ಮಾನ್ವಿ ನ.11: ‘ರಾಜ್ಯ ಸರ್ಕಾರ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸಲು ಜಾರಿಗೆ ತಂದಿರುವ ‘ಮುಖ್ಯಮಂತ್ರಿ ರೈತ ವಿದ್ಯಾ ನಿಧಿ’ ಯೋಜನೆಯ ಸದ್ಬಳಕೆ ಅಗತ್ಯ’ ಎಂದು ಸಹಾಯಕ ಕೃಷಿ ನಿರ್ದೇಶಕ ಬಿ.ಹುಸೇನ್ ಸಾಹೇಬ್ ಹೇಳಿದರು.
ಗುರುವಾರ ಪಟ್ಟಣದ ಪ್ರಗತಿ ಪಿಯು ಕಾಲೇಜಿನಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ‘ಮುಖ್ಯಮಂತ್ರಿ ರೈತ ವಿದ್ಯಾ ನಿಧಿ’ ಯೋಜನೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ ರೈತರ ಮಕ್ಕಳು ರಾಜ್ಯ ಸರ್ಕಾರದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ. ಆದರೆ ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ‍್ಯಾಂಕ್ ಇತ್ಯಾದಿಗಳ ಆಧಾರದಲ್ಲಿ ಪಡೆಯುವ ಶಿಷ್ಯ ವೇತನಗಳನ್ನು ರೈತರ ಮಕ್ಕಳು ಪಡೆದಿದ್ದರೂ ‘ರೈತ ವಿದ್ಯಾ ನಿಧಿ’ ಶಿಷ್ಯ ವೇತನವನ್ನೂ ಪಡೆಯಲು ಅರ್ಹರಾಗಿರುತ್ತಾರೆ’ ಎಂದು ಅವರು ತಿಳಿಸಿದರು.
ಯೋಜನೆಯ ಲಾಭ ಪಡೆದುಕೊಳ್ಳಲು ರೈತರ ಮಕ್ಕಳು ಅನುಸರಿಸಬೇಕಾದ ನಿಯಮಗಳು, ನೋಂದಣಿ ವಿಧಾನ, ಫಲಾನುಭವಿಗಳ ಅರ್ಹತೆ ಕುರಿತು ಅವರು ವಿವರಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಕೃಷಿ ಅಧಿಕಾರಿ ನಿಯಾಜ್ ಮೊಹಮ್ಮ್ಮದ್, ಕಾಲೇಜಿನ ಮುಖ್ಯಸ್ಥ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ, ಪ್ರಾಂಶುಪಾಲ ಬಸವರಾಜ ಭೋಗಾವತಿ, ಉಪನ್ಯಾಸಕರಾದ ಸುಮಾ ಟಿ.ಹೊಸಮನಿ, ರವಿಶರ್ಮಾ ಜಾನೇಕಲ್, ಪವನಕುಮಾರ ಟಿ.ಜಿ, ಶರಣುಕುಮಾರ ಮುದ್ದಿನಗುಡ್ಡಿ, ನಾಗರಾಜ ಚಿಮ್ಲಾಪುರ, ಮಲ್ಲಮ್ಮ ಪೋತ್ನಾಳ, ಎಚ್.ಚಂದ್ರಶೇಖರ್ ಇದ್ದರು.