ರಾಯಚೂರು ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆ ಉಳಿಸಿ ಬೆಳೆಸಲು ಶ್ರಮಿಸುವೆ – ರಂಗಣ್ಣ ಪಾಟೀಲ್ ಅಳ್ಳುಂಡಿ

ರಂಗಣ್ಣ ಪಾಟೀಲ್ ಅಳ್ಳುಂಡಿ

ರಾಯಚೂರು ನ.13: ನವಂಬರ್21 ರಂದು ನಡೆಯಲಿರುವ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯ ಅಭ್ಯರ್ಥಿ ರಂಗಣ್ಣ ಪಾಟೀಲ್ ಅಳ್ಳುಂಡಿ ಜಿಲ್ಲೆಯಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಎಲ್ಲಾ ತಾಲ್ಲೂಕು ಹಾಗೂ ಹೋಬಳಿಗಳಲ್ಲಿ ಬೆಂಬಲಿಗರು ಹಾಗೂ ಹಿತೈಷಿಗಳ ಜತೆಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿರುವ ರಂಗಣ್ಣ ಪಾಟೀಲ್ ಉತ್ಸಾಹದಿಂದ ಮುನ್ನಡೆದಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೂರು ದಶಕಗಳ ಸೇವೆಯ ಮೂಲಕ ಅತ್ಯುತ್ತಮ ಸಂಘಟಕರು ಎಂದು ಗುರುತಿಸಲ್ಪಟ್ಟಿರುವ ರಂಗಣ್ಣ ಪಾಟೀಲ್ ತಮ್ಮ ಧ್ಯೇಯೋದ್ದೇಶಗಳ ಕುರಿತು ಇಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

* ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಪ್ರಚಾರ ಕಾರ್ಯ ಹೇಗಿದೆ ಸರ್ ?
ರಂಗಣ್ಣ ಪಾಟೀಲ್: ನನ್ನ ಸ್ಪರ್ಧೆಗೆ ಎಲ್ಲೆಡೆ ಉತ್ತಮ ಸ್ಪಂದನೆ, ಬೆಂಬಲ ವ್ಯಕ್ತವಾಗುತ್ತಿದೆ. ಪರಿಷತ್ತಿನ ಅಧ್ಯಕ್ಷನಾಗಿ ನಾನು ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಜಿಲ್ಲೆಯ ಅನೇಕ ಹಿರಿಯ ಸಾಹಿತಿಗಳು, ಸಂಘಟಕರು, ಯುವ ಬರಹಗಾರರು, ಪರಿಷತ್ತಿನ ಆಜೀವ ಸದಸ್ಯರು ಸಹಮತ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಾ ಕಡೆ ಬೆಂಬಲಿಗರು ಉತ್ಸಾಹದಿಂದ ಆಜೀವ ಸದಸ್ಯರ ಮನೆ ಮನೆಗೆ ತೆರಳಿ ನನ್ನ ಪರವಾಗಿ ಮತಯಾಚನೆ ಕಾರ್ಯದಲ್ಲಿ ತೊಡಗಿದ್ದಾರೆ.

* ರಾಜ್ಯದಲ್ಲಿ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಹೇಗೆ ಪ್ರತಿನಿಧಿಸಲಿದ್ದೀರಿ?
ಪಾಟೀಲ್: ನಾಡಿನ ಸಾರಸ್ವತ ಲೋಕದಲ್ಲಿ ರಾಯಚೂರು ಜಿಲ್ಲೆಗೆ ವಿಶಿಷ್ಟ ಪರಂಪರೆ, ಸ್ಥಾನ ಇದೆ. ದಾಸರು, ಶರಣರು, ತತ್ವಪದಕಾರರು, ಹೆಸರಾಂತ ಸಂಗೀತ ಸಾಧಕರು ಹಾಗೂ ಚಿತ್ರ ಕಲಾವಿದರು ಜನಿಸಿದ ಪುಣ್ಯ ಭೂಮಿ ಇದು. ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಕಥೆಗಾರರು, ಕವಿಗಳು ರಾಜ್ಯಮಟ್ಟದಲ್ಲಿ ರಾಯಚೂರಿಗೆ ಕೀರ್ತಿ ತಂದಿದ್ದಾರೆ. ಈ ನೆಲದಲ್ಲಿ ಸಾಹಿತ್ಯದ ಕೆಲಸ ಮಾಡುವುದೇ ನನಗೆ ದೊಡ್ಡ ಅವಕಾಶ. ಜಿಲ್ಲೆಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿ ಬೆಳೆಸಲು ಶ್ರಮಿಸುವ ಮೂಲಕ ನಾಡಿನ ಎಲ್ಲರ ಗಮನ ಸೆಳೆಯುವಂತೆ ಕ್ರಿಯಾಶೀಲತೆಯಿಂದ ಕೆಲಸ ಮಾಡುವೆ.

