ಸ್ಥಳೀಯರಿಗೆ ಉದ್ಯೋಗಗಳಲ್ಲಿ ಮೀಸಲಾತಿ– ಕಣ್ಣುತೆರೆಯಿಸುವ ಹರ್ಯಾಣ ಸರ್ಕಾರದ ಮಾದರಿ – ಮುಕ್ಕಣ್ಣ ಕರಿಗಾರ

ವಿಚಾರ

ಸ್ಥಳೀಯರಿಗೆ ಉದ್ಯೋಗಗಳಲ್ಲಿ ಮೀಸಲಾತಿ– ಕಣ್ಣುತೆರೆಯಿಸುವ ಹರ್ಯಾಣ ಸರ್ಕಾರದ ಮಾದರಿ

ಲೇಖಕರು: ಮುಕ್ಕಣ್ಣ ಕರಿಗಾರ

ಸ್ಥಳೀಯರಿಗೆ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದ ಹರ್ಯಾಣ ಸರ್ಕಾರವು ಬಹುಮಹತ್ವದ ಕಾನೂನು ಒಂದು ಜಾರಿಗೆ ತಂದಿದೆ.ಖಾಸಗಿ ವಲಯದ ಸಂಸ್ಥೆ,ಉದ್ಯಮಗಳಲ್ಲಿ ಸ್ಥಳೀಯರಿಗೆ ಶೇಕಡಾ 75 ರಷ್ಟು ಹುದ್ದೆಗಳನ್ನು ಮೀಸಲಿರಿಸಬೇಕು ಎನ್ನುವ ಕಾಯ್ದೆಯು ಹರ್ಯಾಣ ರಾಜ್ಯದಲ್ಲಿ ಜನೆವರಿ 15,2022 ರಿಂದ ಜಾರಿಗೆ ಬರಲಿದೆ.ಹರ್ಯಾಣ ಸರ್ಕಾರವು ” ಸ್ಥಳೀಯ ಅಭ್ಯರ್ಥಿಗಳ ಹರ್ಯಾಣ ರಾಜ್ಯದ ಉದ್ಯೋಗ ಕಾಯ್ದೆ 2020( The Haryana State Employment of Local Candidates Act 2020) ಎನ್ನುವ ಕಾಯ್ದೆಯಂತೆ ಹರ್ಯಾಣ ಸರ್ಕಾರವು ಖಾಸಗಿ ಕಂಪನಿಗಳು ಸ್ಥಳೀಯರಿಗೆ 75% ರಷ್ಟು ಉದ್ಯೋಗದಲ್ಲಿ ಮೀಸಲಾತಿ ನೀಡಲು ನಿಯಮಗಳನ್ನು ರೂಪಿಸಿದೆ.ಅಲ್ಲದೆ ಮಾಸಿಕ ₹30,000 ಗಳಿಗಿಂತ ಕಡಿಮೆ ಸಂಬಳದ ಹುದ್ದೆಗಳಿಗೆ ಈ ಮೀಸಲಾತಿಯನ್ನು ನಿಗದಿಪಡಿಸಲಾಗಿದೆಯಾದ್ದರಿಂದ ಇದು ಅನುಷ್ಠಾನಕ್ಕೆ ಕಷ್ಟಸಾಧ್ಯವೇನಲ್ಲ.ಆದರೆ ಖಾಸಗಿವಲಯದ ಲಾಭಕೇಂದ್ರಿತ ಮನಸ್ಸುಗಳಿಗೆ ಈ ಕಾಯ್ದೆ ರುಚಿಸುತ್ತಿಲ್ಲ.ಕೋರ್ಟಿನಲ್ಲಿ ಈಗಾಗಲೇ ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ. ಈ ಕಾಯ್ದೆಯು ಕೋರ್ಟಿನಲ್ಲಿ ಬಿದ್ದು ಹೋಗಬಹುದು,ಆ ವಿಷಯಬೇರೆ.ಆದರೆ ಹರ್ಯಾಣ ಸರಕಾರದ ಆಶಯ ಗಮನಾರ್ಹವಾದದ್ದು.ಇತರ ರಾಜ್ಯಗಳು ಅನುಕರಿಸುವಂತಹ ಜನಪರ ಕಾಳಜಿಯ ಕಾಯ್ದೆ ಅದು.

