ಬಲಿಯಾಗುವ ಕೋಣ ಮಾರಿಯನ್ನು ತೂರಹೋಗಿತ್ತಂತೆ ! – ಮುಕ್ಕಣ್ಣ ಕರಿಗಾರ

ಬಲಿಯಾಗುವ ಕೋಣ ಮಾರಿಯನ್ನು ತೂರಹೋಗಿತ್ತಂತೆ !

ಲೇಖಕರು: ಮುಕ್ಕಣ್ಣ ಕರಿಗಾರ

ಇದು ಕೆಲವರ ಹಣೆಬರಹ.ಅವರಿಗೆ ಅಧಿಕಾರ ಸಿಕ್ಕಾಗ ಏನು ಏನೋ ಮಾಡುತ್ತಾರೆ.ದುಷ್ಟರು,ಮೂರ್ಖರು ಆದವರ ಕೈಯಲ್ಲಿ ಅಧಿಕಾರ ಇದ್ದಾಗ ‘ ಮಂಗನ ಕೈಯಲ್ಲಿ ಮಾಣಿಕ್ಯ ಇದ್ದಂತೆ’ ಆಗಿ ಇತರರು ಪರಿತಪಿಸುತ್ತಾರೆ,ಸತ್ಪುರುಷರು ತೊಂದರೆಗೆ ಈಡಾಗುತ್ತಾರೆ.

ದುಷ್ಟರಿಗೆ ಉನ್ನತಿ ಪ್ರಾಪ್ತಿಯಾದಾಗ ಏನಾಗುತ್ತದೆ ಎನ್ನುವುದನ್ನು ‘ ಬಲಿಯಾಗುವ ಕೋಣ ಮಾರಿಯನ್ನು ತೂರ ಹೋಗಿತ್ತಂತೆ'( ನಾನು ಈ ಗಾದೆಯನ್ನು ಮಾರ್ಪಡಿಸಿದ್ದೇನೆ– ಮೂಲ ಗಾದೆಯು ಅಶ್ಲೀಲ ಅರ್ಥವನ್ನು ಒಳಗೊಂಡಿದೆ) ಮಾರಿಗೆ ಬಲಿಯಾಗಲೆಂದೇ ಬಿಟ್ಟ ಕೋಣ ಕೊಬ್ಬಿ ಸೊಕ್ಕಿನಿಂದ ತನ್ನ ಕೊಂಬುಗಳಿಂದ ಮಾರಿಯನ್ನು ತಿವಿದು ಚಿಮ್ಮಲು ಹೋಗಿತ್ತಂತೆ.ಈಗಲೋ ಇನ್ನೊಂದೆರಡು ದಿನಗಳಲ್ಲೋ ತನಗೇ ಬಲಿಕೊಡುವ ಕೋಣನ ಹುಚ್ಚು ಸಾಹಸವನ್ನು ಕಂಡು ಮಾರಿ ಗಹಗಹಿಸಿ ನಗುತ್ತಾಳೆ.ಜನರು ಕೋಣವನ್ನು ಚೆನ್ನಾಗಿ ಮೇಯಿಸಿದ ಉದ್ದೇಶವೇ ಅದನ್ನು ಮಾರಿಗೆ ಬಲಿಕೊಡಲು ! ಆದರೆ ಆ ಕೋಣನಿಗೆ ಅದು ಅರ್ಥವಾಗಿಲ್ಲ.