ಸಂವಿಧಾನ ದಿನಾಚರಣೆ : ಮುಕ್ಕಣ್ಣ ಕರಿಗಾರ

ಸಂವಿಧಾನ ದಿನಾಚರಣೆ

ಲೇಖಕರು: ಮುಕ್ಕಣ್ಣ ಕರಿಗಾರ

ನಾಳೆ,ನವೆಂಬರ್ 26 ರಂದು ರಾಷ್ಟ್ರದಾದ್ಯಂತ ‘ ಸಂವಿಧಾನ ದಿನಾಚರಣೆ’ ಯನ್ನು ಆಚರಿಸಿ,ಸಂವಿಧಾನದ ಮಹತ್ವವನ್ನು ದೇಶದ ಪ್ರಜೆಗಳಿಗೆ ಬಿತ್ತರಿಸಲಾಗುತ್ತದೆ.ಭಾರತದ ಸಂವಿಧಾನವು 1950 ರ ಜನೆವರಿ 26 ರಂದು ಜಾರಿಗೆ ಬಂದಿದೆ.ಆ ದಿನವನ್ನು ಗಣರಾಜ್ಯೋತ್ಸವ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದರಿಂದ ಸಂವಿಧಾನದ ಬಗ್ಗೆ ರಾಷ್ಟ್ರದ ಜನತೆಗೆ ಪರಿಚಯಿಸಲು ಪ್ರತ್ಯೇಕವಾದ ಒಂದು ದಿನ ನಿಗದಿಪಡಿಸಿ,ನವೆಂಬರ್ 26 ರಂದು ‘ ಸಂವಿಧಾನ ದಿನಾಚರಣೆ’ ಎಂದು ಆಚರಿಸಲಾಗುತ್ತಿದೆ‌.ನವೆಂಬರ್ 26 ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲು ಒಂದು ವಿಶೇಷ ಕಾರಣವಿದೆ.26.11.1949 ರಂದು ರಾಜ್ಯಾಂಗ ಸಭೆಯಲ್ಲಿ ಸಂವಿಧಾನದ ಮೂರನೇ ಮತ್ತು ಅಂತಿಮ ವಾಚನ ಮುಕ್ತಾಯಗೊಂಡಿತ್ತು.ಮತ್ತು ಅದೇ ದಿನ ಅಂದರೆ ನವೆಂಬರ್ 26,1949 ರಂದು ರಾಜ್ಯಾಂಗ ಸಭೆಯ ಅಧ್ಯಕ್ಷರಾದ ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನಕ್ಕೆ ಸಹಿ ಹಾಕುವ ಮೂಲಕ ಸಂವಿಧಾನವನ್ನು ಅಂಗೀಕರಿಸಲಾಯಿತು.ಸಂವಿಧಾನವನ್ನು ಅಂಗೀಕರಿಸಿದ ದಿನವಾದ್ದರಿಂದ ನವೆಂಬರ್ 26 ರ ದಿನವನ್ನು ಸಂವಿಧಾನ ದಿನಾಚರಣೆ ಎಂದು ಆಚರಿಸಲಾಗುತ್ತಿದೆ.

ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ,ವಿವಿಧ ವರ್ಗಗಳನ್ನು ಪ್ರತಿನಿಧಿಸುತ್ತಿದ್ದ ಸದಸ್ಯರುಗಳಿದ್ದರೂ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ ಆರ್.ಅಂಬೇಡ್ಕರ್ ಅವರ ದೂರದೃಷ್ಟಿ,ಪದದುಳಿತರ ಮೇಲಣ ಕಾಳಜಿಗಳಿಂದ ದೇಶಕ್ಕೆ ಒಂದು ಪರಿಪೂರ್ಣವಾದ ಸಂವಿಧಾನ ದೊರೆಯಿತು.ಆ ಕಾರಣದಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ” ಸಂವಿಧಾನದ ಶಿಲ್ಪಿ” ಎಂದು ಗೌರವಿಸಲಾಗುತ್ತಿದೆ.ಡಾ.ಬಿ ಆರ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿನ ಸಂವಿಧಾನದ ಕರಡು ರಚನಾ ಸಮಿತಿಯಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್,ಕೆ ಎಂ ಮುನ್ಷಿ,ಮಹಮ್ಮದ್ ಸಾದುಲ್ಲಾ,ಎನ್.ಮಾಧವರಾವ್,ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಟಿ ಟಿ ಕೃಷ್ಣಮಾಚಾರಿ ಅವರುಗಳು ಸದಸ್ಯರಾಗಿದ್ದರು.ಸಂವಿಧಾನದ ಕರಡನ್ನು 1948 ರ ಫೆಬ್ರವರಿಯಲ್ಲಿ ರಾಜ್ಯಾಂಗ ಸಭೆಯಲ್ಲಿ ಮೊದಲ ಬಾರಿಗೆ ಓದಲಾಯಿತು.ಆಗ ಅದು 243 ಅನುಚ್ಛೇದಗಳನ್ನು,13 ಪರಿಶಿಷ್ಟಗಳನ್ನು ಒಳಗೊಂಡಿತ್ತು.ಸಂವಿಧಾನದ ಕರಡಿನ ಎರಡನೇ ವಾಚನವು 15.11.1948 ರಂದು ಪ್ರಾರಂಭಗೊಂಡು 17.10.1949 ರಂದು ಮುಕ್ತಾಯಗೊಂಡಿತು.ಸಂವಿಧಾನದ ಮೂರನೆಯ ಮತ್ತು ಅಂತಿಮ ಕರಡು ವಾಚನವು 17.11.1949 ರಂದು ಪ್ರಾರಂಭಗೊಂಡು 26.11.1949 ರಂದು ಮುಕ್ತಾಯಗೊಂಡಿತು.

ಭಾರತದ ಸಂವಿಧಾನದ ರಚನೆಗೆ 2 ವರ್ಷ 11 ತಿಂಗಳು ಮತ್ತು 18 ದಿನಗಳ ಸಮಯ ತೆಗೆದುಕೊಂಡಿದೆ. ರಾಜ್ಯಾಂಗ ಸಭೆಯ 11 ಅಧಿವೇಶನಗಳಲ್ಲಿ 114 ದಿನಗಳವರೆಗೆ ಚರ್ಚಿಸಲ್ಪಟ್ಟಿದೆ.ಸಂವಿಧಾನದ ರಚನೆ ಮತ್ತು ತತ್ಸಬಂಧಿ ಕಾರ್ಯಗಳಿಗಾಗಿ ತಗುಲಿದ ವೆಚ್ಚ 6.4 ಕೋಟಿ ರೂಪಾಯಿಗಳು.ಪ್ರಸ್ತುತ ಭಾರತದ ಸಂವಿಧಾನವು 445 ಅನುಚ್ಛೇದಗಳು,12 ಪರಿಶಿಷ್ಟಗಳು ಮತ್ತು 22 ಭಾಗಗಳನ್ನು ಒಳಗೊಂಡ ಬೃಹತ್ ಲಿಖಿತ ಸಂವಿಧಾನವಾಗಿದೆ.

