ನೇಮಕಗೊಂಡ ಇಲಾಖೆಯಲ್ಲೇ ಅಧಿಕಾರಿಗಳು ,ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸಬೇಕು
ಲೇಖಕರು: ಮುಕ್ಕಣ್ಣ ಕರಿಗಾರ
ಕರ್ನಾಟಕದ ಸರಕಾರಿ ಸೇವೆಗೆ ಸಂಬಂಧಿಸಿದಂತೆ ಕಂದಾಯಸಚಿವ ಶ್ರೀಯುತರಾದ ಆರ್ ಅಶೋಕ ಅವರ ಅಧ್ಯಕ್ಷತೆಯಲ್ಲಿನ ಸಚಿವ ಸಂಪುಟದ ಸಮಿತಿಯು ಕೆಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಲು ನಿರ್ಧರಿಸಿದೆ.ಅವುಗಳಲ್ಲಿ ಮಹತ್ವದ್ದು ‘ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸಿಬ್ಬಂದಿ ನಿಯೋಜನೆ ಅಥವಾ ಹುದ್ದೆ ವರ್ಗಾವಣೆಗೆ ನಿಷೇಧಿಸಬೇಕು’ ಎನ್ನುವುದು.ರಾಜ್ಯದಲ್ಲಿ ಬೇರೆ ಬೇರೆ ಇಲಾಖೆಗಳಿಂದ ಬಂದು ಮಹತ್ವದ ಇಲಾಖೆಗಳ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ಆಯಾ ಇಲಾಖೆಯ ಅಧಿಕಾರಿಗಳನ್ನೇ ಅಸಹಾಯಕರುಗಳನ್ನಾಗಿ ಮಾಡುವ ಬಹಳಷ್ಟು ಅಧಿಕಾರಿ ಮಹಾನುಭಾವರುಗಳಿದ್ದಾರೆ.ಜಾತಿ,ಹಣ ಮತ್ತು ರಾಜಕೀಯ ಪ್ರಭಾವಗಳ ಬಲದಿಂದ ಆಡಳಿತ ವ್ಯವಸ್ಥೆಯನ್ನೇ ಹಾಳುಗೆಡಹುವ ಇಂತಹ ‘ ಪರಪೀಡಕ’ ಅಧಿಕಾರಿಗಳ ನಿಯಂತ್ರಣಕ್ಕೆ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿನ ಸಂಪುಟದ ಉಪಸಮಿತಿಯು ಉತ್ತಮ ಮತ್ತು ಸ್ವಾಗತಾರ್ಹ ನಿರ್ಣಯ ಕೈಗೊಂಡಿದೆ.
ಸರಕಾರದ ಸಚಿವಾಲಯ ಸೇವೆಯ ಅಧಿಕಾರಿಗಳು ತಹಶೀಲ್ದಾರ ಹುದ್ದೆಗೆ ನಿಯೋಜನೆ ಹೊಂದುವುದನ್ನು ಕಂದಾಯ ಇಲಾಖೆಯ ಅಧಿಕಾರಿ,ನೌಕರರುಗಳು ತೀವ್ರವಾಗಿ ಪ್ರತಿಭಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಸಚಿವಾಲಯ ಅಥವಾ ಸೆಕ್ರೆಟರೇಟ್ ನ ಅಧಿಕಾರಿಗಳನ್ನು ತಹಶೀಲ್ದಾರ ಹುದ್ದೆಗೆ ಮಾತ್ರವಲ್ಲ,ಸಚಿವಾಲಯದ ಆಚೆಗೆ ಯಾವ ಇಲಾಖೆಗೂ ನಿಯೋಜಿಸಬಾರದು.ಸಚಿವಾಲಯ ಸೇವೆ ಸಾಮಾನ್ಯ ಸೇವೆಗಳಂತೆ ಸಾಮಾನ್ಯೀಕೃತಗೊಂಡಿಲ್ಲ.ಸಚಿವಾಲಯದ ಅಧಿಕಾರಿ ,ಸಿಬ್ಬಂದಿಯವರು ವಿವಿಧ ಇಲಾಖೆಗಳ ಅಧಿಕಾರಿಗಳ ಸೇವಾ ವಿಷಯಗಳಲ್ಲಿ ವ್ಯವಹರಿಸುವ ನೈಪುಣ್ಯ ಪಡೆದಿದ್ದಾರೆ,ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾನಿಟರ್ ಮಾಡುತ್ತಾರೆ ಎಂದು ಅಲ್ಲಿನ ಅಧಿಕಾರಿ,ಸಿಬ್ಬಂದಿಯವರನ್ನು ಬೇರೆ ಇಲಾಖೆಗಳ ಕಾರ್ಯಕಾರಿ ಹುದ್ದೆಗಳಿಗೆ ನಿಯೋಜಿಸಬಾರದು.
