತ್ರಶಾಸ್ತ್ರವನ್ನು ಕನ್ನಡಕ್ಕೆ ಅನುವಾದಿಸುವುದು ಕಷ್ಟವಾದರೂ ಬಹುವರ್ಷಗಳ ಕಾಲ ದುರ್ಗಾಸಪ್ತಶತಿಯನ್ನು ಪಾರಾಯಣ ಮಾಡಿದ್ದರ ಫಲವಾಗಿ ಅನುವಾದದಲ್ಲಿ ಯಶಸ್ಸು ಕಂಡಿದ್ದಾರೆ ಲ.ಶರ್ಮ ಅವರು.ಅವರ ಅನುವಾದ ಕೆಲವೊಮ್ಮೆ ಮುಗ್ಗರಿಸುತ್ತದೆ,ಕೆಲವೊಮ್ಮೆ ಕರ್ಕಶವೆನಿಸುತ್ತದೆಯಾದರೂ ಸಂಸ್ಕೃತದ ದುರ್ಗಾಸಪ್ತಶತಿಯ ಅಧ್ಯಯನಕ್ಕೆ ಸ್ಫೂರ್ತಿ,ಪ್ರೇರಣೆಗಳನ್ನು ನೀಡುತ್ತದೆ.ಸಂಸ್ಕೃತದ ದುರ್ಗಾಸಪ್ತಶತಿಯ ಕನ್ನಡ ಭಾವವನ್ನು ಗ್ರಹಿಸಲು ಸಹಾಯಕವಾಗುತ್ತದೆ.
ಲ.ಶರ್ಮರು ಚಂಡೀಕವಚವನ್ನು ‘ ಶ್ರೀ ದೇವಿ ಕವಚ’ ಎಂದು ಅನುವಾದಿಸಿದ್ದು ಈ ಅನುವಾದ ಯಶಸ್ವಿಯಾಗಿದೆ.
ಕೇಳಿದನು ಬ್ರಹ್ಮನನು ಯೋಗಿ ಮಾರ್ಕಂಡೇಯ
ಬಾಳು ಹಸನಾಗಿಸಲು ಭವ ದುಃಖ ಹರಿಯಲು
ಭುವಿ ಜನರು ಅರಿತೆಲ್ಲ ಆಚರಿಸಲು
ಸುವಿದ ಪರಿಯೊಂದ ತಿಳಿಸೆ ಪ್ರಾರ್ಥಿಸಿದ (೧)
ಓಂ ಯದ್ಗುಹ್ಯಂ ಪರಮಂ ಲೋಕೇ ಸರ್ವ ರಕ್ಷಾಕರಂ ನೃಣಾಮ್/
ಯನ್ನ ಕಸ್ಯ ಚಿದಾಖ್ಯಾತಂ ತನ್ಮೇ ಬ್ರೂಹಿ ಪಿತಾಮಹ
ಎನ್ನುವ ಮಾರ್ಕಂಡೇಯ ಉವಾಚವನ್ನು ಸಮರ್ಥವಾಗಿ ಅನುವಾದಿಸಲಾಗಿದೆ.
ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ /
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್//
ಪಂಚಮಂ ಸ್ಕಂದ ಮಾತೇತಿ ಷಷ್ಠಂ ಕಾತ್ಯಾಯನೀತಿ ಚ /
ಸಪ್ತಮಂ ಕಾಲರಾತ್ರೀತಿ ಮಹಾಗೌರೀತಿ ಚಾಷ್ಟಮಮ್/
ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ//
ಎಂದು ಚಂಡೀಕವಚದಲ್ಲಿ ಅಂತರ್ಗತಳಾದ ನವದುರ್ಗಾಸ್ವರೂಪಿಣಿ ದುರ್ಗಾದೇವಿಯ ಸ್ವರೂಪ ವೈಭವವನ್ನು ಸೊಗಸಾಗಿ ಅನುವಾದಿಸಿದ್ದಾರೆ ಲ.ಶರ್ಮ ಅವರು ;
ಪ್ರಥಮಳಾಮಾತೆಯು ಶ್ರೀಶೈಲಪುತ್ರಿಯು
ದ್ವಿತೀಯಳೆನಿಸಿಹಳು ಬ್ರಹ್ಮಚಾರಿಣಿಯು
ಚಂದ್ರಘಂಟಾಮಾತೆ ದೇವಿ ಕೂಷ್ಮಾಂಡಳು
ಶ್ರೀಸ್ಕಂದ ಮಾತೆಯು ಕಾತ್ಯಾಯನೀದೇವಿ
ಶ್ರೀಕಾಲ ರಾತ್ರಿಯು ಶ್ರೀ ಮಹಾಗೌರಿಯು
ಸಿದ್ಧಿಧಾತ್ರಿಯೆನಿಪ ನವದುರ್ಗ ಮಾತೆಯರು
ಇಲ್ಲಿ ಪ್ರಥಮದ್ವೀತೀಯಳೆಂದು ಮಾತ್ರ ಸಂಖ್ಯಾವಾಚಕಳಾದ ಮಾತೆಯರನ್ನು ಸ್ಮರಿಸಿ ಮೂರರಿಂದ ನೇರವಾಗಿ ದೇವಿಯ ಹೆಸರುಗಳನ್ನಷ್ಟೇ ಅನುವಾದಿಸಿದ್ದಾರೆ ಕನ್ನಡದ ಭಾವ ಲಯಕ್ಕನುಸರಿಸಿ ಎಂಬಂತೆ ತೋರಿದರೂ ಇದು ಒಂದು ಕೊರತೆಯೆ.ನವರಾತ್ರಿಯ ದಿನಗಳಲ್ಲಿ ನವದುರ್ಗೆಯರನ್ನು ಆರಾಧಿಸುವ ಕಾರಣದಿಂದ ಇಲ್ಲಿ ಪ್ರಥಮ ದಿನದಂದು ಆರಾಧಿಸುವ ದುರ್ಗಾದೇವಿ,ದ್ವಿತೀಯ ದಿನದಂದು ಆರಾಧಿಸುವ ದುರ್ಗಾದೇವಿ ಎನ್ನುತ್ತ ಒಂಬತ್ತು ದಿನಗಳಲ್ಲಿ ಆರಾಧಿಸಬೇಕಾದ ನವದುರ್ಗೆಯರ ವಿವರಗಳಿವೆ.ಅನುವಾದಕರು ಅತ್ತ ಗಮನಿಸಿಲ್ಲ.
ಘೋರಾಗ್ನಿಯಲಿ ಬಿದ್ದು ನರಳುತಿರುವವರು
ಹೋರಾಟ ಸಮಯದಲಿ ಸಿಕ್ಕಿ ಬಿದ್ದಿರುವವರು
ವೈರಿಗಳ ಸೆರೆಸಿಕ್ಕಿ ಪರಿತಪಿಸುತಿರುವವರು
ಶರಣಾಗೆ ಮಾತೆಗೆ ಕಳೆವುದಾಪದಗಳು
ಧರೆಯಲ್ಲಿ ನಲಿಯುತ್ತ ಶುಭವ ಕಾಣುವರು
ಈ ಅನುವಾದವು ಮೂಲಕ್ಕೆ ಚ್ಯುತಿ ಬಾರದಂತೆ ವಿಸ್ತಾರಗೊಂಡ ಸಹಜ ಸುಂದರ ಭಾವಾನುವಾದ
ಅರ್ಗಲಾಸ್ತೋತ್ರ ಮತ್ತು ಕೀಲಕಗಳನ್ನು ಸಹ ಅರ್ಥವತ್ತಾಗಿ ಅನುವಾದಿಸಲಾಗಿದೆ.
