ಪ್ರಚಲಿತ: ಬೇಕು ವಿಧಾನಮಂಡಲದ ಸಚಿವಾಲಯಕ್ಕೆ ಆರ್ಥಿಕ ಸ್ವಾಯತ್ತತೆ- ಮುಕ್ಕಣ್ಣ ಕರಿಗಾರ

ಬೇಕು ವಿಧಾನಮಂಡಲದ ಸಚಿವಾಲಯಕ್ಕೆ ಆರ್ಥಿಕ ಸ್ವಾಯತ್ತತೆ

ಲೇಖಕರು: ಮುಕ್ಕಣ್ಣ ಕರಿಗಾರ

ಇತ್ತೀಚೆಗೆ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನ ಮಂಡಲ ಸಚಿವಾಲಯವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ದೃಷ್ಟಿಯಿಂದ ವಿಧಾನಮಂಡಲದ ಸಚಿವಾಲಯಕ್ಕೆ ಆರ್ಥಿಕ ಸ್ವಾಯತ್ತತೆ ನೀಡುವ ಕುರಿತು ಸಾಧಕ- ಬಾಧಕಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು.ಅವರ ಹೇಳಿಕೆಯು ಹೊರಬಿದ್ದ ಬೆನ್ನಲ್ಲೇ ಹಿಂದೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸಭಾಧ್ಯಕ್ಷರುಗಳಾಗಿದ್ದ ಬಹಳಷ್ಟು ಜನರು ವಿಧಾನಮಂಡಲ ಸಚಿವಾಲಯದ ಆರ್ಥಿಕ ಸ್ವಾಯತ್ತತೆಯ ಅಗತ್ಯವನ್ನು ಪ್ರತಿಪಾದಿಸಿ ವಿಧಾನಸಭೆಯ ಮತ್ತು ವಿಧಾನಪರಿಷತ್ತಿನ ಅಧ್ಯಕ್ಷರುಗಳು ಸಣ್ಣಪುಟ್ಟ ಅಗತ್ಯಗಳಿಗೆಲ್ಲ ಆರ್ಥಿಕ ಇಲಾಖೆಯ ಮುಂದೆ ಕೈಯೊಡ್ಡುವುದು,ಆರ್ಥಿಕ ಇಲಾಖೆಯು ಕೊಕ್ಕೆ ಹಾಕಿ‌ ಪ್ರಸ್ತಾವನೆಗಳನ್ನು ಹಿಂದಿರುಗಿಸುವುದು ಮತ್ತು ಇದರಿಂದ ಅನುಭವಿಸಿದ ಮುಜುಗರದ ಪ್ರಸಂಗಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.ಪ್ರಜಾಪ್ರಭುತ್ವದಲ್ಲಿ ವಿಧಾನ ಮಂಡಲಸಚಿವಾಲಯಕ್ಕೆ ಅದರದ್ದೆ ಆದ ಘನತೆ ಮತ್ತು ಮಹತ್ವ ಇದೆ.ವಿಧಾನಸಭೆಯ ಸ್ಪೀಕರ್ ವಿಧಾನ ಸಭೆಯ ನಿಯಂತ್ರಕರಾಗಿದ್ದರೆ ಪರಿಷತ್ತನ್ನು ವಿಧಾನಪರಿಷತ್ತಿನ ಸಭಾಪತಿಯವರು ನಿಯಂತ್ರಿಸುತ್ತಾರೆ.

