‘ಶಿವಕಾಯರಾದ’ ಶಿವಭಕ್ತರಲ್ಲಿ ಜಾತಿಭೇದವ ಮಾಡಬಾರದು – ಮುಕ್ಕಣ್ಣ ಕರಿಗಾರ

ಶಿವಕಾಯರಾದ’ ಶಿವಭಕ್ತರಲ್ಲಿ ಜಾತಿಭೇದವ ಮಾಡಬಾರದು

ಲೇಖಕರು: ಮುಕ್ಕಣ್ಣ ಕರಿಗಾರ

ಬಸವಣ್ಣನವರ ಒಂದು ವಚನ ;
‘ ಓಂ ನಮಃ ಶಿವಾಯ’
ಎಂಬ ಮಂತ್ರವ ಮೀರಲಮ್ಮದೆ ನಿಂದುದು ವೇದ !
‘ ಓಂ ನಮಃ ಶಿವಾಯ’
ಎಂಬ ಮಂತ್ರವ ಮೀರಲಮ್ಮದೆ ನಿಂದುದು ಶಾಸ್ತ್ರ !
‘ ಓಂ ನಮಃ ಶಿವಾಯ’
ಎಂಬ ಮಂತ್ರವ ಮೀರಲಮ್ಮದೆ ನಿಂದುದು ತರ್ಕ !
ಭಯಂಕರ ಭ್ರಮೆಗೊಂಡಿತ್ತು ಮಂತ್ರ- ತಂತ್ರ!
ಶಿವನಂತುವನರಿಯದೆ ಚಿಂತಿಸುತ್ತಿದ್ದಿತು ಲೋಕ!
ಕೂಡಲ ಸಂಗಮದೇವ ಶ್ವಪಚನ ಮೆರೆದೊಡೆ
ಜಾತಿಭೇದವ ಮಾಡಲಮ್ಮವು !

ಬಸವಣ್ಣನವರು ‘ ಓಂ ನಮಃ ಶಿವಾಯ’ ಮಂತ್ರದ ಮಹಿಮೆಯನ್ನು ವಿವರಿಸುತ್ತ ಈ ಶಿವಷಡಕ್ಷರಿ ಮಂತ್ರಾನುಷ್ಠಾನದ ಬಲದಿಂದ ಶಿವಭಕ್ತರ ಕಾಯವು ‘ ಶಿವಕಾಯ’ ವೇ ಆಗಿರುವುದರಿಂದ ಅಂತಹ ಮಹಿಮಾಪುರುಷರಾದ ಶಿವಭಕ್ತರು ಯಾವುದೇ ಜಾತಿಯಲ್ಲಿ ಹುಟ್ಟಿರಲಿ ಅವರಲ್ಲಿ ಜಾತಿಭೇದ ಮಾಡಬಾರದು ಎನ್ನುತ್ತಾರೆ.ವೇದ- ಉಪನಿಷತ್ತು,ಶಾಸ್ತ್ರ- ಪುರಾಣ,ತರ್ಕ- ತಂತ್ರಗಳು ಶಿವನ ಮಹಿಮೆಯನ್ನು ಅರ್ಥೈಸಿಕೊಳ್ಳಲಾರವು.ಎಲ್ಲದಕ್ಕೂ ಅತೀತನಾಗಿರುವ ಪರಶಿವನು ಭಕ್ತಿಗೆ ಮಾತ್ರಗೋಚರನು; ಯಾವುದಕ್ಕೂ ನಿಲುಕದ ಪರಶಿವನು ತನ್ನ ಭಕ್ತರ ಭಕ್ತಿಗೆ ಒಲಿದು ಅವರ ಕೈವಶನಾಗುವನು. ಕರದ ಇಷ್ಟಲಿಂಗದಲ್ಲಿ ಚುಳುಕಾಗುವ ಪರಶಿವನ ರಹಸ್ಯವೇ ಇದು.