ಊರ ಜನರು ತನ್ನನ್ನು ಗೌರವಾದರಗಳಿಂದ ಕಾಣುತ್ತಾರೆ,ಪೂಜಿಸುತ್ತಾರೆ ತಾನು ದೊಡ್ಡವನು ಎಂದು ಭ್ರಮಿಸುವ ಕೋಣ ಜನರು ಮಾರಿಗೆ ಬಲಿಯಾಗಲೆಂದೇ ತನ್ನನ್ನು ಬಿಟ್ಟಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳದಷ್ಟು ಮದೋನ್ಮತ್ತವಾಗಿದೆ.ಹೇಳಿಕೇಳಿ ಕೋಣ,ಮಂದಬುದ್ಧಿಯ ಪ್ರಾಣಿ.ಮುಂದೆ ಏನಾಗುತ್ತದೆ ಎಂದರಿಯದ ಪ್ರಾಣಿ! ಕಂಡವರ ಹೊಲಗಳನ್ನು ಹಾಳುಗೆಡಹಿ ಮೈ ಸೊಕ್ಕಿಸಿಕೊಂಡ ಪಾಪದ ಫಲವೇ ಆ ಕೋಣನು ಬಲಿಯಾಗುವುದು.ಆದರೆ ಕೋಣನಿಗೆ ಅದು ಅರ್ಥವಾವುವುದಿಲ್ಲ,ಮೈಯಲ್ಲಿ ಸೊಕ್ಕಿದೆ,ಚೂಪಾದ ಕೊಂಬುಗಳಿಂದ ಏನನ್ನಾದರೂ ಮಾಡಿ ದಕ್ಕಿಸಿಕೊಳ್ಳಬಲ್ಲೆ ಎಂದು ಊರ ಕೋಣಗಳೊಂದಿಗೆ ಕಾದಾಡಿ ಗೆದ್ದ ಹುಮ್ಮಸ್ಸಿನಲ್ಲಿ ಮಾರಿಯ ಮೂರ್ತಿಯನ್ನೇ ತನ್ನ ಕೊಂಬುಗಳಿಂದ ತಿವಿದು,ತೂರಲು ಹವಣಿಸುತ್ತದೆ.ಯಾವ ಕೊಂಬುಗಳಿಂದ ಮಾರಿಯನ್ನು ತಿವಿದು ತೂರಲು ಹೋಗಿತ್ತೋ ಅದೇ ಕೊಂಬುಳ್ಳ ಕೋಣನ ಶಿರವನ್ನು ಹರಿದು ಮಾರಿಯ ಮುಂದೆ ಸಮರ್ಪಿಸುತ್ತಾರೆ.ಬಲಿಯಾಗಲೆಂದೇ ಹುಟ್ಟಿದ ಕೋಣ ಸೊಕ್ಕಿನಿಂದ ವರ್ತಿಸಿ,ಮಾರಿಯ ಮಹಿಮೆಯನ್ನರಿಯದೆ,ಮಾರಿಯು ಮರಣದೇವಿ ಎನ್ನುವದನ್ನರ್ಥಮಾಡಿಕೊಳ್ಳದೆ ಆ ಮಾರಿಯ ಎದುರೇ ತಲೆಕಡಿಸಿಕೊಳ್ಳುತ್ತದೆ.