ಭಾರತದ ಸಂವಿಧಾನದ 168 ನೇ ಅನುಚ್ಛೇದವು ರಾಜ್ಯಗಳ ವಿಧಾನ ಮಂಡಲಗಳ ರಚನೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದು ಅನುಚ್ಛೇದ 168(1) ( ಎ) ದಂತೆ ಆಂಧ್ರಪ್ರದೇಶ,ಬಿಹಾರ,ಮಧ್ಯಪ್ರದೇಶ,ಮಹಾರಾಷ್ಟ್ರ,ಕರ್ನಾಟಕ,ತಮಿಳುನಾಡು,ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಎರಡು ಸದನಗಳುಳ್ಳ ವ್ಯವಸ್ಥೆಯನ್ನು ಮಾನ್ಯತೆ ಮಾಡಿದೆ.ಅಂದರೆ ಈ ರಾಜ್ಯಗಳಲ್ಲಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಎನ್ನುವ ಎರಡು ಸದನಗಳು ಅಸ್ತಿತ್ವದಲ್ಲಿದ್ದು ವಿಧಾನಸಭೆಯು ಜನರಿಂದ ಚುನಾಯಿತರಾದ ವಿಧಾನಸಭಾ ಸದಸ್ಯರುಗಳನ್ನು ಒಳಗೊಂಡಿದ್ದರೆ ವಿಧಾನಪರಿಷತ್ತು ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಪರಿಣತರ ಪರಿಷತ್ತು ಆಗಿರುತ್ತದೆ‌.ಸಂವಿಧಾನದ 178 ನೇ ಅನುಚ್ಛೇದವು ವಿಧಾನಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯ ಬಗ್ಗೆ ವಿವರಿಸುತ್ತದೆ.ಸಂವಿಧಾನದ 182 ನೇ ಅನುಚ್ಛೇದವು ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿಗಳ ಆಯ್ಕೆಯ ಬಗ್ಗೆ ಪ್ರಸ್ತಾಪಿಸುತ್ತದೆ.ಹಾಗೆಯೇ ವಿಧಾನಮಂಡಲದ ಸದನ ಅಥವಾ ಉಭಯ ಸದನಗಳಿಗೆ ಪ್ರತ್ಯೇಕ ಸಚಿವಾಲಯ ಸಿಬ್ಬಂದಿಯನ್ನು ಹೊಂದುವ ಅಧಿಕಾರ ನೀಡಿದೆ ಸಂವಿಧಾನದ 187 ನೆಯ ಅನುಚ್ಛೇದವು.ಸಂವಿಧಾನದ ಈ ಅನುಚ್ಛೇದಗಳು ವಿಧಾನಮಂಡಲದ ಸ್ವಾಯತ್ತ ಅಧಿಕಾರದ ಮೇಲೆ ಬೆಳಕು ಚೆಲ್ಲುತ್ತವೆ.

ರಾಜ್ಯದ ವಿಧಾನ ಮಂಡಲದ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು,ಉಪಾಧ್ಯಕ್ಷರುಗಳು ವಿಧಾನಮಂಡಲದ ಅತ್ಯಂತ ಗೌರವಾನ್ವಿತ ಅಧಿಕಾರಿಗಳಾಗಿರುತ್ತಾರೆ ಮತ್ತು ಅವರು ರಾಜಕಿಯ ಪಕ್ಷ ಒಂದರಿಂದ ಆರಿಸಿ ಬಂದಿದ್ದರೂ ಹುದ್ದೆಯ ಸ್ಥಾನಬಲದಿಂದ ರಾಜಕೀಯ ತಾಟಸ್ಥ್ಯ ಇಲ್ಲವೆ ನಿರ್ಲಿಪ್ತಭಾವನೆಯನ್ನು ಹೊಂದಿರಬೇಕು ಎಂದು ನಿರೀಕ್ಷಿಸಲಾಗಿದೆ.