ಸ್ವಗತ : ನನ್ನ ಹುಟ್ಟುಹಬ್ಬ ‘ ಲೋಕ ಕಲ್ಯಾಣ ದಿನ’ವಾಗಿ ಬೆಳೆದುಬಂದ ಬಗೆ – ಮುಕ್ಕಣ್ಣ ಕರಿಗಾರ

ನನ್ನ ಹುಟ್ಟುಹಬ್ಬ ‘ ಲೋಕ ಕಲ್ಯಾಣ ದಿನ’ವಾಗಿ ಬೆಳೆದುಬಂದ ಬಗೆ

ಲೇಖಕರು: ಮುಕ್ಕಣ್ಣ ಕರಿಗಾರ

ಗೌರಿಹುಣ್ಣಿಮೆಯ ದಿನವಾದ ಇಂದು ನನ್ನ ಹುಟ್ಟುಹಬ್ಬ; ಸರಕಾರಿ ದಾಖಲೆಗಳಂತೆ ಐವತ್ತೆರಡು ವರ್ಷಗಳು.ಆದರೆ ನಾನು ಸರಕಾರಿ ಜನ್ಮದಿನವನ್ನು ನನ್ನ ಹುಟ್ಟುಹಬ್ಬವೆಂದು ಆಚರಿಸುವುದಿಲ್ಲ.ಹಿಂದೆ ಮಕ್ಕಳನ್ನು ಶಾಲೆಗೆ ಕಳಿಸಲು ತಂದೆ ತಾಯಂದಿರುಗಳಿಗೆ ತಿಳಿಹೇಳುವ ಉದ್ದೇಶದಿಂದ ನಡೆಸಲಾಗುತ್ತಿದ್ದ ಮಕ್ಕಳಗಣತಿಯ ಅಂಗವಾಗಿ ನಮ್ಮ ಮನೆಗೆ 1969ರ ಜೂನ್ 5 ರಂದು ಬಂದಿದ್ದ ಶಾಲಾ ಶಿಕ್ಷಕರು ಆ ದಿನವನ್ನೇ ನನ್ನ ಜನ್ಮದಿನ ಎಂದು ದಾಖಲಿಸಿದ್ದರು.ಅದೇ ನನ್ನ ಜನ್ಮದಿನವಾಯಿತು! ನಾನು ಹುಟ್ಟಿದ್ದು ನನ್ನ ತಾಯಿಯ ತವರುಮನೆ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ.ವ್ಯಾಕರಣ,ಜ್ಯೋತಿಷ,ಶಾಸ್ತ್ರಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದ ನನ್ನ ತಾತ ಈರಣ್ಣ ಬಂಟಗುಂಟಿ ಅವರು ನನ್ನ ಜಾತಕ ಬರೆದಿಟ್ಟಿದ್ದರು.ಅದರಂತೆ ನಾನು ಹುಟ್ಟಿದ್ದು 1971 ರ ಗೌರಿಹುಣ್ಣಿಮೆಯಂದು ಬೆಳಿಗ್ಗೆ 4.05 ನಿಮಿಷಕ್ಕೆ.ನಾನು ದೇವರನ್ನು ನಂಬುತ್ತೇನೆ; ಜ್ಯೋತಿಷ್ಯವಾದಿ ಶಾಸ್ತ್ರಗಳನ್ನು ನಂಬುವುದಿಲ್ಲ.ಒಬ್ಬ ಪರಮಾತ್ಮನನ್ನು ನಂಬಿದರೆ ಉಳಿದ ಶಾಸ್ತ್ರಗಳ ಹಂಗು ಇಲ್ಲ ಎನ್ನುವುದು ನನ್ನ ದೃಢವಾದ ಭಾವನೆ.ಹಾಗಾಗಿ ನಾನು ನನ್ನ ಜಾತಕದ ಬಗ್ಗೆ ಆಸಕ್ತಿ ವಹಿಸಲಿಲ್ಲ.ಅದು ಎಲ್ಲಿ ಹೋಯಿತೋ ಗೊತ್ತಿಲ್ಲ.ಆದರೆ ಎಲ್ಲರಂತೆ ನಾನೂ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಎಂದು ನನಗೆ ಅನ್ನಿಸಿದ್ದು ನಾನು ನಮ್ಮೂರು ಗಬ್ಬೂರಿನ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ದಿನಗಳಲ್ಲಿ .ಜೂನ್ ಐದರಂದು ನಾನಂತೂ ಹುಟ್ಟಿಲ್ಲ.ಯಾಕೆ ಆಚರಿಸಿಕೊಳ್ಳಬೇಕು ಆ ದಿನ ನನ್ನ ಹುಟ್ಟು ಹಬ್ಬ ಎಂದು ಭಾವಿಸಿದ ನಾನು ಗೌರಿಹುಣ್ಣಿಮೆಯಂದು ನಾನು ಹುಟ್ಟಿದ್ದೇನೆ ಎಂದು ಬಾಲ್ಯದಿಂದಲೂ ತಾತ,ಅಜ್ಜಿ,ತಾಯಿ,ಮಾವಂದಿರು ಮತ್ತು ನನ್ನ ತಂದೆಯವರೆಲ್ಲ ಹೇಳುತ್ತಿದ್ದರಿಂದ ಗೌರಿಹುಣ್ಣಿಮೆಯಂದೇ ನನ್ನ ಜನ್ಮದಿನ ಆಚರಿಸತೊಡಗಿದೆ.ನನ್ನ ಬದುಕಿನಲ್ಲಿ ಗೌರಿಹುಣ್ಣಿಮೆಯು ಹತ್ತು ಹಲವು ವಿಶೇಷಗಳನ್ನುಂಟು ಮಾಡಿದ ದಿನವೂ ಹೌದು.ನಾನು ಹುಟ್ಟಿದ್ದು ,ದುರ್ಗಾದೇವಿಯ ಪೂಜೆ ಪ್ರಾರಂಭಿಸಿದ್ದು ಮತ್ತು ನನ್ನ ಗುರುದೇವ ಮಹಾತಪಸ್ವಿ ಪರಮಪೂಜ್ಯ ಶ್ರೀ ಕುಮಾರಸ್ವಾಮಿಗಳವರು ನನಗೆ ಶಿವಾನುಗ್ರಹ ಕರುಣಿಸಿದ್ದು ಕೂಡ ಗೌರಿಹುಣ್ಣಿಮೆಯಂದೇ!

ಪಿಯುಸಿಯಿಂದಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತ ಬಂದ ನಾನು 1992 ರಲ್ಲಿ ಕೆ ಎ ಎಸ್ ಪರೀಕ್ಷೆ ಬರೆದೆ.ಆದರೆ ಫಲಿತಾಂಶ ಪ್ರಕಟಗೊಂಡು ಕೆ ಎ ಎಸ್ ಅಧಿಕಾರಿಯಾಗಲು ಐದುವರ್ಷಗಳು ಬೇಕಾಯಿತು ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಕೆ ಎ ಟಿ,ಹೈಕೋರ್ಟಗಳಲ್ಲಿ ಪ್ರಕರಣಗಳು ದಾಖಲಾಗಿದ್ದರಿಂದ.ಆ ಅವಧಿಯಲ್ಲಿ ನಾನು ನಮ್ಮೂರಿನ ಜೂನಿಯರ್ ಕಾಲೇಜಿನಲ್ಲಿ ಹತ್ತನೇ ತರಗತಿಗೆ ಇಂಗ್ಲೀಷನ್ನು ಮತ್ತು ಪ್ರಥಮ ದ್ವಿತೀಯ ಪಿಯುಸಿಗಳಿಗೆ ಕನ್ನಡವನ್ನು ಕಲಿಸುವ ಗೌರವಶಿಕ್ಷಕ ಎಂದು ಕೆಲಸ ಮಾಡುತ್ತಿದ್ದೆ.ನನ್ನ ಭಾಷಾ ಸಾಮರ್ಥ್ಯ,ಪಾಠ ಬೋಧಿಸುವ ಅದ್ಭುತಕಲೆ ಮತ್ತು ವಿಧ್ಯಾರ್ಥಿಗಳನ್ನು ಹಚ್ಚಿಕೊಳ್ಳುತ್ತಿದ್ದ ರೀತಿಯಿಂದ ಅತ್ಯಂತ ಜನಪ್ರಿಯ ಶಿಕ್ಷಕನಾಗಿದ್ದೆ.ನಮ್ಮ ಮನೆಯಲ್ಲಿ ಯಾವಾಗಲೂ ವಿಧ್ಯಾರ್ಥಿಗಳೇ ಇರುತ್ತಿದ್ದರು.ನನ್ನ ಹುಟ್ಟುಹಬ್ಬವನ್ನು ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ವಿಧ್ಯಾರ್ಥಿಗಳು ಸಂಭ್ರಮದಿಂದ ಜೋರಾಗಿ ಆಚರಿಸುತ್ತಿದ್ದರು.

