ಕಲಬುರಗಿಯಲ್ಲಿ ನವೆಂಬರ್ ೨೭-೨೮ರಂದು ಎಐಡಿವೈಒ ೫ನೇ ರಾಜ್ಯ ಮಟ್ಟದ ಯುವಜನ ಸಮ್ಮೇಳನ.

ರಾಯಚೂರು ನ.24: ದೇಶದಾದ್ಯಂತ ಹೆಚ್ಚಾಗುತ್ತಿರುವ ನಿರುದ್ಯೋಗ, ಬೆಲೆ ಏರಿಕೆ ಹಾಗೂ ಸಾಂಸ್ಕೃತಿಕ ಅವನತಿಗಳ ವಿರುದ್ಧ ಬಲಿಷ್ಠ ಯುವಜನ ಚಳುವಳಿ ಕಟ್ಟಲು, ಇನ್ನಷ್ಟು ತೀಕ್ಷ್ಣಗೊಳಿಸಲು ಹಾಗೂ ವಿಸ್ತರಿಸಲು ಪೂರಕವಾಗಿ ಸಂಘಟನೆಯನ್ನು ಸಘನೀಕರಿಸಲು ನವೆಂಬರ್ ೨೭ ಹಾಗೂ ೨೮ ರಂದು ಕಲಬುರಗಿಯಲ್ಲಿ ೫ನೇ ರಾಜ್ಯಮಟ್ಟದ ಯುವಜನ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ನಾಡಿನ ಹೆಸರಾಂತ ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕರಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪನವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಕೆ.ಉಮಾ ಅವರು, ಅತಿಥಿಗಳಾಗಿ ಎಐಡಿವೈಓನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರತಿಭಾ ನಾಯಕ್ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ರಮೇಶ ಲಂಡನಕರ್ ಅವರು ಆಗಮಿಸಲಿದ್ದಾರೆ. ಎಐಡಿವೈಓನ ಅಖಿಲ ಅಧ್ಯಕ್ಷರಾದ ಕಾಮ್ರೇಡ್ ರಾಮಾಂಜನಪ್ಪ ಆಲ್ದಳ್ಳಿ ಅವರು ಸಮ್ಮೇಳನದ ಮುಖ್ಯ ಭಾಷಣಕಾರರಾಗಿರುತ್ತಾರೆ. ಸಂಘಟನೆಯ ರಾಜ್ಯ ಕಾರ್ಯದರ್ಶಿಗಳಾದ ಕಾ. ಜಿ.ಶಶಿಕುಮಾರ್ ಅವರು ಪ್ರಸ್ತಾವಿಕ ನುಡಿಗಳನ್ನಾಡಲಿದ್ದು, ರಾಜ್ಯಾಧ್ಯಕ್ಷರಾದ ಕಾ. ಎಂ.ಉಮಾದೇವಿಯವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜ್ಯದ ಎಲ್ಲಾ ೩೧ ಜಿಲ್ಲೆಗಳಿಂದ ಆಯ್ದ ಸುಮಾರು ೫೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಯುವಜನ ಚಳುವಳಿಯನ್ನು ಬಲಪಡಿಸಲು ನಡೆಯುತ್ತಿರುವ ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಎಐಡಿವೈಓ ಸಂಘಟನೆಯ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜಾನೇಕಲ್ ಹಾಗೂ ಕಾರ್ಯದರ್ಶಿ ವಿನೋದ್ ಯುವಜನತೆಯಲ್ಲಿ ಮನವಿ ಮಾಡಿದ್ದಾರೆ.

ಸಮ್ಮೇಳನದ ಹಕ್ಕೊತ್ತಾಯಗಳು:-
೧. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಮತ್ತು ಗುತ್ತಿಗೆ-ಹೊರಗುತ್ತಿಗೆಯಡಿಯಲ್ಲಿ ದುಡಿಯುತ್ತಿರುವವರನ್ನು ಸೇರಿದಂತೆ ಖಾಯಂ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಬೇಕು.
೨. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾರಣವಾಗುತ್ತಿರುವ ಅಶ್ಲೀಲತೆ-ಕುಸಂಸ್ಕೃತಿಯನ್ನು ಹರಡುವ ಸಿನಿಮಾ-ಸಾಹಿತ್ಯ ಹಾಗೂ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
೩. ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು.
೪. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಒಂದು ಕುಟುಂಬಕ್ಕೆ ವಾರ್ಷಿಕ ಕನಿಷ್ಠ ೨೦೦ ಮಾನವ ದಿನಗಳು ಉದ್ಯೋಗ ಖಾತ್ರಿಯಾಗಬೇಕು.