ಪಕ್ಷ ರಾಜಕೀಯ ವ್ಯವಸ್ಥೆಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಸಂಪೂರ್ಣವಾಗಿ ರಾಜಕೀಯ ನಿರ್ಲಿಪ್ತ ನಿಲುವು ತಳೆಯುತ್ತಾರೆ ಎಂದು ಹೇಳಲಾಗದಾದರೂ ಬಹುಮಟ್ಟಿಗೆ ಅವರುಗಳು ತಮ್ಮ ಹುದ್ದೆಯ ಸಾಂವಿಧಾನಿಕ ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವಲ್ಲಿ ಸಫಲರಾಗಿದ್ದಾರೆ.ಎರಡು ಸದನಗಳ ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆಯು ಆ ಸದನಗಳ ಸಭಾಪತಿಯವರದ್ದೇ ಆಗಿರುತ್ತದೆ.ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಅಧಿವೇಶನದ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕಲಾಪಗಳನ್ನು ಸುಗಮವಾಗಿ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿಯು ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸಭಾಧ್ಯಕ್ಷರದ್ದು.ಅಧಿವೇಶನವನ್ನು ಸುಸೂತ್ರವಾಗಿ ನಡೆಯಿಸುವ ಸಂಬಂಧ ಅವರು ಸರ್ವಪಕ್ಷಗಳ ಸಭೆ ಕರೆಯುತ್ತಾರೆ,ಸಭೆಯ ಕಾರ್ಯಕಲಾಪಗಳು ವ್ಯವಸ್ಥಿತವಾಗಿ ಮತ್ತು ಸುಸೂತ್ರವಾಗಿ ನಡೆಯುವಂತೆ ವಿಧಾನಮಂಡಲದ ಆಯಾ ಸದನದ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದನದ ಕಲಾಪ ನಿರ್ವಹಿಸುತ್ತಾರೆ.ಅದರರ್ಥ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸಭಾಧ್ಯಕ್ಷರು ಅವರು ಯಾವುದೇ ರಾಜಕೀಯ ಪಕ್ಷದಿಂದ ಬಂದವರಾಗಿದ್ದರೂ ಸದನದ ಎಲ್ಲ ಸದಸ್ಯರ ಗೌರವಕ್ಕೆ ಪಾತ್ರರಾಗಿರುತ್ತಾರೆ.ವಿಧಾನಸಭೆಯಲ್ಲಿ ಮುಖ್ಯಮಂತ್ರಿ,ಮಂತ್ರಿಗಳು ಮತ್ತು ವಿಧಾನ ಸಭೆಯ ಸದಸ್ಯರುಗಳು ‘ ಮಾನ್ಯ ಅಧ್ಯಕ್ಷರೆ’ ಎಂದು ಸಭಾಧ್ಯಕ್ಷರನ್ನು ಸಂಬೋಧಿಸುವ ಮೂಲಕವೇ ಮಾತಿಗಾರಂಭಿಸುತ್ತಾರೆ.ಅಲ್ಲದೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸಭಾಧ್ಯಕ್ಷರ ಪೀಠವನ್ನು ಇತರ ಸದಸ್ಯರುಗಳಿಗಿಂತ ಎತ್ತರವಾಗಿ,ಪ್ರತ್ಯೇಕವಾಗಿ ಇರುವಂತೆ ಏರ್ಪಾಟು ಮಾಡಿ ಸಭಾಧ್ಯಕ್ಷರ ಹುದ್ದೆಯ ಘನತೆ- ಗೌರವಗಳನ್ನು ಪ್ರತಿಷ್ಠಾಪಿಸಲಾಗಿದೆ.ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಪೀಠವು ಎತ್ತರದಲ್ಲಿರುವಂತೆಯೇ ಸದನಗಳಲ್ಲಿ ಸಭಾಧ್ಯಕ್ಷರ ಪೀಠವನ್ನು ಎತ್ತರದಲ್ಲಿರುವಂತೆ ನಿರ್ಮಿಸಲಾಗಿರುತ್ತದೆ.