ಮುಂದೆ ಅಧಿಕಾರಿಯಾಗಿ ಆಯ್ಕೆಗೊಂಡು ಕರ್ತವ್ಯ ನಿರ್ವಹಿಸುವ ಕಡೆಗಳಲ್ಲೆಲ್ಲ ನಾನು ಗೌರಿಹುಣ್ಣಿಮೆಯನ್ನು ನನ್ನ ಹುಟ್ಟುಹಬ್ಬವನ್ನಾಗಿ ಆಚರಿಸತೊಡಗಿದೆ.ಇದುವರೆಗೂ ನಾನು ಕರ್ತವ್ಯನಿರ್ವಹಿಸಿದ ತಾಲೂಕು,ಜಿಲ್ಲೆಗಳ ನನ್ನ ಆಧೀನದಲ್ಲಿದ್ದ ಅಧಿಕಾರಿಗಳು,ಸಿಬ್ಬಂದಿಯವರು ಗೌರಿಹುಣ್ಣಿಮೆ ನನ್ನ ಹುಟ್ಟುಹಬ್ಬವೆಂದು ನೆನಪಿಸಿ,ಶುಭಾಶಯ ಹೇಳುತ್ತಾರೆ.

ನಾನು 2009 ರಲ್ಲಿ ಗೋಕರ್ಣದ ಮಹಾಬಲ ಶಿವನ ಪ್ರೇರಣೆ ಮತ್ತು ಆಣತಿಯಂತೆ ‘ ಮಹಾಶೈವ ಧರ್ಮ’ ಎನ್ನುವ ಹೊಸಧರ್ಮ ಒಂದನ್ನು ಸ್ಥಾಪಿಸಿ ಅದರ ಪ್ರಾತಿನಿಧಿಕ ಕೇಂದ್ರ ಎಂದು ಮಹಾಶೈವ ಧರ್ಮ ಪೀಠವನ್ನು ಕಟ್ಟಿದಾಗ ನನ್ನ ಹುಟ್ಟುಹಬ್ಬವನ್ನು ‘ ಲೋಕ ಕಲ್ಯಾಣ ದಿನ’ ಎಂದು ಕರೆದು 2010 ರಿಂದ ನನ್ನ ಹುಟ್ಟುಹಬ್ಬವನ್ನು ‘ ಲೋಕ ಕಲ್ಯಾಣ ದಿನಾಚರಣೆ’ ಎಂದು ಆಚರಿಸಿಕೊಳ್ಳುತ್ತೇನೆ.ನಮ್ಮ ಮಹಾಶೈವ ಧರ್ಮಪೀಠದ ಅಧಿದೈವರುಗಳಾದ ವಿಶ್ವೇಶ್ವರ ಶಿವನ ಲಿಂಗ ,ವಿಶ್ವೇಶ್ವರಿ ದುರ್ಗಾದೇವಿ ಹಾಗೂ ಕಾಲಭೈರವ ಮತ್ತು ಮಹಾಕಾಳಿ ಮೂರ್ತಿಗಳು ಆಗಮಿಸಿದ್ದು ಕಾಶಿಯಿಂದ.ಕಾಶಿಯ ವಿಶ್ವೇಶ್ವರನ ಪ್ರಥಮ ದರ್ಶನವು ನನಗಾದದ್ದು ಗೌರಿಹುಣ್ಣಿಮೆಯಂದೇ!ಮೂರು ತಿಂಗಳ ಅಂತರದಲ್ಲಿ ಮೂರುಬಾರಿ ವಿಶ್ವೇಶ್ವರನ ದರ್ಶನವಾದ್ದರಿಂದ ವಿಶ್ವೇಶ್ವರನು ದುರ್ಗಾದೇವಿಯ ಸಮೇತನಾಗಿ ಬೆನ್ನಹಿಂದೆ ಬಂದು ಮಹಾಶೈವ ಧರ್ಮಪೀಠವನ್ನು ಕಟ್ಟಿಸಿಕೊಂಡು ತಾನು ವಿಶ್ವೇಶ್ವರ ಶಿವನಾಗಿ ,ತಾಯಿ ದುರ್ಗೆಯು ವಿಶ್ವೇಶ್ವರಿ ದುರ್ಗಾದೇವಿಯಾಗಿ ನೆಲೆಗೊಂಡು ‘ ಶ್ರೀಕ್ಷೇತ್ರ ಕೈಲಾಸ’ ಎಂದು ಕರೆಯಿಸಿಕೊಂಡರು ತಾವು ಮೂರ್ತಿಗೊಂಡು ನೆಲೆನಿಂತ ಕ್ಷೇತ್ರವನ್ನು.

