ವೈಚಾರಿಕ ಲೇಖನ: ಸ್ವಯಂಪ್ರಭೆ- ಮುಕ್ಕಣ್ಣ ಕರಿಗಾರ

ಸ್ವಯಂಪ್ರಭೆ

ಲೇಖಕರು: ಮುಕ್ಕಣ್ಣ ಕರಿಗಾರ

ಮಹರ್ಷಿ ವಾಲ್ಮೀಕಿಯವರು ರಾಮಾಯಣವನ್ನು ರಚಿಸಿದ್ದು ಮಾನವೀಯ ಮೌಲ್ಯಗಳ ಪ್ರತಿಪಾದನೆಗೆ.ಅವರು ರಾಮನೆಂಬ ಸದ್ಗುಣಶೀಲನಾದ ‘ ಮರ್ಯಾದಾ ಪುರುಷೋತ್ತಮ’ ನನ್ನು ನಾಯಕನನ್ನಾಗಿ ಮಾಡಿಕೊಂಡು ಲೋಕಕ್ಕೆ ಒಳಿತು- ಕೆಡುಕು,ಧರ್ಮ- ಅಧರ್ಮಗಳ ಸಂದೇಶ ನೀಡಿದ್ದಾರೆ.ಒಳಿತೇ ಗೆಲ್ಲಬೇಕು,ಧರ್ಮವು ಅಧರ್ಮದ ವಿರುದ್ಧ ವಿಜಯ ಸಾಧಿಸಬೇಕು ಎನ್ನುವ ಸಂಕಲ್ಪದಿಂದ ವಾಲ್ಮೀಕಿಯವರು ಧರ್ಮದ ಪರವಾಗಿದ್ದ ರಾಮನನ್ನು ಗೆಲ್ಲಿಸಿ ತಪಸ್ವಿಯಾಗಿಯೂ ಪರನಾರಿ ಅಪಹರಣದ ಪಾಪಕೃತ್ಯದಿಂದ ಕಲುಷಿತನಾದ ರಾವಣನನ್ನು ಸೋಲಿಸಿ,ಸಂಹರಿಸುವ ಕಥೆ ರಚಿಸುವ ಮೂಲಕ ಧರ್ಮ ಮಾರ್ಗದಲ್ಲಿ ನಡೆದರೆ ಮಾತ್ರ ಸುಖ ಎನ್ನುವ ಸಂದೇಶವನ್ನು ಲೋಕಕ್ಕೆ ಸಾರಿದ್ದಾರೆ.ಧರ್ಮಸಂದೇಶವನ್ನು ಸಾರುವ ರಾಮಾಯಣದಲ್ಲಿ ರಾಮನು ಮುಖ್ಯಪಾತ್ರ,ಆತನ ಜೊತೆಗಿರುವ ಲಕ್ಷ್ಮಣ,ಸೀತೆಯರ ಜೊತೆ ಹನುಮಂತ ಅತ್ತ ಲಂಕೆಯಲ್ಲಿ ರಾವಣ,ವಿಭೀಷಣ,ಕುಂಭಕರ್ಣ,ಇಂದ್ರಜಿತ್ ಇಂತಹ ಕೆಲವೇ ಪಾತ್ರಗಳು ರಾಮಾಯಣದಲ್ಲಿ ಎದ್ದು ಕಾಣಿಸುತ್ತವೆ.ಆದರೆ ವಾಲ್ಮೀಕಿಯವರು ರಾಮಾಯಣದಲ್ಲಿ ಒಂದಕ್ಕೊಂದು ಪೂರಕ ಪಾತ್ರಗಳನ್ನು ರಚಿಸುತ್ತ,ಪೂರಕ ಪ್ರಸಂಗಗಳನ್ನು ಹೆಣೆಯುತ್ತ,ಕಥೆಯ ಬೆಳವಣಿಗೆಗೆ ಉಚಿತ ಸಂದರ್ಭಗಳನ್ನು ಒದಗಿಸುತ್ತ ಆ ಕಾಲದಲ್ಲಿದ್ದ ಮಹೋನ್ನತ ವ್ಯಕ್ತಿತ್ವಗಳನ್ನು ಸಹ ಪರಿಚಯಿಸಿದ್ದಾರೆ.ಅಂತಹ ಕೆಲವು ಪಾತ್ರಗಳು ರಾಮಾಯಣದ ಓದುಗರ ಗಮನಕ್ಕೆ ಬರುವುದೇ ಇಲ್ಲ.ಸೀತೆಯ ಕಾರಣವಾಗಿ ಘಟಿಸುವ ರಾಮಾಯಣ ರಾಮ ರಾವಣರ ಯುದ್ಧ,ರಾಮನ ವಿಜಯ ಎಂದೇ ಭಾವಿಸುತ್ತ ರಾಮಾಯಣದ ಹಲವು ಉಜ್ವಲ ವ್ಯಕ್ತಿತ್ವಗಳತ್ತ ಲಕ್ಷ್ಯ ವಹಿಸುವುದಿಲ್ಲ.ಓದುಗರ ಗಮನಕ್ಕೆ ಬಾರದ ಅಂತಹ ಹಲವು ವ್ಯಕ್ತಿತ್ವಗಳಲ್ಲೊಂದು ಸ್ವಯಂಪ್ರಭೆಯ ಉಜ್ವಲ ವ್ಯಕ್ತಿತ್ವ.ರಾಮಾಯಣದಲ್ಲಿ ಸ್ವಯಂಪ್ರಭೆ ಎನ್ನುವ ತಾಪಸೋತ್ತಮಳೊಬ್ಬಳಿದ್ದಳು ಎನ್ನುವುದು ಬಹುಜನರ ಗಮನಕ್ಕೆ ಬಂದೇ ಇಲ್ಲ!