ಮುಖ್ಯಮಂತ್ರಿಗಳಂತೆ ರಾಜ್ಯದ ಕಾರ್ಯಾಂಗದ ನಿರ್ವಹಣೆಯ ಅಪರಿಮಿತ ಅಧಿಕಾರವು ಸಭಾಧ್ಯಕ್ಷರುಗಳಿಗೆ ಇರದಿದ್ದರೂ ಮುಖ್ಯಮಂತ್ರಿ,ಅವರ ಸಚಿವ ಸಂಪುಟವು ಸೇರಿದಂತೆ ಸದನದ ಸದಸ್ಯರುಗಳನ್ನೆಲ್ಲ ಅಧಿವೇಶನದ ಕಾಲದಲ್ಲಿ ನಿಯಂತ್ರಿಸುವ ,ಸದಸ್ಯರ ಪ್ರಶ್ನೆಗಳಿಗೆ ಅವರನ್ನು ಉತ್ತರಿಸುವಂತೆ ಜವಾಬ್ದಾರರನ್ನಾಗಿ ಮಾಡುವ ಅಧಿಕಾರ ಸಭಾಧ್ಯಕ್ಷರು ಪಡೆದಿದ್ದಾರೆ.ಅಧಿವೇಶನದ ಸಂದರ್ಭದಲ್ಲಿ ಸದನದ ಶಾಂತಿ,ಸುವ್ಯವಸ್ಥೆ ಕಾಪಾಡುವ ಹೊಣೆಯುಳ್ಳ ವಿಧಾನಸಭೆಯ ಸಭಾಪತಿಗಳು ಅಶಿಸ್ತಿನಿಂದ ವರ್ತಿಸುವ ಸದಸ್ಯರುಗಳನ್ನು ಸದನದಿಂದ ಹೊರಹಾಕುವ,ಅಧಿವೇಶನದಿಂದ ಅಂತಹವರುಗಳನ್ನು ಅಮಾನತ್ತು ಮಾಡುವ ಅಧಿಕಾರ ಪಡೆದಿದ್ದಾರೆ.ಅಲ್ಲದೆ ವಿಧಾನ ಸಭೆಯ ಸದಸ್ಯರ ಅನರ್ಹತೆಯ ನಿರ್ಣಯವನ್ನು ಸಹ ವಿಧಾನಸಭೆಯ ಅಧ್ಯಕ್ಷರೇ ಮಾಡುತ್ತಾರೆ ಎನ್ನುವುದು ಆ ಹುದ್ದೆಯ ಮಹತ್ವವನ್ನು ಎತ್ತಿತೋರಿಸುತ್ತದೆ.ಅಧಿವೇಶನದಲ್ಲಿ ವಿಧೇಯಕಗಳನ್ನು ಅಂಗೀಕರಿಸುವ ಮತ್ತು ಧನ ವಿಧೇಯಕ ಮಸೂದೆಯ ಬಗ್ಗೆ ನಿರ್ಣಯಿಸುವ ಅಧಿಕಾರವೂ ವಿಧಾನಸಭೆಯ ಸಭಾಧ್ಯಕ್ಷರಿಗೆ ಇದೆ.ವಿಧಾನಸಭೆಯಿಂದ ಅಂಗೀಕಾರಗೊಂಡು ಬಂದ ವಿಧೇಯಕಗಳನ್ನು ವಿಧಾನಪರಿಷತ್ತಿನ ಪರಿಶೀಲನೆಗೆ ಒಳಪಡಿಸಿ,ಅಂಗೀಕರಿಸುವ ಜವಾಬ್ದಾರಿಯನ್ನು ವಿಧಾನ ಪರಿಷತ್ತಿನ ಸಭಾಧ್ಯಕ್ಷರು ನಿರ್ವಹಿಸುತ್ತಾರೆ.ಯಾವುದೇ ವಿಧೇಯಕವು ಧನವಿಧೇಯಕವೇ ಅಥವಾ ಅಲ್ಲವೆ ಎಂದು ನಿರ್ಧರಿಸುವ ಪರಮಾಧಿಕಾರವು ವಿಧಾನಸಭೆಯ ಅಧ್ಯಕ್ಷರಿಗೆ ಇದೆ.ಅಲ್ಲದೆ ವಿಧೇಯಕವನ್ನು ಧನವಿಧೇಯಕ ಎಂದು ದೃಢೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳಿಸುವ ಅಧಿಕಾರವೂ ವಿಧಾನಸಭಾಧ್ಯಕ್ಷರಿಗೆ ಇದೆ.ಇಂತಹ ವಿಶೇಷಾಧಿಕಾರಗಳನ್ನು ಹೊಂದಿರುವ ವಿಧಾನ ಸಭೆಯ ಅಧ್ಯಕ್ಷರು ಅವರ ಕಛೇರಿಯ ಮೂಲಭೂತ ಸೌಕರ್ಯಗಳು,ಸಾಧನೆ ಸಲಕರಣೆಗಳು ,ಸಿಬ್ಬಂದಿ ವೇತನ ,ಸಾರಿಗೆ ವೆಚ್ಚ ಮೊದಲಾದವುಗಳಿಗಾಗಿ ಆರ್ಥಿಕ ಇಲಾಖೆಯ ಮುಂದೆ ಕೈಯೊಡ್ಡಿ ನಿಲ್ಲುವಂತೆ ಆಗಬಾರದು.