ಅಜ್ಜಿ ನೂತದ್ದೆಲ್ಲ ಅಜ್ಜನ ಉಡದಾರಕ್ಕೆ – ಮುಕ್ಕಣ್ಣ ಕರಿಗಾರ

ಅಜ್ಜಿ ನೂತದ್ದೆಲ್ಲ ಅಜ್ಜನ ಉಡದಾರಕ್ಕೆ

ಲೇಖಕರು: ಮುಕ್ಕಣ್ಣ ಕರಿಗಾರ

‘ ಅಜ್ಜಿ ನೂತದ್ದೆಲ್ಲ ಅಜ್ಜನ ಉಡದಾರಕ್ಕೆ’ ಎನ್ನುತ್ತದೆ ಗಾದೆ ಮಾತೊಂದು.ಸೊಂಟಕ್ಕೆ ಕಟ್ಟುವ ದಾರವನ್ನು ಉಡದಾರ,ಉಡುದಾರ ಎಂದು ಕರೆಯುತ್ತಾರೆ.ಉಡಿದಾರ ಎನ್ನುವುದು ಸರಿಯಾದ ರೂಪವಾದರೂ ಉಡುದಾರ ಶಬ್ದವು ವ್ಯಾಪಕ ಬಳಕೆಯಲ್ಲಿದೆ.ಅಜ್ಜಿಯು ರಾಟೆಯಿಂದ ತೆಗೆದ ನೂಲು ಅಜ್ಜನ ಉಡಿದಾರಕ್ಕೆ ಆಗುವಷ್ಟು ಮಾತ್ರ ಆಯಿತಂತೆ! ಅಂದರೆ ಬಡವರು,ದುರ್ಬಲರ ದುಡಿಮೆಯಿಂದ ಬರುವ ಹಣವು ಅವರ ಜೀವನೋಪಾಯಕ್ಕೂ ಸಾಲದು ಎನ್ನುವ ಜನಸಾಮಾನ್ಯರ ಬದುಕಿನ ಚಿತ್ರಣ ಈ ಗಾದೆಯಲ್ಲಿದೆ.

ರಾಟೆಯಿಂದ ನೂಲು ತೆಗೆದು ಆ ನೂಲನ್ನು ಬಟ್ಟೆ ಮಾಡಲು ಮಾರುತ್ತಾರೆ.ಒಂದು ಬಡಕುಟುಂಬದಲ್ಲಿ ತರುಣರು,ಸದೃಢಕಾಯರು ಆದ ವಯಸ್ಕರುಗಳು ನೂಲುತೆಗೆದು ಮಾರಿದರೂ ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲ.ಆ ಮನೆಯಲ್ಲಿ ವೃದ್ಧ ದಂಪತಿಗಳೂ ಇರುತ್ತಾರೆ.ಅಜ್ಜ ವಯೋಸಹಜ ಬೇನೆ,ರೋಗಗಳಿಂದ ಹಾಸಿಗೆ ಹಿಡಿದಿದ್ದಾನೆ.ಕುಟುಂಬದ ನಿರ್ವಹಣೆಯೇ ಸಮಸ್ಯೆ ಆಗಿರುವಾಗ ಅಜ್ಜನ ಔಷಧೋಪಚಾರದ ಕಡೆ ಕುಟುಂಬವು ಅಷ್ಟಾಗಿ ಗಮನಿಸಿಲ್ಲ ಎಂದು ಕಾಣುತ್ತದೆ.ಸ್ವಾಭಿಮಾನಿಯಾದ ಅಜ್ಜಿ ತನ್ನ ಗಂಡನನ್ನು ಸರಿಯಾಗಿ ಆದರಿಸದ ಕುಟುಂಬದವರ ವಿರುದ್ಧ ಸಿಟ್ಟಿಗೆದ್ದು ನಾನೂ ನೂಲುತ್ತೇನೆ ಎಂದು ಪಟ್ಟು ಹಿಡಿದು ನೂಲತೊಡಗುತ್ತಾಳೆ.ಕುಟುಂಬದವರು ‘ ನಿನ್ನಿಂದ ಆಗದು,ಬೇಡ’ ಎಂದರೂ ಕೇಳದ ಅಜ್ಜಿ ರಾಟೆಹಿಡಿದು ನೂಲತೊಡಗುವಳು.ಮೊದಲೇ ಮುದುಕಿ.ಮೈಯಲ್ಲಿ ತ್ರಾಣ ಇಲ್ಲ.ಎಷ್ಟು ನೂಲಬಲ್ಲಳು? ಒಂದೆರೆಡು ಮೊಳ ನೂತಳಂತೆ.ಆ ನೂಲು ಅಜ್ಜನ ಉಡುದಾರಕ್ಕೆ ಮಾತ್ರ ಆಯಿತಂತೆ! ಮನೆಯವರು ‘ಅಜ್ಜಿ ನೂತದ್ದೆಲ್ಲ ಅಜ್ಜನ ಉಡುದಾರಕ್ಕೆ’ ಎಂದು ನಕ್ಕರಂತೆ.