ಕಿಷ್ಕಿಂಧಾ ಕಾಂಡದ ಸರ್ಗ ೫೦ ರಿಂದ ಸರ್ಗ ೫೩ ರ ಅರ್ಧದವರೆಗೆ ಮೂರುವರೆ ಸರ್ಗಗಳ ಪರಿಮಿತಿಯಲ್ಲಿಯೇ ಆದರೂ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ವಾಲ್ಮೀಕಿಯವರು ಸ್ವಯಂಪ್ರಭೆಯ ಪಾತ್ರವನ್ನು.ಸೀತೆಯನ್ನು ಹುಡುಕುತ್ತ ಸುಗ್ರೀವನ ಆಜ್ಞೆಯಂತೆ ದಕ್ಷಿಣದಿಕ್ಕಿನಲ್ಲಿ ಬಂದಿದ್ದ ಅಂಗದ ತಾರ ಹನುಮಂತರ ನೇತೃತ್ವದ ವಾನರಸೇನೆಯು ವಿಂಧ್ಯಪರ್ವತದ ಗಿರಿಗುಹೆ ಕಂದರಗಳನ್ನೆಲ್ಲ ಹುಡುಕಿಯೂ ಸೀತೆಯನ್ನು ಕಾಣದೆ ದುಃಖಿತರಾಗುತ್ತಾರೆ.ಅಷ್ಟು ವೇಳೆಗೆ ಸುಗ್ರೀವನು ಕೊಟ್ಟಿದ್ದ ಒಂದು ತಿಂಗಳ ಗಡುವು ಮುಗಿದುಹೋಗುತ್ತದೆ.ಹಸಿವು ಬಾಯಾರಿಕೆಗಳಿಂದ ಬಳಲುತ್ತಿದ್ದ ವಾನರಪಡೆಗೆ ಜೀವ ಉಳಿಸಿಕೊಳ್ಳುವುದೇ ಕಷ್ಟದಾಯಕವಾಗಿ ಪರಿಣಮಿಸುತ್ತದೆ.ಹನುಮಂತನ ಮುಂದಾಳತ್ವದ ವಾನರಪಡೆಯು ಅಲ್ಲಿ ಒಂದು ವಿಸ್ತಾರವಾದ ಬಿಲವನ್ನು ಕಾಣುತ್ತಾರೆ.ಲತಾವೃಕ್ಷಗಳಿಂದ ಆವರಿಸಲ್ಪಟ್ಟ ದಾನವನೊಬ್ಬನಿಂದ ರಕ್ಷಿತವಾಗಿದ್ದ ಋಕ್ಷಬಿಲವೆಂಬ ದುರ್ಗಮವಾದ ಮಹಾಬಿಲ ಅದು.ಆ ಬಿಲದಿಂದ ಕ್ರೌಂಚಪಕ್ಷಿಗಳೂ ನೀರಿನಿಂದ ತೊಯ್ದಿದ್ದ ಹಂಸಪಕ್ಷಿಗಳೂ ಸಾರಸಪಕ್ಷಿಗಳೂ ಕಮಲಪುಷ್ಪಗಳ ಧೂಳಿನಿಂದ ಕೆಂಪಾದ ಅವಯವಗಳುಳ್ಳ ಚಕ್ರವಾಕಗಳೂ ಹೊರಕ್ಕೆ ಬರುತ್ತಿದ್ದವು.ಸುಗಂಧಭರಿತವಾಗಿ ದುಷ್ಪ್ರವೇಶ್ಯವಾಗಿದ್ದ ಆ ಬಿಲವನ್ನು ಕಂಡ ವಾನರರು ಚಂಚಲಚಿತ್ತರಾದರು.