ಮಹಾಶೈವ ಧರ್ಮಪೀಠವು 2013 ರಲ್ಲಿ ಉದ್ಘಾಟನೆಗೊಂಡು ನಿತ್ಯ ನಿರಂತರ ಸಾಹಿತ್ಯಕ- ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರಾಯಚೂರು ಜಿಲ್ಲೆ ಮತ್ತು ನಾಡಿನಾದ್ಯಂತ ಪ್ರಸಿದ್ಧಿಯಾಯಿತು.ಪ್ರತಿ ಹುಣ್ಣಿಮೆಗೆ ಅನುಭಾವ ಕವಿಗೋಷ್ಠಿಯನ್ನು,ಪ್ರತಿ ಅಮವಾಸೆಗೆ ಶಕ್ತ್ಯಾನುಭವ ಚಿಂತನಗೋಷ್ಠಿಗಳನ್ನು ಏರ್ಪಡಿಸುತ್ತಿದ್ದುದಲ್ಲದೆ ಯುಗಾದಿ,ಶಿವರಾತ್ರಿ,ನವರಾತ್ರಿ ,ನೂಲ ಹುಣ್ಣಿಮೆ ಮತ್ತು ಗೌರಿಹುಣ್ಣಿಮೆಗಳಂದು ರಾಜ್ಯಮಟ್ಟದ ಸಾಹಿತ್ಯಕ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು.ನನ್ನ ಗುರುದೇವ ಧಾರವಾಡದ ತಪೋವನದ ಮಹಾತಪಸ್ವಿ ಪರಮಪೂಜ್ಯ ಶ್ರೀ ಕುಮಾರಸ್ವಾಮಿಗಳವರ ಹುಟ್ಟುಹಬ್ಬದ ದಿನವಾದ ನೂಲಹುಣ್ಣಿಮೆಯನ್ನು ‘ ಮಹಾಶೈವ ಗುರುಪೂರ್ಣಿಮೆ’ ಎಂದು ಆಚರಿಸುತ್ತ ಗುರುದೇವನ ಹೆಸರಿನಲ್ಲಿ ಸಾಹಿತ್ಯ,ಕಲೆ,ಸಂಸ್ಕೃತಿ ಮತ್ತು ಪತ್ರಿಕಾ ರಂಗಗಳಲ್ಲಿ ವಿಶಿಷ್ಟ ಸಾಧನೆಗೈದ ಹೆಸರಾಂತ ಚೇತನರುಗಳನ್ನು ‘ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಅನುಗ್ರಹ ಪ್ರಶಸ್ತಿ’ಯನ್ನಿತ್ತು ಸತ್ಕರಿಸಲಾಗುತ್ತಿತ್ತು.ನಾಡಿನ ಹೆಸರಾಂತ ಕವಿಗಳಿಗೆ ‘ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಕಾವ್ಯರ್ಷಿ’ ಪ್ರಶಸ್ತಿಯನ್ನಿತ್ತು ಗೌರವಿಸಲಾಗುತ್ತಿತ್ತು.ಸರ್ವಶ್ರೀ ಜಿ ಎಸ್ ಶಿವರುದ್ರಪ್ಪ,ಶಾಶ್ವತಯ್ಯ ಮುಕ್ಕುಂದಿ ಮಠ,ಬಿ ಎ ಸನದಿ,ಎನ್ ಎಸ್ ಲಕ್ಷ್ಮೀ ನಾರಾಯಣ ಭಟ್ಟರು ಮೊದಲಾದವರಿಗೆ ನನ್ನ ಗುರುದೇವನ ಹುಟ್ಟು ಹಬ್ಬದ ನೂಲಹುಣ್ಣಿಮೆಯಂದು ‘ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಕಾವ್ಯರ್ಷಿ’ ಪ್ರಶಸ್ತಿಯನ್ನಿತ್ತು ಸತ್ಕರಿಸಲಾಗಿದೆ.