ಚಂದ್ರಕಾಂತ ವಡ್ಡು ಅವರ ‘ ರೈತನ ಸಾಲದ ಸುಳಿ ನುಂಗಿತ್ತಾ’ ಕವನದ ವಿಮರ್ಶೆ- ಮುಕ್ಕಣ್ಣ ಕರಿಗಾರ

*ರೈತನ ಸಾಲದಸುಳಿ ನುಂಗಿತ್ತಾ*

ರೈತನ ಸಾಲದಸುಳಿ ನುಂಗಿತ್ತಾ
ರೈತನ ಸಾಲದಸುಳಿ ನುಂಗಿತ್ತಾ, ನೋಡವ್ವ ತಂಗಿ
ರೈತನ ಸಾಲದಸುಳಿ ನುಂಗಿತ್ತಾ

ಹೊಳೆ ಹೊಲವ ನುಂಗಿ
ಮಳೆ ಬೆಳೆಯ ನುಂಗಿ
ಅಧಿಕಾರಿ ಪರಿಹಾರ ನುಂಗಿ, ಬ್ಯಾಂಕು ಬೆಳೆವಿಮೆ ನುಂಗಿತ್ತಾ ತಂಗಿ
ರೈತನ ಸಾಲದಸುಳಿ ನುಂಗಿತ್ತಾ

ದಲ್ಲಾಳಿ ಬೆಲೆಯ ನುಂಗಿ
ಗುತ್ತಿಗೆದಾರ ರಸ್ತೆಯ ನುಂಗಿ
ಮಣ್ಣು ತೆನೆಯ ನುಂಗಿ, ಕಣ ಕಾಳನು ನುಂಗಿತ್ತಾ ತಂಗಿ
ರೈತನ ಸಾಲದಸುಳಿ ನುಂಗಿತ್ತಾ

ಶಾಸಕ ಸರ್ಕಾರ ನುಂಗಿ
ಮತ ಮತಪೆಟ್ಟಿಗೆಯ ನುಂಗಿ
ಅನೀತಿ ನೀತಿಯ ನುಂಗಿ, ಅಸತ್ಯ ಸತ್ಯವ ನುಂಗಿತ್ತಾ ತಂಗಿ
ರೈತನ ಸಾಲದಸುಳಿ ನುಂಗಿತ್ತಾ

ಮಠ ಭಕ್ತರ ನುಂಗಿ
ಜಾತಿ ಏಳಿಗೆಯ ನುಂಗಿ
ಗೂಟ ಎಮ್ಮೆಯ ನುಂಗಿ, ಹಸುವನ್ನೇ ಹುಲ್ಲು ನುಂಗಿತ್ತಾ ತಂಗಿ
ರೈತನ ಸಾಲದಸುಳಿ ನುಂಗಿತ್ತಾ

ಶಾಲೆ ಮಕ್ಕಳನು ನುಂಗಿ
ಮಾಸ್ಕು ಮುಖವ ನುಂಗಿ
ಪುಸ್ತಕ ಮಸ್ತಕವ ನುಂಗಿ, ಶುಲ್ಕ ಖಾಲಿಕೈ ನುಂಗಿತ್ತಾ ತಂಗಿ
ರೈತನ ಸಾಲದಸುಳಿ ನುಂಗಿತ್ತಾ

ನೋಟು ವೋಟನು ನುಂಗಿ
ಹೆಂಡ ಮಡಿಕೆಯ ನುಂಗಿ,
ಬಡ್ಡಿ ಬಂಗಾರವ ನುಂಗಿ, ನೇಣು ಗೋಣನು ನುಂಗಿತ್ತಾ ತಂಗಿ
ರೈತನ ಸಾಲದಸುಳಿ ನುಂಗಿತ್ತಾ

ರೈತನ ಸಾಲದಸುಳಿ ನುಂಗಿತ್ತಾ
ರೈತನ ಸಾಲದಸುಳಿ ನುಂಗಿತ್ತಾ, ನೋಡವ್ವ ತಂಗಿ
ರೈತನ ಸಾಲದಸುಳಿ ನುಂಗಿತ್ತಾ

