‘ನಮ್ಮ ಬಗ್ಗೆ ಹಿಂದೆ ಆಡಿಕೊಳ್ಳುವವರ ಬಾಯಿಗೆ ಮಣ್ಣು ಬೀಳಲಿ ಅಂತ ಶಪಿಸುವ ಮುನ್ನ
ಲೇಖಕ: ದೀಪಕ್ ಶಿಂಧೆ
‘ಯಾರ್ ಮಚ್ಚಾ, ಆಂಟಿ ಸಕತ್ ಹಾಟ್ ಇದಾರೆ’ ಅನ್ನುವ ಗೆಳೆಯರ ಸಂಖ್ಯೆಯೇ ಹೆಚ್ಚಾಗಿರುವ ಈ ಜಮಾನಾದಲ್ಲಿ ತನ್ನ ಚಿಕ್ಕಮ್ಮನನ್ನ ಬೈಕಿನ ಮೇಲೆ ಕರೆದೊಯ್ದು ಬಸ್ಸು ಹತ್ತಿಸಿಬಂದ ಹುಡುಗನ ಪರಿಸ್ಥಿತಿ ಬಹುಶ ಎಲ್ಲರಿಗೂ ಒಂದಲ್ಲ ಒಂದು ಕಡೆ ಖಂಡಿತ ಎದುರಾಗಿರುತ್ತೆ.ಓರಗೆಯಲ್ಲಿ ಅಕ್ಕನಂತಹ ಅಥವಾ ತಮ್ಮನಂತ ಹುಡುಗ ಅಥವಾ ಹುಡುಗಿಗೆ ತನ್ನ ತದ್ವಿರುದ್ದ ಲಿಂಗಿಯ ಒಂದಷ್ಟು ಪರಿಚಯ ಅಥವಾ ಸ್ನೇಹಗಳಿದ್ದರೆ ಆಡಿಕೊಳ್ಳುವ ಜನರ ಬಾಯಿಗೆ ಸಿಕ್ಕು ಇಲ್ಲದ ಸಂಶಯಗಳು ನಿಧಾನಕ್ಕೆ ಹುಟ್ಟಿಕೊಂಡು ಬಿಡುತ್ತವೆ.ಹೊಟ್ಟೆಪಾಡಿಗೆ ಎಸ್ ಟಿಡಿ ಇಟ್ಟುಕೊಂಡ ವಿಧವೆ ಹೆಣ್ಣುಮಗಳು ತನ್ನ ಮಗನ ವಯಸ್ಸಿನ ಹುಡುಗನ ಜೊತೆಗೆ ಒಂದಷ್ಟು ಸಲುಗೆಯಿಂದ ಮಾತಾಡಿದರೆ ಮುಗೀತು ಕತೆ.ಎಷ್ಟೇ ಆದ್ರೂ ಗಂಡಾ ಇಲ್ದೋಳು ನೋಡಿ ಆದರೆ ಪಾಪ ಆ ಹುಡುಗನ್ನ ನೋಡಿದ್ರೆ ಅಯ್ಯೋ ಅನಸುತ್ತೆ ಅಂತ ಕನಿಕರ ತುಂಬಿದ ರಂಗು ರಂಗಿನ ಮಾತನಾಡುವ ಜನ ನಮ್ಮ ಅಕ್ಕಪಕ್ಕದಲ್ಲೇ ಇರುತ್ತಾರೆ.ಹಳೆಯ ಕ್ಲಾಸ್ ಮೇಟ್ ಒಬ್ಬಳನ್ನ ಅಥವಾ ಬಾಲ್ಯದ ಗೆಳತಿಯೊಬ್ಬಳನ್ನ ನೀವು ಮೊದಲಿನ ಸಲುಗೆಯಿಂದ ಮಾತಾಡಿದ್ರೆ ಅಷ್ಟೇ ಯಾಕೆ ಜೀವದ ಗೆಳೆಯರಿಬ್ಬರು ಯಾವತ್ತೂ ಜೊತೆಯಾಗಿ ತಿರುಗಿದರೆ ಸಲಿಂಗ ಕಾಮದ ಕತೆ ಕಟ್ಟುವ ಜನರೂ ಇದ್ದಾರೆ ಅಂದರೆ ನಮಗ್ಯಾರಿಗೂ ನಂಬಿಕೆ ಬರುವದಿಲ್ಲ.