ಮುಂದೆ ಒಂದನೆಯ ಅಧ್ಯಾಯದ ಮಧುಕೈಟಭರ ವಧೆಯಿಂದ ಹನ್ನೆರಡನೇ ಅಧ್ಯಾಯದ ಫಲ ಶೃತಿಯವರೆಗೆ ಲ.ಶರ್ಮ ಅವರು ಅನುವಾದಿಸಿ,ದುರ್ಗಾವಿಜಯವನ್ನು ಮುಕ್ತಾಯಗೊಳಿಸಿದ್ದನ್ನು ಗಮನಿಸಿದರೆ ಅವರು ದುರ್ಗಾಸಪ್ತಶತಿಯ ಮತ್ತೊಂದು ಪಾಠಾಂತರವನ್ನು ಮುಂದಿಟ್ಟುಕೊಂಡಿರುವುದು ಖಚಿತವಾಗುತ್ತದೆ .ದುರ್ಗಾಸಪ್ತಶತೀಯಲ್ಲಿ 13 ಅಧ್ಯಾಯಗಳು,700 ಶ್ಲೋಕಗಳೂ ಇವೆ.ಲ.ಶರ್ಮರ ಅನುವಾದವು ಒಮ್ಮೆಮ್ಮೆ ಸಂಕ್ಷಿಪ್ತಗೊಂಡು ದುರ್ಗಾಸಪ್ತಶತಿಯ ಸಾರವನ್ನು ಸಂಗ್ರಹಾನುವಾದ ಮಾಡಿದ್ದಾರೆ ಎನ್ನುವ ಭಾವನೆಗೆ ಎಡೆಮಾಡುತ್ತದೆ.
” ರವಿಸುತನು ಎಂಟನೆಯ ಮನುವೆನಿಸಿದಾತನು
ಸಾವರ್ಣಿ ಒಡೆಯನೆಂದೆನಿಸಿ ಮನ್ವಂತರಕೆ
ಭೂಮಂಡಲ ಶ್ರೇಷ್ಠ ರಾಜನೆನಿಸಿದ್ದನು
ಕಾವದೇವಿಯ ಭಕ್ತಗತ ಜನ್ಮದಲ್ಲವನು
ರಾಜ ಜನಿಸಿದ್ದನು ಅಂದು ಭೂಮಂಡಲದಿ
ನಾಮಧೇಯವು ಸುರಥ ಚೈತ್ರವಂಶಜನು
ರಾಜಪರಿಪಾಲನೆಯಲಾತ ನಿಸ್ಸೀಮನು
ಆ ರಾಜ ಸಾರ್ವೋಚಿಷದಮನ್ವಂತರೀ
ಎಂದು ಆರಂಭವಾಗುವ ದುರ್ಗಾವಿಜಯವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.ಮುಂದೆ ದೇವತೆಗಳ ಪ್ರಾರ್ಥನೆಯಂತೆ ದೇವಿಯು ಬ್ರಹ್ಮ ವಿಷ್ಣು ರುದ್ರಾತ್ಮಿಕೆಯಾಗಿ ಸಕಲ ದೇವತಾಮಯಿಯಾಗುವುದನ್ನು ಸಮರ್ಥವಾಗಿ ಅನುವಾದಿಸಿದ್ದಾರೆ ;
ಬ್ರಹ್ಮನುಡಿಯನಾಲಿಸಿ ಹರಿಹರರು ನೊಂದರು
ಸೌಮ್ಯಹರಮೊಗದಲ್ಲಿ ಕ್ರೋಧವಂಕುರಿಸಿತು
ರೌದ್ರತೇಜಸ್ಸೊಂದು ಒಮ್ಮೆಲೆ ಹೊರಬಂತು
ಸಿಡಿಲಿನಾ ಕಿಡಿಯಂತೆ ಬೆರಗು ಮೂಡಿಸಿತು.