ಹನುಮಂತನು ವಾನರರನ್ನು ಕುರಿತು ‘ ಈ ಬಿಲದಿಂದ ಹಂಸ ಸಾರಸವಾದಿ ಪಕ್ಷಿಗಳು ಹೊರಬರುತ್ತಿರುವುದನ್ನು ನೋಡಿದರೆ ಇಲ್ಲಿ ಬಾವಿಯೋ ಕೊಳವೋ ಇರುವುದು ಖಂಡಿತ’ ಆ ಕಪಿವೀರರುಗಳೆಲ್ಲರೂ ಸಿಂಹಗಳೂ ಮೃಗಪಕ್ಷಿಗಳೂ ಹೊರಬರುತ್ತಿದ್ದ ಸೂರ್ಯಚಂದ್ರರ ರಶ್ಮಿ ಇಲ್ಲದೆ ಅಂಧಕಾರಮಯವಾಗಿದ್ದ ಆ ಬಿಲವನ್ನು ಪ್ರವೇಶಿಸಿದರು.ಪ್ರವೇಶಿಸಿದ್ದೇ ತಡ ಅವರ ಕಣ್ಣುಗಳು ಕಾಣದಾದವು.ಅವರ ಪರಾಕ್ರಮ ತೇಜಸ್ಸುಗಳು ನಿರುಪಯುಕ್ತವಾದವು.ಆ ಕತ್ತಲಲ್ಲಿ ಕಪಿವೀರರುಗಳು ಒಬ್ಬರನ್ನೊಬ್ಬರು ತಬ್ಬಿಕೊಂಡು ಮುಂದೆಸಾಗಿದರು.ಹಸಿವು ಬಾಯಾರಿಕೆಯಿಂದ ಬಳಲಿ ಕಂಗೆಟ್ಟಿದ್ದ ಕಪಿವೀರರುಗಳು ನೀರಿರಬಹುದೆಂದೆಣಿಸಿ ಕತ್ತಲೆಯ ಕೂಪಕ್ಕೆ ಬಿದ್ದಂತೆ ನಿತ್ರಾಣಹೊಂದಿ ಪರಸ್ಪರರನ್ನು ತಬ್ಬಿಕೊಂಡು ನಡೆದರು .ಸ್ವಲ್ಪ ಹೊತ್ತು ನಡೆದಾದ ಮೇಲೆ ಅಲ್ಲಿ ಒಂದು ಪ್ರಕಾಶಮಾನವಾದ ವನವನ್ನು ಕಂಡರು.ಅಗ್ನಿಕಾಂತಿಯುಳ್ಳ ಸುವರ್ಣಮಯ ವೃಕ್ಷಗಳು,ನಾನಾ ವರ್ಣದ ಕೊಳಗಳೂ ಸರೋವರಗಳಿಂದಲೂ ಮೀನುಗಳೂ ಆಮೆಗಳಿಂದಲೂ ಕೂಡಿದ್ದ ಶಾಂತವಾದ ಸರೋವರಗಳನ್ನೂ ಕಂಡರು.ಬಗೆಬಗೆಯ ಫಲ ಪುಷ್ಪಗಳು,ಹಲವು ಬಗೆಯ ಹಣ್ಣಿನ ಮರಗಳು,ಭವ್ಯ ಸೌಧಗಳು,ಬೆಲೆಬಾಳುವ ಪಾನೀಯಗಳು,ಬೆಳ್ಳಿ, ಕಂಚಿನ ಪಾತ್ರೆಗಳು ರಾಶಿರಾಶಿಯಾಗಿದ್ದವು ಅಲ್ಲಿ.ಬೆಲೆಬಾಳುವ ವಸ್ತ್ರಗಳ ರಾಶಿಗಳು,ಮನೋಹರವಾದ ಕಂಬಳಿಗಳ ಹಾಗೂ ಕೃಷ್ಣಾಜಿನಗಳ ರಾಶಿಗಳೂ ಅಲ್ಲಿದ್ದವು.ಅಲ್ಲಿಯೇ ಸ್ವಲ್ಪ ದೂರದಲ್ಲಿ ಒಬ್ಬ ಸ್ತ್ರೀ ಇರುವುದನ್ನು ನೋಡಿದರು.ಕೃಷ್ಣಾಜಿನವುಟ್ಟು ನಿಯತವಾದ ಆಹಾರವನ್ನು ಸ್ವೀಕರಿಸುತ್ತ ತನ್ನ ತೇಜಸ್ಸಿನಿಂದ ಉರಿಯುವಂತಿದ್ದ ತಾಪಸಿಯನ್ನು ಕಂಡು ಕಪಿಗಳು ಮೂಕವಿಸ್ಮಿತರಾದರು.ಹನುಮಂತನು ಆಕೆಯನ್ನು ಪ್ರಶ್ನಿಸಿ ಉತ್ತರ ಪಡೆಯುವನು.