ಭಾರತ ಸಂವಿಧಾನದ ಲಕ್ಷಣಗಳು

ಡಾ.ಬಿ ಆರ್ ಅಂಬೇಡ್ಕರ್ ಅವರ ಚಿಂತನೆ,ದೂರದೃಷ್ಟಿ,ಮುತ್ಸದ್ದಿ ನಾಯಕತ್ವದ ಫಲವಾಗಿ ರೂಪುಗೊಂಡ ಭಾರತದ ಸಂವಿಧಾನವು ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎನ್ನುವ ಹಿರಿಮೆಯನ್ನು ಪಡೆದಿದೆ.ಭಾರತದ ಸಂವಿಧಾನದ ತಜ್ಞರುಗಳು ಭಾರತ ಸಂವಿಧಾನದ ಸುಮಾರು ಮುವ್ವತ್ತಕ್ಕೂ ಹೆಚ್ಚು ಲಕ್ಷಣಗಳನ್ನು ಗುರುತಿಸಿದ್ದಾರೆ.ಕೆಲವು ಪ್ರಮುಖ ಲಕ್ಷಣಗಳು–೧ ಸಂವಿಧಾನದ ಪ್ರಸ್ತಾವನೆ ( preamble)೨ ಲಿಖಿತ ಸಂವಿಧಾನ ೩. ಸರ್ವಸ್ವತಂತ್ರ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ ೪.ಪ್ರಜಾಪ್ರಭುತ್ವ ವ್ಯವಸ್ಥೆ ೫. ನಮ್ಯ ಮತ್ತು ಅನಮ್ಯ ಲಕ್ಷಣಗಳೆರಡನ್ನೂ ಒಳಗೊಂಡ ಸಂವಿಧಾನ ೬.ಸಂಯುಕ್ತ ಮತ್ತು ಏಕಾತ್ಮಕ ಲಕ್ಷಣಗಳು (Fereal and Unitary characters)೭ ಸಂಸದೀಯ ಸರಕಾರ ವ್ಯವಸ್ಥೆ( parliamentary system of Government)೮ ಭಾರತೀಯರಿಗೆಲ್ಲ ಏಕಪೌರತ್ವ,ಒಂದೇ ಸಂವಿಧಾನ ೮ ಜಾತ್ಯಾತೀತ ರಾಷ್ಟ್ರ (Secular state) ೮ ಮೂಲಭೂತಹಕ್ಕುಗಳು ೯ರಾಜ್ಯ ನಿರ್ದೇಶಕ ತತ್ವಗಳು ೯ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ೧೦ ಸ್ವತಂತ್ರ ನ್ಯಾಯಾಂಗ ೧೧ ನ್ಯಾಯಿಕ ಪರಾಮರ್ಶೆ ( Judicial Review) ೧೧. ದ್ವಿಸದನ ಪದ್ಧತಿ ೧೨. ಸ್ವತಂತ್ರ ಚುನಾವಣಾ ಆಯೋಗ ೧೩.ಮೂಲಭೂತ ಕರ್ತವ್ಯಗಳು ಮತ್ತು ೧೪ ತುರ್ತು ಪರಿಸ್ಥಿತಿಯ ಅಧಿಕಾರಗಳು.

ಸಂವಿಧಾನದ ಪೀಠಿಕೆ ಇಲ್ಲವೆ ಪ್ರಸ್ತಾವನೆ ( Preamble )

ಭಾರತದ ಸಂವಿಧಾನದ ಆತ್ಮದಂತೆ ಇರುವ ಸಂವಿಧಾನವು ಭಾರತದ ಸಂವಿಧಾನದ ವೈಶಿಷ್ಟ್ಯ ಮತ್ತು ಅದರ ಕಾರ್ಯವಿಧಾನದ ಬಗ್ಗೆ ಮಾಹಿತಿ ನೀಡುತ್ತದೆ.ಸಂವಿಧಾನ ದಿನಾಚರಣೆಯ ದಿನದಂದು ಸರಕಾರಿ ಕಛೇರಿಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ,ಪ್ರತಿಜ್ಞೆ ಸ್ವೀಕರಿಸಲಾಗುತ್ತದೆ.ಭಾರತದ ಸಂವಿಧಾನದ ಪೀಠಿಕೆಯನ್ನು ರಚಿಸಿದವರು ಜವಾಹರ್ ಲಾಲ್ ನೆಹರೂ ಅವರು.ಅದನ್ನು ಅವರು ಡಿಸೆಂಬರ್ 13,1946 ರಂದು ಮಂಡಿಸಿದ್ದ ಸಂವಿಧಾನದ ಧ್ಯೇಯೋದ್ದೇಶಗಳ ಗೊತ್ತುವಳಿಯಲ್ಲಿ ನೀಡಿದ್ದರು.ಅದನ್ನು ಸಂವಿಧಾನ ರಚನಾ ಸಭೆಯು ಜನೆವರಿ 22,1947 ರಂದು ಅಂಗೀಕರಿಸಿತು.ಭಾರತ ಸಂವಿಧಾನದ‌ ಪ್ರಸ್ತಾವನೆಯು

” ಭಾರತೀಯ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ,ಸಮಾಜವಾದಿ,ಜಾತ್ಯಾತೀತ,ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರಚಿಸಲು ನಿರ್ಧರಿಸಿದ್ದು ರಾಷ್ಟ್ರದ ಸಮಸ್ತ ಪ್ರಜೆಗಳಿಗೆ ;

ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ನ್ಯಾಯ ;
ವಿಚಾರ ಅಭಿವ್ಯಕ್ತಿ,ನಂಬಿಕೆ,ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ ;
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯು ಸರ್ವರಿಗೂ ದೊರೆಯುವಂತೆ ಮಾಡುವುದಕ್ಕೆ ;
ವ್ಯಕ್ತಿಗೌರವ,ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ರಕ್ಷಿಸಿ,ಭ್ರಾತೃತ್ವವನ್ನು ಎಲ್ಲರಲ್ಲೂ ವೃದ್ಧಿಸುವುದಕ್ಕಾಗಿ ದೃಢ ಸಂಕಲ್ಪಮಾಡಿ,ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ನವೆಂಬರ್ 26,1949 ರಂದು ಈ ಸಂವಿಧಾನವನ್ನು ಅಂಗೀಕರಿಸಿ,ಅದನ್ನು ಶಾಸನಬದ್ಧಗೊಳಿಸಿ ನಮ್ಮನ್ನು ನಾವೇ ಸಮರ್ಪಿಸಿಕೊಂಡಿದ್ದೇವೆ”

ಸಂವಿಧಾನದ ಪೀಠಿಕೆಯಲ್ಲಿನ ‘ ಸಮಾಜವಾದಿ’ ಮತ್ತು ‘ ಜಾತ್ಯಾತೀತ’ ಎಂಬ ಪದಗಳು ಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿ ಇರಲಿಲ್ಲ. 1976 ರಲ್ಲಿ ಸಂವಿಧಾನಕ್ಕೆ ತಂದ 42ನೇ ತಿದ್ದುಪಡಿಯ ಮೂಲಕ ಈ ಪದವಿಶೇಷಗಳನ್ನು ಸೇರಿಸಲಾಗಿದೆ.

ಭಾರತದ ಸಂವಿಧಾನದ ಪೀಠಿಕೆಯು ಎರಡು ಉದ್ದೇಶಗಳನ್ನು ಈಡೇರಿಸುತ್ತದೆ.
೧. ಸಂವಿಧಾನದ ಪೀಠಿಕೆಯ ಸಂವಿಧಾನವು ಯಾವ ಮೂಲದಿಂದ ತನ್ನ ಅಧಿಕಾರ ಪಡೆಯುತ್ತದೆ ಎನ್ನುವುದನ್ನು ಹಾಗೂ
೨.ಸಂವಿಧಾನವು ಯಾವ ಯಾವ ಧ್ಯೇಯೋದ್ದೇಶಗಳನ್ನು ಪ್ರತಿಷ್ಠಾಪಿಸುತ್ತದೆ ಎನ್ನುವುದನ್ನು ತಿಳಿಸುತ್ತದೆ‌

ಸಂವಿಧಾನದ ಅಧಿಕಾರದ ಮೂಲವು ಭಾರತದ ಸಮಸ್ತ ಜನತೆಯೇ ಆಗಿದ್ದು ಅವರ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಸರ್ವತಂತ್ರ ಸ್ವತಂತ್ರ ಸಾರ್ವಭೌಮ ರಾಷ್ಟ್ರವನ್ನು ಕಟ್ಟುವ ಧ್ಯೇಯೋದ್ದೇಶವನ್ನು ಹೊಂದಲಾಗಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ಬಹಳಷ್ಟು ಆದೇಶಗಳಲ್ಲಿ ಸಂವಿಧಾನದ ಪೀಠಿಕೆಯ ಪ್ರಸ್ತಾಪಿಸಲ್ಪಟ್ಟಿದೆ.ಸಂವಿಧಾನ ಪೀಠಿಕೆಯನ್ನು ಕಾನೂನಿನಂತೆ ಜಾರಿಗೊಳಿಸಲಾಗದಾದರೂ ಕಾನೂನು ರಚನೆಯ ಹಿಂದೆ ಸಂವಿಧಾನದ ಪೀಠಿಕೆಯ ಅಂಶಗಳು ಅಡಕವಾಗಿಯೋ ಇಲ್ಲವೋ ಎಂಬುದನ್ನು ಅರ್ಥೈಸಲು ಸಂವಿಧಾನದ ಪೀಠಿಕೆಯನ್ನು ಅವಲೋಕಿಸಲಾಗುತ್ತದೆ.

 

ಮುಕ್ಕಣ್ಣ ಕರಿಗಾರ
ಮೊ: 94808 79501

25.11.2021