ಮಾನ್ವಿ ನ.24: ‘ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಅಧ್ಯಯನಶೀಲತೆ ಇದ್ದರೆ ಉತ್ತಮ ಭವಿಷ್ಯ ಖಂಡಿತ ಸಾಧ್ಯ’ ಎಂದು ಶಾರದಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಮಧುಸೂದನ ಗುಪ್ತಾಜಿ ಹೇಳಿದರು.
ಪಟ್ಟಣದ ಶಾರದಾ ವಿದ್ಯಾನಿಕೇತನ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾರದಾ ಬಿ.ಇಡಿ ಕಾಲೇಜಿನ ಪ್ರಾಧ್ಯಾಪಕ ಈರಣ್ಣ ಮರ್ಲಟ್ಟಿ ಮಾತನಾಡಿ, ‘ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಸ್ಪರ್ಧಾ ಮನೋಭಾವದಿಂದ ಅಧ್ಯಯನ ಮಾಡಬೇಕು. ನೈತಿಕ ಮೌಲ್ಯಗಳು ಹಾಗೂ ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ವಿದ್ಯಾರ್ಥಿನಿಯರಾದ ಲಕ್ಷ್ಮೀ ಹಾಗೂ ಬಸಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲ ವೀರಭದ್ರಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ಬಿ.ಕಿಶೋರಕುಮಾರ, ಉಪನ್ಯಾಸಕ ಅಭಿಜಿತ್, ವಿಜ್ಞಾನ ವಿಭಾಗದ ಮುಖ್ಯಸ್ಥ ಕಿಶೋರಕುಮಾರ ಗೌಡ, ಶಿಕ್ಷಕ ಅಭಿಜಿತ್, ಉಪನ್ಯಾಸಕರಾದ ರಮೇಶ, ಬಂದೇನವಾಜ್ ಬ್ಯಾಗವಾಟ, ದೇವೇಂದ್ರಕುಮಾರ, ಮಾರೆಪ್ಪ, ಪಾರ್ವತಿ, ಆಂಜನೇಯ ನಸಲಾಪುರ ಮತ್ತಿತರರು ಇದ್ದರು. ವಿದ್ಯಾರ್ಥಿಗಳಾದ ವಾಹಿದಾ, ಲಕ್ಷ್ಮೀ ಹಾಗೂ ರಮೇಶ ಕಾರ್ಯಕ್ರಮ ನಿರೂಪಿಸಿದರು.