ತೇಜಃಪುಂಜಳಾಗಿದ್ದ ಆ ತಾಪಸೋತ್ತಮಳೇ ಸ್ವಯಂ ಪ್ರಭೆಯು.ಹೇಮೆ ಎಂಬ ಅಪ್ಸರೆಗೆ ಮೇರುಸಾವರ್ಣಿಗೆ ಹುಟ್ಟಿದ ಮಗಳಾದ ಆಕೆ ಮಯನೆಂಬ ರಾಕ್ಷಸನಿಂದ ನಿರ್ಮಿತವಾಗಿದ್ದ ಆ ಭವ್ಯಭವನವನ್ನು ಕಾಯ್ದುಕೊಂಡಿದ್ದಳು.ಮಹಾ ತೇಜಸ್ವಿಯೂ ಮಾಯಾವಿಯೂ ಆಗಿದ್ದ ದಾನವಶ್ರೇಷ್ಠ ಮಯನು ಆ ಕಾಂಚನವನವನ್ನು ನಿರ್ಮಿಸಿದ್ದನು.ಮಯನು ದಾನವಶ್ರೇಷ್ಠರೆಲ್ಲರಿಗೂ ಶಿಲ್ಪಿಯಾಗಿದ್ದವನು.ಮಹಾರಣ್ಯದಲ್ಲಿ ಒಂದು ಸಾವಿರ ವರ್ಷ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಸಕಲಶಿಲ್ಪ ಶಾಸ್ತ್ರವೂ ತನ್ನ ಸ್ವತ್ತಾಗುವಂತೆ ಬ್ರಹ್ಮನಿಂದ ವರಪಡೆದಿದ್ದ ಬಲಾಢ್ಯನಾಗಿದ್ದ ಮಯನು ಈ ವನವನ್ನು ನಿರ್ಮಿಸಿಕೊಂಡು ಕೆಲವು ವರ್ಷಗಳ ಕಾಲ ಆನಂದದಿಂದ ಇದ್ದನು.ಅಪ್ಸರೆಯಾದ ಹೇಮೆಯಲ್ಲಿ ಅನುರಕ್ತನಾದ್ದರಿಂದ ಇಂದ್ರನು ತನ್ನ ವಜ್ರಾಯುಧದಿಂದ ಅವನನ್ನು ಸಂಹರಿಸಿದನು.ಈ ದಿವ್ಯವನವನ್ನು,ಕಾಂಚನಮಯ ಭವನವನ್ನು ಬ್ರಹ್ಮನು ಹೇಮೆಗೆ ಕೊಟ್ಟನು.ಸ್ವಯಂಪ್ರಭೆಯು ಈಗ ಆ ದಿವ್ಯವನದೊಂದಿಗಿನ ಈ ಕಾಂಚನಮಯ ಭವನವನ್ನು ಕಾಪಾಡಿಕೊಂಡಿದ್ದಳು. ಇದಿಷ್ಟು ನಮಗೆ ಸಿಗುವ ಸ್ವಯಂಪ್ರಭೆಯ ವ್ಯಕ್ತಿಚಿತ್ರಣ.

ಸ್ವಯಂಪ್ರಭೆಯು ತಾಪಸೋತ್ತಮಳಾಗಿದ್ದಳು.ತನ್ನ ತಪೋಸಾಮರ್ಥ್ಯದಿಂದ ಹಲವು ಅಪೂರ್ವ ಸಿದ್ಧಿಗಳನ್ನು ಪಡೆದಿದ್ದಳು.ಗಾಡಾಂಧಕಾರದಿಂದಾವೃತ್ತವಾಗಿದ್ದ ಋಕ್ಷಬಿಲವೆಂಬ ಆ ಮಹಾಬಿಲವನ್ನು ತನ್ನ ತಪೋಸಾಮರ್ಥ್ಯದಿಂದಲೇ ಬೆಳಗುತ್ತಿದ್ದಳು .ಸ್ವಯಂಪ್ರಭಾ ಎನ್ನುವ ಅವಳ ಹೆಸರೇ ಇದನ್ನು ಸೂಚಿಸುತ್ತದೆ.ಆ ತಾಪಸೋಮತ್ತಳ ಅನುಮತಿ ಪಡೆದ ಹನುಮಂತನು ಕಪಿಗಳಸಮೇತನಾಗಿ ಆ ವನದ ಹಣ್ಣುಗಳನ್ನು ತಿಂದು ತಿಳಿಗೊಳದ ನೀರನ್ನು ಕುಡಿದು ಬಾಯಾರಿಕೆ ಹಸಿವೆಗಳಿಂದ ಮುಕ್ತನಾದ ಬಳಿಕ ತಾವು ಯಾರು,ಯಾವ ಉದ್ದೇಶಕ್ಕೆ ಬಂದಿದ್ದೇವೆ,ಈ ಬಿಲವನ್ನು ಹೇಗೆ ಪ್ರವೇಶಿಸಿದೆವು ಎಂಬುದನ್ನೆಲ್ಲ ಹೇಳಿದ ಬಳಿಕ ಹಸಿವು ತೃಷೆಗಳಿಂದ ಬಳಲುತ್ತಿದ್ದ ತಮ್ಮೆಲ್ಲರ ಹಸಿವನ್ನಡಗಿಸಿದ ಪುಣ್ಯಕಾರ್ಯಕ್ಕೆ ಯಾವ ಪ್ರತ್ಯುಪಕಾರ ಮಾಡಬೇಕು ಎಂದು ಪ್ರಶ್ನಿಸಿದಾಗ ಸ್ವಯಂಪ್ರಭೆಯು ನೀಡುವ ಉತ್ತರ : “ಬಲಶಾಲಿಗಳಾದ ವಾನರರಾದ ನಿಮ್ಮೆಲ್ಲರನ್ನು ಕುರಿತು ಬಹಳ ಸಂತೋಷಗೊಂಡಿದ್ದೇನೆ.ನನ್ನ ಧರ್ಮದಲ್ಲಿ ಇದ್ದುಕೊಂಡಿರುವ ನನಗೆ ಯಾವನೊಬ್ಬನೂ ಮಾಡಬೇಕಾದುದೇನೂ ಇಲ್ಲ”.

