ರಾಮಾಯಣ-ಮಹಾಭಾರತಗಳ ಕಾಲ ನಿರ್ಣಯ– ಮಯನ ಪಾತ್ರ ನೀಡುವ ಒಂದು ಸುಳಿವು
ಲೇಖಕರು: ಮುಕ್ಕಣ್ಣ ಕರಿಗಾರ
ರಾಮಾಯಣವನ್ನು ಆದಿಕಾವ್ಯವೆಂದು ಮಹರ್ಷಿ ವಾಲ್ಮೀಕಿಯವರನ್ನು ಆದಿಕವಿಗಳೆಂದು ಪರಿಭಾವಿಸಲಾಗಿದೆ.ಕೆಲವು ವಿದ್ವಾಂಸರು ಮಹಾಭಾರತವು ಮೊದಲು ರಚನೆ ಆಗಿತ್ತೆಂದು ನಂತರ ರಾಮಾಯಣ ರಚನೆ ಆಯಿತೆಂದು ಅಭಿಪ್ರಾಯ ಪಡುತ್ತಾರೆ.ಕೆಲವಂಶಗಳಲ್ಲಿ ಗೊಂದಲವಿದೆ.ಇಂದು ( 20.11.2021) ಮಧ್ಯಾಹ್ನ ನಾನು ಬರೆದು ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದ ರಾಮಾಯಣದ ‘ ಸ್ವಯಂಪ್ರಭೆ’ ಎನ್ನುವ ವೈಚಾರಿಕ ಲೇಖನವನ್ನು ಬಹಳಷ್ಟು ಜನರು ಮೆಚ್ಚಿ,ಪ್ರತಿಕ್ರಿಯಿಸಿದ್ದಾರೆ.ಒಂದು ಸಂಗತಿ ನನ್ನ ಕುತೂಹಲ ಸೆಳೆಯಿತು.ಮಹಾಭಾರತದಲ್ಲಿಯೂ ಮಯ ಇದ್ದಾನೆ.ಮಹಾಭಾರತದ ಆ ಭಾಗವನ್ನು ಒಂದಿಷ್ಟು ಓದೋಣ ಎಂದು ಪ್ರೊ. ಎಲ್ ಎಸ್ ಶೇಷಗಿರಿರಾವ್ ಅವರು ಇಂಗ್ಲೀಷಿನಲ್ಲಿ ಬರೆದಿದ್ದ Sri Mahabharat volume 1 ಕೃತಿಯನ್ನು ಕಣ್ಣಾಡಿಸಿದೆ ( ಸದ್ಯ ನಾನು ಯಾದಗಿರಿಯಲ್ಲಿದ್ದು ಇಲ್ಲಿನ ನನ್ನ ಗ್ರಂಥಭಂಡಾರದಲ್ಲಿ ಸಂಸ್ಕೃತದ ಮೂಲ ಮಹಾಭಾರತ ಇಲ್ಲ; ಗಬ್ಬೂರಿನ ಮಹಾಶೈವ ಧರ್ಮಪೀಠದ ಗ್ರಂಥಾಲಯದಲ್ಲಿದೆ) ಮಹಾಭಾರತದ ಆದಿಪರ್ವದ ಕೊನೆಯಲ್ಲಿ ಖಾಂಡವವನವನ್ನು ಅಗ್ನಿಗೆ ಆಹುತಿನೀಡುವ ಸಂದರ್ಭದಲ್ಲಿ ಮತ್ತು ಸಭಾಪರ್ವದ ಮೊದಲಲ್ಲಿ ಮಯ ಕಾಣಿಸಿಕೊಳ್ಳುತ್ತಾನೆ.ಇಲ್ಲಿಯೂ ಕೂಡ ಮಯನು ರಾಕ್ಷಸನೆ,ಅಸುರರ ವಾಸ್ತುಶಿಲ್ಪಿಯೆ.ಖಾಂಡವವನದಹನ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲೆತ್ನಿಸಿ ಕೃಷ್ಣನ ಬಾಣದಿಂದ ಹತನಾಗುತ್ತಿದ್ದ ಸಂದರ್ಭದಲ್ಲಿ ಅರ್ಜುನನ ಮೊರೆಹೊಕ್ಕು ಬದುಕಿ ಕೃಷ್ಣಾರ್ಜುನರಿಬ್ಬರ ಸ್ನೇಹ ಸಂಪಾದಿಸುವನು.