ಖಾಸಗಿ ಕ್ಷೇತ್ರದ ದೊಡ್ಡ ಕಾರ್ಖಾನೆಗಳು,ಉದ್ದಿಮೆಗಳು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುತ್ತೇವೆ ಎನ್ನುವ ಸುಳ್ಳು ಭರವಸೆಗಳನ್ನೇ ನೀಡಿ ಸರಕಾರಗಳಿಂದ ಕಡಿಮೆ ಬೆಲೆಗೆ ಭೂಮಿ ಖರೀದಿಸುತ್ತವೆ.ಹಲವು ವಿನಾಯಿತಿ- ರಿಯಾಯತಿಗಳನ್ನು ಪಡೆಯುತ್ತವೆ.ಆದರೆ ಸ್ಥಳೀಯರಲ್ಲಿ ಶೇಕಡಾ ಹತ್ತರಷ್ಟು ಜನರಿಗೂ ಕೆಲಸ ನೀಡುವುದಿಲ್ಲ.ಶೇಕಡಾ ಹತ್ತರಷ್ಟು ಕಡಿಮೆ ಪ್ರಮಾಣದಲ್ಲಿ ನೀಡುವ ಕೆಲಸವೂ ಸಹ ಗಾರ್ಡ್ ಗಳು,ವಾಚ್ ಮ್ಯಾನ್ ಗಳು,ಡ್ರೈವರ್ ಗಳು,ಕ್ಲೀನರ್ ಗಳು ಮತ್ತು ಕ್ಲರ್ಕ್ ಗಳಂತಹ ಹುದ್ದೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ.ಎಕ್ಸಿಕ್ಯೂಟಿವ್ ಇಲ್ಲವೆ ಕಾರ್ಯಕಾರಿ ಮಹತ್ವದ ಯಾವುದೇ ಹುದ್ದೆಗಳನ್ನು ಸ್ಥಳೀಯರಿಗೆ ನೀಡುವುದಿಲ್ಲ.ಸ್ಥಳೀಯರು ಇಂತಹ ಖಾಸಗಿ ಕಂಪನಿಗಳಿಗೆ ಕಡಿಮೆ ಬೆಲೆಗೆ ತಮ್ಮ ಭೂಮಿ ಮಾರಾಟಮಾಡಿ ಅತಂತ್ರರಾಗುವುದು ಒಂದು ಸಮಸ್ಯೆಯಾದರೆ ಕಾರ್ಖಾನೆಗಳು,ಉದ್ದಿಮೆಗಳು ಸೃಷ್ಟಿಸುವ ಪರಿಸರ ಮಾಲಿನ್ಯಕ್ಕೆ ಅವರು ಮಾತ್ರವಲ್ಲ ಗ್ರಾಮೀಣಪ್ರದೇಶದ ಮುಂದಿನ ಪೀಳಿಗೆಯೂ ಬಲಿಯಾಗಬೇಕಾಗುತ್ತದೆ.ಖಾಸಗಿ ಕಂಪನಿಗಳು ಕೆಲವು ಜನ ಸ್ಥಳೀಯರನ್ನು ಉನ್ನತ ಹುದ್ದೆಗಳಿಗೆ ನೇಮಿಸಿಕೊಂಡು ಕಂಪನಿಗಳ ಹಿತಕಾಪಾಡಲು,ಕಂಪನಿಯ ಪರವಾಗಿ ಸರಕಾರ- ಜನಪ್ರತಿನಿಧಿಗಳ ಸಮನ್ವಯ ಸಾಧಿಸುವ ಹೊಣೆ ನೀಡುತ್ತದೆ ಅವರಿಗೆ.ಇಂತಹ ಮಹಾನುಭಾವರುಗಳು ತಮ್ಮ ಸುತ್ತಮುತ್ತಲಿನ ಜನರ ಬದುಕು ಭವಿಷ್ಯ ಏನಾದರಾಗಲಿ ತಮಗೆ ಉದ್ಯೋಗ,ಸವಲತ್ತು ನೀಡಿದ ಸಂಸ್ಥೆಯ ಹಿತಮುಖ್ಯ ಎನ್ನುವ ಮನೋಭಾವನೆಯ’ ಕಂಪನಿಯ ವಕ್ತಾರರುಗಳಾದ ಮನೆಮುರುಕರು’ ಎಂದು ಬೇರೆ ಹೇಳಬೇಕಿಲ್ಲ.

