ಕಾವ್ಯಲೋಕ: ಡಾ.ಎಲ್.ಜಿ.ಗಗ್ಗರಿ ಅವರ ಕವನ ‘ಬದಗನಿಗೆ ಒಲಿದ ಸುಂದರಿ’

ಬದಗನಿಗೆ ಒಲಿದ ಸುಂದರಿ

      *ಡಾ.ಎಲ್.ಜಿ.ಗಗ್ಗರಿ

1
ಮತಿಗೆಟ್ಟ ಅತಿ ಸುಂದರಿಗೆ
ಬದಗನ ಸಂಗೀತ ಸ್ವರ
ಕಾಮನೆಗಳ ಸುರ
ಮತಿಗೆಟ್ಟಳು ಸುಂದರಿ
ಬದಗನ ಬಯಸಿ
ವಂಕನ ಧ್ವನಿ ಪೆಟ್ಟಿಗೆಯ
ಆಗಾಗ ವರ್ಧಿಸಲು ಕಂಠಸಿರಿಯ ಐಸಿರಿಯನು ತಿಮಿರ್ ಉನ್ಮಾದದಲಿ ಬಂಧಿಸಿ
ಹಿಡಿದಿಡಲೇ…?
ವಕ್ರಗಳ ಚೀಪಿ ನೀರಾಗಿಸಿ
ಸುಂದರ ಸೌಧವ ಕಟ್ಟಲೇ…?
ಮುಪ್ಪುರದ ಮರ ಚಿಗುರಿಸಿ
ಕಾಳಿಂಗನ ಸಲ್ಲಾಪಿಸಲೇ…? ತಪ್ಪಿದಳು ಸುಂದರಿ
ಲಾಯದಲಿ ಆಯ.

2
ಬಿದ್ದಳು ಬದಗ್ಗನೆ ಬದಗನಿಗೆ
ಸುಕ್ಕಿದ ಮಾಂಸವ
ಸೊಕ್ಕಾಗಿಸಿ ಕುಣಿದಾಡಿಸಲೇ.?
ಇವನ ನಲಿದಾಡಿಸಲೇ…?
ಸುಟ್ಟ ನೆತ್ತರನು ನಿರಿಗೆಯಾಡಿಸಿ
ಜವ್ವನ ಉಸಿರ ತುಂಬಲೇ…?
ಬಯಕೆ ಬಸಿರ ತಬ್ಬಲೇ…?
“ನಲ್ಲನಲಿ ಪೊಲ್ಲಮೆ ಲೇಸೆಂದು” ಮೂಸಿದ ವಾಸನೆಯಲಿ
ಹಾಸಿ ಮಲಗಲೇ..?
ಹೇಸಿಗೆ ಎನ್ನಲೇ …?
ಈ ಸಂಜೆ ಹುಂಜಾಗಿದೆ
ಅಂಗಗಳ ಮಂಗಾಟಕೆ
ಬದಗನಿಗೆ ಒಲಿದ ಸುಂದರಿಗೆ.

3
ಗುಂಡಿಗಳು ಬೆಚ್ಚಿ ಬಿದ್ದಿವೆ
ಅಂಗಿ, ಕುಪ್ಪಸವ ಆಸರಿಸದೆ ಗುಂಡಿಯಲಿ ಬಿದ್ದ ಗುಂಡಿಗಳ ಗೋಳು ಯಶೋಧರದು.
ಇವರ ಬೆಮರ ಹನಿಗಳು ಬೇಸರಿಸಿದವು ಬೆಂಬಿಡದೆ ಭಗಿಸಿದ ಪ್ರಣಯದಾಟಕೆ.
ಬಿಸಿ ಉಸಿರ ಹಸಿರಾಗಿಸಿ
ಬದಗನಿಗೆ ಒಲಿದಳು ಸುಂದರಿ.

ಡಾ. ಎಲ್. ಜಿ. ಗಗ್ಗರಿ
ಎಸ್. ವಿ. ಎಂ. ಕಾಲೇಜ್
ಇಲಕಲ್ಲ.
ಮೊ: 98453 83015