ಇಷ್ಟಲಿಂಗದಲ್ಲಿ ಗಟ್ಟಿಗೊಂಡ ಶಿವನಿಷ್ಠೆ ಮತ್ತು ಇಷ್ಟಲಿಂಗದಲ್ಲಿ ಶಿವನಿದ್ದಾನೆ ಎಂಬ ಗಟ್ಟಿಭಾವದಿಂದ ಅದನ್ನು ದೃಷ್ಟಿಯಿಟ್ಟು ನೋಡುವದರಿಂದ ಭಕ್ತನ ಕರಸ್ಥಲವೇ ಕೈಲಾಸವಾಗಿ ಅಲ್ಲಿ ಚುಳುಕುಗೊಳ್ಳುವನು ಅಂದರೆ ಜಾಗೃತಗೊಳ್ಳುವನು ಪರಶಿವನು.ಇಂತಹ ಲಿಂಗಾನುಸಂಧಾನ ನಿರತ ಶಿವಭಕ್ತನ ಕಾಯ ಶಿವಕಾಯವೇ ಆಗುತ್ತದೆ.ಪರಶಿವನು ‘ ಭಕ್ತನ ಕಾಯವೇ ತನ್ನ ಕಾಯ’ ಎಂದು ಘೋಷಿಸಿರುವುದರಿಂದ ಭಕ್ತನು ಶಿವನಿಂದ ಅಭಿನ್ನನು.ಇಷ್ಟಲಿಂಗ ಪೂಜಕರು ಮಾತ್ರವಲ್ಲ ‘ ಓಂ ನಮಃ ಶಿವಾಯ’ ಎನ್ನುವ ಮಹಾಮಂತ್ರವನ್ನು ಜಪಿಸುತ್ತ ಶಿವನನ್ನು ಪೂಜಿಸುವ ಶಿವಭಕ್ತರೆಲ್ಲರಲ್ಲಿಯೂ ಶಿವನು ಪ್ರಕಟಗೊಳ್ಳುವನು.ವೇದ ,ಶಾಸ್ತ್ರ ತರ್ಕ -ತಂತ್ರಗಳ ಅಧ್ಯಯನ,ಚಿಂತನೆ- ಅನುಷ್ಠಾನಗಳಿಂದ ಶಿವನೊಲುಮೆ ಸಾಧ್ಯವಿಲ್ಲ,ಭಕ್ತಿಯಿಂದ ಮಾತ್ರ ಶಿವನೊಲುಮೆ ಸಾಧ್ಯ.

ವೇದವನ್ನೋದಿಯೂ ಅಭೇದದೃಷ್ಟಿ ಅಳವಡದಿದ್ದರೆ ಏನು ಪ್ರಯೋಜನ? ಒಣ ನೀತಿ ನಿರೂಪಣೆಯ ಶಾಸ್ತ್ರಗಳು ಶಿವ ಸಾಕ್ಷಾತ್ಕಾರದ ಸೂತ್ರವನ್ನು ಸಾಧಿಸವು.ಇದೋ ? ಅದೋ? ಹೀಗೋ- ಹಾಗೋ? ಎಂದು ತರ್ಕಿಸುತ್ತ ಕುಳಿತರೆ ತರ್ಕಕ್ಕೆ ಸಿಲುಕುವನೇನು ಪರಶಿವ,ಪರಮಾತ್ಮನು?