ಉತ್ಸವಮೂರ್ತಿ
ಲೇಖಕರು: ಮುಕ್ಕಣ್ಣ ಕರಿಗಾರ
ದೊಡ್ಡದೊಡ್ಡ ದೇವಸ್ಥಾನಗಳ ಜಾತ್ರೆ,ಉತ್ಸವಗಳ ಸಂದರ್ಭಗಳಲ್ಲಿ ಉತ್ಸವಮೂರ್ತಿಗಳ ಮೆರವಣಿಗೆ ಮಾಡುತ್ತಾರೆ.ರಥದಲ್ಲೋ ಪಲ್ಲಕ್ಕಿಯಲ್ಲೋ ಉತ್ಸವ ಮೂರ್ತಿಯನ್ನಿಟ್ಟು ಪೂಜಿಸಿ,ಭಕ್ತಿ ಮೆರೆಯುತ್ತಾರೆ ಭಕ್ತ ಜನರು.ಕೆಲವು ದೇವಸ್ಥಾನಗಳಲ್ಲಿ ವಾರ್ಷಿಕ ಜಾತ್ರೆ- ಉತ್ಸವಗಳ ಸಂದರ್ಭದಲ್ಲಿ ಮತ್ತೆ ಕೆಲವು ದೇವಸ್ಥಾನಗಳಲ್ಲಿ ಅಮವಾಸೆ- ಹುಣ್ಣಿಮೆ ಮತ್ತಿತರ ನಿಯತ ಸಂದರ್ಭಗಳಲ್ಲಿ ಉತ್ಸವ ಮೂರ್ತಿಯನ್ನು ಹೊರತಂದು ಪೂಜಿಸಿ,ಮೆರೆಸುತ್ತಾರೆ.ಜನರು ಉತ್ಸವಮೂರ್ತಿಯನ್ನು ಮೂಲಮೂರ್ತಿಯನ್ನು ಪೂಜಿಸಿದಷ್ಟೇ ಭಕ್ತಿಭಾವದಿಂದ ಪೂಜಿಸುತ್ತಾರೆ,ಮೂಲಮೂರ್ತಿಯನ್ನೇ ಕಾಣುತ್ತಾರೆ ಉತ್ಸವ ಮೂರ್ತಿಯಲ್ಲಿ.
ಮೂಲಮೂರ್ತಿಯು ಶಿಲೆಯ ಬೃಹತ್ ಮೂರ್ತಿ ಆಗಿರುವುದರಿಂದ ಅದನ್ನು ಹೊತ್ತುಹೊರತರಲು ಸಾಧ್ಯವಿಲ್ಲ.ಅಲ್ಲದೆ ಒಮ್ಮೆ ಪ್ರತಿಷ್ಠಾಪಿಸಿದ ಮೂರ್ತಿಯನ್ನು ಸ್ಥಳಾಂತರ ಮಾಡುವುದಾಗಲಿ,ಕದಲಿಸುವುದಾಗಲಿ ನಿಷಿದ್ಧಕ್ರಿಯೆ.ಗರ್ಭಗುಡಿಯೊಳಗಿನ ಮೂಲಮೂರ್ತಿಯನ್ನು ಕಾಣುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲವಾದ್ದರಿಂದ ಜನಸಾಮಾನ್ಯರು ಉತ್ಸವಮೂರ್ತಿಯನ್ನು ಕಣ್ತುಂಬಿಕೊಂಡೇ ಸಂತೋಷಪಡಬೇಕು.ಮೂಲಮೂರ್ತಿಯು ಜನರ ಬಳಿ ಬರುವುದಿಲ್ಲ,ಜನರೇ ಅದರ ದರ್ಶನಕ್ಕೆ ಹೋಗಬೇಕು.