*-ಚಂದ್ರಕಾಂತ ವಡ್ಡು*

[ಷರೀಫಜ್ಜನ ಕ್ಷಮೆ ಕೋರಿ…]

#####

ವಿಮರ್ಶೆ

ಚಂದ್ರಕಾಂತ ವಡ್ಡು ಅವರ ಕವನ ‘ ರೈತನ ಸಾಲದ ಸುಳಿ ನುಂಗಿತ್ತಾ’

ಮುಕ್ಕಣ್ಣ ಕರಿಗಾರ

ಬಂಡಾಯಕವಿ ಮತ್ತು ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಅವರು ಇತ್ತೀಚೆಗೆ ‘ ರೈತನ ಸಾಲದ ಸುಳಿ ನುಂಗಿತ್ತಾ’ ಎನ್ನುವ ವ್ಯವಸ್ಥೆಯನ್ನು ವಿಡಂಬಿಸುವ ವಿಶಿಷ್ಟ ಕವನ ಒಂದನ್ನು ಬರೆದಿದ್ದಾರೆ ಶಿಶುನಾಳ ಶರೀಫರ ‘ ಕೋಡುಗನ ಕೋಳಿ ನುಂಗಿತ್ತಾ’ ಕವನದ ಧಾಟಿಯಲ್ಲಿ.ಶರೀಫರದು ಬೆಡಗನ್ನೊಳಗೊಂಡ ತತ್ತ್ವಪದವಾದರೆ ಚಂದ್ರಕಾಂತ ವಡ್ಡು ಅವರದು ಪ್ರಸ್ತುತ ದಿನಮಾನಗಳಲ್ಲಿ ದೇಶದ ಬೆನ್ನೆಲುಬು ಆದ ರೈತ ಮತ್ತು ಅವನ ಬವಣೆ,ರೈತನ ಹೆಸರಿನಲ್ಲಿ ರಾಜಕಾರಣಿಗಳು ಆಡುತ್ತಿರುವ ಆಟ,ಅಧಿಕಾರಿಗಳ ರಕ್ಕಸೀದಾಹ ಮತ್ತು ಕಾರ್ಪೋರೇಟ್ ಕಂಪನಿಗಳ ಆಪೋಶನ ಬುದ್ಧಿ ಮತ್ತು ವಿಮಾ ಕಂಪನಿಗಳ ನಯವಂಚಕತನ ಸೇರಿದಂತೆ ಒಟ್ಟು ವ್ಯವಸ್ಥೆಯ ಕ್ರೂರಮುಖದ ಮೇಲೆ ಬೆಳಕು ಚೆಲ್ಲುವ ವರ್ತಮಾನದ ತಲ್ಲಣಗಳಿಗೆ ಧ್ವನಿಯಾದ,ರೂಪಕವಾದ ಕವನ.ರೈತಪರ ಕಾಳಜಿಯ ಮಣ್ಣಿನ ಮಕ್ಕಳ ಹಾಡು ಪಾಡು ಆದ ಈ ಕವನವು ಶರೀಫರ ಪದದಂತೆ ಗೇಯಗುಣವನ್ನು ಮೈಗೂಡಿಸಿಕೊಳ್ಳಲೆತ್ನಿಸಿ ಬಹುಮಟ್ಟಿಗೆ ಯಶಸ್ಸನ್ನೂ ಕಂಡಿದೆ.

ಭಾವದ ಏರುಪೇರುಗಳನ್ನು ಅಭಿವ್ಯಕ್ತಿಸುತ್ತಾ ಸಾಗುವ ಕವಿತೆಯು ಪ್ರತಿ ಚರಣದಲ್ಲಿ ನಿಯತ ಸಂಖ್ಯೆಯ ಸಾಲುಗಳನ್ನು ಹೊಂದಿಲ್ಲದೆ ಇರುವುದರಿಂದ ಮತ್ತು ನಡುನಡುವೆ ಕಾವ್ಯಗುಣವು ಗೇಯತೆಗೆ ತೊಡರಾಗುವುದರಿಂದ ಗೇಯಗುಣ,ಮಾರ್ದವತೆಗೆ ಒಂದಿಷ್ಟು ಕೊರತೆ ಎಂಬಂತೆ ಕಂಡರೂ ಕವಿಯ ಒಟ್ಟಾರೆ ಆಶಯ ‘ ರೈತ ದೇಶದ ಬೆನ್ನೆಲುಬು’ ಎನ್ನುತ್ತಲೇ ರೈತನ ಬೆನ್ನೆಲುಬು ಮುರಿಯುವ ವ್ಯವಸ್ಥೆಯ ಕರಾಳ ಮುಖವನ್ನು ಬಿಂಬಿಸುವುದೇ ಆಗಿರುವುದರಿಂದ ಗೇಯತೆಗಿಂತ ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವಲ್ಲಿ ಕವಿತೆ ಯಶಸ್ವಿಯಾಗಿದೆ.

