ವೃಕ್ಷಗಳಲ್ಲಿ ದೇವ ದೇವಿಯರು : ಮುಕ್ಕಣ್ಣ ಕರಿಗಾರ

ವೃಕ್ಷಗಳಲ್ಲಿ ದೇವ ದೇವಿಯರು

ಲೇಖಕರು: ಮುಕ್ಕಣ್ಣ ಕರಿಗಾರ

‘ ಮರನ ಕಂಡಲ್ಲಿ ಸುತ್ತುವರಯ್ಯಾ’ ಎಂದಿದ್ದಾರೆ ಬಸವಣ್ಣನವರು ತಮ್ಮದೊಂದು ವಚನದಲ್ಲಿ.ಏಕದೇವತೋಪಾಸನೆಯನ್ನು ಪ್ರತಿಷ್ಠಾಪಿಸಬಯಸಿದ್ದ ಬಸವಣ್ಣನವರು ಸಮಾಜದಲ್ಲಿ ರೂಢಿಗತವಾಗಿದ್ದ ಮೌಢ್ಯ- ಕಂದಾಚಾರಗಳನ್ನು ಖಂಡಿಸುತ್ತಲೇ ನಡೆದರು.’ಮರನ ಕಂಡಲ್ಲಿ ಸುತ್ತುವರು’ ಎನ್ನುವ ಬಸವಣ್ಣನವರ ಹೇಳಿಕೆಯ ಮೂಲ ಬನ್ನಿ ಮರ ಮತ್ತು ಅರಳೆಮರವನ್ನು ಸುತ್ತುವ ಜನರ ನಂಬಿಕೆ.ಇದು ನಂಬಿಕೆಯೋ ಮೂಢನಂಬಿಕೆಯೋ ಮತ್ತೊಮ್ಮೆ ವಿಚಾರಿಸೋಣ.ಆದರೆ ವೃಕ್ಷಾರಾಧನೆಯೂ ಒಂದು ಆರಾಧನಾಪದ್ಧತಿಯಾಗಿ ಬಹುಹಿಂದಿನಿಂದಲೂ ಬೆಳೆದು ಬಂದಿದೆ.ಬಹುಶಃ ವೇದಕಾಲಕ್ಕಿಂತಲೂ ಮೊದಲೇ ವೃಕ್ಷಾರಾಧನೆಯ ಪದ್ಧತಿ ಬೆಳೆದಿರಬೇಕು .ವೇದದಲ್ಲಿ ಮೂರ್ತಿಪೂಜೆ,ವಿಗ್ರಹಾರಾಧನೆ ಇಲ್ಲ.ವೇದದ ಪ್ರತಿದೇವತೆಗೆ ‌ಪ್ರತ್ಯೇಕ ಹೆಸರು, ವಿಶ್ವಕಲ್ಯಾಣದಲ್ಲಿ ಅವರು ನಿರ್ವಹಿಸುತ್ತಿರುವ ನಿರ್ದಿಷ್ಟ ಪಾತ್ರದ ಸ್ಪಷ್ಟವಿವರಣೆಗಳಿವೆ.ವೇದಸಂಸ್ಕೃತಿಯಂತಹ ಸರ್ವೋತ್ಕೃಷ್ಟ ಸಂಸ್ಕೃತಿ ಒಂದು ಬೆಳೆದು ಬರಬೇಕಾದರೆ ಅದರ ಪೂರ್ವದಲ್ಲಿ,ವೇದ ಸಂಸ್ಕೃತಿಗೆ ಮೂಲವಾದ ಒಂದು ಸಂಸ್ಕೃತಿ ಇರಲೇಬೇಕು.ಆ ಮೂಲ ಸಂಸ್ಕೃತಿಯೇ ಅರಣ್ಯವಾಸಿಗಳಾಗಿದ್ದ ಬುಡಕಟ್ಟು ಜನಾಂಗದ ಸಂಸ್ಕೃತಿ.ಆದಿಮಾನವನಿಂದ ವಿಕಸಿಸುತ್ತ ಸಹಸ್ರಾರು ವರ್ಷಗಳಲ್ಲಿ ಮನುಷ್ಯ ಬುಡಕಟ್ಟು ಜನಾಂಗದ ಸ್ವಲ್ಪ ಸುಧಾರಿತ ಸ್ಥಿತಿಗೆ ತಲುಪಿದ್ದ.