ಈ ಗಾದೆ ಜನಸಾಮಾನ್ಯರು,ಬಡವರ ಬದುಕಿನ ಬವಣೆಯತ್ತ ಬೆರಳು ಮಾಡಿ ತೋರಿಸುತ್ತದೆ.ಬಡವರು ಮೈಮುರಿದು ದುಡಿದರೂ ಹೊಟ್ಟೆ ಬಟ್ಟೆಗೆ ಸಾಕಾಗುವುದಿಲ್ಲ.ಇಂತಹದ್ದರಲ್ಲೆ ಮನೆಯಲ್ಲಿ ಹೆಂಗಸರ ಹೆರಿಗೆ,ಮುದುಕರ ರೋಗ ರುಜಿನಗಳು ಕುಟುಂಬವನ್ನು ಕಾಡುತ್ತವೆ.ಹೆರಿಗೆಯನ್ನು ಮಾಡಿಸುವುದರತ್ತ,ಗರ್ಭಿಣಿಯ ಬಯಕೆ- ಬೇಡಿಕೆಗಳನ್ನು ಈಡೇರಿಸುವತ್ತ ಹೇಗೋ ಗಮನಿಸಬಹುದು ಇದ್ದ ಅಲ್ಪ ಸ್ವಲ್ಪ ಹಣದಲ್ಲಿ.ಆದರೆ ಹಾಸಿಗೆಹಿಡಿದ ಮುದುಕರ ವೈದ್ಯಕೀಯ ವೆಚ್ಚ ನಿಭಾಯಿಸುವುದು ಸಾಧ್ಯವಾಗುತ್ತಿಲ್ಲ.ಈ ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳದ ಮುದುಕಿ ತನ್ನ ಗಂಡನನ್ನು ಕುಟುಂಬದವರು ತಾತ್ಸಾರ ಮಾಡುತ್ತಿದ್ದಾರೆ ಎಂದೇ ಭಾವಿಸಿ ತಾನು ನೂತು ತನ್ನ ಗಂಡನ ವೈದ್ಯಕೀಯ ವೆಚ್ಚ ಸೇರಿದಂತೆ ಅವನ ಯೋಗಕ್ಷೇಮ ವಿಚಾರಿಸುವೆ ಎಂದು ನಿರ್ಧರಿಸುತ್ತಾಳೆ.ಅಜ್ಜಿಯ ಈ ನಿರ್ಧಾರದಲ್ಲಿ ‘ಮುದುಕರು ಮನೆಗೆ ಭಾರ ‘ಎನ್ನುವ ಕುಟುಂಬಗಳಲ್ಲಿ ಕಂಡುಬರುತ್ತಿರುವ ಉದಾಸೀನ ಇಲ್ಲವೇ ಅಮಾನವೀಯ ಭಾವನೆಯ ವಿರುದ್ಧದ ಪ್ರತಿಭಟನೆಯ ಮನೋಭಾವ ಇದೆ.