ಮಹಾಪುರುಷರ ಜಯಂತಿಗಳ ಆಚರಣೆ– ಚಿಂತಿಸಲೇಬೇಕಾದ ಕೆಲವು ಸಂಗತಿಗಳು: ಮುಕ್ಕಣ್ಣ ಕರಿಗಾರ

ಮಹಾಪುರುಷರ ಜಯಂತಿಗಳ ಆಚರಣೆ– ಚಿಂತಿಸಲೇಬೇಕಾದ ಕೆಲವು ಸಂಗತಿಗಳು.

ಲೇಖಕರು: ಮುಕ್ಕಣ್ಣ ಕರಿಗಾರ

ಇಂದು ( 24.11.2021)ಬೆಳಿಗ್ಗೆ ಎಂದಿನಂತೆ ದಿನಪತ್ರಿಕೆಗಳನ್ನು ಓದುತ್ತಿದ್ದಾಗ ‘ ಸಂಯುಕ್ತ ಕರ್ನಾಟಕ’ ದ ಓದುಗರ ಪ್ರತಿಕ್ರಿಯೆಯ ವಿಭಾಗವಾದ “ಜನ- ಮನ ” ವಿಭಾಗದಲ್ಲಿ ಪ್ರಕಟವಾಗಿದ್ದ ಒಂದು ವಿಷಯ ನನ್ನ ಗಮನ ಸೆಳೆಯಿತು.ಕಲ್ಬುರ್ಗಿಯಿಂದ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಬ್ಬಂದಿಯವರು ‘ ಮಹಾಪುರುಷರ ಜಯಂತಿಗೆ ರಜೆ ಬೇಡ’ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಆ ಅಭಿಪ್ರಾಯಕ್ಕೆ ಸಮರ್ಥನೆಯನ್ನು ನೀಡಿದ್ದರು.ಒಳ್ಳೆಯವಿಚಾರ ಒಂದನ್ನು ಪ್ರಸ್ತಾಪಿಸಿ, ಕಾಯಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ,ಶರಣಸಂಸ್ಕೃತಿಯ ಮಹತ್ವವನ್ನು ಬಿಂಬಿಸುವ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಬ್ಬಂದಿಯವರಿಗೆ ಅಭಿನಂದನೆಗಳು.ರಜೆಗಾಗಿ ಹಾತೊರೆಯುವ ಅಧಿಕಾರಿ- ಸಿಬ್ಬಂದಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಶೈಕ್ಷಣಿಕ ಕ್ಷೇತ್ರದ ವಿಶ್ವವಿದ್ಯಾಲಯ ಒಂದರಿಂದ ಇಂತಹ ಸಲಹೆ ಬಂದಿದ್ದು ಗಮನಿಸಬೇಕಾದ ಸಂಗತಿ, ಅದರಲ್ಲೂ ಕಲ್ಯಾಣ ಕರ್ನಾಟಕದ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಬ್ಬಂದಿಯವರಿಂದ ಇಂತಹದ್ದೊಂದು ಮಹತ್ವದ ಸಲಹೆ ಬಂದಿರುವುದು ಇನ್ನೂ ವಿಶೇಷವಾದುದು.