ಮಾನ್ಸೂನ್ ಮಾರುತಗಳ ಚೆಲ್ಲಾಟದೊಂದಿಗೆ ಚೆಲ್ಲಾಪಿಲ್ಲಿಯಾದ ರೈತನ ಬದುಕಿನಲ್ಲಿ ಆಪದ್ಬಾಂಧವರ ಸೋಗು ನಟಿಸಿ ಬರುವ ಬ್ಯಾಂಕುಗಳು,ಲೇವಾದೇವಿಗಳು ,ಸಿರಿವಂತರ ಕೊಟ್ಟ ಸಾಲವು ಬಡ್ಡಿ ಚಕ್ರಬಡ್ಡಿಗಳ ಲೆಕ್ಕದಲ್ಲಿ ಬೆಳೆಯುತ್ತ ನೀರಿರದ ಹೊಳೆಯ ನಡುವಿನ ಸುಳಿಗೆ ಸಿಕ್ಕು ಒದ್ದಾಡುವ ರೈತರ ಹೃದಯ ವಿದ್ರಾವಕ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ಕವಿ ಅಬ್ಬರದ ಪದಪುಂಜಗಳಿಲ್ಲದ,ರೈತರ ಸಹಜ ಬದುಕಿನಂತೆಯೇ ಸರಳ ಪದಗಳನ್ನು ಬಳಸಿ.

ಪ್ರವಾಹವು ಬಂದು ರೈತನ ಹೊಲವನ್ನು ಆವರಿಸಿದೆ.ಅಕಾಲದಲ್ಕಿ ಬಂದ ಮಳೆ ಇದ್ದ ಚೂರು ಭೂಮಿಯಲ್ಲಿ ಬೆಳೆದಿದ್ದ ಬೆಳೆಯನ್ನೂ ನಾಶಗೊಳಿಸಿದೆ.ಬೆಳೆಪರಿಹಾರ ನೀಡಿ ರೈತರನ್ನು ಉದ್ಧರಿಸಬೇಕಾದ ಸರಕಾರಿ ಅಧಿಕಾರಿಗಳು ಸರಕಾರವು ನೀಡಿದ್ದ ಪರಿಹಾರವನ್ನೇ ನುಂಗಿದ್ದಾರೆ.ರೈತರಿಗೆ ಸಾಲಕೊಟ್ಟಿದ್ದೇವೆ ಎನ್ನುವ ಕಾರಣದಿಂದ ಬ್ಯಾಂಕುಗಳು ಮೋಸದಾಟ ಆಡಿ ವಿಮಾಪರಿಹಾರದ ಮೊತ್ತವನ್ನು ಸಾಲದ ಕಂತುಗಳಿಗೆ ಹೊಂದಾಣಿಕೆ ಮಾಡಿಕೊಂಡಿವೆ.