ಇಷ್ಟಲ್ಲದೆ ವಾನರರನ್ನು ಸ್ವಯಂಪ್ರಭೆಯೇ ತನ್ನ ತಪೋಸಾಮರ್ಥ್ಯದಿಂದ ಬಿಲದಿಂದ ಹೊರತರುತ್ತಾಳೆ.ಹನುಮಂತನು ತಾವು ಮಾಡಬೇಕಾದ ಮಹತ್ಕಾರ್ಯವಿರುವುದರಿಂದ ನಮ್ಮನ್ನು ಈ ಬಿಲದಿಂದ ಹೊರದಾಟಿಸು’ ಎಂದು ಕೇಳಿದಾಗ ಸ್ವಯಂಪ್ರಭೆಯು ಹೇಳುವ ಮಾತು ” ಇದನ್ನು ಹೊಕ್ಕವನು ಜೀವದಿಂದ ಹಿಂತಿರುಗುವುದು ಕಷ್ಟಸಾಧ್ಯವೆಂದು ತಿಳಿಯುತ್ತೇನೆ.ನಿಯಮದಿಂದ ಸಂಪಾದಿಸಿದ ತಪಸ್ಸಿನ ಪ್ರಭಾವದಿಂದ ವಾನರರೆಲ್ಲರನ್ನೂ ಈ ಬಿಲದಿಂದ ಆಚೆಗೆ ಕಳಿಸುವೆನು” ಎಂದು ಹೇಳುತ್ತಾ ವಾನರರಿಗೆ ” ಎಲೈ ವಾನರಶ್ರೇಷ್ಠರೇ,ಎಲ್ಲರೂ ಕಣ್ಣುಮುಚ್ಚಿಕೊಳ್ಳಿ.ತೆರೆದಕಣ್ಣುಗಳಿಂದ ಹೊರಗೆ ಹೋಗಲು ಸಾಧ್ಯವಿಲ್ಲ” ಎಂದಳು.ತನ್ನ ಮಾತಿನಂತೆ ಕಣ್ಣುಗಳನ್ನು ಮುಚ್ಚಿಕೊಂಡ ವಾನರರನ್ನು ಸ್ವಯಂಪ್ರಭೆಯು ನಿಮಿಷಮಾತ್ರದಲ್ಲಿ ಬಿಲದಿಂದ ದಾಟಿಸಿದಳು.ನಂತರ ಅವರಿಗೆ ಶುಭವನ್ನು ಹಾರೈಸಿ,ತನ್ನ ಮನೆಯನ್ನು ಸೇರಲೆಳಸಿ ಪುನಃ ಬಿಲದೊಳಗಣ ತನ್ನ ಸಂಪದ್ಯುಕ್ತವಾದ ಬಿಲವನ್ನು ಪ್ರವೇಶಿಸಿದಳು.ಇದು ಸ್ವಯಂಪ್ರಭೆಯ ವ್ಯಕ್ತಿತ್ವ,ಮಹಿಮೆ.ವಾಲ್ಮೀಕಿಯವರು ಆಕೆಯನ್ನು ಬಣ್ಣಿಸಿದ್ದು ‘ ಧರ್ಮಚಾರಿಣಿಯೂ ಸಕಲ ಪ್ರಾಣಿಗಳ ಹಿತವನ್ನು ಕೋರುವವಳೂ ಆದ ತಾಪಸಿ’ ಎಂದೂ ‘ ಎಲ್ಲವನ್ನೂ ಬಲ್ಲವಳಾದ ಸ್ವಯಂಪ್ರಭೆ’ ಎಂದು.

ಸ್ವಯಂಪ್ರಭೆಯ ಈ ವ್ಯಕ್ತಿತ್ವ ವಿಶೇಷತೆಯನ್ನು ಗಮನಿಸಿದಾಗ ಅವಳು ತಪೋಸಾಧನೆಯಿಂದ ಅದ್ಭುತ ಸಿದ್ಧಿಗಳನ್ನು ಪಡೆದಿದ್ದ ತಾಪಸೋತ್ತಮಳು ಮತ್ತು ಯಾರದೆ ಹಂಗಿಲ್ಲದ ಸ್ವತಂತ್ರ ಧರ್ಮಚಾರಿಣಿಯಾಗಿದ್ದಳು ಎನ್ನುವುದು ವಿದಿತವಾಗುತ್ತದೆ.ಹನುಮಂತನು ತಾವುಗಳು ಸುಗ್ರೀವನ ಆಜ್ಞೆಯಂತೆ ರಾಮ ಕಾರ್ಯಾರ್ಥಿಯಾಗಿ ಸೀತಾನ್ವೇಷಣೆಗಾಗಿ ಹೊರಟು ,ಸೀತೆಯನ್ನು ಕಾಣದೆ ಅನುಭವಿಸಿದ ಪರಿಭವವನ್ನೆಲ್ಲ ವಿವರಿಸಿದಾಗಲೂ ಸ್ವಯಂಪ್ರಭೆಯು ಅವರಿಗೆ ಹಣ್ಣುಹಂಪಲಗಳನ್ನು ತಿಂದು ತಿಳಿಗೊಳದ ನೀರನ್ನು ಕುಡಿಯಲು ತಿಳಿಸುತ್ತಾಳೆಯೇ ಹೊರತು ರಾಮಕಾರ್ಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುತ್ತಾಳೆ.