ಮಹಾಪುರುಷರ ಜಯಂತಿಗಳನ್ನು ಆಚರಿಸುವ ಉದ್ದೇಶ ಅವರುಗಳು ಗೈದ ಸಾಧನೆ,ಸಾಧಿಸಿದ ಸಿದ್ಧಿಗಳನ್ನು ಯುವಜನತೆ ಸೇರಿದಂತೆ ಸಮಾಜಕ್ಕೆ ಮಾಹಿತಿ ನೀಡುವುದು.ಮಹಾಪುರುಷರ ಜಯಂತಿಯಂದು ರಜೆ ನೀಡುವುದರಿಂದ ಶಾಲಾ ಕಾಲೇಜುಗಳ ಶಿಕ್ಷಕರು- ಉಪನ್ಯಾಸಕರುಗಳು ಮತ್ತು ಸರಕಾರಿ ನೌಕರರುಗಳು ದೂರದ ತಮ್ಮ ಊರುಗಳಿಗೆ ತೆರಳುವುದರಿಂದ ಅವರುಗಳು ಜಯಂತಿಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಬ್ಬಂದಿಯವರ ಅಭಿಪ್ರಾಯವು ಸರಿಯಾಗಿದೆ ಮತ್ತು ವಸ್ತುಸ್ಥಿತಿಗೆ ಹಿಡಿದ ಕನ್ನಡಿಯೂ ಆಗಿದೆ.ರಜೆ ಬಂದೊಡನೆ ತಮ್ಮ ಊರುಗಳತ್ತ ಓಡುವ ಸರಕಾರಿ ನೌಕರರುಗಳು ಮಹಾಪುರುಷರುಗಳ ಜಯಂತಿಗಳಲ್ಲಿ ಪಾಲ್ಗೊಳ್ಳದೆ ಅಪಚಾರ ಎಸಗುತ್ತಾರೆ.ಸರಕಾರವು ಮಹಾಪುರುಷರುಗಳ ದಿನದಂದು ರಜೆ ನೀಡುವ ಉದ್ದೇಶ ಆ ಮಹಾಪುರುಗಳ ಸ್ಮರಣೆಗೆಂದು ಏರ್ಪಡಿಸುವ ಸರಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರ ತತ್ತ್ವಾದರ್ಶ,ಸಂದೇಶಗಳನ್ನು ತಿಳಿದುಕೊಂಡು ಅವರಂತೆ ತಾವು ನಡೆಯುವ ಸ್ಫೂರ್ತಿ ಪಡೆಯಲಿ ಎನ್ನುವುದು.ಆದರೆ ಬಹುತೇಕ ರಜೆ ಘೋಷಿತ ಮಹಾಪುರುಷರ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಪಾಲ್ಗೊಳ್ಳುವವರು ಬೆರಳೆಣಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಮಾತ್ರ! ಇದರಿಂದ ಜಯಂತಿಗಳ ಆಚರಣೆಯ ಉದ್ದೇಶ ಈಡೇರುವುದಿಲ್ಲ.ಯುವಜನತೆ ಮತ್ತು ಸಮಾಜಕ್ಕೆ ಸಂದೇಶ ರವಾನಿಸುವ ಕಾರ್ಯಕ್ರಮಗಳಲ್ಲಿ ಜನರೇ ಪಾಲ್ಗೊಳ್ಳಲಿಲ್ಲ ಎಂದರೆ ಯಾವ ಪುರುಷಾರ್ಥ ಸಾಧಿಸಿದಂತಾಯಿತು? ಮಹಾಪುರುಷರ ಜಯಂತಿಯನ್ನು ರಜಾರಹಿತ ಆಚರಣೆಯನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಬ್ಬಂದಿಯವರು ಸಲಹೆ ಶ್ಲಾಘನೀಯ ಮತ್ತು ಅನುಷ್ಠಾನಯೋಗ್ಯವಾದ ಸಲಹೆ ಕೂಡ.

