ಬೀಸುವ ಗಾಳಿಯ ನಡುವೆ ಕತ್ತಲೆ ಕಳೆಯಲು ಪುಟ್ಟ ದೀಪವೊಂದನ್ನು ಹಚ್ಚಿ ಇಡುವ ಮುನ್ನ ಲೇಖಕರು: ದೀಪಕ್ ಶಿಂಧೆ

ಬೀಸುವ ಗಾಳಿಯ ನಡುವೆ ಕತ್ತಲೆ ಕಳೆಯಲು ಪುಟ್ಟ ದೀಪವೊಂದನ್ನು ಹಚ್ಚಿ ಇಡುವ ಮುನ್ನ

ಲೇಖಕರು: ದೀಪಕ್ ಶಿಂಧೆ

ಇವತ್ತು ಬೆಳಿಗ್ಗೆ ಎದ್ದ ತಕ್ಷಣ ಇದ್ದಕ್ಕಿದ್ದಂತೆ ನೆನಪಾಗಿದ್ದು ಖ್ಯಾತ ಲೇಖಕ,ಪತ್ರಕರ್ತ,ಚಿತ್ರನಟ,ಪ್ರಾರ್ಥನಾ ಶಾಲೆಯ ಸಂಸ್ಥಾಪಕ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ.ಈಗ ಒಂದು ವರ್ಷದ ಹಿಂದೆ ಇಂತಹದ್ದೇ ಒಂದು ದಿನ ಬರಸಿಡಿಲಿನಂತೆ ಅಪ್ಪಳಿಸಿದ ಸುದ್ದಿ ಎಂದರೆ ಬೆಳಗೆರೆ ನೋ ಮೋರ್….
ಯಾರು ನಮ್ಮ ಜೊತೆಗೆ ಇರಲಿ ಇಲ್ಲದೆ ಇರಲಿ ಬದುಕು ತನ್ನಷ್ಟಕ್ಕೆ ತಾನು ಸಾಗುತ್ತ ಹೋಗುತ್ತದೆ.ಬೆಳಗಿನ ಜಾವ ಹುಟ್ಟಿದ ಸೂರ್ಯ ಕೂಡ ನೋಡ ನೋಡುತ್ತಲೇ ಸಂಜೆಯಾಗುತ್ತಿದ್ದಂತೆ ನಿಧಾನಕ್ಕೆ ಕರಗುತ್ತ ಹೋಗಿ ಇನ್ನಿಲ್ಲವಾಗಿಬಿಡುತ್ತಾನೆ.ನಮ್ಮ ಬದುಕಿನಲ್ಲಿ ಬಹಳ ಕಷ್ಟಪಟ್ಟು ಗಳಿಸಿಕೊಂಡ ಇಮೇಜಿಗೆ ನಾವು ಮಾಡಿದ ಒಂದೇ ಒಂದು ಸಣ್ಣತಪ್ಪಿನ ಉಳಿಪೆಟ್ಟು ಬಿದ್ದು ಎಲ್ಲವೂ ಡ್ಯಾಮೇಜ್ ಆಗುತ್ತ ಹೋಗುತ್ತದೆ.ಅರೆ ಇವನು ಯಾವತ್ತೂ ಉದ್ದಾರ ಆಗಲ್ಲ ಅಂದವರ ಎದುರಲ್ಲೇ ಎಸ್ ಎಸ್ ಎಲ್ ಸಿ ಯಲ್ಲಿ ಮೂರು ಬಾರಿ ಫೇಲಾಗಿದ್ದ ಹುಡುಗನೊಬ್ಬ ಊರು ಬಿಟ್ಟು ಹೋಗಿ ಯಾವದೋ ಊರಿನಲ್ಲಿ ಕಷ್ಟಪಟ್ಟು ದುಡಿದು ಹತ್ತಾರು ವರ್ಷಗಳ ಬಳಿಕ ಕೋಟ್ಯಾಧೀಶನಾಗಿ ಬಿಡಬಹುದು.ಕವಿ,ಕತೆಗಾರ,ಸಾಹಿತಿಯೊಬ್ಬ ತನ್ನ ಬರವಣಿಗೆಯಿಂದ ಲಕ್ಷಾಂತರ ಓದುಗರನ್ನ ತಲುಪಿ ಸಾವಿರಾರು ಅಪ್ಪಟ ಅಭಿಮಾನಿಗಳನ್ನ ಹೊಂದಿಬಿಡಬಹುದು.