ಶಿವಪ್ರಭೆಯನನುಸರಿಸಿ ಹರಿಯಜರ ಪ್ರಭೆಯು
ಹೊರಬಂದಿತಾ ರೌದ್ರ ಪ್ರಭೆಯನ್ನು ಕಲೆಯಲು
ಮುಮ್ಮಡಿಯ ತೇಜವು ತ್ರೈಮೂರ್ತಿ ಪ್ರಭೆಯು
ಇನ್ನಿತರ ಸುರಗಣದ ಪ್ರಭೆಯನಾಕರ್ಷಿಸಿತು
ಪ್ರಭಾಸಮೂಹದಿಂದುದಿಸಿತೊಂದು ಜ್ಯೋತಿ
ಶುಭಕೆ ನಾಂದಿಯ ಸೂಸೆ ಕಣ್ಣುಕ್ಕಿತು
ಸೌಂದರ್ಯರಾಶಿಯೊಂದಲ್ಲಿ ಮೈತಳೆದು
ನಿಂದಸುರಗಣಕ್ಕೆಲ್ಲ ಅಚ್ಚರಿ ಮೂಡಿಸಿತು
ಶಿವನ ತೇಜಸ್ಸಿನಲಿ ಮುಖವಾಗಿ ಕಂಡಿತು
ಯಮನ ತೇಜದಲಾಯ್ತು ಕೇಶಸಂಪದವು
ಹರಿಕಾಂತಿಯಿಂದಾಕೆ ಬಾಹುಗಳ ಕಂಡಿತು
ಸೋಮದೇವತೆಯಿಂದ ಸ್ತನಗಳುಂಟಾದವು
ಇಂದ್ರನಾ ತೇಜದಲಿ ದೇವಿನಡುಕಂಡಿತು
ವರುಣತೇಜದಲಾಕೆ ತೊಡೆಯ ಮೊಣಕಾಲುಗಳು
ಭೂದೇವಿಯಿಂದಾಯ್ತು ದೇವೀ ನಿತಂಬವು
ಬ್ರಹ್ಮತೇಜದಲಾಯ್ತು ಮಾತೆ ಚರಣಗಳು
ಸೂರ್ಯತೇಜದಲಾಯ್ತು ಪಾದದಂಗುಲಿಗಳೂ
ವಸುಗಳಿಂದಾದವು ದೇವಿ ಕೈಬೆರಳುಗಳು
ಕುಬೇರ ತೇಜದಿಂದಾಕೆ ನಾಸಿಕವು
ಆ ಪ್ರಜಾಪತಿಯಿಂದ ದಂತಪಂಕ್ತಿಗಳು
ಅಗ್ನಿಯಿಂದಾಕೆಯ ಮೂರು ಕಣ್ಣುಗಳು
ಸಂಧ್ಯೆಯಿಂದಾದುವು ದೇವಿಹುಬ್ಬುಗಳು
ವಾಯುವಿನ ತೇಜದಲಿ ಮಾತೆಯಾ ಕಿವಿಗಳು
ಎಲ್ಲ ತೇಜವು ಕೂಡಿ ಸರ್ವಮಂಗಳೆಯು
ಎಂದು ದೇವಿಯು ಮಹಿಷಮರ್ಧಿನಿಯಾಗಿ ಅವತರಿಸಿದ ಭಾಗವನ್ನು ಬಹುಸುಂದರವಾಗಿ ಕಣ್ಕಟ್ಟುವಂತೆ ಅನುವಾದಿಸಿದ್ದಾರೆ.