ಯಾವುದೇ ಪ್ರದೇಶದಲ್ಲಿ ಖಾಸಗಿ ಕ್ಷೇತ್ರದ ಯಾವುದೇ ಕಾರ್ಖಾನೆ,ಉದ್ದಿಮೆ,ಸೇವಾವಲಯ ಸ್ಥಾಪನೆ ಆಗಲಿ ಅದು ಸ್ಥಳೀಯರ ಬದುಕಿನೊಂದಿಗೆ ಆಟ ಆಡುವ ಪ್ರಯತ್ನವೆ! ಕಾರ್ಖಾನೆಗಳು ಹೊರಸೂಸುವ ತ್ಯಾಜ್ಯ,ಕಕ್ಕಸು ಮೊದಲಾದ ಪರಿಸರ ಮಾಲಿನ್ಯ ಸಂಬಂಧಿ ಸಮಸ್ಯೆಗಳಿಗೆ ಬಲಿಯಾಗುವವರು ಸ್ಥಳೀಯರು.ಉದ್ಯೋಗಾವಕಾಶಗಳ ಸೃಷ್ಟಿ ಎನ್ನುವ ಹೆಸರಿನಲ್ಲಿ ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಾರೆಯೇ ವಿನಃ ಒಂದು ಖಾಸಗಿ ಕಂಪನಿ ಅಥವಾ ಕಾರ್ಖಾನೆಯ ಸ್ಥಾಪನೆಯಿಂದ ಆ ಪ್ರದೇಶದ ಸ್ಥಳೀಯರ ಬದುಕಿನ ಮೇಲಾಗುವ ಪರಿಣಾಮ ಗ್ರಹಿಸುವುದಿಲ್ಲ.ಸರಕಾರವು ರೂಪಿಸುವ ಕಾನೂನುಗಳ ಪರಿಪಾಲನೆಯೇ ತಮ್ಮ ಕರ್ತವ್ಯ ಎಂದು ಪುನರ್ವಸತಿಯ ಹೆಸರಿನಲ್ಲಿ,ಪರಿಹಾರದ ಹೆಸರಿನಲ್ಲಿ ಸ್ಥಳೀಯ ಜನರನ್ನು ಒಕ್ಕಲೆಬ್ಬಿಸುವಲ್ಲಿ ಪರಮ ಸಾರ್ಥಕತೆಯನ್ನು ಕಾಣುವ ಸರಕಾರಿ ಅಧಿಕಾರಿಗಳು ತಾವು ಅದೇ ಜನರಿಂದ ಬಂದವರು,ಆ ಜನರ ಬದುಕು- ಬವಣೆಗಳನ್ನು ಹಂಚಿಕೊಳ್ಳಬೇಕಾದವರು ಎನ್ನುವ ಕಿಂಚಿತ್ ಪ್ರಜ್ಞೆಯೂ ಇಲ್ಲದೆ ಬ್ರಿಟಿಷ್ ಸರಕಾರದ ಅಧಿಕಾರಿಗಳಂತೆ ವರ್ತಿಸುತ್ತಾರೆ.ಭೂಸ್ವಾಧೀನ,ಪರಿಹಾರ ಕ್ರಮಗಳಲ್ಲಿ ಬಾಧೆಗೊಳಗಾದ ಜನರಿಗೆ ಕೋರ್ಟ್ ಗಳಿಂದ ಪರಿಹಾರ ಸಿಗುತ್ತಿದೆಯೇ ಹೊರತು ಸಾರ್ವಜನಿಕ ಸೇವಕರಾದ ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳಿಂದ ಭರವಸೆ ಸಿಗುತ್ತಿಲ್ಲ.ಖಾಸಗಿ ಕಂಪನಿಗಳು,ಉದ್ದಿಮೆಗಳು ಹೇಗೆ ತಮ್ಮ ಕಾರ್ಯಸಾಧಿಸಿಕೊಳ್ಳಬೇಕು ಎನ್ನುವುದನ್ನು ಚೆನ್ನಾಗಿ ಬಲ್ಲವು.ಖಾಸಗಿ ಹಿತಾಸಕ್ತಿ ಎದುರು ಮರೆಯಾಗುತ್ತದೆ ಸಾರ್ವಜನಿಕ ಹಿತಾಸಕ್ತಿ.ಹಣದ ಥೈಲಿಯ ಮುಂದೆ ಮಂಡಿಯೂರುವ ಸಾರ್ವಜನಿಕ ಸೇವಕರು ಜನಸಾಮಾನ್ಯರ ಬದುಕುಗಳೊಂದಿಗೆ ಚೆಲ್ಲಾಟವಾಡುತ್ತಾರೆ.