ಹಾಗೆಯೇ ಸರಕಾರದ ಅತಿ ಮಹತ್ವದ ಇಲಾಖೆಗಳಲ್ಲಿ ಒಂದಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯಲ್ಲಿ ಬೇರೆ ಇಲಾಖೆಯಿಂದ ವಕ್ಕರಿಸಿ,ಖಾಯಂ ಇಲ್ಲಿಯೇ ಠಿಕಾಣಿ ಹೂಡಿದ ‘ ಮೂಲ ಇಲಾಖೆಯ ಅಧಿಕಾರಿಗಳ ಪೀಡಕ’ ರಾದ ಬಹಳಷ್ಟು ಅಧಿಕಾರಿಗಳಿದ್ದಾರೆ.ಈ ಹಿಂದೆ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಲ್ಲಿ ಬಹುಪಾಲು ಪಶುಪಾಲನೆ ಇಲಾಖೆಯ ವೆಟರ್ನರಿ ಡಾಕ್ಟರುಗಳೇ ಇದ್ದರು.ಈಗ ಇಲಾಖೆಯ ಪಿಡಿಒಗಳಿಗೆ ಪದೋನ್ನತಿ ನೀಡುತ್ತಿರುವುದರಿಂದ ವೆಟರ್ನರಿ ಇಲಾಖೆ ಸೇರಿದಂತೆ ಬೇರೆ ಇಲಾಖೆಯ ಅಧಿಕಾರಿಗಳ ಬರುವುದು ಕಡಿಮೆ ಆಗಿದೆಯಾದರೂ ಪೂರ್ಣವಾಗಿ ನಿಂತಿಲ್ಲ.ಈಗಲೂ ಪಶುವೈದ್ಯರು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತಿತರರು ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವದ ಹುದ್ದೆಯಾದ ಉಪಕಾರ್ಯದರ್ಶಿ ಹುದ್ದೆಯಲ್ಲಿ ಸಹಕಾರ,ಯೋಜನೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರೆ ಏನು ಹೇಳುವುದು? ಸಹಕಾರ ಇಲಾಖೆಯ ಕೆಲವು ಜನ ಅಧಿಕಾರಿಗಳು ಹತ್ತು ಹದಿನೈದು ವರ್ಷಗಳಿಂದಲೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲೇ ಬೀಡು ಬಿಟ್ಟು ಇಲಾಖೆಯ ಮೂಲ ಅಧಿಕಾರಿಗಳ ಹಕ್ಕು ಅವಕಾಶಗಳನ್ನು ಕಸಿದುಕೊಂಡು ಅಟ್ಟಹಾಸ ಮೆರೆಯುತ್ತಿದ್ದಾರೆ.ಕರ್ನಾಟಕ ಸಿವಿಲ್ ಸೇವಾನಿಯಮಗಳು ಮತ್ತು ವರ್ಗಾವಣೆ ನಿಯಮಗಳು 2013 ರಂತೆ ಯಾವುದೇ ಅಧಿಕಾರಿ ನಿಯೋಜನೆಯ ಮೇಲೆ ಅತಿಹೆಚ್ಚು ಎಂದರೆ ಐದು ವರ್ಷಗಳಿಗಿಂತ ಹೆಚ್ಚಿಗೆ ಕರ್ತವ್ಯ ನಿರ್ವಹಿಸುವಂತಿಲ್ಲ.