ಅಷ್ಟೋ ಇಷ್ಟೋ ಕೈಗೆ ಬಂದ ಬೆಳೆಯನ್ನು ಮಾರ ಹೋದರೆ ದಲ್ಲಾಳಿಯು ರೈತನನ್ನು ವಂಚಿಸುತ್ತಾನೆ.ರೈತನ ಬೆಳೆಗೆ ನ್ಯಾಯೋಚಿತವಾಗಿ ಸಿಗಬೇಕಾದ ಬೆಲೆಯನ್ನು ನೀಡದೆ ದಲ್ಲಾಳಿಗಳು,ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಎಸಗುತ್ತಿರುವ ನಯನಾಜೂಕಿನ ವಂಚನೆಗಳಿಗೆ ರೈತ ಬಲಿಯಾಗಿದ್ದಾನೆ.ಊರು,ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸಬೇಕಿದ್ದ ಗುತ್ತಿಗೆದಾರ ರಸ್ತೆಯನ್ನೇ ನುಂಗಿ ದಕ್ಕಿಸಿಕೊಳ್ಳುವ ಸಾಮರ್ಥ್ಯ ಉಳ್ಳವನು.ಕ್ರಿಮಿನಾಶಕಗಳು,ರಾಸಾಯನಿಕಗಳ ಸಿಂಪರಣೆಯಿಂದ ಸತ್ವ ಕಳೆದುಕೊಂಡು ಮಣ್ಣು ಬೆಳೆಯ ತೆನೆ ಬೂದಾಗುವಂತೆ ಮಾಡಿದೆ.ಇಳುವರಿಯನ್ನು ನೀಡಿ ರೈತನ ಬದುಕನ್ನು ಸಮೃದ್ಧಗೊಳಿಸಬೇಕಿದ್ದ ಕಣವೇ ಕಾಳನ್ನು ನುಂಗಿದೆ ಎನ್ನುವ ಸಾಲು ವ್ಯವಸ್ಥೆಯು ರೈತನ ಬದುಕಿನ ಅಡಿಪಾಯವನ್ನೇ ಅಲ್ಲಾಡಿಸುತ್ತಿರುವ ನೈಜ ಚಿತ್ರಣವಾಗಿದೆ.ವ್ಯವಸ್ಥೆಯ ಕ್ರೌರ್ಯಕ್ಕೆ ಸಿಕ್ಕ ರೈತನು ಸಾಲದ ಸುಳಿಗೆ ಸಿಕ್ಕು ಸಾಯುವುದಲ್ಲದೆ ಬೇರೆ ದಾರಿಯೇ ಇಲ್ಲದ ದಯನೀಯ ಸ್ಥಿತಿಗೆ ತಲುಪಿದ್ದಾನೆ.

ಜನಪರ ಆಡಳಿತ ನಡೆಸಬೇಕಿದ್ದ ಸರಕಾರವನ್ನು ಜನರಿಂದ ಆರಿಸಿ ಬಂದ ಶಾಸಕನೇ ತನ್ನ ಇಚ್ಛಾನುವರ್ತಿಯನ್ನಾಗಿ ಕುಣಿಸುತ್ತಿದ್ದಾನೆ.ಬಹುಮತಕ್ಕೆ ಬೇಕಾದ ಸಂಖ್ಯಾಬಲದ ಕಾರಣದಿಂದ ಶಾಸಕರು ಜನಹಿತವನ್ನು ಮರೆತು ಆಡಳಿತಾರೂಢ ಪಕ್ಷಗಳಿಂದ ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದಾರೆ ಎನ್ನುವುದನ್ನು ‘ ಶಾಸಕ ಸರ್ಕಾರ ನುಂಗಿ’ ಎನ್ನುವ ಸಾಲು ಧ್ವನಿಸಿದರೆ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಿದ್ದ ಓಟು ಅಥವಾ ಮತವು ಮಾರಾಟದ ಸರಕಾಗಿ ಹಣ ಮತ್ತು ಜಾತಿ ಮತ ಧರ್ಮಗಳ ಹೆಸರಿನಲ್ಲಿ ತನ್ನ ಮೌಲ್ಯ ಕಳೆದುಕೊಂಡಿದ್ದು ಒಂದು ದುರಂತವಾದರೆ ಚುನಾವಣೆ ಸುಧಾರಣೆಯ ಹೆಸರಿನಲ್ಲಿ ಬಂದಿರುವ ಎಲೆಕ್ಟ್ರಾನಿಕ್ ಮತಯಂತ್ರಗಳು ಪ್ರಜಾಪ್ರಭುತ್ವವನ್ನೇ ಆಪೋಶನಕೊಳ್ಳುತ್ತಿವೆ ಎನ್ನುತ್ತಿವೆ ಈ ಸಾಲುಗಳು ;