ಆದರೆ ಜೀವನ ಅಂದ್ರೆ ಏನು? ವಾಟ್ ಇಜ್ ಲೈಫ್ ಅನ್ನುವ ಪ್ರಶ್ನೆಗೆ ಇಳಿವಯಸ್ಸಿನಲ್ಲೂ ತಡಕಾಡುವ ವಯೋವೃದ್ದರನ್ನ ನೋಡಿದಾಗ ಇಷ್ಟೇ ಮರೀ ಜೀವನಾ ಅನ್ನುವದಕ್ಕೆ ಖಂಡಿತಾ ಸಾಧ್ಯವಿಲ್ಲ. ಈ ಬದುಕಿನ ತಿರುವುಗಳೇ ಹಾಗೆ “ಆಯ್ ಯಾಮ್ ವೇರಿ ಹ್ಯಾಪಿ ವಿಥ್ ವಾಟ್ ಐ ಹ್ಯಾವ್” ಅನ್ನುವ ಜನರ ಒಳಗೂ ಒಂದಲ್ಲ ಒಂದು ಕೊರಗು ಖಂಡಿತ ಮನೆ ಮಾಡಿರುತ್ತದೆ.ಎಲ್ಲದಕ್ಕೂ ಕಾಲಾಯ ತಸ್ಮಯೇ ನಮಃ ಅನ್ನುತ್ತ ಕುಳಿತರೆ ಕಾಲ ಕೆಳಗಿನ ಕಾಲವೂ ಕೂಡ ಸರಿದು ಹೋಗಿ ನಾವೆಲ್ಲ ಬರಿದಾಗಿ ಬಿಡುತ್ತೇವೆ ಅಷ್ಟೇ.ಬೇಕಿದ್ದರೆ ಒಂದಷ್ಟು ನಿಮ್ಮ ಸುತ್ತ ಮುತ್ತಲಿನ ಜನರನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.”ಬೆಣ್ಣೆಯ ಮಾತಾಡುತ್ತ ಬೆಂಕಿ ಕಾರುವ ಜನರೇ ನಿಮ್ಮ ಎದುರು ನೋಡು ನೋಡುತ್ತ ಬೆಳೆದು ನಿಲ್ಲುತ್ತಾರೆಯೆ ಹೊರತು ನಾನು ಏನಿದ್ರೂ ಸ್ಟ್ರೇಟ್ ಫಾರ್ವರ್ಡ್‌ ಅನ್ನುವ ಯಾರೂ ಕೂಡ ಯಾವ ಕಾಲಕ್ಕೂ ಒಳ್ಳೆಯವರು ಅನ್ನಿಸಿಕೊಳ್ಳಲು ಸಾಧ್ಯವೇ ಇಲ್ಲ”.ಈ ಗೌರ್ಮೆಂಟ್ ಸ್ಕೀಮ್ ಎಲ್ಲಾ ನಮ್ಮಂಥೋರಿಗೆ ಅಲ್ಲ ಬ್ರದರ್ ಬಡವರಿಗೆ ಕೊಡಸೋಣ ಅಂದವನೊಬ್ಬ ಕೊನೆಯ ಕ್ಷಣದಲ್ಲಿ ಆಶ್ರಯ ಮನೆಯೂ ಇಲ್ಲದೆ ಬೀದಿಗೆ ಬಿದ್ದರೆ ಎನ್ ಸಾರ್ ನಿಮಗೆ ಸರ್ಕಾರಿ ಸ್ಕೀಮ್ ಅಲ್ಲಿ ಮನೆ ಬೇಕಾ ಸ್ವಲ್ಪ ಖರ್ಚಾಗುತ್ತೆ ಅನ್ನುತ್ತ ದಲ್ಲಾಳಿತನ ಮಾಡಿ ಅಧಿಕಾರಿಗಳ ಕೈ ಬೆಚ್ಚಗೆ ಮಾಡಿದ ವ್ಯಕ್ತಿಯೊಬ್ಬ ಫಾರ್ಚೂನರ್ ಕಾರು ಖರೀದಿಸಿ ಐಶಾರಾಮಿ ಆಗಿ ಬದುಕಿಬಿಡಬಹುದು.