ಸ್ಥಳೀಯರ ಬದುಕುಗಳ ಮೇಲೆ ಪರಿಣಾಮ ಬೀರುವ ಯಾವುದೇ ಖಾಸಗಿ ಉದ್ದಿಮೆ,ಕಂಪನಿಯು ತಾನು ತೆರೆಯುವ ತನ್ನ ಕಾರ್ಖಾನೆ,ಉದ್ದಿಮೆ ವ್ಯಾಪ್ತಿಯ ಪ್ರದೇಶದಲ್ಲಿ ಕನಿಷ್ಠ 60% ರಷ್ಟು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು.ಭೂಮಿಗೆ,ಪರಿಸರಕ್ಕೆ ಪರ್ಯಾಯವಿಲ್ಲ.ತಮ್ಮ ಜೀವನದಾಸರೆಯಾದ ಭೂಮಿಯನ್ನು ಕಳೆದುಕೊಳ್ಳುವ,ಕಾರ್ಖಾನೆಗಳ ಮಾಲಿನ್ಯದಿಂದ ಬದುಕನ್ನು ಜೀವಂತ ನರಕವನ್ನಾಗಿಸಿಕೊಳ್ಳುವ ಜನಸಾಮಾನ್ಯರ ಶೋಚನೀಯ ಸ್ಥಿತಿಯ ಎದುರು ಖಾಸಗಿ ಕಂಪನಿಗಳ ಮಾಲಕರು ಶೇಕಡಾ 60 ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡುವುದು ಅವರು ಮಾಡುವ ಉಪಕಾರವೇನಲ್ಲ; ಅದು ಕನಿಷ್ಟ ಬದ್ಧತೆ.ಸರಕಾರಗಳು ಖಾಸಗಿ ಕ್ಷೇತ್ರದಿಂದ ಈ ಕನಿಷ್ಟ ಭದ್ರತೆಯನ್ನು ಖಚಿತಪಡಿಸಬೇಕು.ಶೇಕಡಾ 60ರಷ್ಟು ಸ್ಥಳೀಯರಿಗೆ ಮೀಸಲಿರಿಸುವ ಹುದ್ದೆಗಳಲ್ಲಿ ಶೇಕಡಾ 20 ರಷ್ಟನ್ನು ಕಾರ್ಯಕಾರಿ ಹುದ್ದೆಗಳಿಗೆ,ಶೇಕಡಾ 10 ರಷ್ಟು ಕೌಶಲ್ಯಗಳಿಗೆ ಶೇಕಡಾ 30 ರಷ್ಟು ಡಿ ಗ್ರೂಪ್ ಡಿ ಮೊದಲಾದ ಪರಿಚಾರಕ,ಸಹಾಯಕ ದರ್ಜೆಯ ಹುದ್ದೆಗಳಿಗೆ ನೀಡಬಹುದು.ಅದನ್ನು ಬಿಟ್ಟು ಎಲ್ಲಾ ಮಹತ್ವದ ಹುದ್ದೆಗಳಿಗೆ ನಮ್ಮವರೇ ಇರಲಿ,ನೀವು ಕ್ಲೀನರ್ ಗಳಾಗಿ ಕಸ ಮುಸುರೆ ತೊಳೆದುಕೊಂಡು ಇರಿ ಎಂದು ಆಜ್ಞೆ ಮಾಡಲು ನಮ್ಮ ಖಾಸಗಿ ಕಂಪನಿಗಳೇನು ‘ ಈಸ್ಟ್ ಇಂಡಿಯಾ ಕಂಪನಿಯೆ’?. ನಾವೇನು ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಇದ್ದೇವೆಯೆ? ಮತ್ತೆ ಯಾಕೆ ಖಾಸಗಿ ಕಂಪನಿಗಳ ಪಕ್ಷ ವಹಿಸಬೇಕು ನಮ್ಮ ಸಾರ್ವಜನಿಕ ಸೇವಕರು?

ಮುಕ್ಕಣ್ಣ ಕರಿಗಾರ
ಮೊ: 94808 79501

‌28.11.2021