ಆದರೆ ಉತ್ಸವ ಮೂರ್ತಿಯು ಜನರ ಬಳಿ ಬರುತ್ತದೆ ಜನರನ್ನು ಅನುಗ್ರಹಿಸಿ,ಆಶೀರ್ವದಿಸು ವಕಾರಣದಿಂದ.ಉತ್ಸವಮೂರ್ತಿಯು ಮೂಲಮೂರ್ತಿಯ ಪ್ರತಿನಿಧಿಯಾಗಿ,ಅಂಶವಾಗಿ ಪೂಜೆ ಸೇವೆಗಳನ್ನು ಸ್ವೀಕರಿಸುತ್ತಾದರೂ ಅದು ಮೂಲಮೂರ್ತಿಯಲ್ಲ ! ಮೂಲಮೂರ್ತಿ ಆಗುವುದೂ ಇಲ್ಲ! ಮೂಲಮೂರ್ತಿಗೆ ಇರುವ ದಿವ್ಯತೆ,ಪ್ರಸನ್ನತೆ ಮತ್ತು ಪರಿಪೂರ್ಣತೆಗಳು ಉತ್ಸವಮೂರ್ತಿಯಲ್ಲಿ ಇಲ್ಲ.ಮೂಲಮೂರ್ತಿಯನ್ನು ದೈವಸಂಕಲ್ಪದಂತೆ ಪ್ರತಿಷ್ಠಾಪಿಸಲಾಗಿರುತ್ತದೆ ಶಾಸ್ತ್ರೋಕ್ತವಾಗಿ.ಆದರೆ ಉತ್ಸವಮೂರ್ತಿಯು ಕಂಚಿನದೊ ಬೆಳ್ಳಿಯದ್ದೋ ಆದ ವಿಗ್ರಹವಾಗಿರುತ್ತದೆ.ಮೂಲಮೂರ್ತಿಯಲ್ಲಿ ದೇವರ ಶಕ್ತಿ,ಅಂಶ ಪ್ರಕಟಗೊಂಡಿರುತ್ತದೆ.ಆದರೆ ಉತ್ಸವಮೂರ್ತಿಯಲ್ಲಿ ದೈವತ್ವದ ಪ್ರಕಟಣೆ ಆಗಿರುವುದಿಲ್ಲ.ದೈವವು ಒಂದು ಪ್ರಕಟಗೊಳ್ಳುವ ತನ್ನ ಸಂಕಲ್ಪದಂತೆ ಒಂದು ಶಿಲೆಯಲ್ಲಿ ಮೈದಾಳುತ್ತದೆ ಲೋಕಾನುಗ್ರಹದೃಷ್ಟಿಯಿಂದ.ನಿತ್ಯ ನೈಮಿತ್ತಿಕ ಪೂಜೆ,ಪ್ರಾರ್ಥನೆ,ಅರ್ಚನೆ- ಆರಾಧನೆಗಳ ಫಲವಾಗಿ ಆ ಮೂರ್ತಿಯಲ್ಲಿ ದೈವಕಳೆ ಜಾಗೃತಗೊಂಡು ವಿಕಸಿಸುತ್ತದೆ.ಆದರೆ ಉತ್ಸವ ಮೂರ್ತಿಯನ್ನು ವಿಶೇಷ ಪರ್ವ ಇಲ್ಲವೆ ಉತ್ಸವಗಳ ಕಾಲದಲ್ಲಿ ಮಾತ್ರ ಅಲಂಕರಿಸಿ ಪೂಜಿಸಲಾಗುವುದರಿಂದ ಅದರಲ್ಲಿ ಶಕ್ತಿಯ ಆಹ್ವಾಹನೆ ಆಗಿರುವುದಿಲ್ಲ.ಅದು ಉತ್ಸವಕ್ಕಷ್ಟೇ ಸೀಮಿತವಾದ ಮೂರ್ತಿ ಆದ್ದರಿಂದ ಅದರಲ್ಲಿ ಭವ್ಯತೆ,ದಿವ್ಯತೆಗಳನ್ನು ಪ್ರಕಟಗೊಳ್ಳುವುದಿಲ್ಲ.