ಸರಕಾರಗಳು ಮಹಾಪುರುಷರ ಜಯಂತಿಗಳನ್ನು ಆಚರಿಸುತ್ತಿರುವುದು,ರಜೆಘೋಷಿಸಿ ಆಚರಣೆಗೆ ಸರಕಾರಿ ಶಿಷ್ಟಾಚಾರ ಸೇರಿದಂತೆ ‘ಪ್ರಭುತ್ವಸಮ್ಮತಿ’ಯ ಮೆರಗು ನೀಡಿರುವುದು ಮತಗಳನ್ನು ಸೆಳೆಯುವ ರಾಜಕೀಯ ತಂತ್ರಗಾರಿಕೆಯ ಭಾಗವಾಗಿಯೇ ಹೊರತು ಅದರ ಹಿಂದೆ ಯಾವುದೇ ರಚನಾತ್ಮಕ ಉದ್ದೇಶ ಇಲ್ಲ.ಕರ್ನಾಟಕದಲ್ಲಿ ಆಚರಿಸಲ್ಪಡುತ್ತಿರುವ ಮಹಾಪುರುಷರುಗಳ ಜಯಂತಿಗಳ ಹಿಂದೆ ಎಲ್ಲ ರಾಜಕೀಯ ಪಕ್ಷಗಳೂ ಇವೆ.ಪ್ರತಿಯೊಂದು ಪಕ್ಷವು ತನ್ನ ಆಳ್ವಿಕೆಯಲ್ಲಿ ಒಬ್ಬರೋ ಇಬ್ಬರೋ ಅಥವಾ ಬಹಳಷ್ಟು ಜನರೋ ಆದ ಮಹಾಪುರುಷರ ಜಯಂತಿಯ ಆಚರಣೆಗೆ ಆದೇಶ ನೀಡಿದೆ.’ ಅವರಿಗಿಂತ ನಾನೇನು ಕಡಿಮೆ’ ಎನ್ನುವ ಪೈಪೋಟಿಯಲ್ಲಿ ಜಯಂತಿಗಳನ್ನು ಘೋಷಿಸುವುದು ಮತ್ತು ಆಚರಿಸುವುದು ನಡೆಯುತ್ತಿದೆಯೇ ಹೊರತು ಜಯಂತಿಗಳ ಕಾರಣದಿಂದ ವ್ಯರ್ಥವಾಗುವ ಮಾನವಸಂಪನ್ಮೂಲದ ಅಮೂಲ್ಯ ಸಮಯ,ಸಂಪನ್ಮೂಲಗಳ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿಲ್ಲ.ಶರಣರು- ಮಹಾಪುರುಷರು ಯಾವುದೇ ಜಾತಿ- ಜನಾಂಗಕ್ಕೆ ಸೀಮಿತರಾಗದೆ,ಲೋಕಕಲ್ಯಾಣ ಬಯಸಿದ್ದ ವಿಶ್ವ ವಿಭೂತಿಗಳಾಗಿದ್ದರು ಎನ್ನುವುದನ್ನು ಅರ್ಥಮಾಡಿಕೊಳ್ಳದೆ ಮಹಾಪುರುಷರು ಹುಟ್ಟಿದ ಜಾತಿ,ಧರ್ಮಗಳಿಗೆ ಅವರನ್ನು ಸಂಕುಚಿತಗೊಳಿಸಿ ಆಯಾ ಜನಾಂಗದ ಮುಖಂಡರು,ಜನಸಮುದಾಯವನ್ನು ಒಳಗೊಂಡು ಜಯಂತಿಗಳ ಕಾರ್ಯಕ್ರಮ ಆಚರಿಸಲಾಗುತ್ತಿದೆ.ಎಲ್ಲಾ ಜಯಂತಿಗಳನ್ನು ಸರಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕಿರುವುದರಿಂದ ಆ ಕಛೇರಿಯ ಅಧಿಕಾರಿ- ಸಿಬ್ಬಂದಿಯವರು ತಮ್ಮ ಕೆಲಸದ ಅವಧಿಯನ್ನು ಜಯಂತಿಯ ಆಚರಣೆಗೆ ಮೀಸಲಿಡಬೇಕಾಗುತ್ತದೆ.ಸರಕಾರಿ ಕಛೇರಿಗಳಲ್ಲಿ ಮೊದಲೇ ಕೆಲಸ ನಿಧಾನಗತಿಯಲ್ಲಿ ನಡೆಯುತ್ತದೆ.ಇಂತಹದ್ದರಲ್ಲಿ ಈ ಜಯಂತಿಗಳ ಆಚರಣೆಯ ನೆಪದಲ್ಲಿ ಸಿಬ್ಬಂದಿಯವರು ಸಿಗುವುದೇ ಇಲ್ಲ.