ಮಂತ್ರ ತಂತ್ರಗಳೆಂಬ ವಿದ್ಯೆಗಳು ಜನರಂಜನೆ ಮತ್ತು ಸ್ವಪ್ರತಿಷ್ಠೆ ಮೆರೆಯಲಲ್ಲದೆ ಯಾವ ತಾಂತ್ರಿಕ ಮಂತ್ರವೂ ಕರೆದು ತರದು ಶಿವನನ್ನು! ಆದ್ದರಿಂದ ಇಂತಹ ವೇದ,ಶಾಸ್ತ್ರ,ತರ್ಕಗಳ ಅಧ್ಯಯನ,ತಾಂತ್ರಿಕ ವಿಧಿ ವಿಧಾನಗಳ ಅನುಷ್ಠಾನದಲ್ಲೇ ಆಯುಷ್ಯ ವ್ಯರ್ಥ ಮಾಡಿಕೊಳ್ಳುವ ಬದಲು ಶಿವಕಾಯರೇ ಆದ ಶರಣರು- ಸಂತರುಗಳನ್ನು ಆಶ್ರಯಿಸಿ ಭವಮುಕ್ತರಾಗಬೇಕು ಎನ್ನುವ ಬಸವಣ್ಣನವರು ಜಾತಿಜಡರಿಗೆ ಪಾಠ ಕಲಿಸುವ ಕಾರಣದಿಂದಲೇ ಶಿವನು ಮಾದಾರ ಚೆನ್ನಯ್ಯನ ಮನೆಯ ಅಂಬಲಿಯನ್ನು ಸವಿದು ಚೆನ್ನಯ್ಯನ ಭಕ್ತಿ ಮೆಯ್ಮೆಯನ್ನು ಜಗತ್ತಿಗೆ ಪ್ರಚುರಪಡಿಸುವನು ಎನ್ನುತ್ತಾರೆ.ವೇದ ಓದಿದವರು ಕಾಣಲಿಲ್ಲ ಶಿವನನ್ನು,ಶಾಸ್ತ್ರಗಳಲ್ಲಿ ಹುಡುಕಿದರೂ ಸಿಗಲಿಲ್ಲ ಶಿವನು,ವರ್ಷಾಗಟ್ಟಲೆ ತರ್ಕಿಸಿದರೂ ಎಟುಕಲಿಲ್ಲ ಶಿವನು,ಜನರನ್ನು ಭಯ ಭ್ರಾಂತರನ್ನಾಗಿಸುವ ತಾಂತ್ರಿಕ ಯಂತ್ರ ಮಂತ್ರಗಳೇ ಶಿವಷಡಕ್ಷರಿ ಮಂತ್ರದೆದುರು ಭಯಂಕರವಾದ ಭಯವನ್ನನುಭವಿಸಿದವು,ಸೋಲೊಪ್ಪಿದವು ಎನ್ನುವ ಬಸವಣ್ಣನವರು ಇದಾವುದನ್ನು ಅರಿಯದ ಕರಿಕಾಲಚೋಳನ ಅರಮನೆಯ ಆನೆ- ಕುದುರೆಗಳಿಗೆ ಹಸಿಹುಲ್ಲು,ಮೇವನ್ನು ಕೊಯ್ದು ತರುತ್ತಿದ್ದ ಮಾದಾರ ಚೆನ್ನಯ್ಯನ ಭಕ್ತಿಗೆ ಒಲಿದು ಆತನ ಅಂಬಲಿಯನ್ನು ಸವಿಯುತ್ತಾನೆ ಎನ್ನುವ ಪ್ರಸಂಗದತ್ತ ನಮ್ಮ ಗಮನ ಸೆಳೆಯುತ್ತಾರೆ.ಅರಸ ಕರಿಕಾಲ ಚೋಳನೂ ಮಹಾನ್ ಶಿವಭಕ್ತನೆ.ಸ್ವಯಂ ಶಿವನಿಗೆ ನಿತ್ಯ ನೈವೇದ್ಯ ಉಣ್ಣಿಸುವ ಭಕ್ತಿಯ ಪರಾಕಾಷ್ಟೆ ಕರಿಕಾಲ ಚೋಳನದು.ಆದರೆ ಅವನಲ್ಲಿ ಅಳವಟ್ಟಿರಲಿಲ್ಲ ಅಭೇದದೃಷ್ಟಿ,ತೆರೆದಿರಲಿಲ್ಲ ಅಂತರಂಗದ ಕಣ್ಣು.