ನನ್ನ ಹುಟ್ಟು ಹಬ್ಬ ಗೌರಿಹುಣ್ಣಿಮೆಯನ್ನು ‘ ಲೋಕ ಕಲ್ಯಾಣ ದಿನಾಚರಣೆ’ ಎಂದು ಆಚರಿಸುತ್ತ ನನ್ನ ಮೆಚ್ಚಿನ ಕವಿ ಕಾಳಿದಾಸನ ಹೆಸರಿನಲ್ಲಿ ‘ ಮಹಾಕವಿ ಕಾಳಿದಾಸ – ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ ಎನ್ನುವ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಕೊಡಮಾಡುವ ಏರ್ಪಾಟು ಮಾಡಿದ್ದು ಮೊದಲ ಮಹಾಕವಿ ಕಾಳಿದಾಸ ರಾಷ್ಟ್ರೀಯ ಪ್ರಶಸ್ತಿಯನ್ನು ಕನ್ನಡದ ಹೆಮ್ಮೆ ಡಾ.ಚಂದ್ರಶೇಖರ ಕಂಬಾರ ಅವರಿಗೆ ಪ್ರದಾನಿಸಲಾಯಿತು.ಪ್ರಶಸ್ತಿಯು ಒಂದು ಲಕ್ಷ ನಗದು ,ಸ್ಮರಣಿಕೆ ಮತ್ತು ಪ್ರಶಸ್ತಿಪತ್ರಗಳನ್ನು ಒಳಗೊಂಡಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊಡಮಾಡುವ ಅತಿದೊಡ್ಡ ಸಾಹಿತ್ಯ ಪ್ರಶಸ್ತಿ ಇದು ಎನ್ನುವ ಹೆಗ್ಗಳಿಕೆ ಪಡೆದಿದೆ.ಕಳೆದೆರೆಡು ವರ್ಷಗಳಿಂದ ಕಾಡಿದ ಕೊವಿಡ್ ಕಾರಣದಿಂದ ಯಾವ ಕಾರ್ಯಕ್ರಮಗಳನ್ನು ಆಯೋಜಿಸಿರಲಿಲ್ಲ.2021 ರಿಂದ ಕಾರ್ಯಕ್ರಮಗಳನ್ನು ಪುನಃ ಪ್ರಾರಂಭಿಸಲು ಸಂಕಲ್ಪಿಸಿ ನೂಲಹುಣ್ಣಿಮೆಯ ಗುರುದೇವರ ಹುಟ್ಟುಹಬ್ಬದಂದು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ಸಲ್ಲಿಸಿದ್ದ ಶ್ರೀ ಸಿದ್ಧರಾಮ ಹೊನ್ಕಲ್ ಅವರಿಗೆ ‘ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ಭೂಷಣ’ ಪ್ರಶಸ್ತಿಯನ್ನು ಹಾಗೂ ದೇವದುರ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಶ್ರೀಮತಿ ಇಂದಿರಾ ಆರ್ ಅವರನ್ನು ‘ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಆಡಳಿತ ಭೂಷಣ ಪ್ರಶಸ್ತಿ’ ಗಳನ್ನಿತ್ತು ಗೌರವಿಸಲಾಯಿತು.ಇಂದಿನ ನನ್ನ ಹುಟ್ಟುಹಬ್ಬದಂದು ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಲು ನಿರ್ಣಯಿಸಲಾಗಿತ್ತಾದರೂ ಮಹಾಶೈವ ಧರ್ಮಪೀಠದ ಶಿವ ದುರ್ಗಾದೇವಿಯರ ದೇವಸ್ಥಾನಗಳ ಶಿಖರ ಮತ್ತು ಗೋಪುರಗಳ ನಿರ್ಮಾಣ ಕಾರ್ಯವು ಪ್ರಾರಂಭವಾಗಿದ್ದರಿಂದ ಸರಳವಾಗಿ ‘ ಲೋಕಕಲ್ಯಾಣ ಕಾರ್ಯಕ್ರಮ’ ಆಚರಿಸಲಾಯಿತು.

