ಮಾನ್ವಿ ನ.26: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳೆ ಹಾನಿಗೀಡಾದ ಜಮೀನುಗಳಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರದ ವತಿಯಿಂದ ಅಗತ್ಯ ಪರಿಹಾರ ದೊರಕಿಸಿಕೊಡಲು ಶ್ರಮಿಸುವುದಾಗಿ ಅವರು ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಿದರು.
ನಂತರ ಮಾತನಾಡಿದ ಅವರು, ‘ ಈಚೆಗೆ ಸುರಿದ ಮಳೆಯಿಂದ ಮಾನ್ವಿ ತಾಲ್ಲೂಕಿನಲ್ಲಿ 6,435 ಎಕರೆ ಹಾಗೂ ಸಿರವಾರ ತಾಲ್ಲೂಕಿನ 2,158ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತಕ್ಕೆ ಹಾನಿಯಾಗಿದೆ. ಸರ್ಕಾರ ಕೂಡಲೇ ಪ್ರತಿ ಎಕರೆಗೆ ರೂ35ಸಾವಿರ ಪರಿಹಾರ ಘೋಷಿಸಬೇಕು. ಹತ್ತಿ ಮತ್ತು ತೊಗರಿ ಬೆಳೆಗಳು ಕೂಡ ಹಾನಿಗೊಳಗಾಗಿದ್ದು ಹತ್ತಿಗೆ ಪ್ರತಿ ಎಕರೆಗೆ ರೂ25ಸಾವಿರ, ತೊಗರಿ ಪ್ರತಿ ಎಕರೆಗೆ ರೂ15ಸಾವಿರ ಹಾಗೂ ಮೆಣಸಿನಕಾಯಿಗೆ ಪ್ರತಿ ಎಕರೆಗೆ ರೂ೧೦ಸಾವಿರ ಪರಿಹಾರ ಧನ ನೀಡಬೇಕು’ ಎಂದು ಒತ್ತಾಯಿಸಿದರು. ಬೆಳೆಹಾನಿಯ ಸಮರ್ಪಕ ವರದಿ ತಯಾರಿಸಿ ಕೂಡಲೇ ಸರ್ಕಾರಕ್ಕೆ ಸಲ್ಲಿಸಲು ಅವರು ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜೆಡಿಎಸ್ ಪಕ್ಷದ ಮುಖಂಡರಾದ ರಾಜಾ ರಾಮಚಂದ್ರನಾಯಕ, ಮಲ್ಲಿಕಾರ್ಜುನ ಪಾಟೀಲ್, ಇಬ್ರಾಹಿಂ ಬಾಷಾ, ಹನುಮಂತ ಭೋವಿ, ಅಮರೇಶಗೌಡ, ಪಂಪನಗೌಡ, ಬಸನಗೌಡ ಮತ್ತಿತರರು ಇದ್ದರು.