ದೇವಿ ಸ್ತುತಿಯ ಈ ಭಾಗವು ಸಹಜವಾಗಿ ಮೂಡಿ ಬಂದಿದೆ ಮೂಲವೋ ಎಂಬಂತೆ
ಪ್ರಸನ್ನಳಾಗು ನೀ ದೇವಿ ದುರ್ಗಾಮಾತೆ
ಹುಸಿಯಗೈಯ್ಯದಿರು ನಮ್ಮ ಪ್ರಾರ್ಥನೆಯನು
ಕ್ರುದ್ಧಳಾದೊಡೆ ನೀನು ನಾಶವಾಗುವುದು
ರೌದ್ರ ತೇಜದೊಳೆಲ್ಲ ಅಸುರರಳಿದಿಹರು
ಕೃಪೆಯಿರಲು ನಿನದು ಜಯಸಂಪದವು
ಸಫಲರೂ ಮಾನ್ಯರೂ ನಿನ್ನೆಲ್ಲ ಭಕ್ತರು
ಯಶವನೇ ಕಾಣುವರು ಸಕಲ ಕಾರ್ಯಗಳಲ್ಲಿ
ಅಸಮಾನ್ಯರೆನಿಸಿ ಮುಕ್ತಿಯನು ಪಡೆವರು
ಭಜಿಪರಾರೋದೇವಿ ನಿನ್ನನನವರತ
ವಿಜಯವನುಗಳಿಸಿ ಧರ್ಮದಲ್ಲುಳಿವರು
ಪಡೆಯುವರು ಪರಮಪದ ನಿನ್ನದಯೆಯಿಂದ
ನಡೆನುಡಿಗಳಲ್ಲಿ ಮಾನ್ಯರೆಂದೆನಿಸುವರು
ಸ್ಮರಿಸೆ ನಿನ್ನನು ದೇವಿ ಭಯಭಕ್ತಿಯಿಂದ
ಪರಿಹರಿಸುವೆ ಭವದ ಜೀವಿಗಳ ದುಃಖವನು
ಸದ್ಬುದ್ಧಿನೀಡುವೆ ಪುಣ್ಯವಂತರು ನಮಿಸೆ
ದಾರಿದ್ರ್ಯ ದುಃಖವನು ನೀ ಹರಣಗೈಯ್ಯುವೆ
ನಿನ್ನಿಂದಲೇ ಮಾತೆ ಜಗದ ಕಲ್ಯಾಣವು
ನೀನಲ್ಲದಿನ್ನಾರು ದಯೆತೋರ್ವರಮ್ಮ
ದುರಿತಗಳನೆಲ್ಲವನು ದೂರಮಾಡುತ ನೀನು
ವರದೆ ನೀಸಲಹುವುದು ನಿನ್ನ ಭಕ್ತರನು
ರಕ್ತಬೀಜಾಸುರನ ಸಂದರ್ಭದಲ್ಲಿ ದೇವಿ ದುರ್ಗೆಯ ದೇಹದಿಂದ ಸಪ್ತಮಾತೃಕೆಯರು ಹೊರಬಂದುದನು ಮೂಲಕ್ಕೆ ಧಕ್ಕೆ ಬಾರದಂತೆ ಕನ್ನಡದ ಜಾಯಮಾನಕ್ಕನುಸರಿಸಿ ಸುಂದರವಾಗಿ ಚಿತ್ರಿಸಲಾಗಿದೆ;
ಬ್ರಹ್ಮಶಕ್ತಿಯು ತಾನು ಬ್ರಹ್ಮಾಣಿ ಎನಿಸಿ
ತನ್ನ ಜಪಮಾಲೆಯು ಮತ್ತಾ ಕಮಂಡಲವ
ಹಿಡಿದು ಹೊರಬಂದು ಚಂಡಿಕೆಗೆ ವಂದಿಸಿ
ಅಡಿಯಮುಂದಿಟ್ಟಳು ನೆರವಾಗೆ ಸಮರದಲಿ