ಉತ್ಸವಮೂರ್ತಿಯ ಮೆರವಣಿಗೆಯು ಮೂಲಮೂರ್ತಿಯ ಮಹಿಮೆಯನ್ನು ಸಾರುವುದೇ ಆಗಿರುತ್ತದೆ.ಮೂಲಮೂರ್ತಿಯ ಪ್ರತಿ ಅಥವಾ ಪ್ರತಿರೂಪವಾಗಿದ್ದರೂ ಉತ್ಸವಮೂರ್ತಿಯು ಮೂಲಮೂರ್ತಿಯಲ್ಲ ಎನ್ನುವುದನ್ನು ಗಮನಿಸಬೇಕು.ಪೂಜೆ,ಸೇವೆಗಳನ್ನು ಮೂಲಮೂರ್ತಿಯ ಪರವಾಗಿ ಸ್ವೀಕರಿಸುವ ಉತ್ಸವಮೂರ್ತಿಯು ಭಕ್ತರ ಬೇಡಿಕೆಗಳನ್ನು ಈಡೇರಿಸುವ ಸಾಮರ್ಥ್ಯ ಪಡೆದಿರುವುದಿಲ್ಲ.ಮೂಲಮೂರ್ತಿಯ ನಿಗ್ರಹಾನುಗ್ರಹ ಸಾಮರ್ಥ್ಯವು ಉತ್ಸವಮೂರ್ತಿಯಲ್ಲಿ ಇರುವುದಿಲ್ಲವಾಗಿ ವರನೀಡುವ,ಬೇಡಿಕೆ ಈಡೇರಿಸುವ ವಿಷಯದಲ್ಲಿ ಅದನ್ನು ಹೊಣೆಗಾರನನ್ನಾಗಿ ಮಾಡಲಾಗದು.ಅಷ್ಟಕ್ಕೂ ಉತ್ಸವಮೂರ್ತಿಯ ಕಲ್ಪನೆ ಅರ್ಚಕವರ್ಗದ್ದೇ ಹೊರತು ಮೂಲಮೂರ್ತಿಯ ಸಂಕಲ್ಪವಲ್ಲ.
ಉತ್ಸವಮೂರ್ತಿಗಳ ಕಲ್ಪನೆ,ಮೆರವಣಿಗೆಗಳಲ್ಲಿ ಮನುಷ್ಯರ ಸ್ವಾರ್ಥ ಮತ್ತು ದುರ್ಬುದ್ಧಿಗಳಿವೆ.ದೇವರು ನಿಮ್ಮನ್ನು ಅನುಗ್ರಹಿಸಲು ನಿಮ್ಮ ಬಳಿ ಉತ್ಸವಮೂರ್ತಿಯ ರೂಪದಲ್ಲಿ ಬಂದಿದ್ದಾನೆ ಎಂದು ಮುಗ್ಧಭಕ್ತರನ್ನು ನಂಬಿಸಿ ಅವರಿಂದ ಪೂಜೆ,ಕಾಣಿಕೆ- ದೇಣಿಗೆಗಳನ್ನು ಸಂಗ್ರಹಿಸುವುದು ಸ್ವಾರ್ಥವಾದರೆ ಶೂದ್ರರು ಮತ್ತು ದಲಿತರನ್ನು ದೇವಸ್ಥಾನದಿಂದ ಹೊರಗಿಡುವ,ದೇವಸ್ಥಾನ ಮತ್ತು ಗರ್ಭಗುಡಿಯತ್ತ ಅವರು ಬಾರದಂತೆ ತಡೆಯುವ ಬುದ್ಧಿವಂತಿಕೆಯಾಗಿ ಕಂಡುಕೊಂಡ ಜಾಣ್ಮೆಯೇ ಉತ್ಸವಮೂರ್ತಿಯ ಕಲ್ಪನೆ ಆದ್ದರಿಂದ ಅದು ಅರ್ಚಕವರ್ಗದ ದುರ್ಬುದ್ಧಿ.’ ಉತ್ಸವಮೂರ್ತಿಗೆ ನಮಸ್ಕರಿಸಿದ್ದೀರಲ್ಲ ಆಯಿತು,ಹೋಗಿ.