ದಿನ ವಿಶೇಷ : ಗೌರಿ ಹುಣ್ಣಿಮೆ – ಮುಕ್ಕಣ್ಣ ಕರಿಗಾರ

ಗೌರಿ ಹುಣ್ಣಿಮೆ

ಲೇಖಕರು: ಮುಕ್ಕಣ್ಣ ಕರಿಗಾರ

ನಾಳೆ ಅಂದರೆ ನವೆಂಬರ್ ೧೯ ರಂದು ಗೌರಿಹುಣ್ಣಿಮೆಯು ಆಚರಿಸಲ್ಪಡುತ್ತದೆ.ಗೌರಿ ಹುಣ್ಣಿಮೆಯು ಜನಪದರ ಹಬ್ಬವಾಗಿ ‘ ಗೌರಿಹಬ್ಬ’ ಎಂದು ಕರೆಯಿಸಿಕೊಳ್ಳುತ್ತದೆ.ಕಾರ್ತಿಕ ಮಾಸದ ಗೌರಿಹುಣ್ಣಿಮೆಯಂದು ಚಂದ್ರನ ಬೆಳಂದಿಗಳು ವಿಶೇಷವಾಗಿರುತ್ತದೆ.ಎಲ್ಲ ಹುಣ್ಣಿಮೆಗಳಿಗಿಂತ ಪ್ರಖರವಾದ ಬೆಳದಿಂಗಳು ಗೌರಿಹುಣ್ಣಿಮೆಯಂದು ಇರುತ್ತದೆಯಾದ್ದರಿಂದ ಜನಪದರು ‘ ಮುತ್ತು ಕಳೆದರೂ ಮುತ್ತುಸಿಗುವ ಬೆಳದಿಂಗಳ ಹುಣ್ಣಿಮೆ’ ಎಂದು ಇದನ್ನು ಕರೆದು,ಗೌರವಿಸಿದ್ದಾರೆ.ಹೆಂಗಸರು ಮೂಗಿನಲ್ಲಿ ಧರಿಸುವ ಮುತ್ತು ಅತ್ಯಂತ ಸಣ್ಣದು. ನೆಲಕ್ಕೆ ಬಿದ್ದ ಮುತ್ತು ಕಣ್ಣಿಗೆ ಕಾಣಿಸುವಂತಹ ಬೆಳದಿಂಗಳು ಗೌರಿಹುಣ್ಣಿಮೆಯಂದು ಇರುತ್ತದೆ.ಗೌರಿಹುಣ್ಣಿಮೆಯನ್ನು ಜನಪದರು ‘ ಮುತ್ತಿನಂಥ ಮಕ್ಕಳು ಹುಟ್ಟುವ ಹುಣ್ಣಿಮೆ’ ಎಂದೂ ಕರೆಯುತ್ತಾರೆ.ಮುತ್ತು ಹೇಗೆ ಹೆಂಗಸರ ಮುತ್ತಿನ ಆಭರಣವೋ ಹಾಗೆಯೇ ಗೌರಿಹುಣ್ಣಿಮೆಯಂದು ಹುಟ್ಟುವ ಮಕ್ಕಳು ವಂಶದ ಕೀರ್ತಿ ಹೆಚ್ಚಿಸುತ್ತಾರಂತೆ.ಇರಬಹುದೇನೋ!.ಸಿಖ್ ಧರ್ಮಸ್ಥಾಪಕರಾದ ಗುರುನಾನಕರು ಹುಟ್ಟಿದ್ದು ಗೌರಿಹುಣ್ಣಿಮೆಯಂದು.ಮಹಾಶೈವ ಧರ್ಮ ಸ್ಥಾಪಕನಾದ ನಾನು ಕೂಡ ಹುಟ್ಟಿದ್ದು ಗೌರಿಹುಣ್ಣಿಮೆಯಂದೇ! ಗೌರಿಹುಣ್ಣಿಮೆಯಂದು ದೇವಿಯು ವಿಶೇಷ ಪ್ರಸನ್ನಭಾವದಿಂದ ಜಗತ್ತನ್ನು ವೀಕ್ಷಿಸುವುದರಿಂದ ಅಂದು ಹುಟ್ಟಿದ ಮಕ್ಕಳು ವಿಶೇಷವ್ಯಕ್ತಿಗಳಾಗುವುದರಲ್ಲಿ ಆಶ್ಚರ್ಯವಿಲ್ಲ.