ಆದರೆ ಆರ್ಡಿಪಿಆರ್ ನಲ್ಲಿ ಹತ್ತು ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತ ಮೇಯುವುದನ್ನೇ ಕಾಯಕಮಾಡಿಕೊಂಡ ಮಹಾನುಭಾವ ಅಧಿಕಾರಿಗಳು ಎಷ್ಟು ಪ್ರಬಲರಾಗಿದ್ದಾರೆ ಎಂದರೆ ಇಲಾಖೆಯ ಮೂಲ ಅಧಿಕಾರಿಗಳನ್ನೇ ಮೂಲೆಗುಂಪು ಮಾಡಿ ತಾವು ಆಯಕಟ್ಟಿನ ಹುದ್ದೆಗಳಲ್ಲೇ ಮುಂದುವರೆಯುತ್ತಿದ್ದಾರೆ.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ನೇಮಕಗೊಂಡ ಕೆಲವರು ಸಚಿವಾಲಯದಲ್ಲೇ ಠಿಕಾಣಿ ಹೂಡಿದ್ದರು.ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಅವರುಗಳನ್ನು ಹಿಂದಿರುಗಿಸಲಾಯಿತು.ಕರ್ನಾಟಕ ಲೋಕ ಸೇವಾ ಆಯೋಗ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕಗೊಂಡ ಅಧಿಕಾರಿಗಳು ಯಾವ ಇಲಾಖೆಯಲ್ಲಿ ನೇಮಕಗೊಂಡಿರುತ್ತಾರೋ ಅದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಬೇಕು.ಅದೇ ಇಲಾಖೆಯ ಆಡಳಿತ ವಿಧಾನ,ಅಭಿವೃದ್ಧಿ ಯೋಜನೆಗಳ ಕುರಿತು ಅವರಿಗೆ ತರಬೇತಿ ನೀಡಲಾಗಿರುತ್ತದೆ.ಗ್ರಾಮೀಣಭಾಗದಲ್ಲಿ ಪಶುವೈದ್ಯರ ಕೊರತೆ ಬಹಳಷ್ಟು ಇದೆ.ವೆಟರ್ನರಿ ಸೈನ್ಸ್ ಓದಿದವರು ಪಶುಗಳ ಸೇವೆ ಮಾಡುವುದನ್ನು ಬಿಟ್ಟು ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಬಂದರೆ ಹೇಗೆ? ರಸ್ತೆ,ಸೇತುವೆ,ಕಟ್ಟಡ ಕಾಮಗಾರಿಗಳಲ್ಲಿ ಪರಿಣತರಾಗಿರುವ ಇಂಜನಿಯರುಗಳು ಇ ಒ ಗಳಾದರೆ ಹೇಗೆ? ಸಹಕಾರ ಇಲಾಖೆಯ ಲೆಕ್ಕಪರಿಶೋಧನೆ ಮಾಡಬೇಕಾದ ಅಧಿಕಾರಿಗಳು ಉಪಕಾರ್ಯದರ್ಶಿಗಳಾದರೆ ಅವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವೆ? ಕ್ರಿಯಾಯೋಜನೆಗಳನ್ನು ತಯಾರಿಸುವ,ಯೋಜನೆಗಳನ್ನು ರೂಪಿಸುವ ಯೋಜನೆ ಮತ್ತು ಸಾಂಖಿಕ ಇಲಾಖೆಯವರು ಉಪಕಾರ್ಯದರ್ಶಿಗಳಾದರೆ ಹೇಗೆ? ಇದನ್ನು ಯಾರು ಪ್ರಶ್ನಿಸಬೇಕು? ಯಾರು ನಿಲ್ಲಿಸಬೇಕು?