ಮೂಲಮೂರ್ತಿ ಮತ್ತು ಉತ್ಸವಮೂರ್ತಿಗಳ ನಡುವೆ ವ್ಯತ್ಯಾಸ ಇಲ್ಲವಲ್ಲ.ಕೈಮುಗಿದು ಹೋಗಿ ಈ ಮೂರ್ತಿಗೆ’ ಎಂದು ಪದದುಳಿತರನ್ನು ಸಾಗುಹಾಕುವ ಜಾಣ್ಮೆಯೇ ಉತ್ಸವಮೂರ್ತಿಯ ಕಲ್ಪನೆ, ಮೆರವಣಿಗೆಯ ಹಿಂದಿನ ಕಾರಣ.ದೇವಸ್ಥಾನಗಳಲ್ಲಿ ಶೂದ್ರರು,ದಲಿತರು ಪ್ರವೇಶಿಸಬಾರದು ಎನ್ನುವ ಕಾರಣಕ್ಕೆ ಉತ್ಸವಮೂರ್ತಿ ಎನ್ನುವ ಪರಿಹಾರ ಕಂಡುಕೊಳ್ಳಲಾಗಿದೆ.
ಉತ್ಸವಮೂರ್ತಿಯ ಕಲ್ಪನೆಯೇ ಬರಬರುತ್ತ ಮಠ- ಪೀಠಾಧೀಶರುಗಳು,ಸ್ವಾಮಿಗಳು- ಗುರುಗಳ ಪಟ್ಟಾಭಿಷೇಕ- ನಿಯುಕ್ತಿಗೊಳಿಸುವಿಕೆಗಳ ಕಾರಣವಾಯಿತು.ಉತ್ಸವಮೂರ್ತಿಯು ಹೇಗೆ ದೇವರ ಮೂಲಮೂರ್ತಿಯಲ್ಲವೋ ಹಾಗೆ ಗುರುಗಳು- ಸ್ವಾಮಿಗಳು ಆದವರು ಕೂಡ ಮೂಲಮೂರ್ತಿಯ ಅಂಶರಲ್ಲ.ಬದಲಿಗೆ ಮೂಲಮೂರ್ತಿಯ ಸೇವೆ ಪೂಜೆ ಅರ್ಚನೆ- ಆರಾಧನೆಗಳಿಗೆ ನಿಯುಕ್ತಿಗೊಂಡವರು.ಮಠ- ಪೀಠಾಧೀಶರುಗಳ ನಿಯುಕ್ತಿಯಲ್ಲಿ ದೈವಸಂಕಲ್ಪಕ್ಕಿಂತ ಮನುಷ್ಯರ,ಸಮಾಜದ ಜಾಣ್ಮೆಯೇ ಹೆಚ್ಚು ಯುಕ್ತಿಪೂರ್ವಕವಾಗಿ ಕಾರ್ಯನಿರ್ವಹಿಸುತ್ತದೆ.ಮಠ ಪೀಠಾಧೀಶರುಗಳು ಸಹ ಉತ್ಸವ ಮೂರ್ತಿಯಂತೆಯೇ ಮಠದ ಭಕ್ತಜನರ ಬಳಿ ಬಂದು ಅವರಿಂದ ಸೇವೆ ಪೂಜೆಗಳನ್ನು ಸ್ವೀಕರಿಸುತ್ತ ದೇವಸ್ಥಾನದ ಹೆಸರಿನಲ್ಲಿ ಕಾಣಿಕೆ- ದೇಣಿಗೆಗಳನ್ನು ಪಡೆಯುತ್ತಾರೆ.ಮೂಲಮೂರ್ತಿಯ ಹೆಸರಿನಲ್ಲಿ,ಮೂಲಮೂರ್ತಿಯ ನಾಮದ ಬಲದಲ್ಲಿ ಭಕ್ತಜನರನ್ನು ಆಶೀರ್ವದಿಸುತ್ತಾರೆ.