ಸಭಾಪರ್ವದ ಆರಂಭದಲ್ಲೇ ಮಯನ ಅದ್ಭುತ ಸೃಷ್ಟಿಯ ಅಧ್ಯಾಯವಿದ್ದು ಕೃಷ್ಣನ ಕೋಪದಿಂದ ಹಾಗೂ ಅಗ್ನಿಯ ಆಕ್ರಮಣದಿಂದ ನನ್ನನ್ನು ಪಾರು ಮಾಡಿದ್ದಿ.ಇದಕ್ಕೆ ನಾನೇನು ಪ್ರತ್ಯುಪಕಾರ ಮಾಡಬೇಕು ಎಂದು ಮಯನು ಅರ್ಜುನನ್ನು ಪ್ರಶ್ನಿಸುವನು.ಅರ್ಜುನನು ತನಗೇನೂಬೇಡವೆಂದು ಕೃಷ್ಣನಿಗೆ ಏನಾದರೂ ಕೊಡುಗೆ ನೀಡು ಎನ್ನುವನು.ಕೃಷ್ಣನೂ ತನಗಾಗಿ ಏನನ್ನೂ ಕೇಳದೆ ಅದ್ಭುತ ವಾಸ್ತುಶಿಲ್ಪಿಯಾದ ನೀನು
“ಯುಧಿಷ್ಠಿರನಿಗೆ ಒಂದು ಸಭಾಂಗಣವನ್ನು ಕಟ್ಟಿಕೊಡು.ಅದು ಭವ್ಯಾಲಂಕೃತವಾದ,ಸರಿಸಾಟಿಯಿಲ್ಲದಂತಹ ಸಭಾಂಗಣವಾಗಿರಬೇಕು” ಎನ್ನುವನು.
ಮೂವರು ಇಂದ್ರಪ್ರಸ್ಥಕ್ಕೆ ಹಿಂದಿರುಗುವರು.ಕೃಷ್ಣನು ಮಯನನ್ನು ಯುಧಿಷ್ಠಿರನಿಗೆ ಪರಿಚಯಿಸಿ ಅವನನ್ನು ಕರೆತಂದ ಕಾರಣವನ್ನು ವಿವರಿಸಿದ.ಕೃಷ್ಣ ದ್ವಾರಕೆಗೆ ಹಿಂದಿರುಗಿದ ಬಳಿಕ ಮಯನು ಯುಧಿಷ್ಠಿರನಿಗಾಗಿ ರಾಜಯೋಗ್ಯವಾದ ಅರಮನೆ ಮತ್ತು ರಾಜನ ಆಸ್ಥಾನ ಸಭಾಂಗಣಕ್ಕೆ ಅಡಿಪಾಯ ಹಾಕಿದ.ಅನಂತರ ಸ್ವಲ್ಪ ಕಾಲದ ವಾಸ್ತವ್ಯಕ್ಕಾಗಿ ಹಿಮಾಲಯ ಪ್ರದೇಶಕ್ಕೆ ತೆರಳಿದ.ಅವನು ಬೆಲೆಬಾಳುವ ಶಿಲೆಗಳು,ನೂರುಗದೆಗಳಿಗೆ ಸಮನಾದ ಒಂದುಗದೆ ಮತ್ತು ವರುಣದೇವನ ಶಂಖದೊಂದಿಗೆ ಹಿಂದಿರುಗಿದ.ಗದೆಯನ್ನು ಭೀಮನಿಗೂ ಶಂಖವನ್ನು ಅರ್ಜುನನಿಗೂ ಉಡುಗೊರೆಯಾಗಿ ನೀಡಿದ.ನಂತರ ಭವ್ಯಾದ್ಭುತವೂ ವಿಸ್ಮಯಕಾರಿಯೂ ಆದ ಅರಮನೆ ಮತ್ತು ಸಭಾಭವನ ನಿರ್ಮಿಸಿದ ಯುಧಿಷ್ಠಿರನಿಗಾಗಿ.ಶುಭ ಮುಹೂರ್ತದಲ್ಲಿ ಯುಧಿಷ್ಠಿರನು ಋಷಿ ಮುನಿಗಳ ಸಹಿತನಾಗಿ ಗೃಹಪ್ರವೇಶ ಸಮಾರಂಭ ಏರ್ಪಡಿಸಿ,ಅರಮನೆಯನ್ನು ಪ್ರವೇಶಿಸಿದ.ನಾರದರೂ ಆಗಮಿಸುತ್ತಾರೆ ಆ ಸಮಯಕ್ಕೆ.