ಅಧಿಕಾರಿಗಳು ಯಾವ ಇಲಾಖೆಯಲ್ಲಿ ನೇಮಕಗೊಂಡಿರುತ್ತಾರೋ ಅದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಬೇಕು.ವಿಶೇಷ ಬುದ್ಧಿವಂತರು,ಅಪರೂಪದ ಪ್ರತಿಭಾವಂತ ಅಧಿಕಾರಿಗಳು ಇದ್ದಲ್ಲಿ ಅವರ ಸೇವೆಯು ಉಪಯುಕ್ತವಾಗುವ ಇಲಾಖೆಗೆ ನಿಯೋಜಿಸಬಹುದು.ಜಾತಿ,ಹಣ ಮತ್ತು ರಾಜಕೀಯ ಪ್ರಭಾವದಿಂದ ‘ಬೇಕಾದವರುಗಳ’ ನ್ನು ‘ ಬೇಕಾದ’ ಇಲಾಖೆಗಳಿಗೆ ನಿಯೋಜಿಸಬಾರದು.ನೇಮಕಗೊಂಡ ಇಲಾಖೆಗಳಲ್ಲೇ ಅವರ ಪರಿಣತಿ,ನೈಪುಣ್ಯ,ಕೌಶಲ್ಯಗಳನ್ನು ಬಳಸಿಕೊಳ್ಳಬೇಕು.ನೇಮಕಗೊಂಡ ಇಲಾಖೆಯಲ್ಲಿ ಸಾಧಿಸಬೇಕಾದ ವಿಷಯಗಳು ಸಾಕಷ್ಟು ಇರುವಾಗ ಬೇರೆ ಇಲಾಖೆಗಳಿಗೆ ವಲಸೆ ಹೋಗುತ್ತಾರೆ ಎಂದರೆ ಸೇವೆಯಂತೂ ಅವರ ಆದ್ಯತೆ ಆಗಿರುವುದಿಲ್ಲ.
ಆಡಳಿತ ಹದಗೆಡಲು,ಹಳಿ ತಪ್ಪಲು ಅನರ್ಹರಿಗೆ ಮಹತ್ವದ ಹುದ್ದೆಗಳನ್ನು ನೀಡುವುದು ಒಂದು ಕಾರಣವಾದರೆ ಅನ್ಯ ಇಲಾಖೆಯಿಂದ ಬಂದವರಿಗೆ ಆಯಕಟ್ಟಿನ ಹುದ್ದೆಗಳನ್ನು ದಯಪಾಲಿಸುವುದು ಮತ್ತೊಂದು ಕಾರಣ.ಅಧಿಕಾರಿಗಳು ಯಾವುದೇ ತಾಲೂಕು ಅಥವಾ ಜಿಲ್ಲೆಗೆ ವರ್ಗವಾಗಿ ಹೋಗಬೇಕು ಎಂದರೆ ಸಂಬಂಧಪಟ್ಟ ಶಾಸಕರ ಪತ್ರ,ಶಿಫಾರಸ್ಸು ಅನಿವಾರ್ಯ ಎನ್ನುವ ಅಲಿಖಿತ ನಿಯಮವು ಸರಕಾರಿ ಆಡಳಿತ ವ್ಯವಸ್ಥೆಯನ್ನೇ ಹಾಳುಗೆಡವುತ್ತಿದೆ.ಕೆಲವು ಶಾಸಕರು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ತಮ್ಮ ಜಾತಿಯ ಅಧಿಕಾರಿಗಳೇ ಇರಬೇಕು ಎಂದು ಹುಕುಂ ಹೊರಡಿಸುತ್ತಿದ್ದಾರೆ.ಬೇರೆ ಜಾತಿಯ ಅಧಿಕಾರಿಗಳು ಬಂದರೆ ಅವರನ್ನು ಸಹಿಸುವುದಿಲ್ಲ.ಅವರ ಬಗ್ಗೆ ಕಂಡಕಂಡಲ್ಲಿ ಅಪಪ್ರಚಾರ ಮಾಡುವುದು,ಅವರನ್ನು ವರ್ಗಾಯಿಸಿಕೊಂಡು ಹೋಗುವಂತೆ ಒತ್ತಡ ಹೇರುವುದು ಇತ್ಯಾದಿಗಳೆಲ್ಲ ನಡೆಯುತ್ತಿದ್ದರೂ ಸಂಬಂಧಪಟ್ಟವರ ಜಾಣಗುರುಡುತನದಿಂದ ‘ಇಲ್ಲಿ ಎಲ್ಲವೂ ಸರಿ’ ಎಂಬಂತೆ ಆಗಿದೆ.