ಆದರೆ ಗಾಳಿ ಬಂದಾಗ ತೂರಿಕೊಳ್ಳುವವರು, ಸಮಯ ಸಂಧರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುವವರು,ಮತ್ತು ಬಂಡಲ್ ಮಾತುಗಳಲ್ಲೆ ಮಹಲು ಕಟ್ಟುವವರ ಸಮಯ ಒಂದಲ್ಲ ಒಂದು ದಿನ ಪಲ್ಲಟವಾಗುವದು ಮಾತ್ರ ನಿಶ್ಚಿತ.ಒನ್ಸ ಅಗೇನ್ ಮತ್ಯಾರದೋ ಬದುಕಿನ ಗುಟ್ಟುಗಳನ್ನ,ಇನ್ಯಾರದೋ ಮನೆಯ ವಿಷಯಗಳನ್ನ ರಾಜಾರೋಷವಾಗಿ ಮತ್ತೊಬ್ಬರ ಮುಂದೆ ಆಡಿಕೊಂಡು ನಗುವ,ಮತ್ತು ವಿನಾಕಾರಣ ಇನ್ಯಾರದೋ ಕುರಿತು ಇಲ್ಲ ಸಲ್ಲದ ಆರೋಪ ಮಾಡುವವರು ತಮ್ಮ ಗೋರಿಯನ್ನ ನಿಧಾನಕ್ಕೆ ತಾವೇ ತೋಡಿಕೊಳ್ಳುತ್ತಾರೆ.ವ್ಯಕ್ತಿಯೊಬ್ಬ ನಮ್ಮ ನಡುವೆ ಇದ್ದಾಗ ಅವರ ಬಗ್ಗೆ ನಾವು ತೋರಿಸುವ ನಿರ್ಲಕ್ಷ್ಯ ಅವರ ಅನುಪಸ್ಥಿತಿಯಲ್ಲಿ ನಮ್ಮನ್ನು ಅಗಾಧವಾಗಿ ಕಾಡಿಬಿಡಬಹುದು,ಆದರೆ ಮರಣ ಹೊಂದಿದ ವ್ಯಕ್ತಿಗಿಂತ ಅವರು ಇದ್ದಾಗ ನಾವು ನಡೆದುಕೊಂಡ ರೀತಿ, ನಮ್ಮ ನಡೆ,ನುಡಿಗಳು ನಮಗೆ ನೆನಪಾದಾಗ ಮನಸ್ಸು ಮತ್ತೆ ಮತ್ತೆ ಘಾಸಿಗೊಳ್ಳುತ್ತಲೇ ಹೋಗುತ್ತದೆ.ಈ ಜಗತ್ತಿನಲ್ಲಿ ತನ್ನಷ್ಟಕ್ಕೆ ತಾನು ಯಾರು ಬೇಕಾದರೂ ಬದುಕಿಬಿಡಬಹುದು ಆದರೆ ಮತ್ತೆ-ಮತ್ತೆ ಮತ್ತೊಬ್ಬರ ನೆನಪಿನಲ್ಲಿ ಉಳಿಯುವಂತೆ,ಅವರ ಅನುಪಸ್ಥಿತಿ ನಮ್ಮನ್ನು ಕಾಡುವಂತೆ ಬದುಕುವದು ತುಂಬಾ ಕಷ್ಟವಾದರೂ ಕೂಡ ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಅಂತ ತೋರಿಸಿಕೊಟ್ಟಿದ್ದು ತೆರೆದಿಟ್ಟ ಪುಸ್ತಕದಂತೆ ಬದುಕಿದ ಪತ್ರಕರ್ತ ರವಿಬೆಳಗೆರೆ.