ಆರ್ಥಿಕ ಇಲಾಖೆಯು ಸಹ ವಿಧಾನಸಭೆ ,ವಿಧಾನ ಪರಿಷತ್ತಿನ ಅಧ್ಯಕ್ಷರುಗಳ ಕಛೇರಿಯಿಂದ ಬರುವ ಹಣಕಾಸಿನ ಪ್ರಸ್ತಾವನೆಗಳಿಗೆಲ್ಲ ಕೊಕ್ಕೆ ಹಾಕುವುದು ತನ್ನ ಪರಮಾಧಿಕಾರ ಎನ್ನುವ ಅಹಂ ಪ್ರದರ್ಶಿಸಬಾರದು.ಆರ್ಥಿಕ ಇಲಾಖೆಯು ಪ್ರಜಾಪ್ರಭುತ್ವವನ್ನು ಬಲಪಡಿಸಲು ಇರುವ ಪೂರಕ ಇಲಾಖೆಯೇ ಹೊರತು ಪ್ರಜಾಪ್ರಭುತ್ವದ ಆಶಯವನ್ನೇ ಪ್ರಶ್ನಿಸುವ ಇಲಾಖೆಯಲ್ಲ.ದುರಾದೃಷ್ಟವಶಾತ್ ಪ್ರಬುದ್ಧ ಮತ್ತು ಮುತ್ಸದ್ದಿ ರಾಜಕಾರಣಿಗಳ ಕೊರತೆಯ ಕಾರಣದಿಂದ ಆರ್ಥಿಕ ಇಲಾಖೆ ಆಡಿದ್ದೇ ಆಟ,ಮಾಡಿದ್ದೇ ಕಾನೂನು ಎನ್ನುವಂತೆ ಆಗಿದೆ.ಆರ್ಥಿಕ ಇಲಾಖೆಯ ಮುಖ್ಯಸ್ಥರು ಆಗಿರುವ ಹಣಕಾಸು ಸಚಿವರು ಆರ್ಥಿಕ ಇಲಾಖೆಯನ್ನು ಜನಪರವಾಗಿ ಚಿಂತಿಸುವಂತಹ ಸಂವೇದನಾಶೀಲ ಇಲಾಖೆಯನ್ನಾಗಿ ಪರಿವರ್ತಿಸಬೇಕು.ಹಾಗೆ ಆದಾಗ ವಿಧಾನ ಸಭೆ,ವಿಧಾನ ಪರಿಷತ್ತಿನ ಅಧ್ಯಕ್ಷರುಗಳು ಆರ್ಥಿಕ ಇಲಾಖೆಯ ಕೃಪಾಭಿಕ್ಷೆ ಬೇಡುವ ಮುಜುಗರದ ಪ್ರಸಂಗ ಬರುವುದಿಲ್ಲ.

ಕಾಲಮಾನದ ಅಗತ್ಯಕ್ಕೆ ತಕ್ಕಂತೆ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಮಂಡಲದ ಸಚಿವಾಲಯಕ್ಕೆ ಆರ್ಥಿಕ ಸ್ವಾಯತ್ತತೆ ನೀಡುವ ಒಳ್ಳೆಯ ಕಾರ್ಯಕ್ಕೆ ಕೈ ಹಾಕಿದ್ದಾರೆ.ಕೇಂದ್ರದಲ್ಲಿ ಸಂಸತ್ತಿನ ಲೋಕಸಭೆ ಮತ್ತು ರಾಜ್ಯ ಸಭೆಗಳ ಸಚಿವಾಲಯಗಳಿಗೆ ಆರ್ಥಿಕ ಸ್ವಾಯತ್ತತೆ ಇದೆ.ಅದೇ ಮಾದರಿಯಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಾದ ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳನ್ನೊಳಗೊಂಡ ವಿಧಾನಮಂಡಲದ ಸಚಿವಾಲಯಕ್ಕೆ ಆರ್ಥಿಕ ಸ್ವಾಯತ್ತತೆ ನೀಡಬೇಕು.ವಿಧಾನ ಮಂಡಲ ಸಚಿವಾಲಯಕ್ಕೆ ಬಜೆಟ್ಟಿನಲ್ಲಿ ಪ್ರತ್ಯೇಕ ಲೆಕ್ಕಶೀರ್ಷಿಕೆ ಮತ್ತು ಪ್ರತ್ಯೇಕ ಅನುದಾನ ನೀಡಬೇಕು.ರಾಜ್ಯದ ವಿಧಾನ ಮಂಡಲದ ಉಭಯ ಸದನಗಳು ಅಂತಹದ್ದೊಂದು ವಿಧೇಯಕವನ್ನು ಅಂಗೀಕರಿಸಿ,ಶಾಸನವನ್ನು ಜಾರಿಗೆ ತಂದು ಪ್ರಜಾಪ್ರತಿನಿಧಿಗಳ ಪರಮೋಚ್ಛವೇದಿಕೆಯಾಗಿರುವ ವಿಧಾನಮಂಡಲದ ಘನತೆ- ಗೌರವಗಳನ್ನು ಎತ್ತಿಹಿಡಿಯಬೇಕು.

ಮುಕ್ಕಣ್ಣ ಕರಿಗಾರ
ಮೊ: 94808 79501

23.11.2021