ಮಹಾಭಾರತದ ಆದಿಪರ್ವದ ಕೊನೆಯಲ್ಲಿ ಸಭಾಪರ್ವದ ಆದಿಯಲ್ಲಿ ಇದ್ದಂತೆ ರಾಕ್ಷಸರ ವಾಸ್ತುಶಿಲ್ಪಿಯಾದ ಮಯನು ಜೀವಂತ ಇದ್ದಾನೆ.ಆದರೆ ರಾಮಾಯಣದ ಕಿಷ್ಕಿಂಧಾ ಕಾಂಡದ ಸರ್ಗ ೫೦ ರಿಂದ ಸರ್ಗ ೫೩ ರವರೆಗೆ ಪ್ರಸ್ತಾಪಿಸಲ್ಪಡುವ ಸ್ವಯಂಪ್ರಭೆಯ ವೃತ್ತಾಂತದಲ್ಲಿ ಮಯನು ಹೇಮೆ ಎಂಬ ಅಪ್ಸರೆಗೆ ಮನಸೋತು ಇಂದ್ರನ ವಜ್ರಾಯುಧದಿಂದ ಹತನಾಗಿದ್ದಾನೆ.ಬ್ರಹ್ಮನಿಂದ ಹೇಮೆಗೆ ಬಳುವಳಿಯಾಗಿ ಬಂದ ಋಕ್ಷಬಿಲ ಮತ್ತು ಕಾಂಚನವನವನ್ನು ಸ್ವಯಂಪ್ರಭೆಯು ಕಾಯ್ದುಕೊಂಡಿದ್ದಾಳೆ.ರಾಮಾಯಣ ಮತ್ತು ಮಹಾಭಾರತಗಳೆರಡರಲ್ಲಿಯೂ ಬರುವ ಮಯನು ಒಬ್ಬನೇ ಆಗಿದ್ದು ಅವನು ರಾಕ್ಷಸ ಮತ್ತು ರಾಕ್ಷಸರ ವಾಸ್ತುಶಿಲ್ಪಿ.ಮಹಾಭಾರತದಲ್ಲಿ ಬದುಕಿದ್ದು ಕೃಷ್ಣಾರ್ಜುನರ ಸ್ನೇಹ ಸಂಪಾದಿಸಿ ಯುಧಿಷ್ಠಿರನಿಗೆ ಭವ್ಯ ಅರಮನೆ ಹಾಗೂ ಸಭಾಭವನ ನಿರ್ಮಿಸಿಕೊಡುತ್ತಾನೆ.ಗೃಹಪ್ರವೇಶದ ಸಮಯದಲ್ಲಿ ಉಪಸ್ಥಿತನಿರುತ್ತಾನೆ.ಆದರೆ ರಾಮಾಯಣದ ಕಿಷ್ಕಿಂಧಾ ಕಾಂಡದಲ್ಲಿ ಮಯ ಇಂದ್ರನಿಂದ ಹತನಾಗಿದ್ದಾನೆ.
ರಾಮಾಯಣ ಮತ್ತು ಮಹಾಭಾರತಗಳಲ್ಲಿ ಬರುವ ಮಯನ ವೃತ್ತಾಂತವನ್ನು ಗಮನಿಸಿದರೆ ಮಹಾಭಾರತವು ರಾಮಾಯಣಕ್ಕಿಂತ ಪೂರ್ವದ ರಚನೆ ಎಂದು ಊಹಿಸಲವಕಾಶವಿದೆ.
ಆದರೆ ಇದೊಂದೇ ಪ್ರಸಂಗದಿಂದ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ.ರಾಮಾಯಣ ಮತ್ತು ಮಹಾಭಾರತಗಳೆರಡನ್ನೂ ಬದಿಯಲ್ಲಿಟ್ಟುಕೊಂಡು ಪರಾಮರ್ಶಿಸಬೇಕಾಗುತ್ತದೆ.ಕುತೂಹಲದ ಓದಿನ ಸಂದರ್ಭದಲ್ಲಿ ಸಿಕ್ಕ ಸುಳಿವು ಒಂದನ್ನಷ್ಟೇ ನೀಡಿದ್ದೇನೆ ನಾನು.

ಮೊ: 94808 79501
20.11.2021