ಕಾಯಕ ಸಂಸ್ಕೃತಿಯನ್ನು ಬಲಪಡಿಸುವ ಮತ್ತು ಶರಣ ತತ್ತ್ವಗಳನ್ನು ಜನಸಮುದಾಯಕ್ಕೆ ತಲುಪಿಸಬೇಕು ಎನ್ನುವ ಉದ್ದೇಶ ಸರಕಾರಕ್ಕೆ ಇದ್ದರೆ ಜಯಂತಿಯ ಆಚರಣೆಗೆ ನೀಡುವ ರಜೆಗಳನ್ನು ರದ್ದುಪಡಿಸಿ ಅಂದು ಕನಿಷ್ಟ ಒಂದು ಘಂಟೆಯಾದರೂ ಹೆಚ್ಚಿಗೆ ಕೆಲಸ ಮಾಡುವಂತೆ ಆದೇಶ ಹೊರಡಿಸಬೇಕು.ಸರಕಾರಿ ಕಛೇರಿಗಳ ಅವಧಿ ಬೆಳಿಗ್ಗೆ ಹತ್ತರಿಂದ ಸಂಜೆ ಐದರವರೆಗೆ ಇರುವುದರಿಂದ ಜಯಂತಿಯ ದಿನಗಳಂದು ಬೆಳಿಗ್ಗೆ ಒಂಬತ್ತು ಘಂಟೆಗೆ ಸರಕಾರಿ ಕೆಲಸಕ್ಕೆ ಬಾಧಕವಾಗದಂತೆ ಜಯಂತಿಯ ಆಚರಣೆ ಮಾಡುವ ವ್ಯವಸ್ಥೆ ರೂಢಿಗೆ ಬರಬೇಕು.

ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಜಾತಿವ್ಯವಸ್ಥೆಯನ್ನು ಬೆಂಬಲಿಸುವಂತೆ ಮಹಾಪುರುಷರ ಜಯಂತಿಗಳನ್ನು ಆಚರಿಸಬಾರದು.ಮಹಾಪುರುಷರು ಇಡೀ ಮಾನವ ಕುಲಕ್ಕೇ ಸೇರಿದವರಾಗಿದ್ದರಿಂದ ಆ ಜಾತಿಯ ಮುಖಂಡರುಗಳನ್ನು ಕರೆದು ಗೌರವಿಸುವುದು,ಅದೇ ಜಾತಿಯ ಜನರಿಗೆ ಪ್ರಶಸ್ತಿಕೊಡುವುದು,ಆ ಜಾತಿಯ ಜನರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳುವುದು ಇವೇ ಮೊದಲಾದ ಸಂಗತಿಗಳು ನಮ್ಮ ಸಂವಿಧಾನದ ಜಾತ್ಯತೀತ ನಿಲುವು ಮತ್ತು ಆಶಯಕ್ಕೆ ವಿರುದ್ಧವಾದವುಗಳು.ರಚನಾತ್ಮಕ ದೃಷ್ಟಿಕೋನವನ್ನು ಹೊಂದುವ ಉದ್ದೇಶದಿಂದ ಸರಕಾರವು ಜಯಂತಿಯ ಆಚರಣೆಗೆ ಸಂಬಂಧಿಸಿ ಈ ಕೆಳಗಿನ ನಿರ್ಧಾರಗಳನ್ನು ಕೈಗೊಳ್ಳಬಹುದು.