ಗೌರಿಹುಣ್ಣಿಮೆಯಂದು ವಿಶೇಷ ಬೆಳದಿಂಗಳು ಇರಲು ಮತ್ತು ಆ ಹುಣ್ಣಿಮೆಯು ವಿಶಿಷ್ಟ ಹುಣ್ಣಿಮೆಯಾಗಲು ಪಾರ್ವತಿಯ ತಪಸ್ಸಿಗೆ ಮೆಚ್ಚಿ ಶಿವನು ಅವಳನ್ನು ಇದೇ ಹುಣ್ಣಿಮೆಯ ದಿನದಂದು ಗೌರಿ ಎಂದು ಕರೆದು ,ಗೌರವಿಸಿದುದು ಕಾರಣ.ಶಿವಮಹಾಪುರಾಣ ಮತ್ತು ಸ್ಕಂದ ಮಹಾಪುರಾಣಗಳ ಹಲವೆಡೆ ಈ ಪ್ರಸಂಗವು ವ್ಯಾಖ್ಯಾನಿಸಲ್ಪಟ್ಟಿದೆ. ‘ಶ್ರೀ ಸ್ಕಾಂದ ಮಹಾಪುರಾಣ’ ದ ಏಳನೆಯದಾದ ಪ್ರಭಾಸ ಖಂಡದ ಮೊದಲನೆಯ ಪ್ರಭಾಸಕ್ಷೇತ್ರ ಮಾಹಾತ್ಮೆಯ’ ಗೌರೀ ತಪೋವನಮಾಹಾತ್ಮ್ಯ ವರ್ಣನ’ ಎನ್ನುವ ಅರವತ್ತೆಂಟನೆಯ ಅಧ್ಯಾಯದಲ್ಲಿ ಈ ಪ್ರಸಂಗವು ವಿವರಿಸಲ್ಪಟ್ಟಿದೆ.ಪ್ರಭಾಸ ಕ್ಷೇತ್ರವೆಂದರೆ ಈಗಿನ ಗುಜರಾತಿನ ಸೋಮನಾಥ ದೇವಾಲಯದ ವ್ಯಾಪ್ತಿಯ ಪ್ರದೇಶ.ಸೋಮನಾಥನು ಜ್ಯೋತಿರ್ಲಿಂಗಶಿವನಾಗಿದ್ದು ಮೊದಲ ಜ್ಯೋತಿರ್ಲಿಂಗವೂ ಸೋಮನಾಥನೆಂಬುದು ವಿಶೇಷ.ಚಂದ್ರನು ತನ್ನ ಮಾವ ದಕ್ಷನಿತ್ತ ‘ಕುಷ್ಠರೋಗಿಯಾಗು’ ಎನ್ನುವ ಶಾಪದಿಂದ ಮುಕ್ತಿಹೊಂದಲು ಈ ಕ್ಷೇತ್ರದಲ್ಲಿ ಶಿವನನ್ನು ಕುರಿತು ತಪಸ್ಸನಾಚರಿಸಿ ಶಾಪಮುಕ್ತನಾದ ಕ್ಷೇತ್ರ ಇದಾದ್ದರಿಂದ ಈ ಜ್ಯೋತಿರ್ಲಿಂಗವು ಸೋಮೇಶ್ವರ ಜ್ಯೋತಿರ್ಲಿಂಗ ಎಂದು ಪ್ರಸಿದ್ಧಿಯಾಯಿತು.ಸೋಮ ಎಂದರೆ ಚಂದ್ರ.ಚಂದ್ರನಿಂದ ಪೂಜಿಸಲ್ಪಟ್ಟ ಜಗದೀಶ್ವರ ಶಿವನೇ ಸೋಮೇಶ್ವರ.ಚಂದ್ರನನ್ನು ಶಿವನು ಈ ಕ್ಷೇತ್ರದಲ್ಲಿ ಉದ್ಧರಿಸಿ ,ವೃದ್ಧಿ ಕ್ಷಯಗಳನ್ನು ಉಳ್ಳವನ್ನನ್ನಾಗಿಸಿ ತನ್ನ ಹಣೆಯಲ್ಲಿ ಕಂಗೊಳಿಸುವಂತೆ ವರವಿತ್ತು ಅನುಗ್ರಹಿಸುವನು.ಇದೇ ಸೋಮೇಶ್ವರ ಜ್ಯೋತಿರ್ಲಿಂಗದ ಸುತ್ತಣ ಪ್ರದೇಶವನ್ನು ‘ಪ್ರಭಾಸಖಂಡ’ ವೆಂದು ಪುರಾಣಗಳ ಕಾಲದಲ್ಲಿ ಕರೆಯುತ್ತಿದ್ದರು.ಚಂದ್ರನಂತೆ ಪಾರ್ವತಿಯು ಕೂಡ ಈ ಕ್ಷೇತ್ರದಲ್ಲಿ ತಪಸ್ಸನ್ನಾಚರಿಸಿದ್ದಳು ಎನ್ನುವುದು ವಿಶೇಷ.