ವಾನರರನ್ನು ಬಿಲದಿಂದ ಹೊರದಾಟಿಸಿದ ಸಂದರ್ಭದಲ್ಲೂ‌ ಕೂಡ ವಾನರರಿಗೆ ಅದು ವಿಂಧ್ಯಪರ್ವತಶ್ರೇಣಿ,ಪ್ರಸವಣಗಿರಿ ಎಂದು ಪರಿಚಯಿಸುತ್ತ ಅಲ್ಲಿಂದ ಹೊರಹೋಗಬಹುದಾದ ಮಾರ್ಗದರ್ಶನ ಮಾಡಿ ಶುಭ ಹರಸುವಳು.ಇದರರ್ಥ ತಾಪಸೋತ್ತಮಳಾದ ಸ್ವಯಂಪ್ರಭೆಯು ತನ್ನ ತಪೋಸಾಮರ್ಥ್ಯದಿಂದ ಸರ್ವಜ್ಞತ್ವ ಪಡೆದಿದ್ದರೂ ಲೋಕದ ಆಗು ಹೋಗುಗಳ ಬಗ್ಗೆ ಆಸಕ್ತಿ ಇಲ್ಲದ ನಿರ್ಲಿಪ್ತ ನಿಲುವನ್ನು ಹೊಂದಿದ್ದಳು.ತನ್ನ ಬಳಿ ಬಂದಿದ ಹನುಮಂತನ ನೇತೃತ್ವದ ವಾನರರಿಗೆ ಆ ದಿವ್ಯವನದ ಹಣ್ಣುಗಳನ್ನು ತಿಂದು ನೀರು ಕುಡಿಯಲು ಅನುಮತಿಸುವಳೇ ಹೊರತು ಅವರನ್ನು ಅತಿಥಿಗಳಂತೆ ಬಗೆದು ಸತ್ಕಾರ ಮಾಡುವುದಿಲ್ಲ.ಇಲ್ಲಿ ಶಬರಿ ಮತ್ತು ಸ್ವಯಂಪ್ರಭೆಯವರಿಬ್ಬರಲ್ಲಿ ಇರುವ ವ್ಯತ್ಯಾಸವನ್ನು ಮನಗಾಣಬಹುದು.ಶಬರಿ ರಾಮ ಲಕ್ಷ್ಮಣರಿಬ್ಬರನ್ನು ಸತ್ಕರಿಸುತ್ತಾಳೆ,ರಾಮನಿಗೆ ತಾನು ಆಯ್ದು ತಂದು ಬೋರೆಯ ಹಣ್ಣುಗಳನ್ನು ತನ್ನ ಬಾಯಿಂದ ಕಚ್ಚಿ ಸಿಹಿಯಾಗಿವೆಯೋ ಹುಳಿಯಾಗಿವೆಯೋ ಎಂಬುದನ್ನು ಪರೀಕ್ಷಿಸಿ ಸಿಹಿ ಇದ್ದ ಹಣ್ಣುಗಳನ್ನು ಮಾತ್ರ ಕೊಡುತ್ತಾಳೆ.ಮತಂಗಮುನಿ ಶಿಷ್ಯಳಾದ ಶಬರಿಯು ರಾಮನ ಆಗಮನವನ್ನು ಕಾಯ್ದುಕುಳಿತಿರುತ್ತಾಳೆ.ಆದರೆ ಸ್ವಯಂಪ್ರಭೆಯು ಹನುಮಂತನಿಂದ ರಾಮನ ವೃತ್ತಾಂತವನ್ನರಿತೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.ಅದರರ್ಥ ಅವಳು ಈಗಾಗಲೇ ಸ್ವಯಂಸಿದ್ಧಳಾಗಿದ್ದಾಳೆ,ಸ್ವಯಂಪೂರ್ಣಳಾಗಿದ್ದಾಳೆ ಯಾರ ಅನುಗ್ರಹವಾವಲಿ,ಆಸರೆಯಾಗಲಿ ಇಲ್ಲವೆ ಆಶೀರ್ವಾದವಾಗಲಿ ಅವಳಿಗೆ ಬೇಕಾಗಿಲ್ಲ.ಹನುಮಂತನಿಗೆ ಸ್ವಯಂಪ್ರಭೆಯು ಹೇಳುವ ಮಾತು “ನನ್ನ ಧರ್ಮದಲ್ಲಿ ಇದ್ದುಕೊಂಡಿರುವ ನನಗೆ ಯಾವನೊಬ್ಬನೂ ಮಾಡಬೇಕಾದುದೇನೂ ಇಲ್ಲ” ಈ ಮಾತಿನಲ್ಲಿ ಅವಳು ಮುಕ್ತಾತ್ಮಳು ಎಂದು ಗೊತ್ತಾಗುತ್ತದೆ.ಸ್ವಯಂ ಮುಕ್ತರಾದವರಿಗೆ ಮುಕ್ತಿನೀಡುವ,ಸದ್ಗತಿ ಕರುಣಿಸುವ ಇನ್ನೊಬ್ಬರ ಅಗತ್ಯ ಇರುವುದಿಲ್ಲ.