೧ ಜಯಂತಿಯ ಆಚರಣೆಗಳನ್ನು ಕನಿಷ್ಟ ಸಂಖ್ಯೆಗೆ ಸೀಮಿತಗೊಳಿಸಬೇಕು

ಎಲ್ಲಾ ಶರಣರ,ಮಹಾಪುರುಷರ ಜಯಂತಿ,ದಿನಾಚರಣೆಗಳನ್ನು ಆಚರಿಸಬೇಕಾಗಿಲ್ಲ.ಈ ಮೊದಲು ಇದ್ದಂತೆ ಅಗಸ್ಟ್ 15 ರ ಸ್ವಾತಂತ್ರ್ಯೋತ್ಸವ,ಜನೆವರಿ 26 ರ ಗಣರಾಜ್ಯೋತ್ಸವ,ಅಕ್ಟೋಬರ್ 2 ರ ಗಾಂಧಿ ಜಯಂತಿ ಮತ್ತು ಎಪ್ರಿಲ್ 14 ರ ಅಂಬೇಡ್ಕರ ಜಯಂತಿಗಳನ್ನಷ್ಟೇ ಕಡ್ಡಾಯಪಡಿಸಿದರೆ ಸೂಕ್ತ.ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಜೊತೆಗೆ ಕರ್ನಾಟಕದ ಸಾಂಸ್ಕೃತಿಕ ಹಿರಿಮೆ ಗರಿಮೆಗಳ ಪ್ರತೀಕವಾಗಿ ‘ಬಸವ ಜಯಂತಿ ಒಂದನ್ನು ಮಾತ್ರ ಸರಕಾರಿ ಜಯಂತಿ’ ಎಂದು ಆಚರಿಸಲು ಪರಿಗಣಿಸಬಹುದು.

೨. ಜಯಂತಿಗಳನ್ನು ಆಚರಿಸಲೇಬೇಕು ಎಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಎಲ್ಲಾ ‘ಮಹಾಪುರುಷರುಗಳ ಜಯಂತಿಯ ನೋಡಲ್ ಇಲಾಖೆ’ ಎಂದು ಗುರುತಿಸಿ ಆ ಇಲಾಖೆಯೊಂದರ ಮೂಲಕವೇ ಜಯಂತಿಯ ಆಚರಣೆಗೆ ಏರ್ಪಾಟು ಮಾಡಬಹುದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಸಮಾಜ ಕಲ್ಯಾಣ ಇಲಾಖೆ,ಪರಿಶಿಷ್ಟಪಂಗಡಗಳ ಕಲ್ಯಾಣ ಇಲಾಖೆ ಎಂಬಿತ್ಯಾದಿ ಇಲಾಖೆಗಳಲ್ಲಿ ಜಯಂತಿಗಳನ್ನು ಹಂಚಿಕೆ ಮಾಡುವ ಬದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಂದನ್ನೇ ಎಲ್ಲಾ ಜಯಂತಿಗಳ ಆಚರಣೆಯ ನೋಡಲ್ ಇಲಾಖೆ ಎಂದು ಗುರುತಿಸಬೇಕು .ಅಲ್ಲದೆ ಎಲ್ಲ ಸರಕಾರಿ ಕಛೇರಿಗಳಲ್ಲಿ ಜಯಂತಿಯನ್ನು ಆಚರಿಸಬೇಕು,ಎಲ್ಲ ಅಧಿಕಾರಿ,ಸಿಬ್ಬಂದಿಯವರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೇಬೇಕು ಎಂದು ಅಗತ್ಯಪಡಿಸಬಾರದು.

೩. ಜಾತಿವಾರು ಜಯಂತಿಗಳನ್ನು ಆಚರಿಸುವ ಅಗತ್ಯ ಇದ್ದರೆ ಆಯಾ ಜಾತಿಗಳ ಸಂಘಟನೆಗಳಿಗೆ ಅನುದಾನ ಬಿಡುಗಡೆ ಮಾಡಿ ಆ ಸಂಘಟನೆಗಳೇ ತಮ್ಮ ತಮ್ಮ ಜಾತಿ,ಸಮುದಾಯಗಳ ಮಹಾಪುರುಷರ ಜಯಂತಿಯ ಆಚರಣೆ ನಡೆಸುವಂತೆ ಆಗಬೇಕು.