ಲೋಕಕಲ್ಯಾಣವು ನನ್ನ ಜೀವಿತೋದ್ದೇಶವಾಗಿರುವುದರಿಂದ ನನ್ನ ಹುಟ್ಟುಹಬ್ಬವನ್ನು ನಾನು ‘ ಲೋಕಕಲ್ಯಾಣ ದಿನಾಚರಣೆ’ ಎಂದು ಕರೆದಿದ್ದೇನೆ.ಮಹಾಶೈವ ಧರ್ಮದ ಸ್ಥಾಪನೆ ಮತ್ತು ಮಹಾಶೈವ ಧರ್ಮಪೀಠದ ನಿರ್ಮಾಣದ ಹಿಂದೆಯೂ ಜನಸಾಮಾನ್ಯರನ್ನು ಧಾರ್ಮಿಕ ಶೋಷಣೆಯಿಂದ ಮುಕ್ತಗೊಳಿಸಿ ಪ್ರತಿಯೊಬ್ಬರಲ್ಲಿಯೂ ಶಿವಚೈತನ್ಯ ಜಾಗೃತಿಗೊಳಿಸುವ ಸತ್ ಸಂಕಲ್ಪವಿದೆ .’ಲೋಕದ ಜೀವರುಗಳೆಲ್ಲ ಒಂದೇ; ಶಿವನೇ ಎಲ್ಲರ ತಂದೆ’ ಎನ್ನುವ ಮೂಲಸೂತ್ರವನ್ನು ಘೋಷವಾಕ್ಯವನ್ನಾಗಿ ಉಳ್ಳ ಮಹಾಶೈವ ಧರ್ಮವು ಜನಸಾಮಾನ್ಯರ ಉನ್ನತಿಯ ಗುರಿಯುಳ್ಳ ವಿಶ್ವಧರ್ಮವಾಗಿದೆ,ಲೋಕಧರ್ಮವಾಗಿದೆ.

ಇದು ನನ್ನ ಹುಟ್ಟುಹಬ್ಬವು ‘ ಲೋಕಕಲ್ಯಾಣ ದಿನಾಚರಣೆ’ ಯಾಗಿ ಆಚರಿಸಲ್ಪಡುತ್ತಿರುವ ಹಿಂದಿನ ಕಾರಣ,ತತ್ತ್ವ.

ಮುಕ್ಕಣ್ಣ ಕರಿಗಾರ
ಮೊ: 94808 79501

19.11.2021