ಕಾವ್ಯಲೋಕ: ದ್ಯಾವಣ್ಣ ಸುಂಕೇಶ್ವರ ಅವರ ಕವನ ‘ನೆರಳು’

ನೆರಳು

*ದ್ಯಾವಣ್ಣ ಸುಂಕೇಶ್ವರ

ನಾನೊಂದು ನೆರಳು,
ನಿನ್ನೊಂದಿಗೆ ಇರುವೆ ಸದಾ ಹಗಲಿರುಳು

ಅವಳೊಂದು ಕೆಂದಾವರೆ ಹೂಗಳಲಿ
ಬಲೆಯೊಂದು ಬೀಸಿದಳು ಅನುರಾಗದಲಿ
ನೆಲೆ ಕಾಣದೆ ಸಾಗಿಬಂದೆ ಆವೇಗದಲಿ
ಮೈಮರೆತೆ ಬಿಸಿ ಉಸಿರಿನ ಸ್ಪರ್ಶದಲಿ
ವಿಧಿಯಾಟಕೆ ಕೊನೆಯಾದಳು ಇರುಳಲಿ
ನೀನಾದೆ ಮರುಳ ಅವಳ ಚಿಂತೆಯಲಿ!
ಚಿಂತಿಸದಿರು ಮನವೇ, ನಾನೊಂದು ನೆರಳು
ನಿನ್ನೊಂದಿಗೆ ಇರುವೆ‌ ಸದಾ ಹಗಲಿರುಳು

ಮದುವೆ ಎಂದಾಗ ಹಿಗ್ಗುತಲಿ ನೀ ನಡೆದೆ
ವಲ್ಲಭೆ ಬಂದಾಗ ಬಿಗಿದಪ್ಪಿ ಮುದ್ದಾಡಿದೆ
ಭುವಿಗೆ ಬಂದ ‘ಅಂತರಗಂಗೆ’ ಎಂದೆ
ಅಭೀಷ್ಟ ನಿರಾಕರಿಸಿದಾಗ ತೊರೆದಳಂದೆ
ಹೊರದೂಡಿದಾಗ ನಾನೇಕೆ ಇರಬೇಕೆಂದೆ!
ಬ್ರಹ್ಮಚಾರಿಯಾಗಿದ್ರೆ ಅದೆಷ್ಟೋ! ಚೆಂದವೆಂದೆ
ಮರುಗದಿರು ಮನವೇ, ನಾನೊಂದು ನೆರಳು
ನಿನ್ನೊಂದಿಗೆ ಇರುವೆ‌ ಸದಾ ಹಗಲಿರುಳು

ಭಾಂದವ್ಯ ಅನುಬಂಧ ಎಂದೆ ಉಲ್ಲಾಸದಲಿ
ನಾವೆಲ್ಲರೂ ನಿನ್ನವರೆಂದರು ಭರವಸೆಯಲಿ
ನಿಸ್ಸಂದೇಹವಾಗಿ ದಾನಗೈದೆ ಚಿತ್ತವೃತ್ತಿಯಲಿ
ನಿನಗರಿವಿಲ್ಲದೆ ನಿರ್ಗತಿಕ ನೀನಾದೆ ಆ ಕ್ಷಣದಲಿ
ನಿನ್ನ ಅವಶ್ಯಕತೆ ಮುಗಿದಾಗ ಯಾರಿಲ್ಲ ನಿನ್ನಲ್ಲಿ
ನೀನಾದೆ ಏಕಾಂಗಿ ನಿಸ್ವಾರ್ಥ ಹೃದಯಾಳದಲಿ
ಅಳುಕದಿರು ಮನವೇ, ನಾನೊಂದು ನೆರಳು
ನಿನ್ನೊಂದಿಗೆ ಇರುವೆ‌ ಸದಾ ಹಗಲಿರುಳು

ನೇಹವೆಂಬ ಸಾಗರದಲಿ ನಾವಿಕ ನೀನಾದೆ
ನಾವೆಯಲ್ಲಿನ ರಂಧ್ರಗಳನರಿಯದೆ ಹೋದೆ
ಹಲವು ಬಣ್ಣದ ಮಾತುಗಳಿಗೆ ಮರುಳಾದೆ
ಬಿರುಗಾಳಿ ಬೀಸಲು ಬಿರುಕು ಮೂಡಿದೆ
ನಂಬಿದ ಸ್ನೇಹವು ನಡು ನೀರಿನಲ್ಲಿ ಕೈಬಿಟ್ಟಿದೆ
ಬದುಕಿನ ದಿಕ್ಕು ಕಾಣದೇ ನೀ ನೊಂದೆ
ಕುಗ್ಗದಿರು ಮನವೇ, ನಾನೊಂದು ನೆರಳು
ನಿನ್ನೊಂದಿಗೆ ಇರುವೆ‌ ಸದಾ ಹಗಲಿರುಳು

ದ್ಯಾವಣ್ಣ ಸುಂಕೇಶ್ವರ
ಮುಖ್ಯಸ್ಥರು, ಕಲಾ‌ ವಿಭಾಗ,
ಲೊಯೋಲ ಪದವಿ ಕಾಲೇಜು, ಮಾನ್ವಿ.
ಮೊ:9880123488