ವೃಷಭವಾಹನೆಯಾಗಿ ಮಾಹೇಶ್ವರೀ ಶಕ್ತಿ
ತ್ರಿಶೂಲಸರ್ಪಗಳ ಕೈಗಳಲಿ ಧರಿಸಿ
ಶಶಿಧರೆ ತಾ ಬೆಳಗಿ ರೌದ್ರ ತೇಜದಲಿ
ಅಸಮಾನ್ಯ ಚಂಡಿಕೆಗೆ ನೆರವಾಗಿ ನಿಂತಳು
ಕರದಿಶಕ್ತ್ಯಾಯುಧವ ಹಿಡಿದು ಕೌಮಾರಿಯು
ಗರಿಗೆದರಿ ನರ್ತಿಸುವ ಮಯೂರವನ್ನೇರಿ
ಅರಿಭಯಂಕರೆ ಎನಿಸಿ ಅತಿಗರ್ವದಿಂದ
ನೆರವೀಯೇ ಚಂಡಿಕೆಗೆ ಮುಂದಡಿಯನಿಟ್ಟಳು
ಗರುಡ ವಾಹನೆಯಾಗಿ ಗರ್ವದಲಿ ಮೆರೆಯುತ
ಕರಗಳಲಿ ಶಂಖವೂ ಗದೆ ಪದ್ಮ ಚಕ್ರವೂ
ಹರಿಶಕ್ತಿ ಎನಿಸಿದಾ ವೈಷ್ಣವೀ ದೇವಿಯು
ನೆರವೀಯೇ ನಿಂದಳು ಚಂಡಿಕಾದೇವಿಯೆಡೆ
ವಾರಾಹರೂಪದಲಿ ಅತಿಕ್ರೂರಳಾಗಿ
ವಾರಿಧಿ ಧರೆಯನ್ನು ಅಲುಗಿಸಿದ ಶಕ್ತಿಯು
ವಾರಾಹಿನಾಮದಾ ಶಕ್ತಿ ಸ್ವರೂಪಿಣಿಯು
ಧಾರಾಳನೆರವೀಯೆ ಚಂಡಿಕೆಯ ಸೇರಿದಳು
ತಾರಾಪ್ರಕಾಶದಲಿ ಕೇಸರದ ರೂಪಿನಲಿ
ಮೇರೆಯರಿಯದ ದಿವ್ಯಶಕ್ತಿ ಸ್ವರೂಪವು
ಪ್ರಾಣಗಳ ಹೀರುವಾ ನಾರಸಿಂಹೀಶಕ್ತಿ
ನೆರವಾಗಲಾ ಮಾತೆ ಚಂಡಿಕೆಯ ಸೇರಿದಳು
ನಯನಸಾಸಿರವುಳ್ಳ ಗಜದವಾಹನವೇರ್ದ
ಕರದಿವಜ್ರಾಯುಧವು ಕಂಗೊಳಿಸುತಿರಲು
ಸುರಪತಿಯ ಹೋಲುವಾ ಸ್ವರೂಪವಿರುವ
ವರ ಐಂದ್ರಿ ನಿಂದಳು ಚಂಡಿಕಾ ಮಾತೆಯೆಡೆ
ಸಪ್ತಮಾತೃಕೆಯರ ಒಡೆಯಳಾ ಚಂಡಿಕೆ
ಚಿಚ್ಛಕ್ತಿ ಚಿನ್ಮಯಳು ಶ್ರೀಜಗನ್ಮಾತೆ
ಮತ್ತಾಗ ಶಿವಬಂದು ನುಡಿದನಾದೇವಿಗೆ
ಮತ್ತುತ್ತಿಹ ದೈತ್ಯರನು ಚೆಂಡಿಕೆ ಕೊಲ್ಲೆಂದ
ಹನ್ನೊಂದನೆಯ ಅಧ್ಯಾಯದಲ್ಲಿ ನಾರಾಯಣೀಸ್ತುತಿಯು ಕೂಡ ನೆಲದನುಡಿಯ ಸತ್ವವನು ಒಳಕೊಂಡು ಕನ್ನಡದ ನುಡಿಬೆಡಗೋ ಎಂಬಂತೆ ಅನುವಾದಗೊಂಡಿದೆ.ಅಲ್ಲಿಯ ಆಯ್ದ ಭಾಗಗಳು ;