ದಟ್ಟಕಾಡಿನಲ್ಲಿ ನಿತ್ಯ ಕ್ರೂರ ಮೃಗಗಳ ಭಯ- ಆತಂಕದಲ್ಲಿಯೇ ಬದುಕುತ್ತಿದ್ದ ಬುಡಕಟ್ಟು ಜನಾಂಗದವರಿಗೆ ಹುಲಿ,ಸಿಂಹ,ಚಿರತೆಗಳಂತಹ ಕ್ರೂರ ಪ್ರಾಣಿಗಳಲ್ಲದೆ ಗುಡುಗು,ಸಿಡಿಲು ,ಮಳೆಗಳಂತಹ ಪ್ರಾಕೃತಿಕ ವಿದ್ಯಮಾನಗಳೂ ಅವರಲ್ಲಿ ಭಯವನ್ನುಂಟು ಮಾಡಿದವು.ಆ ಭಯದ ಪರಿಹಾರಕ್ಕಾಗಿ ಅವರು ಕಂಡುಕೊಂಡ ಮಾರ್ಗವೇ ಗಿಡ ಮರಗಳಲ್ಲಿ ದೇವರ ಅಸ್ತಿತ್ವವನ್ನರಸಿದ್ದು.ಕಾಡಿನಲ್ಲಿ ತಮ್ಮ ನಿತ್ಯಜೀವನದಲ್ಲಿ ಕಾಣುತ್ತಿದ್ದ ಗಿಡ ಮರಗಳಲ್ಲಿ ದೇವ ದೇವಿಯರನ್ನು ಗುರುತಿಸಿ,ಕಷ್ಟ- ವಿಪತ್ತುಗಳ ಪರಿಹಾರಕ್ಕಾಗಿ ಆ ಗಿಡದೇವರುಗಳ ಮೊರೆಹೋದರು.ಇದುವೆ ಮುಂದೆ ವೃಕ್ಷಾರಾಧನೆಯ ಕಾರಣವಾಯಿತು,ವೃಕ್ಷಾರಾಧನೆಯೂ ಒಂದು ಆರಾಧನೆ ಪರಂಪರೆಯಾಗಿ ನಮ್ಮಲ್ಲಿ ಬೆಳೆದು ಬರಲು ಕಾರಣವಾಯಿತು.

