ವಿಜಯಪುರ: ಜಿಲ್ಲೆಯ ತಿಕೋಟಾ ತಾಲ್ಲೂಕಿನ ಧನರ್ಗಿಯ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯು ಹಸಿರಿನಿಂದ ಕಂಗೊಳಿಸುತ್ತಿದೆ. ಈ ಶಾಲೆಯ ಆವರಣ ಅರಣ್ಯದಂತೆ ಗೋಚರಿಸುತ್ತಿದ್ದು ವಿವಿಧ ಬಗೆಯ ಸಸ್ಯರಾಶಿಯನ್ನು ಈ ಶಾಲೆಯಲ್ಲಿ ಕಾಣಬಹುದಾಗಿದೆ. ಇದಕ್ಕೆಲ್ಲಾ ಕಾರಣ ಈ ಶಾಲೆಯ ಪರಿಸರ ಸ್ನೇಹಿ ಶಿಕ್ಷಕರಾದ ಶ್ರೀಯುತ ಎಸ್.ಬಿ.ಮಡಸನಾಳ ಅವರ ಸತತ ಪರಿಶ್ರಮ ಹಾಗೂ ಶಾಲೆಯ ಮುಖ್ಯಗುರುಮಾತೆ ಎ.ಎ.ಗಣಿಹಾರ ಅವರ ಸಹಕಾರ ಕಾರಣವಾಗಿದೆ.ಮಕ್ಕಳಿಗೆ ಕುಡಿಯುವ ನೀರಿಗಾಗಿ ಹಾಗೂ ಗಿಡಗಳಿಗೆ ನೀರುಣಿಸುವ ಸದುದ್ದೇಶದಿಂದಲೇ ಶಾಲೆಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಕೊಳವೆಭಾವಿ ಕೊರೆಸಲಾಗಿದ್ದು ನೀರಿಗೆ ಕೊರತೆಯಿಲ್ಲದಂತಾಗಿದೆ. ಇದರಿಂದ ಶಾಲೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು ಶಾಲೆಯ ವರ್ಗ ಕೋಣೆಗಳನ್ನು ಸೂರ್ಯ ಸ್ಪರ್ಶಿಸಲು ಹರಸಾಹಸಪಡುವಂತೆ ಗಿಡಗಳ ನೆರಳು ದಟ್ಟವಾಗಿದ್ದು. ಮಕ್ಕಳಿಗೆ ಮಲೆನಾಡ ವಾತಾವರಣದ ಅನುಭವ ನೀಡುತ್ತಿದೆ…ಜೊತೆಗೆ ಒಂದು ವರ್ಗ ಕೋಣೆಗೆ ಗ್ರಾನೈಟ್ ಅಳವಡಿಸಲಾಗಿದ್ದು ಹೈಟೆಕ್ ಶೌಚಾಲಯದ ಸೌಲಭ್ಯ ಒದಗಿಸಲಾಗಿದೆ.ಇದರಿಂದ ಮಕ್ಕಳ ಸಂಖ್ಯೆ ಕ್ರಮೇಣ ಹೆಚ್ಚಾಗತೊಡಗಿದೆ. ಇಡೀ ಜಿಲ್ಲೆಗೆ ಮಾದರಿಯಾಗುವಂತೆ ಶಾಲೆಯ ಪರಿಸರ ನಿರ್ಮಾಣವಾಗಿದೆ. ಸಿದ್ದೇಶ್ವರ ಶ್ರೀಗಳ ವಾಣಿಯಂತೆ ಶಾಲೆಯನ್ನು ಹಚ್ಚಹಸಿರಿನಿಂದ ಕಂಗೊಳಿಸುವಂತೆ ಮಾಡಿದ ತೃಪ್ತಿ ನನಗಿದೆ ಎಂದು ಶಾಲೆಯ ಸಹಶಿಕ್ಷಕ ಎಸ್.ಬಿ.ಮಡಸನಾಳ ಅವರ ಅಭಿಪ್ರಾಯವಾಗಿದೆ.