ಮಂಗಳಕೆ ಮಾಂಗಲ್ಯರೂಪಳೇ ದೇವಿ
ಗಂಗೆಗೌರಿ ಶಿವೆಯೆ ಕಾತ್ಯಾಯನೀ
ನೊಂದವರ ಸಲಹುವಾ ವಂದ್ಯಳೇ ನೀನು
ಸುಂದರೀ ತ್ರಿನಯನೆ ನಾರಾಯಣೀ ನಮನ
ಶಕ್ತಿಸ್ವರೂಪಳೇ ನೀಸನಾತನಳೇ
ಮುಕ್ತಳೇ ಗುಣದಿಂದ ನೀ ಗುಣತ್ರಯಳೇ
ಭಕ್ತರಾಭೀಷ್ಟವನು ಪೂರೈಸುವವಳೇ
ಮುಕ್ತರನುಗೈವುದು ನಾರಾಯಣೀ ನಮನ
………………………………
ಜಗವಪಾಲಿಸುತಿರುವ ವಿಶ್ವೇಶ್ವರೀಮಾತೆ
ಈಜಗವಸೃಜಿಸಿ ವಿಶ್ವಧರಿಸಿರುವೆ
ತ್ರಿಜಗದ್ವಂದ್ಯಳು ಭಕ್ತಿಗೊಳವವಳು
ಸಂಜಯನೀಸಲಹುವುದು ನಾರಾಯಣೀ ನಮನ
ನಾಶಗೈದಿಹೆದೇವಿ ದೈತ್ಯಾಸಂತತಿಯನ್ನು
ಪೋಷಿಸಿಹೆನಮ್ಮನು ಭಯವನಪಹರಿಸಿ
ವಿಶ್ವದವಿಶಕುನಗಳೂ ಇನ್ನುಪದಿದ್ರವಗಳು
ಶೀಘ್ರಪರಿಹರಿಸಿ ನೀ ನಾರಾಯಣೀ ನಮನ
ತ್ರಿಭುವನಾರಾಧ್ಯಳೆ ತ್ರಿಪುರಸುಂದರಿಯೆ
ಭುವನಸಂಕಷ್ಟಗಳ ಹರಣಗೈವವಳೇ
ವರದಾಭಯೆದೇವಿ ಕೃಪೆದೋರುಮಾತೆ
ಕರುಣಿಸೆಮ್ಮನುದೇವಿ ನಾರಾಯಣೀ ನಮನ
ದೇವತೆಗಳೀ ಸ್ತುತಿಗೆ ನಲಿದುದುರ್ಗಾಮಾತೆ
ಕಾವಭಾರವಹೊತ್ತಾನಾರಾಯಣೀದೇವಿ
ಬೇಕಾದವರಗಳನು ಕೇಳೆಂದು ನುಡಿದಳು
ತಾನಲಿದುಕೊಡುವುದಾಗಭಯವನ್ನಿತ್ತಳು.
ಒಟ್ಟಿನಲ್ಲಿ ದುರ್ಗಾವಿಜಯವು ದುರ್ಗಾಸಪ್ತಶತಿಯನ್ನು ಅರ್ಥೈಸಿಕೊಳ್ಳಲು ನೆರವಾಗುವ ಕನ್ನಡಭಾವಾನುವಾದ ಗ್ರಂಥ.ಮೂಲ ದುರ್ಗಾಸಪ್ತಶತಿಯನ್ನು ಓದದವರು,ಓದಿ ಅರ್ಥೈಸಿಕೊಳ್ಳಲಾಗದವರು ದುರ್ಗಾವಿಜಯವನ್ನು ಓದಬಹುದು.

ಮೊ: 94808 79501
28.11.2021