ಬಟ್ ಇದು ಈ ಜಗತ್ತಿನ ಅಸಲಿಯತ್ತು ಅನ್ನೋದು ನಿಮಗೆಲ್ಲ ಗೊತ್ತಿರಲಿ.ಮಡದಿ ತೀರಿಕೊಂಡ ಮೇಷ್ಟ್ರು ಅಥವಾ ಮಕ್ಕಳಿಲ್ಲದ ಟೀಚರು ತಮ್ಮ ತರಗತಿಯ ಮಕ್ಕಳ ಗಲ್ಲ ನೀವಿದರೂ ಕೂಡ ಲೈಂಗಿಕ ಕಿರುಕುಳ ಅಂತ ಆರೋಪ ಮಾಡುವಷ್ಟರ ಮಟ್ಟಿಗೆ ಈ ಸಮಾಜ ಹದಗೆಟ್ಟು ಹೋಗಿ ಯಾವುದೋ ಕಾಲವಾಗಿದೆ.ಬಂಧ ಮತ್ತು ಅನುಭಂಧಗಳ ಬೆಸುಗೆಯಲ್ಲಿ ಗಟ್ಟಿಗೊಳ್ಳಬೇಕಿದ್ದ ಅಣ್ಣ-ತಮ್ಮ,ಅಕ್ಕ-ತಂಗಿ,ಚಿಕ್ಕಮ್ಮ-ಚಿಕ್ಕಪ್ಪ,ಇಂತಹ ಮಧುರ ಬಾಂಧವ್ಯಗಳೆಲ್ಲ ನಿಧಾನಕ್ಕೆ ಕಳಚುತ್ತ ಹೋಗಿ ಅಸಂಭದ್ದ ಮತ್ತು ಅಸಂಗತ ಕತೆಗಳಿಗೆ ಉಪ್ಪು ಕಾರ ಬೆರೆಸಿ ಮಾತನಾಡುವಷ್ಟರ ಮಟ್ಟಿಗೆ ಕೊಳೆತು ನಾರುತ್ತಿರುವ ಮನಸುಗಳ ನಡುವೆಯೇ ಅನಿವಾರ್ಯವಾಗಿ ಬದುಕುವ ಸ್ಥಿತಿ ನಮ್ಮದಾಗಿದೆ ಅಂದಮೇಲೆ ನಾವು ಎಲ್ಲವನ್ನೂ ಸಹಿಸಿಕೊಳ್ಳಬೇಕು ಅಷ್ಟೇ.ನಮ್ಮ ಹೆಲ್ಪಿಂಗ್ ನೇಚರುಗಳೆ ಎಷ್ಟೋ ಸಲ ಅನುಮಾನ ಮತ್ತು ಸಂಶಯಗಳಿಗೆ ದಾರಿ ಮಾಡಿಕೊಟ್ಟ ಮೇಲೆ ಇನ್ನು ಮುಂದೆ ಯಾರಿಗೂ ಸಹಾಯ ಮಾಡಬಾರದು ಅನ್ನುವ ಮನಸ್ಥಿತಿ ನಿಧಾನಕ್ಕೆ ನಮ್ಮ ನಿಮ್ಮಲ್ಲಿ ಬೆಳೆದು ನಿಲ್ಲುತ್ತಿದೆ.ಅಳುವ ಗಂಡಸು ಮತ್ತು ನಗುವ ಹೆಂಗಸನ್ನ ಯಾವತ್ತೂ ನಂಬಬಾರದು ಅಂತ ಹಿರಿಯರು ಹೇಳಿದ್ದಾರೆ.