ಬುಡಕಟ್ಟು ಜನರು ಮೊದಲು ಕಲ್ಪಿಸಿಕೊಂಡಿದ್ದು ಕಾಳಿಯನ್ನು! ಆಕೆಯು ಉಗ್ರಭಯಂಕರಿಯ ರೂಪವನ್ನು ಕಲ್ಪಿಸಿಕೊಂಡು ಕಾಳಿ ಎಂದರೆ ಕಾಯುವ ದೇವಿ ಎಂದು ಶಮೀವೃಕ್ಷ ಇಲ್ಲವೇ ಬನ್ನಿಮರವನ್ನು ಕಾಳಿಯ ರೂಪವನ್ನಾಗಿ ಕಂಡರು.ಬನ್ನಿ ಮರ ಕಪ್ಪಾಗಿಯೇ ಇರುತ್ತದೆ.ಬನ್ನಿ ಮರದಲ್ಲಿ ಮುಳ್ಳುಗಳಿರುವುದರಿಂದ ಹುಲಿ,ಸಿಂಹ, ಚಿರತೆಗಳು ಬನ್ನಿ ಮರವನ್ನು ಹತ್ತುವುದಿಲ್ಲ.ಬನ್ನಿ ಮರದಡಿ ನಿಂತರೆ ಸಿಡಿಲು ಬೀಳದು ಎನ್ನುವ ನಂಬಿಕೆಯೂ ಜನರಲ್ಲಿದೆ.ಬನ್ನಿ ಮರದ ಎಲೆ ಮತ್ತು ಕಾಯಿಗಳಲ್ಲಿ ರೋಗನಿವಾರಕ ಶಕ್ತಿಯೂ ಇದೆ.ಬನ್ನಿ ಮರವನ್ನು ಸುತ್ತಿದರೆ ಭೂತಪ್ರೇತಗಳು ಓಡಿಹೋಗುತ್ತವೆ ಎನ್ನುವ ಕಾರಣದಿಂದ ಜನರು ಬನ್ನಿ ಮರವನ್ನು ಸುತ್ತುತ್ತಾರೆ.ಮಹಾಕಾಲಿಯು ಉಗ್ರರೂಪಧರಿಸಿದಾಗ ಸ್ಮಶಾನ ಕಾಳಿ ಆಗುತ್ತಾಳೆ.ರುಂಡಗಳ ಮಾಲೆಯನ್ನು ಧರಿಸಿ ಆರ್ಭಟಿಸುತ್ತಾಳೆ.ಸ್ಮಶಾನವಾಸಿನಿಯೂ ಭೂತ ಪ್ರೇತಗಳ ಒಡೆಯಳೂ ಆಗಿರುವ ಮಹಾಕಾಳಿಯ ಸ್ವರೂಪವಾದ ಬನ್ನಿಮರವನ್ನು ಸುತ್ತಿದರೆ ಭೂತಪ್ರೇತಗಳ ಬಾಧಿಸವು ಎನ್ನುವ ಕಾರಣದಿಂದ ಬನ್ನಿಮರದ ಪೂಜೆ,ಉಪಾಸನೆಗಳು ನಡೆದವು.ಮಹಾಭಾರತದಲ್ಲಿ ಪಾಂಡವರು ವನವಾಸಕ್ಕೆ ಹೋಗುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿಟ್ಟ ಹೋದ ಪ್ರಸಂಗ ಬರುತ್ತದೆ.ಅಂದರೆ ಬನ್ನಿ ಮರದಲ್ಲಿ ಮಹಾಕಾಳಿ ಇದ್ದಾಳೆ ಅವಳು ತಮ್ಮ ಶಸ್ತ್ರಾಸ್ತ್ರಗಳನ್ನು ರಕ್ಷಿಸಿ ಇಡುತ್ತಾಳೆ ತಾವು ವನವಾಸ,ಅಜ್ಞಾತವಾಸಗಳಿಂದ ಹಿಂತಿರುಗಿ ಬರುವವರೆಗೆ ಎನ್ನುವ ನಂಬಿಕೆ ಪಾಂಡವರದ್ದು.ಬನ್ನಿಮರವನ್ನು ‘ ಬನ್ನಿ ಮಹಾಂಕಾಳಿ’ ಎಂದೇಕರೆಯುತ್ತಾರೆ.ವಿಜಯದಶಮಿಯ ದಿನದಂದು ಬನ್ನಿಗಿಡದ ಪೂಜೆ ಮಾಡಿದ ಬಳಿಕ ಬನ್ನಿಯ ಪತ್ರಿಯನ್ನು ಹಂಚಿ,ಬಾಂಧವ್ಯ ಮೆರೆಯುತ್ತೇವಲ್ಲ ಅದರ ಕಾರಣವೂ ಶುಭದ ವಿನಿಮಯವೇ.ಬನ್ನಿಪತ್ರೆಯಲ್ಲಿ ರೋಗನಿರೋಧಕ ಗುಣವಿದ್ದು ಅದು ಭಯ ಭೀತಿಗಳನ್ನು ನಿವಾರಿಸುತ್ತದೆ,ಅಶುಭವನ್ನು ಹೋಗಲಾಡಿಸುತ್ತದೆ.ಬನ್ನಿ ಪತ್ರಿಯನ್ನು ಹಂಚುವ ಮೂಲಕ ಶುಭವನ್ನು,ಅಭಯವನ್ನು ಹಂಚಿಕೊಳ್ಳುತ್ತಾರೆ ಜನತೆ.

