ಮಾನ್ವಿ ನ.26-ಜಗತ್ತಿನ ಅತಿದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಆಶಯಗಳನ್ನು ಇಂದಿನ ಯುವ ಪೀಳಿಗೆ ಅರಿಯುವುದು ಅಗತ್ಯವಿದೆ ಎಂದು ರಮೇಶಬಾಬು ಯಾಳಗಿ ಹೇಳಿದರು.ಶುಕ್ರವಾರ ಪಟ್ಟಣದ ಕಲ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ದಿನದ ಆಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
‘ನಾವುಗಳೆಲ್ಲ ಸಂವಿಧಾನದ ಆಶಯ ಅರಿತಾಗ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.ದೇಶದ ಪ್ರತಿ ಪ್ರಜೆಯೂ ಕಾನೂನಿನ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ.ಅಂತಹ ಎಲ್ಲಾ ಕಾನೂನುಗಳ ತಾಯಿ ಸಂವಿಧಾನ. ನಾಗರಿಕರಿಗೆ ಬೇಕಾದ ಜ್ಞಾನದ ಭಂಡಾರವೇ ಸಂವಿಧಾನದಲ್ಲಿದೆ.
ಸಂವಿಧಾನ ಎಂದರೆ ನಮ್ಮ ಜೀವನ ವಿಧಾನವಾಗಿದೆ. ಮೂಲಭೂತ ಹಕ್ಕುಗಳನ್ನು ಹಾಗೂ ಕರ್ತವ್ಯಗಳನ್ನು ತಿಳಿದುಕೊಂಡು ದೇಶದ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕಾಗಿದೆ.ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಬಲವರ್ಧನೆಯಾಗುತ್ತದೆ’ಎಂದು ಹೇಳಿದರು. ‘ಇಂತಹ ಶ್ರೇಷ್ಠ ಸಂವಿಧಾನ ನೀಡಿದ ಮಹಾನಾಯಕ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಋಣಿಯಾಗಿರಬೇಕು’ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಸ್ ಎಸ್ ಪಾಟೀಲ ಸಂವಿಧಾನದ ಪ್ರಸ್ತಾವನೆಯನ್ನು ಓದಿ ವಿದ್ಯಾರ್ಥಿಗಳಿಗೆ ಅದರ ಮಹತ್ವವನ್ನು ,ಪ್ರತಿಜ್ಞಾ ವಿಧಿ ಬೋಧಿಸುವದರೊಂದಿಗೆ ತಿಳಿಸಿಕೊಟ್ಟರು.
ವೇದಿಕೆಯಲ್ಲಿ ಕಲ್ಮಠ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂಗಯ್ಯಸ್ವಾಮಿ,ಕಲ್ಮಠ ಪದವಿ ಮಹಾವಿದ್ಯಾಲದ ಪ್ರಾಚಾರ್ಯ ಸಿದ್ದನಗೌಡ ಪಾಟೀಲ ಉಪಸ್ಥಿತರಿದ್ದರು.
ಉಪನ್ಯಾಸಕ ಮಲ್ಲನಗೌಡ ದಿದ್ದಿಗಿ ಸ್ವಾಗತಿಸಿದರು. ಉಪನ್ಯಾಸಕ ಉಮರ್ ದೇವರಮನಿ ಕಾರ್ಯಕ್ರಮ ನಿರೂಪಿಸಿದರು.