ಆದರೆ ಸದ್ಯದ ವಾಸ್ತವ ಸ್ಥಿತಿಯಲ್ಲಿ ನಮ್ಮ ಜೊತೆಗೆ ಇದ್ದುಕೊಂಡೆ ನಮ್ಮ ಬಗ್ಗೆ ಕಥೆ ಕಟ್ಟುವ,ವಿನಾಕಾರಣ ಒಂದಷ್ಟು ರೂಮರುಗಳನ್ನ ಹಬ್ಬಿಸುವ,ಸುಖಾ ಸುಮ್ಮನೆ ಮನಸಿಗೆ ನೋವು ಉಂಟುಮಾಡುವ ಹಂತಕ್ಕೆ ಗೆಳೆಯರೋ ಅಥವಾ ಸಹೋದ್ಯೋಗಿಗಳು ಮುಂದಾಗುತ್ತಿದ್ದಾರೆ ಅನ್ನುವದಾದರೆ ನಾವೆಲ್ಲ ಎನು ತಾನೆ ಮಾಡಲು ಸಾಧ್ಯ ಅಲ್ಲವಾ? ಬಹಳಷ್ಟು ಸಲ ಕಳ್ಳ ಬೆಕ್ಕೊಂದು ಕಣ್ಣುಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ತಿಳಿಯುವದಿಲ್ಲ ಅಂದುಕೊಂಡಂತೆ ನಾವು ಮಾಡುವ ಯಡವಟ್ಟು ಅಥವಾ ನಿರ್ಲಕ್ಷಗಳೆ ಇಂತಹ ಮಾತುಗಳಿಗೆ,ಒಂದಷ್ಟು ರೂಮರುಗಳಿಗೆ ಅಥವಾ ಕಿವಿ ಕಚ್ಚುವ ಜನರ ಕಪೋಲ ಕಲ್ಪಿತ ಕಥೆಗಳಿಗೆ ದಾರಿ ಮಾಡಿ ಕೊಟ್ಟಿರುತ್ತವೆ.ರಾಮಾಯಣದಲ್ಲಿ ಯಾರದೋ ಮಾತಿಗೆ ಕಿವಿಕೊಟ್ಟು ಪತಿವೃತೆ ಸೀತೆಯ ಶೀಲ ಶಂಕಿಸಿದ ಮರ್ಯಾದಾ ಪುರುಷೊತ್ತಮ ರಾಮನಂತೆ ನಾವು ಮತ್ಯಾರದೋ ಸಮಾಧಾನಕ್ಕಾಗಿ ನಮ್ಮ ಬದುಕಿನ ಶೈಲಿಯನ್ನ ಬದಲಾಯಿಸೋಕೆ ಆಗಲ್ಲ ಅನ್ನೋದು ನೆನಪಿರಲಿ.ಚುಚ್ಚಿ ಮಾತನಾಡುವ,ಪುಂಗಿದಾಸರಿಂದಾಗಿಯೇ ನಿಧಾನಕ್ಕೆ ನಮ್ಮ ನಡುವಿನ ನಂಬಿಕೆ ಅಥವಾ ಸ್ನೇಹದ ಕೊಂಡಿಗಳು ಕಳಚಿಕೊಳ್ಳುತ್ತಿವೆ.ಇಷ್ಟಕ್ಕೂ ಮತ್ಯಾರದೋ ಬಗ್ಗೆ ಅವರಿಲ್ಲದಾಗ ನಮ್ಮ ಮುಂದೆ ಆಡಿಕೊಳ್ಳುವ ವ್ಯಕ್ತಿ ನಾವಿಲ್ಲದಾಗ ನಮ್ಮ ಬಗ್ಗೆ ತೌಡು ಕುಟ್ಟುವದಿಲ್ಲ ಅನ್ನೋದಕ್ಕೆ ಗ್ಯಾರಂಟಿಯಾದರೂ ಎಲ್ಲಿದೆ ಅಲ್ಲವಾ??