ಬನ್ನಿಯ ಮರದಲ್ಲಿ ಆಪದ್ರಕ್ಷಕಿ ಮಹಾಕಾಳಿಯನ್ನು ಕಂಡ ಬುಡಕಟ್ಟು ಜನರ ಲಕ್ಷ್ಯ ಆಲದ ಮರದತ್ತ ಹೋಯಿತು.ಮುಗಿಲೆತ್ತರ ಬೆಳೆಯುತ್ತ ಬಿಳಲುಗಳನ್ನು ನೆಲದಲ್ಲಿ ಇಳಿಸುತ್ತ ವಿಸ್ತರಿಸಿಕೊಂಡು ವರ್ಧಿಸುವ ಆಲದ ಮರದಲ್ಲಿ ಶಿವನನ್ನು ಕಂಡರು.ಶಿವನು‌ ಜಟಾಧಾರಿಯಲ್ಲವೆ? ಆಲದ ಮರದ ಬಿಳಲುಗಳು ಶಿವನ ಜಟೆಯ ಪ್ರತೀಕ.ಗುಹೆಗಳ ನಂತರ ಬುಡಕಟ್ಟು ಜನರು ವಾಸಿಸಿದ್ದು ಆಲದಮರಡಿ.ಅವರಿಗೆ ಉತ್ತಮ ನೆಲೆಯೂ ಆಗಿ ಆಲದ ಮರದ ಪೊಟರೆಗಳಲ್ಲಿ ತಾವು ಬೇಟಯಾಡಿದ ಪ್ರಾಣಿಗಳಮಾಂಸ ಸಂಗ್ರಹಿಸಿಡಲು ಮತ್ತು ತಮ್ಮ ಮಕ್ಕಳು ಆಟವಾಡುತ್ತ ನೆಮ್ಮದಿಯಿಂದ ಇರಲು ಸಾಧ್ಯವಾದದ್ದು ಆಲದಮರದಡಿಯೆ.ಆಲದ ಬಿಳಲುಗಳೇ ಜಗತ್ತಿನ ಮೊದಲ ಉಯ್ಯಾಲೆ.ಬದುಕು ಮತ್ತು ಭದ್ರತೆಯನ್ನು ನೀಡುವ ಮರವಾದ್ದರಿಂದ ಆಲದ ಮರವು ಶಿವನ ಪ್ರತೀಕವಾಯಿತು.’ಶಿವ’ ಅಶುಭನಿವಾರಕ,ಮಂಗಳಕರ ಮತ್ತು ಅಭಯಮೂರ್ತಿ ಎಂದೇ ಅರ್ಥವಲ್ಲವೆ? ತಮ್ಮ ಬದುಕಿಗೆ ಅಭಯ,ಭದ್ರತೆ ಮತ್ತು ಭರವಸೆಯನ್ನಿತ್ತ ಶಿವನನ್ನು ಆಲದಮರದಲ್ಲಿ ಕಲ್ಪಿಸಿಕೊಂಡರು.

ರೋಗ,ರುಜಿನಿಗಳು ಕಾಡಿದಾಗ ಮತ್ತೊಂದು ಮರದ ಅಗತ್ಯ ಕಾಣಿಸಿತು.ರೋಗನಿವಾರಕ ಗಿಡವನ್ನಾಗಿ ಬುಡಕಟ್ಟು ಜನರು ಬೇವಿನ ಮರವನ್ನು ಗುರುತಿಸಿದರು.ಶಿವನು ಅಭಯದಾತನಾದರೆ ಶಿವನ ಸತಿ ಪಾರ್ವತಿಯು ಪ್ರಕೃತಿಮಾತೆಯಾದ್ದರಿಂದ ಆಕೆ ಆರೋಗ್ಯ,ನೆಮ್ಮದಿಗಳನ್ನು ಕರುಣಿಸುವವಳು ಎಂದು ಬೇವಿನ ಮರದಲ್ಲಿ ಪಾರ್ವತಿಯನ್ನು‌ ಉಪಾಸಿಸತೊಡಗಿದರು.ನಮ್ಮ ದೇಹದ ಚರ್ಮ,ರಕ್ತ- ಮಾಂಸಗಳು ಪಾರ್ವತಿಯ ಪ್ರತೀಕವಾಗಿದ್ದು ಎಲುವು ಪುರುಷನಾದ ಶಿವನ ಪ್ರತೀಕ.ಚರ್ಮರೋಗಗಳಿಗೆ,ವ್ರಣರೋಗಗಳಿಗೆ ಬೇವಿನ ಎಲೆ ಮತ್ತು ರಸವು ದಿವ್ಯೌಷಧಿ.ಮಕ್ಕಳಿಗೆ ಅನಾರೋಗ್ಯ ಉಂಟಾದಾಗ ಬೇವಿನ ಎಲೆಗಳನ್ನು ಮೈಗೆ ಸುತ್ತುತ್ತಿದ್ದರು.ಬೇವಿನ ಎಲೆ ಹೂವುಗಳಿಂದ ಗಾಳಿ ಹಾಕುತ್ತಿದ್ದರು.ಪ್ರತಿದಿನ ಬೇವಿನ ರಸ ಸೇವಿಸಿದರೆ ಸರ್ವರೋಗಗಳಿಂದ ಮುಕ್ತರಾಗಿ ವಜ್ರಶರೀರಿಗಳಾಗಬಹುದು.ಸಿದ್ಧರುಗಳು ಬೇವಿನ ರಸ ಸೇವಿಸುತ್ತಿದ್ದರು ಎನ್ನುವುದನ್ನು ಗಮನಿಸಬೇಕು.