ಉತ್ಸವಮೂರ್ತಿಯಂತೆಯೇ ಮಠ- ಪೀಠಗಳ ಸ್ವಾಮಿಗಳು,ಗುರುಗಳೂ ಸಹ ಮೂಲಮೂರ್ತಿಯ ಹೆಸರಿನಲ್ಲಿ ಪೂಜೆ- ಸೇವೆಗಳನ್ನು ಸ್ವೀಕರಿಸುತ್ತ ಮೆರೆಯುತ್ತಾರೆಯೇ ಹೊರತು ಅವರಿಗೆ ಅವರದ್ದೇ ಆದ ಬಲ,ಆಧ್ಯಾತ್ಮಿಕ ಶಕ್ತಿ ಇರುವುದಿಲ್ಲ.ಉತ್ಸವಮೂರ್ತಿಯ ಕಲ್ಪನೆಯನ್ನು ಮುಂದುಮಾಡಿಕೊಂಡು ಅರ್ಚಕವರ್ಗವು ಸಮಾಜದ ಕೆಲವು ಜಾತಿ- ವರ್ಗಗಳನ್ನು ಹೊರಗಿಟ್ಟರೆ ಪೀಠಾಧಿಕಾರಿಗಳು ಎನ್ನುವ ಪರಂಪರೆಯನ್ನು ಸೃಷ್ಟಿಸಿ ಜನಸಾಮಾನ್ಯರು ಸ್ವಾಮಿಗಳು- ಗುರುಗಳ ಮುಂದೆಯೇ ಮಂಡಿಯೂರಿ,ವ್ಯಕ್ತಿಪೂಜೆಯಲ್ಲಿ ಮೈಮರೆಯುವಂತೆ, ಮೂಲದೇವರನ್ನು ಮರೆಯುವಂತೆ ಸಮೂಹಸನ್ನಿಯನ್ನುಂಟುಮಾಡುವ ಮೂಲಕ ದೇವರಪಥದಿಂದ ಅವರುಗಳನ್ನು ವಿಮುಖರನ್ನಾಗಿಸುವ ಪಟ್ಟಭದ್ರರ ಬುದ್ಧಿವಂತಿಕೆಯು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತದೆ.ಒಬ್ಬ ವ್ಯಕ್ತಿ ಆಧ್ಯಾತ್ಮಿಕವಾಗಿ ಬೆಳೆಯಲು,ಸಿದ್ಧಿ ಸಂಪಾದಿಸಲು ಮೂಲಮೂರ್ತಿಯ ಅಗತ್ಯವಿದೆಯೇ ಹೊರತು ಉತ್ಸವಮೂರ್ತಿಯ ಅಗತ್ಯವಿಲ್ಲ.ಮೂಲಮೂರ್ತಿಯ ದರ್ಶನ,ಸಾಕ್ಷಾತ್ಕಾರಗಳನ್ನು ಪಡೆದವರ ನಿದರ್ಶನಗಳಿವೆಯಾದರೂ ಉತ್ಸವಮೂರ್ತಿಯು ಅನುಗ್ರಹಿಸಿದ ನಿದರ್ಶನಗಳು ಎಲ್ಲಿಯೂ ಇಲ್ಲ ಎನ್ನುವುದು ದೇವರು ಮತ್ತು ಭಕ್ತರ ನಡುವಿನ ಸಹಜ ಬಾಂಧವ್ಯಕ್ಕೆ ಸಾಕ್ಷಿ.ಹಾಗಾಗಿ ಮೂಲಮೂರ್ತಿಯಲ್ಲಿಯೇ ನಾವು ಆಸಕ್ತರಾಗಿ ಭಕ್ತಿ,ಶ್ರದ್ಧೆಗಳನ್ನು ಮೆರೆಯಬೇಕೇ ಹೊರತು ಉತ್ಸವಮೂರ್ತಿಗಳ ಎದುರು ಮೈಮಣಿಯಬಾರದು.

ಮೊ: 94808 79501
16.11.2021