ಇನ್ನೂ
ಬದಲಾವಣೆ ಅನ್ನೋದು ಜಗದ ನಿಯಮ ಅನ್ನುವದಾದರೆ ನಮ್ಮ ಬೆನ್ನ ಹಿಂದೆ ಆಡಿಕೊಂಡವರಿಂದ ನಾವು ದೂರವಾಗುವದು ಒಂದು ದಾರಿಯಾದರೆ ಎನ್ ಅನ್ಕೊಂಡಿದ್ದಿರಿ ನನ್ನ ಅಂತ ಗದರಿಸುವದು ಮತ್ತೊಂದು ದಾರಿ ಅಷ್ಟೇ.ಇದೆಲ್ಲಕ್ಕಿಂತ ಮಿಗಿಲಾದ ಮತ್ತು ಯಾರ ಮನಸಿಗೂ ನೋವು ಉಂಟುಮಾಡದ ಹಾಗೆ ಬದುಕುವದನ್ನ ನಾವೆಲ್ಲ ರೂಢಿಸಿಕೊಂಡು ಬಿಡಬೇಕು.ಹೊಟ್ಟೆ ಹಸಿದಾಗ ನಮ್ಮ ಹೊಟ್ಟೆಗೆ ಹಾಕದ,ಒಂದಷ್ಟು ಸಂಕಟ ಅಥವಾ ಸಮಸ್ಯೆಗಳಲ್ಲಿ ನಮ್ಮೊಂದಿಗೆ ಭಾಗಿಯಾಗದ ತಮ್ಮ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿಯೇ ಜೊತೆಗೆ ಇರುವವರಿಂದ ನಾವು ಇನ್ನೇನು ತಾನೆ ನಿರೀಕ್ಷಿಸೋದಕ್ಕೆ ಸಾಧ್ಯ.ಅಂತೆಯೆ ಪುರಂದರ ದಾಸರು ಹೇಳಿದ್ದಾರೆ ನಿಂದಕರಿರಬೇಕಯ್ಯಾ ಜಗದೊಳು…ಹಂದಿಗಳಂತೆ! ತಮ್ಮ ತಮ್ಮ ಬದುಕಿನ ನಾಟಕದ ಪಾತ್ರಗಳು ಮುಗಿಯುವ ಕೊನೆಯ ಕ್ಷಣದಲ್ಲಿ ಕೂಡ ಜಗತ್ತಿನ ಅತಿದೊಡ್ಡ ಪಾತ್ರೆಗೆ ದೊಡ್ಡದೊಂದು ಮುಚ್ಚಳವನ್ನ ಒಂದಷ್ಟು ಕಷ್ಟಪಟ್ಟರೆ ಯಾರು ಬೇಕಾದರೂ ಮುಚ್ಚಿಬಿಡಬಹುದು ಆದರೆ ಆಡಿಕೊಳ್ಳುವ ಬಾಯಿಯನ್ನ ಯಾರಿಂದಲೂ ಮುಚ್ಚಿಸಲು ಸಾಧ್ಯವಿಲ್ಲ. ನಮ್ಮ ಬಡತನವನ್ನು, ನಮ್ಮ ಪರಿಸ್ಥಿತಿಯನ್ನು,ಅಥವಾ ನಮ್ಮ ದೌರ್ಬಲ್ಯಗಳನ್ನ ಯಾರು ಬೇಕಾದರೂ ಹೀಯಾಳಿಸಿದರೆ ನಡೆದೀತು ಅದನ್ನೆಲ್ಲ ಅಷ್ಟೇ ಸರಳವಾಗಿ ನಾವು ನೀವೆಲ್ಲ ಒಪ್ಪಿಕೊಂಡು ಬಿಡಬಹುದು.ನಾನಿರೋದೆ ಹೀಗೆ ಮರಿ ಅಂತ ಯಾರಿಗೆ ಬೇಕಾದರೂ ಹೇಳಿಬಿಡಬಹುದು.