ಗಣಪತಿಯನ್ನು ಬುಡಕಟ್ಟು ಜನಾಂಗದವರು ಗುರುತಿಸಿದ್ದು ಎಕ್ಕೆ ಗಿಡದಲ್ಲಿ.ಎಕ್ಕೆ ಗಿಡದಲ್ಲಿ ಗಣಪತಿಯನ್ನು ಕಾಣಲು ಎರಡು ಮುಖ್ಯ ಕಾರಣಗಳಿವೆ.ಗಣಪತಿಯು ಶಿವ ಪಾರ್ವತಿಯರ ಮಗ.ಶಿವನ ಮರ ಆಲವಾದರೆ,ಪಾರ್ವತಿಯ ಮರ ಬೇವು.ಎರಡು ದೊಡ್ಡ ಮರಗಳೆ.ಮಗ ಅಂದರೆ ಚಿಕ್ಕವನು ತಾನೆ? ಆದ್ದರಿಂದ ಚಿಕ್ಕದಾದ ಎಕ್ಕೆ ಮರವು ಗಣಪತಿಯ ಮರವಾಯಿತು.ಗಣಪತಿಯು ಅನಿಷ್ಟನಿವಾರಕ,ವಿಘ್ನನಿವಾರಕ.ಎಕ್ಕೆ ಮರದಲ್ಲಿಯೂ ಅನಾರೋಗ್ಯಕಾರಕ ಕ್ರಿಮಿ ಕೀಟ,ವೈರಾಣುಗಳನ್ನು ನಾಶಗೊಳಿಸುವ ಸಾಮರ್ಥ್ಯ ಇದೆ.ಗಣಪತಿಯು ಮೊರದಂಥ ಕಿವಿಯವನು ಎನ್ನುವ ಕಲ್ಪನೆ ಇರುವುದರಿಂದ ಎಕ್ಕೆಯ ಎಲೆಗಳು ಗಣಪತಿಯ ಕಿವಿಯನ್ನು ಪ್ರತಿನಿಧಿಸುತ್ತವೆ.ತನ್ನಿಂದ ತಾನೇ ಬೆಳೆದ ಎಕ್ಕೆಯ ಮರದ ಬುಡದಲ್ಲಿ ಗಣಪತಿಯ ಆಕಾರ ಮೂಡಿರುತ್ತದೆ.ತಾಂತ್ರಿಕರು ಬಿಳಿ ಎಕ್ಕೆಯ ಮರದಿಂದ ಶ್ವೇತಾರ್ಕಗಣಪತಿ ಸಿದ್ಧಿಯನ್ನು,ಕ್ಷುದ್ರವಿದ್ಯಾ ಉಪಾಸಕರು ‘ ಎಕ್ಕೆ ಬೆನಕನ ‘ ಸಿದ್ಧಿ ಪಡೆದು ಜನರ ಗೌರವಾದರಗಳಿಗೆ ಪಾತ್ರರಾಗುವುದು ಇಂದಿಗೂ ನಡೆದು ಬಂದಿದೆ.