ಅವಿಭಕ್ತಕುಟುಂಬ ಪದ್ಧತಿಯು ನಶಿಸಿದ ಪರಿಣಾಮವಾಗಿ ಕುಟುಂಬ ಪದ್ಧತಿಯಲ್ಲಿ ಬದಲಾವಣೆ ಆಗಿ ಅದರಲ್ಲೂ ವಿದ್ಯಾವಂತರಲ್ಲಿ ಉಂಟಾದ ಸ್ವಾರ್ಥ ಮತ್ತು ಸಂಕುಚಿತ ಭಾವನೆಗಳಿಂದ ಅವರ ಹೆಂಡಿರು ಮಕ್ಕಳೇ ಕುಟುಂಬ ಎನ್ನುವ ಭಾವನೆ ಬಲಿಯತೊಡಗಿದ ಪರಿಣಾಮ ಕುಟುಂಬ ಜೀವನ,ಬಂಧು ಬಾಂಧವರು ಎನ್ನುವ ಬಾಂಧವ್ಯಭಾವನೆ ಹೇಳಹೆಸರಿಲ್ಲದಂತೆ ಆಗಿದೆ.ಆ ಮುದುಕರಿಂದಲೇ ತಾವು ಬಂದಿದ್ದೇವೆ ಎನ್ನುವ ಪ್ರಜ್ಞೆ ಅವರ ಮಕ್ಕಳು ಮೊಮ್ಮಕ್ಕಳುಗಳಿಗೆ ಇಲ್ಲ.ಮುದುಕರು ಎಂದರೆ ಬೇಡವಾದವರೆ.ವೃದ್ಧಾಶ್ರಮಗಳಿಗೆ,ಅನಾಥಾಶ್ರಮಗಳಿಗೆ ತಮ್ಮ ತಂದೆ- ತಾಯಿಯರನ್ನು ಸೇರಿಸುವ ಎಷ್ಟೋ ಪುಣ್ಯಾತ್ಮರಾದ ಮಕ್ಕಳುಗಳಿದ್ದಾರೆ.ತಾಯಿ ತಂದೆಯರು ಇಂತಹ ಪುಣ್ಯಾತ್ಮರುಗಳನ್ನು ಹೆತ್ತು ಹೊತ್ತು ಸಾಕಿ ಸಲುಹಿದ ಕಷ್ಟ,ಈ ಪುಣ್ಯಾತ್ಮರುಗಳಿಗಾಗಿ ಅವರು ಪಟ್ಟಪಾಡು ಇಂತಹ ಮಹಾನುಭಾವರುಗಳಿಗೆ ಅರ್ಥ ಆಗುವುದೇ ಇಲ್ಲ.ಮಡದಿ ಒಬ್ಬಳು ಮನೆಗೆ ಬಂದೊಡನೆ ತಂದೆ ತಾಯಿಯರು ಹೊರಗಿನವರಾಗಿ ಕಾಣಿಸುತ್ತಾರೆ.ಮಕ್ಕಳು ಹುಟ್ಟಿದೊಡನೆ ತಂದೆ ತಾಯಿಗಳು ಮನೆಗೆ ಬೇಡವಾದವರು ಆಗುತ್ತಾರೆ.ಸಾವು ಬರಬಾರದೆ ಈ ಮುದುಕರಿಗೆ ಎಂದು ಯೋಚಿಸುವ ರಾಕ್ಷಸ ಮಕ್ಕಳೂ ಇದ್ದಾರೆ ಎನ್ನುವುದು ಕಟು ವಾಸ್ತವವೆ.ತಂದೆ ತಾಯಿಗಳನ್ನು ನಿರ್ಲಕ್ಷಿಸಿದ ಮಹಾಶಯ ಮಕ್ಕಳುಗಳು ಕೊನೆಗೂ ತಮಗೂ ಅದೇಗತಿಪ್ರಾಪ್ತಿಯಾಗುತ್ತದೆ ಎಂದು ಯೋಚಿಸುವುದಿಲ್ಲ!