ಇಂದು ಭಾರತದ ಸಂವಿಧಾನ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.ಈ ಸಂದರ್ಭದಲ್ಲಿ ಒಂದು ವಿಚಾರವನ್ನು ಆಲೋಚಿಸಬೇಕು; ಶಾಸಕರು,ಸಚಿವರುಗಳು ಆಗುವುದು ತಾವು ಆರಿಸಿ ಬಂದ ಕ್ಷೇತ್ರದ ಅಭಿವೃದ್ಧಿ ಸಾಧಿಸಲು ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು.ಶಾಸಕರಾಗಿ ಕಾರ್ಯನಿರ್ವಹಿಸುವ ಪೂರ್ವದಲ್ಲಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದವರೆಲ್ಲ ‘ ಸಂವಿಧಾನ ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತೇನೆ’ ಎಂದು ಮತ್ತು ‘ ರಾಗದ್ವೇಷಗಳಿಗೆ ಆಸ್ಪದ ನೀಡದಂತೆ ಕರ್ತವ್ಯ ನಿರ್ವಹಿಸುತ್ತೇನೆ’ ಎಂದು ಪ್ರಮಾಣವಚನ ಸ್ವೀಕರಿಸುತ್ತಾರೆ.ಹೀಗೆ ಪ್ರಮಾಣವಚನ ಸ್ವೀಕರಿಸಿದವರು ಸಂವಿಧಾನ ಬದ್ಧವಾಗಿಯೇ ನಡೆದುಕೊಳ್ಳಬೇಕು,ಶಾಸಕರಾದ ಅವರ ನಡೆ ನುಡಿಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಇರಬೇಕು.’ತಮ್ಮ ಜಾತಿಯ ಅಧಿಕಾರಿಗಳೇ ಇರಬೇಕು ಆಯಕಟ್ಟಿನ ಹುದ್ದೆಗಳಲ್ಲಿ’ ಎಂದು ನಿರೀಕ್ಷಿಸುವುದು ಸಂವಿಧಾನದ ಜಾತ್ಯಾತೀತ ನಿಲುವಿಗೆ ಎಸಗುವ ಅಪಚಾರವಲ್ಲವೆ? ‘ತಮಗೆ ಬೇಕಾದವರಿಗೆ ಬೇಕಾದ ಹುದ್ದೆ,ಬೇಡವಾದವರನ್ನು ಮೂಲೆಗುಂಪು ಮಾಡಿ’ ಎನ್ನುವುದು ರಾಗದ್ವೇಷಮುಕ್ತ ಜನಸೇವೆಯ ಸಂವಿಧಾನದ ಆಶಯಗಳಿಗೆ ವಿರುದ್ಧವಾದುದಲ್ಲವೆ? ಪ್ರಮಾಣವಚನ ಸ್ವೀಕರಿಸುವ ಸಂದರ್ಭಕಷ್ಟೇ ಸಂವಿಧಾನ ಎಂದು ಭಾವಿಸಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅನ್ಯಾಯ; ಉದ್ದೇಶಪೂರ್ವಕವಾಗಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸುವ ಕುತ್ಸಿತವಲ್ಲದೆ ಮತ್ತೇನು ಆಗಿರಲು ಸಾಧ್ಯ?

ಮೊ: 94808 79501
26.11.2021