ಎಲ್ಲರಿಗೂ ಅಗತ್ಯವಿರುವ ವಾಯುವೂ ದೇವರೆ ಅಲ್ಲವೆ? ಯಾವ ಮರದಲ್ಲಿ ಹುಡುಕಬೇಕು ಗಾಳಿ ದೇವರನ್ನು? ಗಾಳಿ ಎಲ್ಲೆಲ್ಲಿಯೂ ವ್ಯಾಪಿಸಿರುತ್ತದೆ ಎನ್ನುವುದರ ಕುರುಹಿಗಾಗಿ ಸಾಮಾನ್ಯವಾಗಿ ಎಲ್ಲಾ ಕಡೆ ಬೆಳೆಯುವ ‘ ಅಮರೆಗಿಡ’ ( ಹಳದಿ ಬಣ್ಣದ ಹೂವುಗಳನ್ನು ಬಿಡುವ ಸಸ್ಯ) ದಲ್ಲಿ ಗಾಳಿದೇವರನ್ನು ಕಂಡರು.ಅಮರೆಯ ಹೂವು,ಎಲೆ ಮತ್ತು ತೊಗಟೆಯಲ್ಲಿ ರೋಗನಿವಾರಕ ಗುಣವಿದೆ.

ಈ ಗಿಡ ಮರ ಸಸ್ಯಗಳಲ್ಲಿ ಬುಡಕಟ್ಟು ಜನಾಂಗದವರು ದೇವ- ದೇವಿಯರನ್ನು ಕಂಡರು.ಕಾಳಿ,ಶಿವ ಮತ್ತು ಶಕ್ತಿಯರು ಜಗತ್ತಿನ ಮೂಲ ದೇವತೆಗಳು ಎನ್ನುವುದನ್ನು ವೃಕ್ಷೋಪಾಸನೆ ಪದ್ಧತಿಯು ಸೂಚಿಸುತ್ತದೆ.ಅರಳೆಮರವು ಲಕ್ಷ್ಮೀ ಮತ್ತು ವಿಷ್ಣುವಿನ ನೆಲೆ ಎನ್ನುವುದು,ಅತ್ತಿಮರವು ಬ್ರಹ್ಮವೃಕ್ಷ ಎನ್ನುವುದು,ತುಳಸಿಗಿಡದಲ್ಲಿ ತುಳಸಿ ನೆಲೆನಿಂತಿದ್ದಾಳೆ ಎನ್ನುವ ಕಲ್ಪನೆಗಳು ಇತ್ತೀಚಿನವು.ಇವು ಬುಡಕಟ್ಟು ಜನರು ರೂಢಿಸಿಕೊಂಡಿದ್ದ ಉಪಾಸನಾ ದೇವತೆಗಳಲ್ಲ,ಉಪಾಸನಾ ವೃಕ್ಷಗಳೂ ಅಲ್ಲ.ಭಾರತದಲ್ಲಿ ಶೈವ,ಶಾಕ್ತ,ಗಾಣಪತೇಯ ಮತಗಳ ನಂತರವೇ ವೈಷ್ಣವ ಮತವು ಕಾಣಿಸಿಕೊಂಡಿದ್ದರಿಂದ ವೈಷ್ಣವರ ಉಪಾಸನೆಯ ಮರಗಳು ಕಾಡುಜನರಿಗೆ ತಿಳಿದಿರಲಿಲ್ಲ.ಅರಳೆಮರದ ಒಣಕಟ್ಟಿಗೆಗಳು ಹೋಮ ಮಾಡಲು ಬಳಸಲಾಗುತ್ತಿದೆ.ಹೋಮ,ಯಜ್ಞಗಳ ಸಂಸ್ಕೃತಿಯು ಬುಡಕಟ್ಟು ಜನರಿಗೆ ತಿಳಿದಿರಲಿಲ್ಲ.ಬುಡಕಟ್ಟು ಜನರ ಕಾಲದಲ್ಲಿ ನಾಣ್ಯದ ಚಲಾವಣೆಯು ಇರಲಿಲ್ಲವಾಗಿ ಅವರಿಗೆ ಹಣದ ಅವಶ್ಯಕತೆ ಕಾಣದಾಗಿದ್ದರಿಂದ ಅವರು ಸಂಪತ್ತಿನ ಅಧಿದೇವಿಯಾದ ಲಕ್ಷ್ಮೀಯನ್ನು ಹುಡುಕಲಿಲ್ಲ,ಆರಾಧಿಸಲಿಲ್ಲ.ಋಗ್ವೇದದಲ್ಲಿ ವಿಷ್ಣುವಿನ ಕುರಿತು ಕೇವಲ ಐದು ಋಕ್ಕುಗಳಿವೆ.ಅದರರ್ಥ ವೇದಕಾಲದಲ್ಲಿಯೂ ವಿಷ್ಣು ಪ್ರಮುಖ ದೇವತೆ ಆಗಿರಲಿಲ್ಲ ಅಗ್ನಿ,ಇಂದ್ರ,ರುದ್ರರಂತೆ.ವೇದದ ಶ್ರೀ ಸೂಕ್ತವು ಖಿಲಭಾಗವೇ.ಅಂದರೆ ನಂತರ ಸೇರಿಸಲ್ಪಟ್ಟಿದ್ದು.ತುಳಸಿಯು ಪುರಾಣಗಳ ಕಾಲದಲ್ಲಿ ದೇವಿಯಾಗಿ ಕಾಣಿಸಿಕೊಳ್ಳುತ್ತಾಳೆ.