ಶಬರಿಯು ಕಿಷ್ಕಿಂಧೆ ಎನ್ನುವ ಹೊರಪ್ರಪಂಚದಲ್ಲಿದ್ದವಳು,ಪ್ರಪಂಚದ ಆಗು ಹೋಗುಗಳಲ್ಲಿ ಅನಾಸಕ್ತಳಾಗಿದ್ದರೂ ಪ್ರಪಂಚ ವಿದ್ಯಮಾನವನ್ನು ಬಲ್ಲಳು.ಅದಕ್ಕೆಂದೇ ಆಕೆ ರಾಮನಿಗಾಗಿ ಕಾಯುತ್ತಾಳೆ.ಆದರೆ ಸ್ವಯಂಪ್ರಭೆಯು ಹೊರಪ್ರಪಂಚದಿಂದ ದೂರ ಇರುವ ಮನೋಮಯ ಬಿಲಪ್ರಪಂಚವಾಸಿಯು.ಗಾಢಾಂಧಕಾರದ ಆ ಬಿಲದಲ್ಲಿ ತನ್ನ ತಪೋಕಾಂತಿಯ ಬೆಳಕಿನಲ್ಲಿ ಸಂಚರಿಸುವವಳು.ಹೊರಪ್ರಪಂಚದ ಹಂಗು- ಅಭಿಮಾನಗಳಿಂದ ಹೊರಗಾದ ನಿತ್ಯಮುಕ್ತೆ ಸ್ವಯಂಪ್ರಭೆ.ಹನುಮಂತನಂತಹ ವಾಯುಪುತ್ರನಾದ ಮಹಾಬಲಶಾಲಿಯ ಬಲ- ಪರಾಕ್ರಮಗಳೂ ನಡೆಯಲಿಲ್ಲ ಆ ಮಹಾಬಿಲದಲ್ಲಿ.ಹನುಮಂತನ ಕಣ್ಣುಗಳೂ ಕಾಣದಾದವು.ಹನುಮಂತನು ಎಲ್ಲ ಕಪಿವೀರರುಗಳಂತೆ ಕಣ್ಣುಗಳನ್ನು ಮುಚ್ಚಿಕೊಂಡು ಸ್ವಯಂಪ್ರಭೆಯ ನೆರವಿನಿಂದ ಬಿಲದಾಟುವನು.ದೈಹಿಕ ಬಲ ಸಾಮರ್ಥ್ಯ ತಪೋಸಾಮರ್ಥ್ಯದ ಮುಂದೆ ಏನೇನೂ ಅಲ್ಲ ಎನ್ನುವುದನ್ನು ಈ ಪ್ರಸಂಗವು ನಿರೂಪಿಸುತ್ತದೆ.ಬಾಹುಬಲವಲ್ಲ,ಬ್ರಹ್ಮಬಲವೇ ನಿಜವಾದ ಬಲ ಎನ್ನುವುದು ಸ್ವಯಂಪ್ರಭೆಯ ವೃತ್ತಾಂತವು ನಿರೂಪಿಸುತ್ತದೆ.

ತನ್ನದೇಹದಿಂದಲೇ ಪ್ರಕಾಶವನ್ನು ಹೊಮ್ಮಿಸುವ ಸಾಮರ್ಥ್ಯ ಉಳ್ಳವಳಾಗಿದ್ದರಿಂದ ಅವಳು ಸ್ವಯಂಪ್ರಭೆಯು.ಸತ್ಯಲೋಕ,ವೈಕುಂಠ ಮತ್ತು ಕೈಲಾಸಗಳಲ್ಲಿ ಸೂರ್ಯ ಚಂದ್ರರು ಬೆಳಗುವುದಿಲ್ಲ; ನಕ್ಷತ್ರಗಳೂ ಮಿನುಗುವುದಿಲ್ಲ.ಬ್ರಹ್ಮ,ವಿಷ್ಣು ರುದ್ರರ ಸ್ವಯಂಪ್ರಕಾಶವೇ ಆ ಲೋಕಗಳನ್ನು ಬೆಳಗುತ್ತದೆ.ಮಹಾತಪಸ್ವಿಗಳು,ಸಿದ್ಧರುಗಳು ಸಹ ತಮ್ಮ ಸ್ವಯಂಪ್ರಕಾಶದಿಂದಲೇ ಬೆಳಗುತ್ತಾರೆ.ನಮ್ಮ ಕಣ್ಣುಗಳಿಗೆ ಕಾಣುವ ಆಕಾಶವಷ್ಟೇ ಆಕಾಶವಲ್ಲ,ಇದರ ಆಚೆಗೂ ಇದೆ ಅನಂತ,ಬಯಲು.ಅಲ್ಲಿಯೇ ಸತ್ಯಲೋಕವಾದಿ ನಾನಾ ಲೋಕಗಳಿವೆ.ಅಲ್ಲಿಗೆ ಹೋಗಬೇಕು ಎಂದರೆ ಚರ್ಮದ ಈ ಶರೀರದಿಂದ ಹೋಗಲಾಗದು.ಚರ್ಮಚಕ್ಷುಗಳಿಗೆ ಕಾಣಿಸದ ದಿವ್ಯ ಬೆಳಕು ಅದು.ವಿಮಾನ ,ರಾಕೆಟ್ಟುಗಳು ಮಾತ್ರವಲ್ಲ ಮನೋವೇಗದಿಂದಲೂ ತಲುಪಲಾಗದ ಎತ್ತರದಲ್ಲಿವೆ ಮಹಾಲೋಕಗಳು.