ಮಕ್ಕಳು ಮೊಮ್ಮಕ್ಕಳ ಅನಾದರಣೆಗೆ ತುತ್ತಾದ ಮುದುಕಿ ತಾನು ತನ್ನ ಗಂಡನನ್ನು ಸಲಹಬಲ್ಲೆ ಎನ್ನುವ ವಿಶ್ವಾಸದಿಂದ ನೂಲುವ ಕ್ರಿಯೆ ಅವಳ ಸ್ವಾಭಿಮಾನದ ಪ್ರತೀಕ ಮಾತ್ರವಲ್ಲ ತನ್ನ ಗಂಡನ ಮೇಲಿರುವ ಪ್ರೀತಿ- ಕಾಳಜಿಗಳ ಹಳೆಯ ಕಾಲದ ಸಂಬಂಧಗಳ ಮಾನವೀಯ ಮೌಲ್ಯಗಳ ಸಂಕೇತವೂ ಹೌದು.’ ಗಂಡನ ಉಡುದಾರ ಗಟ್ಟಿ ಇದ್ದರೆ ಹೆಂಡತಿಯ ಆಯುಷ್ಯ ಗಟ್ಟಿ ಇರುತ್ತದೆ’ ಎನ್ನುವ ನಂಬಿಕೆಯು ಜನಪದರಲ್ಲಿತ್ತು.ಹಾಗಾಗಿ ಉಡುದಾರವನ್ನು ದಪ್ಪನೆಯ ದಾರದಲ್ಲಿ ಗಟ್ಟಿಯಾಗಿ ಕಟ್ಟುತ್ತಿದ್ದರು.ತಾಳಿಯು ಹೆಣ್ಣಿನ ಸೌಭಾಗ್ಯದ ಕುರುಹು ಆಗಿದ್ದರೆ ಉಡುದಾರ ಗಂಡಸು ವಿದುರನಲ್ಲ ಎನ್ನುವುದರ ಸಂಕೇತ.ಗಂಡ ಸತ್ತಾಗ ಹೆಂಡತಿ ತನ್ನ ತಾಳಿಯನ್ನು ಕಿತ್ತೆಸೆದು ತಾನು ವಿಧವೆಯಾದೆ ಎಂದು ಸಾರುವಂತೆ ಹೆಂಡತಿ ಸತ್ತಾಗ ಗಂಡನು ತನ್ನ ಉಡಿದಾರವನ್ನು‌ ಕಿತ್ತೆಸೆದು ತಾನು ವಿದುರನಾದೆ ಎಂದು ಸಾರುತ್ತಾನೆ.ಹೆಂಡತಿಯ ಕೊರಳೊಳಗಿನ ತಾಳಿ ಗಟ್ಟಿ ಇದ್ದರೆ ಗಂಡನ ಆಯುಷ್ಯ ಗಟ್ಟಿಯಾಗಿರುತ್ತದೆ,ಗಂಡನ ಸೊಂಟದ ಉಡಿದಾರ ಗಟ್ಟಿ ಇದ್ದರೆ ಹೆಂಡತಿಯ ಆಯುಷ್ಯ ಗಟ್ಟಿ ಇರುತ್ತದೆ ಎನ್ನುವ ನಂಬಿಕೆ ವ್ಯಾಪಕವಾಗಿತ್ತು ಹಿಂದೆ ಗ್ರಾಮೀಣ ಜನಪದರಲ್ಲಿ.ಈಗ ಇಂತಹ ನಂಬಿಕೆಗಳು ಮೌಢ್ಯ ಮತ್ತು ಅಪಹಾಸ್ಯವಾಗಿ ಕಾಣಬಹುದಾದರೂ ಆ ನಂಬಿಕೆಗಳ ಹಿಂದಿನ ಸಂಬಂಧಗಳಲ್ಲಡಗಿದ ಅಮೃತಮಯ ಭಾವನೆಯನ್ನು ಅಲ್ಲಗಳೆಯಲಾಗದು.

ಮುಕ್ಕಣ್ಣ ಕರಿಗಾರ
ಮೊ;94808 79501

14.11.2021