ಆದರೆ ಇಲ್ಲದ ವಿಷಯಗಳನ್ನ ಅದರಲ್ಲೂ ಒಂದಷ್ಟು ಉತ್ತಮ ಬಾಂಧವ್ಯಗಳನ್ನ ಬೇರೆಯದೆ ರೀತಿಯಲ್ಲಿ ಕಲಬೆರಕೆ ಮಾಡಿ ನೋಡುವವರನ್ನ ಯಾರೂ ಕೂಡ ಸಹಿಸಿಕೊಳ್ಳಲು ಆಗುವದಿಲ್ಲ.ಆದರೆ ನಿಮಗೆಲ್ಲ ನೆನಪಿರಲಿ ಅಲ್ಲಿ ಎಲ್ಲೋ ಹೊಗೆಯಾಡುತ್ತಿದೆ ಅಂದರೆ ಹೇಗೆ ಬೆಂಕಿ ಇದೆ ಅಂತ ಸ್ಪಷ್ಟವಾಗಿ ಹೇಳಬಹುದೊ ಹಾಗೆ ನಮ್ಮ ಬಗ್ಗೆ ಯಾರೊ ಆಡಿಕೊಳ್ಳುತ್ತಿದ್ದಾರೆ ಅಂದರೆ ಅವರ ಮನಸ್ಸಿನಲ್ಲಿ ನಮ್ಮ ಬಗ್ಗೆ ಯಾವ ಗೌರವವೂ ಇಲ್ಲ ಅಂತ ಖಂಡಿತವಾಗಿಯೂ ತಿಳಿದುಕೊಂಡು ಬಿಡಬೇಕು.ಇನ್ನು ಎಲ್ಲಿ ನಮಗೆ ಮರ್ಯಾದೆ ಅಥವಾ ಆತ್ಮಗೌರವ ಇಲ್ಲ ಅನ್ನಿಸಿಬಿಡುತ್ತದೋ ನಿಧಾನಕ್ಕೆ ಅಲ್ಲಿಂದ ಎದ್ದು ಹೊರಟುಬಿಡಬೇಕು.ಇದೆಲ್ಲ ನಮ್ಮಿಂದ ಅಸಾಧ್ಯ ಅನ್ನುವದಾದರೆ ಅಥವಾ ನಾವು ಅಂತಹವರ ನಡುವೆ ಇರುವದು ಅನಿವಾರ್ಯ ಅನ್ನುವದಾದರೆ ಒನ್ಸ ಅಗೇನ್ ನಾಯಿಗಳು ಬೊಗಳಲಿ ಬಿಡಿ.ಶ್ವಾನಗಳು ಬೊಗಳಿದರೇನು ಸ್ವರ್ಗಕ್ಕೆ ಕಿಚ್ಚು ಬೀಳುವದೇ?? ನಮ್ಮ ಪಾಡಿಗೆ ನಾವು ಇದ್ದುಬಿಡೋಣ.ದೇರ್ ಇಜ್ ನಾಟ್ ನೀಡ್ ಆಫ್ ಕ್ಲ‌್ಯಾರಿಪಿಕೇಷನ್.!
ಇಷ್ಟಕ್ಕೂ ನಾವೇನು ಅಂತ ನಮಗೆ ಪಕ್ಕಾ ಗೊತ್ತಿದ್ದರೆ ಸಾಕು ಅಲ್ಲವೆ? ಕೈ ಜಾರಿ ತಿಪ್ಪೆಗೆ ಬಿತ್ತು ಅಂತ ಯಾರಾದ್ರೂ ಡೈಮಂಡ್ ಅನ್ನ ತೆಗದು ಬಿಸಾಕ್ತಾರಾ?? ಅಥವಾ ಅದರ ಬೆಲೆಯಲ್ಲಿ ಎನಾದ್ರೂ ಕಡಿಮೆ ಆಗುತ್ತಾ.ಊರ ಕಸವನ್ನೆಲ್ಲ ಬಿಸಾಕುವ ತಿಪ್ಪೆಯಂತ ಬಾಯಿಗಳಿಗೆ ನಮ್ಮ ವಿಷಯವೇ ನಿತ್ಯದ ಆಹಾರ ಅನ್ನುವದಾದರೆ ನಾವ್ಯಾಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು?? ಜಸ್ಟ್ ಲೆಟ್ ಇಟ್ ಯಾಂಡ್ ಎಂಜಾಯ್ ದ ಮೂಮೆಂಟ್.ನಮ್ಮ ಬಗ್ಗೆ ಆಡಿಕೊಂಡವರಿಗೆ ಮತ್ತು ಹೀಯಾಳಿಸಿದವರಿಗೆ,ಮತ್ತು ಏನನ್ನೂ ಮಾತನಾಡದೆ ಮೌನವಾಗಿ ಉಳಿದವರಿಗೆ ಎಲ್ಲರಿಗೂ ಒಳ್ಳೆದಾಗ್ಲಿ ಏನಂತೀರಿ…?

ಮೊ:9482766018