ಅರಸ ಸಹಜ ವೃತ್ತಿ,ಆಸ್ಥಾನ ಪರಂಪರೆಯಂತೆ ವೇದ ,ಶಾಸ್ತ್ರ,ತರ್ಕ- ತಂತ್ರಗಳ ಆಚರಣೆಯಲ್ಲಿ ಮಗ್ನನಾಗಿರುತ್ತಾನೆ.ಅರಸ ಕರಿಕಾಲ ಚೋಳನನ್ನು ಎಚ್ಚರಿಸಿ,ಉದ್ಧರಿಸುವ ಕಾರಣದಿಂದ ಮಾದಾರ ಚೆನ್ನಯ್ಯನ ಮನೆಯ ಅಂಬಲಿಯನ್ನು ಸವಿಯುವ ಲೀಲೆ ಎಸಗುತ್ತಾನೆ ಶಿವನು.ಮಾದಾರ ಚೆನ್ನಯ್ಯನಲ್ಲಿ ‘ ಓಂ ನಮಃ ಶಿವಾಯ’ ಎನ್ನುವ ಮಹಾಮಂತ್ರ ಒಂದು ಬಿಟ್ಟರೆ ಮತ್ತೇನೂ ಇರಲಿಲ್ಲ.ಅವನು ವೇದ,ಶಾಸ್ತ್ರ,ಪುರಾಣ,ತರ್ಕ ತಂತ್ರಗಳನ್ನು ಬಲ್ಲವನೂ ಅಲ್ಲ. ‘ ಓಂ ನಮಃ ಶಿವಾಯ’ ಮಂತ್ರವನ್ನು ಅನುಗಾಲವೂ ಜಪಿಸುತ್ತ ಮಾಂಸಪಿಂಡವನ್ನು ಮಂತ್ರಪಿಂಡವನ್ನಾಗಿ ಪರಿವರ್ತಿಸಿಕೊಂಡ ಧೀರಯೋಗಿ; ಪ್ರಾಣತನುವನ್ನು ಪ್ರಣವತನುವನ್ನಾಗಿ ಮಾರ್ಪಡಿಸಿಕೊಂಡಿದ್ದ ಮಹಾಂತ.ಇಷ್ಟಲಿಂಗವಾಗಲಿ ಸ್ಥಾವರ ಲಿಂಗವಾಗಲಿ ಇರದೇ ಇದ್ದರೂ ಸರ್ವಾಂಗಲಿಂಗಿಯಾಗಿದ್ದ ಶಿವಕಾಯ,ಶಿವಚೇತನನಾಗಿದ್ದ ಮಹಾಮಹಿಮ. ಅಂದಿನ ಸಮಾಜ ಮಹಾನ್ ಶಿವಭಕ್ತನನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಯಿತು.ಅಂದು ಮಾತ್ರವಲ್ಲ,ಇಂದಿಗೂ ಬದಲಾಗಿಲ್ಲ ಮಾನವರ ವರ್ತನೆ.ಜಾತಿಯ ಬಲದಿಂದ ಅಳೆಯುತ್ತಾರೆಯೇ ಹೊರತು ಶಿವಜ್ಯೋತಿಯ ಬೆಳಕನ್ನು ಅರಿಯರು,ಆದರಿಸರು.ಮುಂದೆಯೂ ಜಾತಿಮುಕ್ತ,ಮಲಿನ ಮನಸ್ಕರಿಂದ ಹೊರತಾದ ಶಿವ ಸರ್ವೋದಯ ಸಮಾಜ ಅಸ್ತಿತ್ವಕ್ಕೆ ಬರುತ್ತದೆ ಎನ್ನುವ ಖಚಿತತೆ ಇಲ್ಲ.