ಈಗೀಗ ಎಲ್ಲ ದೇವತೆಗಳ ಹೆಸರಿನಲ್ಲಿ ಒಂದೊಂದು ಮರವನ್ನು ಗುರುತಿಸಿ,ಪೂಜಿಸಲಾಗುತ್ತಿದೆಯಾದರೂ ಅದು ಇತ್ತೀಚಿನವರ ಕಲ್ಪನೆ,ಸನಾತನ ನಂಬಿಕೆಯಲ್ಲ.ಉದಾಹರಣೆಗಾಗಿ ಹೇಳುವುದಾದರೆ ನವಗ್ರಹಗಳನ್ನು ಒಂದೊಂದು ವೃಕ್ಷ ನಿಗದಿಪಡಿಸಿ ಪೂಜಿಸುವುದು.ವೇದದಲ್ಲಿ ಸೂರ್ಯೋಪಾಸನೆ ಇದೆ.ಆದರೆ ಅದು ನಮ್ಮ ಜ್ಯೋತಿಷಿಗಳು ಪ್ರಚುರಪಡಿಸುವ ಸೂರ್ಯೋಪಾಸನೆಗಿಂತ ತೀರ ಭಿನ್ನವಾದುದು.ವೇದದ ಸೂರ್ಯ ಜಗತ್ತಿನ ಆಗು ಹೋಗುಗಳ ಕಾರಕನು,ಪ್ರತ್ಯಕ್ಷ ದೈವ,ಮೂರು ಲೋಕಗಗಳನ್ನು ಪ್ರಕಾಶಿಸುವವನು,ಒಳ ಹೊರಗುಗಳನ್ನು ಬೆಳಗುವವನು.ಗ್ರಹಗಳ ಉಪಾಸನೆ ಆರಂಭವಾದದ್ದು ಕ್ರಿಶ ಐದನೇ ಶತಮಾನದಿಂದ ಈಚೆಗೆ.ಆ ಮೊದಲು ಗ್ರಹಗಳ ಉಪಾಸನೆ ಇರಲಿಲ್ಲ,ನವಗ್ರಹಗಳ ಪೂಜೆಯೂ ಇರಲಿಲ್ಲ.ಬಸರಿಯ ಮರವನ್ನು ಬ್ರಹ್ಮವೃಕ್ಷವೆಂದು ಗುರುತಿಸಬಹುದೇ ಹೊರತು ಅತ್ತಿ ಅಥವಾ ಅಂಜೂರವನ್ನು ಬ್ರಹ್ಮವೃಕ್ಷಗಳೆಂದು ಗುರುತಿಸಲಾಗದು ಅವು ಹೊರದೇಶದಿಂದ ಈ ದೇಶಕ್ಕೆ ಬಂದ ಸಸ್ಯಪ್ರಭೇದಗಳಾದ್ದರಿಂದ.ಇದು ವೃಕ್ಷದೇವತೆಗಳ ಆರಾಧನಾ ಪದ್ಧತಿ ಬೆಳೆದು ಬಂದ ಬಗೆ.

ಮುಕ್ಕಣ್ಣ ಕರಿಗಾರ
ಮೊ: 94808 79501

27.11.2021