* ಸ್ಥಳೀಯ ಪ್ರತಿಭಾವಂತರಿಗೆ ಅವಕಾಶಗಳನ್ನು ಹೇಗೆ ದೊರಕಿಸಿಕೊಡುವಿರಿ?
ಪಾಟೀಲ್: ಜಿಲ್ಲೆಯ ಶಿಕ್ಷಣ, ಸಾಹಿತ್ಯ ಹಾಗೂ ಸಮಾಜ ಸೇವೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿಭಾವಂತರು ಇದ್ದಾರೆ. ಪ್ರತಿಯೊಬ್ಬರಿಗೂ ಪ್ರತಿಭೆಗೆ ತಕ್ಕ ಮನ್ನಣೆ ಸಿಗಬೇಕು ಎನ್ನುವುದು ನನ್ನ ಬಯಕೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಸೂಕ್ತ ಗೌರವ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ.

*ಯುವ ಬರಹಗಾರರನ್ನು ಪ್ರೋತ್ಸಾಹಿಸಲು ನಿಮ್ಮ ಭರವಸೆಗಳು ಏನು?
ಪಾಟೀಲ್: ಜಿಲ್ಲೆಯ ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಪರಿಷತ್ತಿನ ವತಿಯಿಂದ ನಿರಂತರವಾಗಿ ಕಥಾ ಹಾಗೂ ಕಾವ್ಯ ಕಮ್ಮಟ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು. ನಾಡಿನ ಹಿರಿಯ ಸಾಹಿತಿಗಳು ಹಾಗೂ ಲೇಖಕರ ಮಾರ್ಗದರ್ಶನ ಪಡೆಯಲಾಗುವುದು. ಸ್ಥಳೀಯರಿಗೆ ರಾಜ್ಯ ಮಟ್ಟದಲ್ಲಿ ನಡೆಯುವ ಸಾಹಿತ್ಯಿಕ ಚಿಂತನ-ಮಂಥನ, ತರಬೇತಿ ಶಿಬಿರಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಜಿಲ್ಲೆಯ ಸಾಹಿತ್ಯಿಕ ಲೋಕದಲ್ಲಿ ಹೊಸ ಮನ್ವಂತರ ಸೃಷ್ಟಿಸುವ ಕನಸು ನನ್ನದು.

* ರಾಜ್ಯಮಟ್ಟದ ಅಕಾಡೆಮಿ, ಪ್ರಾಧಿಕಾರಗಳಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವ ನೀಡುವ ವಿಚಾರದಲ್ಲಿ ರಾಯಚೂರು ಜಿಲ್ಲೆಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವ ಕೊರಗು ಇದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಪಾಟೀಲ್: ನಮ್ಮ ಜಿಲ್ಲೆಯ ಹಿರಿಯ ಲೇಖಕರು, ಸಾಹಿತಿಗಳು, ಪ್ರತಿಭಾವಂತರು ಹಾಗೂ ಉತ್ಸಾಹದಿಂದ ಕೆಲಸ ಮಾಡುವ ಸಂಘಟಕರಿಗೆ ರಾಜ್ಯಮಟ್ಟದ ವಿವಿಧ ಅಕಾಡೆಮಿ, ಪ್ರಾಧಿಕಾರಗಳಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕು ಎನ್ನುವುದು ಕೂಡ ನನ್ನ ಒತ್ತಾಯ.

* ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಲವರ್ಧನೆಗೆ ನಿಮ್ಮ ಕಾರ್ಯಸೂಚಿ ಏನು?
ಪಾಟೀಲ್: ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನ ಚುರುಕುಗೊಳಿಸಿ ಆಜೀವ ಸದಸ್ಯರ ಸಂಖ್ಯೆ ಹೆಚ್ಚಿಸಲಾಗುವುದು. ದಾನಿಗಳನ್ನು ಸಂಪರ್ಕಿಸುವ ಮೂಲಕ ಪರಿಷತ್ತಿಗೆ ದತ್ತಿಗಳನ್ನು ಪಡೆಯಲಾಗುವುದು. ಪ್ರತಿ ವರ್ಷ ಜಿಲ್ಲೆಯ ಎಲ್ಲೆಡೆ ತಾಲ್ಲೂಕು, ಜಿಲ್ಲಾ ಸಮ್ಮೇಳನಗಳ ಆಯೋಜನೆ, ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನಗಳ ನಿರ್ಮಾಣ, ವಿಚಾರ ಸಂಕಿರಣ ಹಾಗೂ ಕನ್ನಡಪರ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ನಾಡು, ನುಡಿ ರಕ್ಷಣೆ ಹಾಗೂ ಬೆಳವಣಿಗೆಗೆ ಕೆಲಸ ಮಾಡುವೆ. ಎಲ್ಲಾ ಹಿರಿಯರು, ಕಿರಿಯರು ಹಾಗೂ ಗೆಳೆಯರನ್ನು ಒಗ್ಗೂಡಿಸಿಕೊಂಡು, ಎಲ್ಲರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಕನ್ನಡಮ್ಮನ ತೇರು ಏಳೆಯುವೆ.

ಸಂದರ್ಶನ: ಬಸವರಾಜ ಭೋಗಾವತಿ
ಮೊ:9880013122