‘ ಮತ ಮತಪೆಟ್ಟಿಗೆಯ ನುಂಗಿ
ಅನೀತಿ ನೀತಿಯ ನುಂಗಿ,ಅಸತ್ಯ ಸತ್ಯವ ನುಂಗಿತ್ತಾ ತಂಗಿ’

ಭಕ್ತರ ಉದ್ಧಾರದ,ಲೋಕಕಲ್ಯಾಣದ ಕೇಂದ್ರಗಳಾಗಿದ್ದ ಮಠ ಮಂದಿರಗಳು ಭಕ್ತರ ಶೋಷಣೆಯ ಕೇಂದ್ರಗಳಾಗಿವೆ.ಜಾತಿಯ ಮೇಲಿನ ಪ್ರೀತಿಯು ಮನುಷ್ಯತ್ವವನ್ನು ಮರೆಯುವಂತೆ ಮಾಡಿದೆ.ಬಡವರು ಮತ್ತು ರೈತರಿಗೆ ನೀಡುವ ಎಮ್ಮೆಯ ಸಾಲವು ಅವರ ಬದುಕುಗಳಿಗೆ ಆಸರೆಯಾಗದೆ ರಕ್ತಕಾರಿ ಸಾಯುವಂತೆ ಮಾಡುವ ಕಬ್ಬಿಣದ ಅಲುಗು ಆಗದಿದ್ದರೂ ಚೂಪಾದ ಮೊನೆಯುಳ್ಳ ಗೂಟವಾಗಿ ಇರಿದಿದೆ.ಹುಲ್ಲು ಅಥವಾ ಮೇವು ಖರೀದಿಸಲು ಮಾಡಿದ ಸಾಲಕ್ಕೆ ಹಸುವನ್ನೇ ಮಾರಬೇಕಾದ ಸ್ಥಿತಿಗೆ ತಲುಪಿದ್ದಾನೆ ರೈತ!

ಕೊವಿಡ್ ಕಾರಣದಿಂದ ಶಿಕ್ಷಣ ವಂಚಿತರಾದ ಮಕ್ಕಳ ಅನಿಶ್ಚಿತ ಭವಿಷ್ಯದ ಬಗ್ಗೆಯೂ ಬೆಳಕು ಚೆಲ್ಲುವ ಕವನವು ವ್ಯಾಪಾರವಾದ ಶಿಕ್ಷಣ ವ್ಯವಸ್ಥೆಯಲ್ಲಿ ಸುಲಿಗೆಕೋರರಾದ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲಕರುಗಳು ಕೊವಿಡ್ ಸಂಕಷ್ಟಕ್ಕೆ ಸಿಲುಕಿದ ಬಡಕುಟುಂಬಗಳ ಮಕ್ಕಳು ಶುಲ್ಕ ಕಟ್ಟಲಾರದ ಸ್ಥಿತಿಯಲ್ಲಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಡಳ್ಳದೆ ಮಕ್ಕಳನ್ನು ಶಾಲೆಯಿಂದ ಹೊರಗೆ ತಳ್ಳಿ ತಮ್ಮ ರಕ್ಕಸಿದಾಹವನ್ನು ಪ್ರದರ್ಶಿಸಿದ್ದಾರೆ ಎನ್ನುತ್ತಾ ನಾಳಿನ ದೇಶದ ಭವಿಷ್ಯ ಮತ್ತು ಭರವಸೆಯಾಗಬೇಕಿದ್ದ ಬಡಮಕ್ಕಳು ಬದುಕು ಅತಂತ್ರವಾಗಿದೆ ಎನ್ನುತ್ತಾರೆ ಕವಿ.