ಬಸವಣ್ಣನವರು ವೇದ,ಶಾಸ್ತ್ರ,ತರ್ಕ,ತಂತ್ರಗಳ ಪ್ರತಿಷ್ಠೆಯನ್ನು ಅಲ್ಲಗಳೆದು ಶಿವಕಾಯರಾದ ಶಿವಭಕ್ತರ ಮಹಿಮೆಯನ್ನು ಸಾರಲೋಸುಗವೇ ಅನುಭವ ಮಂಟಪವನ್ನು ಕಟ್ಟಿ ಅಲ್ಲಿ ಎಲ್ಲ ಜಾತಿಯ ಶರಣರಿಗೆ ಮುಕ್ತಪ್ರವೇಶ ನೀಡಿದರು. ಹುಟ್ಟಿನಿಂದ ಬ್ರಾಹ್ಮಣರಾಗಿಯೂ ಬ್ರಾಹ್ಮಣ್ಯದ ಶ್ರೇಷ್ಠತೆಯ ಅಹಮಿಕೆಯು ಒಂದಿನಿತೂ ತೋರದಂತೆ ನಡೆದುಕೊಂಡರು.’ ಆನು ಹಾರುವನೆಂದರೆ ನಗದಿರನೆ ಶಿವನು? ನಗಲಾರರೆ ಶರಣರು? ಎನ್ನುವ ಬಸವಣ್ಣನವರು ‘ ಅಪ್ಪನು ಮಾದಾರ ಚೆನ್ನಯ್ಯ,ಬೊಪ್ಪನು ಡೋಹಾರ ಕಕ್ಕಯ್ಯ’ ಎನ್ನುತ್ತಾರೆ.ಎಂತಹ ಉದಾತ್ತ ನಿಲುವು! ಇದು ಬಸವಣ್ಣನೊಬ್ಬರಿಗೆ ಮಾತ್ರ ಸಾಧ್ಯವಾಗಬಹುದಾದ ಶಿವಸಮತೆ,ಉನ್ನತ ನಿಲುವು.ಬಸವಣ್ಣನವರು ವೇದ ಶಾಸ್ತ್ರ ಪುರಾಣಗಳನ್ನು ಪ್ರಮಾಣವೆಂದು ಪರಿಗಣಿಸದೆ ಪುರಾತನರನ್ನು ಶಿವಪಥದ ಆದ್ಯರು,ಪ್ರಮಾಣ ಪುರುಷರು ಎಂದು ಪರಿಗಣಿಸುತ್ತಾರೆ.ಮಾದಾರ ಚೆನ್ನಯ್ಯ,ಡೋಹಾರ ಕಕ್ಕಯ್ಯನವರಲ್ಲಿ ಶಿವನನ್ನು ಕಾಣುವ ಬಸವಣ್ಣನವರು ಜಗತ್ತು ಕಂಡ ಅತ್ಯಪರೂಪದ ದಾರ್ಶನಿಕರು,ವಿರಳಾತಿವಿರಳ ಸಮಾಜ ಸುಧಾರಕರು.ಧರ್ಮ ದೇವರುಗಳು ಕೇವಲ ಮೇಲ್ವರ್ಗದವರ ಸ್ವತ್ತು ಆಗಿದ್ದ ಕಾಲದಲ್ಲಿ ಪರಶಿವನನ್ನು ದಲಿತರ ಕೇರಿಗಳಿಗೆ ಕರೆತಂದ ಶ್ರೇಯಸ್ಸು ಬಸವಣ್ಣನವರದು.ಹೆಣ್ಣು ಗಂಡೆನ್ನದೆ ಸರ್ವರಿಗೂ ಶಿವಪಥವನ್ನು ತೆರೆದಿಟ್ಟ ಪ್ರೇಯಸ್ಸು ಬಸವಣ್ಣನವರದು.ಕರ್ಮದೇಹಿಗಳು,ಪಾಪಾತ್ಮರು ಎಂದು ಜಡಸಮಾಜವು ಹೊರಗಿಟ್ಟ ಜನರಲ್ಲೇ ಮೃಡಮಹಾದೇವನನ್ನು ಕಂಡು ಎಲ್ಲೆಡೆಯೂ ಜಂಗಮತ್ವವು ಪ್ರಕಾಶಗೊಳ್ಳುವಂತೆ ಮಾಡಿದ ಬಸವಣ್ಣನವರಲ್ಲದೆ ಮತ್ತಾರು ಇದ್ದಾರು ಸಮರ್ಥರು ಧರೆಯನ್ನೇ ಹರನ ನೆಲೆಯನ್ನಾಗಿ ಪರಿವರ್ತಿಸಲು? ಜಗತ್ತಿಗೆ ಗುರುವಾಗಲು?

ಮುಕ್ಕಣ್ಣ ಕರಿಗಾರ
ಮೊ: 94808 79501

22.11.2021