ದಿವ್ಯಕಾಯರಾಗಿ ಮರ್ತ್ಯದ ಮಣ್ಣಗುಣಮುಕ್ತರಾಗಿ ನಭದ ಬಯಲ ತತ್ತ್ವವನ್ನು ಅಳವಡಿಸಿಕೊಂಡಿದ್ದರಷ್ಟೇ ಸಾಧ್ಯ ಮೇಲು ಮೇಲಣ ಆ ಊರ್ಧ್ವ ಲೋಕಗಳತ್ತ ಪಯಣ ಕೈಗೊಳ್ಳಲು.ಸೂರ್ಯ ಚಂದ್ರರ ಬೆಳಕು- ಬೆಳದಿಂಗಳುಗಳಿಲ್ಲದ,ವಾಯುವಿನ ಸಂಚಾರವಿಲ್ಲದ,ಅಗ್ನಿ ಜ್ವಲಿಸದ,ಜಲಪ್ರವಹಿಸದ ಆ ನೆಲೆಯತ್ತ ಪಯಣಿಸಬೇಕಾದರೆ ದಿವ್ಯಕಾಯರಾಗಿರಬೇಕು,ದಿವ್ಯಾತ್ಮರಾಗಿರಬೇಕು.ಸ್ವಯಂಪ್ರಭೆಯು ಅಂತಹ ದಿವ್ಯಯೋಗಿನಿಯಾಗಿದ್ದಳು.ನಮ್ಮ ದೇಹದ ಸಹಸ್ರಾರ ಚಕ್ರವು ಸ್ವಯಂಪ್ರಭೆಯು ಇದ್ದ ಮಹಾಬಿಲವಾಗಿದ್ದು ಅಲ್ಲಿ ಒಳಪ್ರವೇಶಿಸುವುದು ದುಸ್ತರವು.ಸ್ವಯಂಪ್ರಕಾಶಮಾನನಾದ ಪರಶಿವನ ಬೆಳಗಿನ ಆ ಲೋಕದಲ್ಲಿ ಸ್ವಯಂಪ್ರಕಾಶಮಾನರಾಗಿ ವಿರಾಜಿಸುತ್ತಿದ್ದಾರೆ ಸಹಸ್ರ ಸಿದ್ಧರುಗಳು.ಪರಶಿವನ ವಿಶ್ವಸಂಕಲ್ಪದ ಸಹಸ್ರಸಿದ್ಧರುಗಳೇ ಸಹಸ್ರಾರ ಚಕ್ರವೆಂಬ ಸಹಸ್ರದಳ ಕಮಲದ ಸಾವಿರ ದಳಗಳು.ಹನುಮಂತನಾದಿ ಕಪಿವೀರರು ಇಳಿಯುತ್ತಾರೆ ಆ ಬಿಲದಲ್ಲಿ.ಅಲ್ಲಿ ಅವರ ಕಣ್ಣುಗಳು ಕಾಣಿಸುವುದಿಲ್ಲ.ಸಹಸ್ರಾರ ಚಕ್ರವೆಂಬ ಮಹಾವನದೊಳಗಣ ರಂಧ್ರವನ್ನು ಸೇರಬೇಕೆಂದರೆ ಪ್ರಾಣವನ್ನು ಶುದ್ಧಿಕರಿಸಿಕೊಂಡು,ಲಘುವಾಗಿಸಿಕೊಂಡು ಪ್ರಾಣಾಯಾಮದ ಬಲದಿಂದ ಇಳಿಯಬೇಕು ಸಾಸುವೆಕಾಳಿನ ಸಹಸ್ರಭಾಗದಷ್ಟು ಚಿಕ್ಕದಿರುವ ಆ ಯೋಗಬಿಲ,ಯೋಗರಂಧ್ರ,ಬ್ರಹ್ಮರಂಧ್ರವನ್ನು .ಅಲ್ಲಿ ದಿವ್ಯ ತರುಲತೆಗಳಿವೆ,ದಿವ್ಯಸುಗಂಧವಿದೆ,ದಿವ್ಯ ಆಸನಗಳಿವೆ‌.ಎಲ್ಲವೂ ದಿವ್ಯವೆ ಆ ದಿವ್ಯಲೋಕದಲ್ಲಿ.ಅಂತಹ ದಿವ್ಯಲೋಕವನ್ನು ಸೇರಿ ಆನಂದಿಸುವವರಿಗೆ ಹೊರಲೋಕದ ಪರಿವೆ ಇರದು.ಅದುವೇ ಸಮಾಧಿ.ಇಂತಹ ಸಹಸ್ರಸಮಾಧಿಸಿದ್ಧರ ತಾಣವೇ ಸಹಸ್ರಾರಚಕ್ರವೆಂಬ ಪರಶಿವನ ಧಾಮ ಕೈಲಾಸ.ಅಲ್ಲಿರುವ ಸಹಸ್ರಸ್ವಯಂಪ್ರಭಾಸಿದ್ಧರಲ್ಲಿ ರಾಮಾಯಣದ ಸ್ವಯಂಪ್ರಭೆಯೂ ಒಬ್ಬಳು.ಇಂತಹ ಅನುಪಮ ಯೋಗರಹಸ್ಯವನ್ನು ಪ್ರತಿಪಾದಿಸಿದ್ದಾರೆ ವಾಲ್ಮೀಕಿ ಮಹರ್ಷಿಯವರು ಸ್ವಯಂಪ್ರಭೆಯ ಪಾತ್ರರಚನೆಯ ಮೂಲಕ.

ಮುಕ್ಕಣ್ಣ ಕರಿಗಾರ
ಮೊ: 94808 79501

20.11.2021