ತಮ್ಮ ಬದುಕಿನ ಸತ್ಯವನ್ನ ಯಾವತ್ತಿಗೂ ಬಚ್ಚಿಡದೆ,ಆರೋಪ-ಪ್ರತ್ಯಾರೋಪಗಳಿಗೆ ಸಮಾಜಮುಖಿಯಾಗಿ ತೆರೆದುಕೊಳ್ಳುತ್ತಲೇ ತಾನಾಯ್ತು ತನ್ನ ವೃತ್ತಿ ಆಯಿತು ಅಂತ ಬದುಕವದನ್ನ ತೋರಿಸಿಕೊಟ್ಟ ಬೆಳಗೆರೆ ನಮ್ಮ ನೆನಪಿನ ಅಂಗಳದಲ್ಲಿ ಯಾವತ್ತಿಗೂ ಅಸ್ತಂತಗವಾಗದ ರವಿಯಾಗಿ ಉಳಿದರೆ ಸದ್ದಿಲ್ಲದೆ ಸಹಾಯ ಮಾಡುತ್ತ,ಯಾವ ವಿವಾದಗಳಿಗೂ ಗುರಿಯಾಗದೆ, ಸಂಕಷ್ಟಕ್ಕೆ ಸಿಲುಕಿದ ಹತ್ತಾರು ಸಹ ಕಲಾವಿದರಿಗೆ, ತನ್ನ ಚಿತ್ರದ ನಿರ್ದೇಶಕರಿಂದ ಹಿಡಿದು,ಲೈಟ್ ಬಾಯ್ ವರೆಗೆ,ಅಷ್ಟೇ ಏಕೆ
ಸಹಾಯ ಸಿಗುವ ನಿರೀಕ್ಷೆಯಲ್ಲಿ ತನ್ನನ್ನು ಹುಡುಕಿಕೊಂಡು ಬಂದ ದೂರದ ಊರಿನ ಅಭಿಮಾನಿಗಳಿಗೆ ಕಣ್ಣುಮುಚ್ಚಿ ಕೈ ಮುಚ್ಚಿ ಸಾಧ್ಯವಾದ ಸಹಾಯ ಮಾಡುತ್ತ ಯಾವ ಪ್ರಚಾರದ ಹಂಗೂ ಇಲ್ಲದೆ ಬದುಕಿ, ಉಸಿರು ಚೆಲ್ಲಿದಾಗಲೂ ತನ್ನ ಕಣ್ಣು ದಾನ ಮಾಡಿ ಮತ್ತೊಬ್ಬರ ಬದುಕಿಗೆ ಬೆಳಕಾದ ರಾಜರತ್ನ,ಪವರ್ ಸ್ಟಾರ್ ಪುನೀತರಾಜಕುಮಾರ ವರೆಗೆ ಹಲವು ಆದರ್ಶಗಳು ನಮ್ಮ ಕಣ್ಣ ಮುಂದೆಯೆ ಇವೆ.ಒಂದಷ್ಟು ಅಕ್ಕರೆ ಮತ್ತು ಒಂದಷ್ಟು ಒಲವಿನಿಂದ ಹಚ್ಚಿಟ್ಟ ಹಣತೆಯೊಂದು ಕ್ಷಣಕಾಲ ಉರಿದರೂ ಕೂಡ ಕತ್ತಲೆಯಲ್ಲಿ ಬೆಳಕನ್ನೆ ಕೊಡುತ್ತದೆ ಅನ್ನುವದನ್ನ ನೆನಪಿಸುತ್ತ ನಮ್ಮಿಂದ ಸಾಧ್ಯವಾದರೆ ಇನ್ನೊಬ್ಬರಿಗೆ ಒಳೆಯದನ್ನು ಮಾಡೋಣ,ಒಂದಷ್ಟು ಸಂತಸದ ವಿಷಯಗಳನ್ನ ಹಂಚಿಕೊಳ್ಳೋಣ ಮತ್ತೊಬ್ಬರ ಕಷ್ಟಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡೋಣ, ಇಲ್ಲವಾದರೆ ಸುಮ್ಮನೇ ಇದ್ದುಬಿಡೋಣ ಅನ್ನೋದು ನನ್ನ ಅಭಿಪ್ರಾಯ ಏನಂತೀರಿ??

ದೀಪಕ್ ಶಿಂಧೆ, ಪತ್ರಕರ್ತ, ಅಥಣಿ
ಮೊ:9482766018