ಪ್ರಜಾಪ್ರಭುತ್ವದಲ್ಲಿ ಪ್ರಭುವಾಗಬೇಕಿದ್ದ ಮತದಾರ ತನ್ನ ಅಜ್ಞಾನ ಮತ್ತು ಅಸಹಾಯತೆಗಳ ಕಾರಣದಿಂದ ನೋಟನ್ನು ಪಡೆದು ಓಟು ಹಾಕಿದ್ದರಿಂದ ಪ್ರಶ್ನಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾನೆ.ಹೆಂಡದ ಅಮಲಿನಲ್ಲಿ ಮತಹಾಕಿದ್ದರ ಪರಿಣಾಮ ಕುಡಿಯುವ ನೀರಿಗೂ ತತ್ವಾರ ಪಡುವ ಪರಿಸ್ಥಿತಿ ಬಂದೊದಗಿದೆ.ಸಾಲಕ್ಕಾಗಿ ಊರ ಉಳ್ಳವರ ಬಳಿ ಅಡ ಇಟ್ಟ ಬಂಗಾರವು ಸಾಲದ ಬಡ್ಡಿಗೆ ಮಾತ್ರ ಸರಿಹೋಗಿದೆ.ಬಡ್ಡಿಗಾಗಿ ಬಂಗಾರ ಹೋದರೂ ಸಾಲದ ಅಸಲು ಹಾಗೆಯೇ ಉಳಿದಿದೆ! ಈ ಎಲ್ಲ ವಿಪತ್ಪರಂಪರೆಗಳ ಸಿಕ್ಕ ರೈತ ಅತ್ತ ಸಾಲ ತೀರಿಸಲಾಗದೆ ಇತ್ತ ಹೊಲದಲ್ಲಿ ಬೆಳೆ ಅಥವಾ ಭರವಸೆ ಕಾಣದೆ ನೇಣಿಗೆ ಶರಣಾಗುವುದೇ ಪರಿಹಾರ ಮಾರ್ಗವನ್ನಾಗಿ ಕಂಡುಕೊಂಡಿದ್ದಾನೆ ಎನ್ನುವ ಕರುಳು ಹಿಂಡುವ ಅನುಭವವನ್ನು ದ್ರವ್ಯವಾಗಿ ಉಳ್ಳ ಕವನವು
ರೈತನ ಸಾಲದ ಸುಳಿ ನುಂಗಿತ್ತಾ
ರೈತನ ಸಾಲದ ಸುಳಿ ನುಂಗಿತ್ತಾ,ನೋಡವ್ವ ತಂಗಿ
ರೈತನ ಸಾಲದ ಸುಳಿ ನುಂಗಿತ್ತಾ
ಎನ್ನುವ ಪುನುರುಕ್ತಿಗಳೊಂದಿಗೆ ಬಹುರೂಪಿಯಾದ ರೈತನ ಬದುಕಿನ ಅಸಹಾಯತೆಯನ್ನು ಚಿತ್ರಿಸಿದೆ.

ರೈತರ ಬದುಕು ಬವಣೆಗಳ ಮೇಲೆ ಬೆಳಕು ಚೆಲ್ಲುತ್ತ ವ್ಯವಸ್ಥೆಯ ಕ್ರೌರ್ಯ,ರಾಜಕಾರಣಿಗಳ ಸ್ವಾರ್ಥ,ಲೇವಾದೇವಿಗಳು ಬ್ಯಾಂಕುಗಳ ಲಾಭಬಡುಕತನ,ದಲ್ಲಾಳಿಗಳ ಮೋಸಬುದ್ಧಿ,ಗುತ್ತಿಗೆದಾರರ ಅತಿಯಾಸೆ,ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಕಲ್ಲುಹೃದಯಗಳ ಕಠಿಣ ಮನಸ್ಕರುಗಳು ಸೇರಿದಂತೆ ಇಡೀ ವ್ಯವಸ್ಥೆಯ ರೈತ ಮತ್ತು ದುಡಿಯುವ ವರ್ಗದ ಅಸಹಾಯಕ ಜನಕೋಟಿಯ ಬದುಕುಗಳೊಂದಿಗೆ ಆಟ,ಚೆಲ್ಲಾಟಗಳನ್ನು ಆಡುತ್ತಿರುವುದನ್ನು ಅರ್ಥವತ್ತಾಗಿ, ಧ್ವನಿಪೂರ್ಣವಾಗಿ ವಿಡಂಬಿಸಿದ ಯಶಸ್ವಿಕವನ ಚಂದ್ರಕಾಂತ ವಡ್ಡು ಅವರ ‘ ರೈತನ ಸಾಲದ ಸುಳಿ ನುಂಗಿತ್ತಾ’ ಕವನ.

ಮುಕ್ಕಣ್ಣ ಕರಿಗಾರ
ಮೊ: 94808 79501