೪. ರಾಜ್ಯದ ಯಾವುದೇ ಒಂದು ಭಾಗ ಇಲ್ಲವೆ ಪ್ರದೇಶಕ್ಕೆ ಸೀಮಿತರಾದ ಅಥವಾ ಒಂದು ಜನಾಂಗಕ್ಕೆ ಸೀಮಿತರಾದಐತಿಹಾಸಿಕ ವ್ಯಕ್ತಿಗಳು,ಮಹಾಪುರುಷರ ಜಯಂತಿಗಳನ್ನು ರಾಜ್ಯದಾದ್ಯಂತ,ಸಾರ್ವತ್ರಿಕವಾಗಿ ಆಚರಿಸುವಂತೆ ಒತ್ತಡ ಹೇರಬಾರದು.ಅಂತಹ ವ್ಯಕ್ತಿಗಳು ಆಳ್ವಿಕೆ ಮಾಡಿದ ಸ್ಥಳ,ಪ್ರದೇಶಗಳಲ್ಲಿ ಇಲ್ಲವೆ ಆ ಐತಿಹಾಸಿಕ ವ್ಯಕ್ತಿಗಳ ಜಾತಿಗಳ ಜನಸಂಖ್ಯೆ ಹೆಚ್ಚು ಇರುವ ಪ್ರದೇಶಗಳಲ್ಲಿ ಅಂತಹವರ ಜಯಂತಿಗಳನ್ನು ಆಚರಿಸಬಹುದು.

೫ ಮಹಾಪುರುಷರ ಜಯಂತಿಗಳನ್ನು ರಾಜ್ಯದ ಎಲ್ಲಾ ಸರಕಾರಿ ಕಛೇರಿಗಳು,ಶಾಲಾ ಕಾಲೇಜು,ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಆಚರಿಸಲೇಬೇಕು ಎಂದು ಆದೇಶಿಸಬಾರದು.ಸರಕಾರಿ ಕಛೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಆಗುವಂತೆ ನೋಡಿಕೊಳ್ಳಬೇಕು.

೬. ಜಯಂತಿಗಳ ಆಚರಣೆಗೆ ಜಿಲ್ಲಾಧಿಕಾರಿಗಳು, ತಹಶೀಲ್ದಾರರುಗಳಿಗೆ ಅನುದಾನ ಬಿಡುಗಡೆ ಮಾಡುವ ಬದಲು ಆಯಾ ಜನಾಂಗಗಳ ತಾಲೂಕು,ಜಿಲ್ಲಾಮಟ್ಟದ ಮತ್ತು ರಾಜ್ಯಮಟ್ಟದ ಸಂಘಗಳಿಗೆ ಸರಕಾರವು ಅನುದಾನ ನೀಡಿ ಆ ಸಂಘಗಳಿಗೆ ಜಯಂತಿಯ ಹೊಣೆಗಾರಿಕೆ ನೀಡಬೇಕು.

ಜನಪರವಾದ ಆಡಳಿತ,ತ್ವರಿತ ಮತ್ತು ಪರಿಣಾಮಕಾರಿ ಆಡಳಿತ ನೀಡಬೇಕು ಎಂದರೆ ಜಯಂತಿಗಳ ಆಚರಣೆಯ ಹಿಂದಿನ ಜಾತಿಗಳ ಓಲೈಕೆ ನೀತಿಯನ್ನು ಬಿಟ್ಟು ಸರಕಾರಿ ಆಡಳಿತ ಯಂತ್ರವು ಸಾರ್ವಜನಿಕ ಸೇವೆಯಲ್ಲಿ ಹೆಚ್ಚು ಆಸಕ್ತಿ ಮತ್ತು ದಕ್ಷತೆಯಿಂದ ತೊಡಗಿಸಿಕೊಂಡು ದುಡಿಯುವಂತಹ ಕಾಯಕಸಂಸ್ಕೃತಿಯನ್ನು ಬೆಳೆಸಬೇಕು.

ಮುಕ್ಕಣ್ಣ ಕರಿಗಾರ
ಮೊ: 94808 79501

24.11.2021