ಶಿವನ ಸತಿಯು ಶ್ಯಾಮವರ್ಣದವಳಾಗಿದ್ದಳು.ಕೆಂಪುಬಣ್ಣದ ಶಿವನು ಒಮ್ಮೆ ವಿನೋದಕೇಳಿಯಲ್ಲಿ ತನ್ನ ಪತ್ನಿಯನ್ನು ‘ ಕಾಲಿ’ ಎಂದು ಮೂದಲಿಸಿದನು.ಇದರಿಂದ ಸಿಟ್ಟಿಗೆದ್ದ ಸತಿಯು ಗೌರವರ್ಣದವಳಾಗುವ ಸಂಕಲ್ಪದಿಂದ ಶಿವನನನ್ನು ತ್ಯಜಿಸಿ ಪ್ರಭಾಸಖಂಡಕ್ಕೆ ಬಂದು ಅಲ್ಲಿ ಮಹೇಶ್ವರಲಿಂಗವನ್ನು ಪ್ರತಿಷ್ಠೆ ಮಾಡಿ ಆ ಲಿಂಗವನ್ನು ವಿಧಿವತ್ತಾಗಿ ಪೂಜಿಸಿ,ಆ ಲಿಂಗದ ಬಳಿ ಒಂಟಿ ಕಾಲಿನ ಮೇಲೆ ನಿಂತು ಘೋರವಾದ ತಪಸ್ಸನ್ನಾಚರಿಸುವಳು.ಅವಳ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ ‘ ಗೌರಿ’ ಎಂದು ಕರೆದನು.ಆ ಕ್ಷಣವೇ ಸತಿಯ ಸಮಸ್ತಾವಯವಗಳ ಕಪ್ಪುಬಣ್ಣಕರಗಿ ಅವಳ ಅವಯವಗಳೆಲ್ಲ ಬಿಳಿಯವಾದವು. ಕಾಲಿಯು ಗೌರಿಯಾಗಿ ಪರಿವರ್ತನೆಯಾದಳು.ಶಿವನು ಸತಿಯ ಎದುರು ಪ್ರತ್ಯಕ್ಷನಾಗಿ ಅವಳನ್ನು ‘ ಗೌರಿ’ ಎಂದು ಸಂಬೋಧಿಸಿದ ದಿನವು ಹುಣ್ಣಿಮೆಯ ದಿನವಾಗಿತ್ತಾಗಿ ಅದು ಗೌರಿಹುಣ್ಣಿಮೆ ಎಂದು ಪ್ರಸಿದ್ಧಿಯಾಯಿತು.ಗೌರಿಯು ಪ್ರತಿಷ್ಠಾಪಿಸಿ,ಪೂಜಿಸಿದ್ದ ಶಿವಲಿಂಗವು ‘ ಗೌರೀಶ್ವರ ಲಿಂಗ’ ವೆಂದು ಲೋಕಪ್ರಸಿದ್ಧಿಯನ್ನು ಪಡೆಯಿತು.ಶಿವನು ಗೌರಿಯ ಪ್ರಾರ್ಥನೆಯಂತೆ ಗೌರೀಶ್ವರ ಲಿಂಗಕ್ಕೆ ಹಲವು ಮಹಿಮೆಗಳ ವರವನ್ನಿತ್ತು ಅನುಗ್ರಹಿಸುವನು.

ಇದು ಗೌರಿಹುಣ್ಣಿಮೆಯ ಕಥೆ.