ದೇವರು ಅಧಿಕಾರವನ್ನು ಅನುಗ್ರಹಿಸಿದಾಗ ಅದನ್ನು ಸಮಾಜ ಹಿತಕ್ಕೆ,ಲೋಕೋಪಕಾರ ಕೆಲಸಗಳಿಗೆ ಬಳಸಬೇಕು.ಅಧಿಕಾರ ಇದೆ ಎಂದು ಮನಸ್ಸಿಗೆ ಬಂದಂತೆ ಮಾಡಬಾರದು,ಎಗರಾಡಬಾರದು.ಅದರಲ್ಲೂ ಕೆಲವೇ ವರ್ಷಗಳ ಅಧಿಕಾರ ಅನುಭವಿಸಿ ಮುಂದೆ ಭವಿಷ್ಯಹೀನರಾಗಲಿರುವ ಜನಪ್ರತಿನಿಧಿಗಳಂತೂ ಬಹಳ ಎಚ್ಚರಿಕೆಯಿಂದ ಇರಬೇಕು.ಸರಕಾರಿ ಅಧಿಕಾರಿಗಳಿಗೇನೋ ಅರವತ್ತುವರ್ಷಗಳ ಉದ್ಯೋಗಖಾತ್ರಿ ಇದೆ;ಆದರೆ ಜನಪ್ರತಿನಿಧಿಗಳ ಅವಧಿ ಐದೇವರ್ಷ.ಸತ್ಕಾರ್ಯಗಳನ್ನು ಮಾಡಿದರೆ ಅದೃಷ್ಟ ಕೈ ಹಿಡಿಯುತ್ತದೆ ಮುಂದೆ ಮತ್ತೆ ಬರಬಹುದು ಅಧಿಕಾರಕ್ಕೆ.ಜನಪ್ರತಿನಿಧಿಗಳು ಅಧಿಕಾರ ಇದೆ ಎಂದು ಶರಣರು,ಸಂತರು,ಸತ್ಪುರುಷರುಗಳೊಂದಿಗೆ ಉನ್ಮತ್ತರಾಗಿ ವರ್ತಿಸಬಾರದು.ಪರಮಾತ್ಮನ ವಿಭೂತಿಗಳಾಗಿ ಲೋಕಕಲ್ಯಾಣಕ್ಕಾಗಿ ಅವತರಿಸಿರುವ ಶರಣರು,ಸಂತರು ಮಹಾಂತರುಗಳು ಜನಪ್ರತಿನಿಧಿಗಳಿಗಿಂತ ಮಾತ್ರವಲ್ಲ, ಇಡೀ ಸಮಾಜ ವ್ಯವಸ್ಥೆಯಲ್ಲೇ ಹಿರಿಯರಾಗಿರುತ್ತಾರೆ.ಅಂಥವರೊಂದಿಗೆ ಅನುಚಿತವಾಗಿ ವರ್ತಿಸುವುದು,ಅವಿವೇಕದದಿಂದ ವರ್ತಿಸುವ ಯಾವುದೇ ರಾಜಕಾರಣಿ ಮಾರಿಗೆ ಬಲಿಬಿಟ್ಟ ಕೋಣದಂತೆ ದುರ್ವಿಧಿಗೆ ಸಿಕ್ಕು,ದುರಂತಕಾಣುತ್ತಾನೆ,ತಾನು ಭವಿಷ್ಯ ಹೀನನಾಗುತ್ತಾನೆ ಮಾತ್ರವಲ್ಲ ಅವನ ವಂಶವೇ ಅಧಃಪತನ ಹೊಂದುತ್ತದೆ.ದೇವರು ತನ್ನ ವಿಭೂತಿಗಳಾದ ಶರಣರು,ಸಂತರ ಶರೀರದಲ್ಲಿರುತ್ತಾನೆ, ಒಡಲಿಲ್ಲದ ಪರಮಾತ್ಮನು ‘ ಭಕ್ತರ ಕಾಯವೇ ತನ್ನ ಕಾಯ’ ಎಂದು ಭಾವಿಸಿದ್ದಾನೆ.ತನ್ನ ಭಕ್ತರು ಅನುಭವಿಸುವ ಸುಖ- ದುಃಖಗಳನ್ನು ಪರಮಾತ್ಮನೂ ಅನುಭವಿಸುತ್ತಾನೆ.ಆ ಕಾರಣದಿಂದಲೇ’ ಶಿವನಿಗಿಂತ ಶಿವಶರಣರು ದೊಡ್ಡವರು’ ಎಂದು ಭಾವಿಸಿರುವ ಜನರು ಶಿವಶರಣರನ್ನು ಭಕ್ತಿ- ಗೌರವಗಳಿಂದ ಕಾಣುತ್ತಾರೆ.ದೇವಿಯ ಭಕ್ತರು ದೇವಿಯ ಸ್ವರೂಪವೇ ಆಗಿರುತ್ತಾರೆ.ಅಂತಹ ದೇವಿ ಉಪಾಸಕರನ್ನು ಕೆಣಕಿ ಯಾರೂ ದಕ್ಕಿಸಿಕೊಳ್ಳಲಾರರು.ಹಿಂದೆ ರಾಕ್ಷಸರ ಉಪಟಳ ಹೆಚ್ಚಿದಾಗ ದೇವತೆಗಳು ದುರ್ಗಾದೇವಿಯ ಮೊರೆಹೊಕ್ಕರು; ದೇವಿಯಿಂದ ತಲೆಕಡಿಸಿಕೊಂಡು ಸತ್ತರು ರಾಕ್ಷಸರು.ಕಥೆ- ಪುರಾಣ,ವಾಸ್ತವಗಳನ್ನು ಕಂಡೂ ಕೇಳಿಯೂ ಮತ್ತೆ ಉನ್ಮತ್ತರಾಗಿ ವರ್ತಿಸುವವರು ಮಾರಿಗೆ ಬಲಿಯಾಗುವ ಕೋಣಗಳೆಂದೇ ತಿಳಿದು ಸುಮ್ಮನಿರಬೇಕು ಕೆಲವು ಕಾಲ.

ಮುಕ್ಕಣ್ಣ ಕರಿಗಾರ
ಮೊ: 94808 79501

11.11.2021