ಮತ್ತೈದೆತನ ಸೇರಿದಂತೆ ಭಾಗ್ಯ- ಸೌಭಾಗ್ಯಗಳನ್ನು ಪಡೆಯಲು ಮಹಿಳೆಯರು ಗೌರಿಹುಣ್ಣಿಮೆಯಂದು ಗೌರಿಯನ್ನು ಕಟ್ಟಿಗೆ ಅಥವಾ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು‌ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.ಸಂಜೆ ನದಿ,ಕೆರೆಗಳಲ್ಲಿ ಇಲ್ಲದಿದ್ದರೆ ಬಾವಿಗಳಲ್ಲಿ ವಿಸರ್ಜಿಸುತ್ತಾರೆ.ಕೆಲವು ಕಡೆ ಹುಣ್ಣಿಮೆಯ ಐದು ದಿನಗಳ ಪೂರ್ವದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಹುಣ್ಣಿಮೆಯಂದು ಜಲದಲ್ಲಿ ವಿಸರ್ಜಿಸುತ್ತಾರೆ.ನಾನು ಸಣ್ಣವನಿದ್ದಾಗ ನಮ್ಮೂರು ಗಬ್ಬೂರಿನಲ್ಲಿ ಗೌರಿಹಬ್ಬವನ್ನು ಊರಿನ ಹೆಂಗಸರೆಲ್ಲ ಅದ್ದೂರಿಯಾಗಿ ಆಚರಿಸಿ, ಸಂಜೆ ನಮ್ಮ ಮನೆಯ ಮುಂದೆಯೇ ಗೌರಿಯನ್ನು ಹೊತ್ತು ಸಕ್ಕರೆಬಾವಿ ಎಂದು ಹೆಸರಾಗಿದ್ದ ಮೇಲುಶಂಕರ ದೇವಸ್ಥಾನದ ಮುಂದಿನ ಪುಷ್ಕರಣಿಯಲ್ಲಿ ವಿಸರ್ಜಿಸುತ್ತಿದ್ದುದನ್ನು ನೋಡಿದ್ದೇನೆ. ಹುಡುಗರಾಗಿದ್ದ ನಾವು ಸಕ್ಕರೆಯ ಬೊಂಬೆಗಳನ್ನು ತಿನ್ನುತ್ತ ಆನಂದಿಸುತ್ತಿದ್ದೆವು.ನಾನು ಹುಟ್ಟಿದ ನನ್ನ ತಾಯಿಯ ತವರುಮನೆ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಕೂಡ ಗೌರಿ ಹುಣ್ಣಿಮೆಯಂದು ಗೌರಿಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು.ಸಕ್ಕರೆಯ ಗೊಂಬೆಗಳ ಸವಿಯನ್ನು ವಾರಿಗೆಯ ಗೆಳೆಯರೊಂದಿಗೆ ಸವಿದ ನೆನಪು ಈಗಲೂ ಇದೆ.ಗೌರಿ ಹುಣ್ಣಿಮೆಯನ್ನಾಚರಿಸಿ,ಸಕ್ಕರೆಗೊಂಬೆಗಳನ್ನು ತಿಂದು ಮಲಗಿದ ನನ್ನ ತಾಯಿ ಮಲ್ಲಮ್ಮ ನನ್ನನ್ನು ಬೆಳಗಿನ ನಾಲ್ಕು ಘಂಟೆ ಐದು ನಿಮಿಷಕ್ಕೆ ಪ್ರಸವಿಸಿದಳಂತೆ.ಗೌರಿಹುಣ್ಣಿಮೆಯಂದು ಹುಟ್ಟಿದ್ದು‌ ಬಹುಶಃ ನಾನು ದುರ್ಗಾದೇವಿಯ ಉಪಾಸಕನಾಗಲು ಕಾರಣವಾಗಿರಬೇಕು.

ಕಾಲಿಯು ತನ್ನ ಕಪ್ಪು ಬಣ್ಣವನ್ನು ಕಳೆದುಕೊಂಡು ಗೌರಿಯಾದ ಈ ಹುಣ್ಣಿಮೆಯು ಮನುಷ್ಯರು ಮಲ -ದೋಷಗಳಿಂದ ಮುಕ್ತರಾಗಿ ಪರಶಿವನ ಅನುಗ್ರಹಪಡೆಯಲು‌ ಪ್ರೇರೇಪಿಸುವ ಸ್ಫೂರ್ತಿದಾಯಕ ಹಬ್ಬ.ಸಾಧಕರು ಶಿವಾನುಗ್ರಹದಿಂದ ಅವಗುಣಗಳಿಂದ ಮುಕ್ತರಾಗಿ ಶಿವಗುಣಯುಕ್ತರಾಗುವ ಶುಭದಿನ.ಭವದಬಳ್ಳಿಯನ್ನು ಹರಿದೊಗೆದು ಭವಮುಕ್ತರಾಗಿ ಅಭವಶಿವನಲ್ಲಿ ಒಂದಾಗುವ ಮೋಕ್ಷದಾಯಕ ದಿನ.ಮೂಲತಃ ನಿರಾಕಾರನಾಗಿದ್ದ ಪರಶಿವನು ವಿಶ್ವವ್ಯಾಪಾರವನ್ನು ಸಂಕಲ್ಪಿಸಿ ಗೌರೀಸಮೇತ ಹರ- ಗೌರಿ ಲೀಲೆ ನಟಿಸಿದ ಜಗದುತ್ಪತ್ತಿಯ ದಿನವೇ ಗೌರಿಹುಣ್ಣಿಮೆಯ ಹಿಂದಿನ ತತ್ತ್ವ,ದರ್ಶನ.

ಮುಕ್ಕಣ್ಣ ಕರಿಗಾರ
ಮೊ: 94808 79501

18.11.2021