ದರ್ಶನ- ಆಶೀರ್ವಾದ – ಮುಕ್ಕಣ್ಣ ಕರಿಗಾರ

ದರ್ಶನ- ಆಶೀರ್ವಾದ

ಲೇಖಕರು: ಮುಕ್ಕಣ್ಣ ಕರಿಗಾರ

ದೇವಸ್ಥಾನಗಳಿಗೆ ನಾವು ದೇವರ ‘ ದರ್ಶನಾಶೀರ್ವಾದ’ ಪಡೆಯಲು ಹೋಗುತ್ತೇವೆ. ದೇವರು ದರ್ಶನ ಮತ್ತು ಆಶೀರ್ವಾವಾದಗಳೆರಡನ್ನೂ ಕರುಣಿಸಬಲ್ಲನು ಎನ್ನುವ ನಂಬಿಕೆ ಜನರಲ್ಲಿದೆ. ‘ದರ್ಶನ’ ಎನ್ನುವುದು ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾದುದು,ಆಶೀರ್ವಾದವನ್ನು ಲೌಕಿಕ ಕ್ಷೇತ್ರದಲ್ಲಿ ಬಳಸಬಹುದು,ಪಡೆಯಬಹುದೆನ್ನುವ ಅರ್ಥದಲ್ಲಿ ಆಶೀರ್ವಾದ ಸಂಕುಚಿತಗೊಂಡಿದೆ.ಮನೆಯಲ್ಲಿ ತಂದೆ- ತಾಯಿಗಳು,ಹಿರಿಯರುಗಳನ್ನು ‘ ನೋಡುತ್ತೇವೆ’ ಆದರೆ ಅದು ನೋಡುವುದು,ಇಲ್ಲವೆ ನೋಟ,ದರ್ಶನವಾಗದು.ಮನೆಯಲ್ಲಿ ಹಿರಿಯರು ಕಿರಿಯರಿಗೆ ಒಳಿತನ್ನು ಬಯಸುವುದು ಆಶೀರ್ವಾದ ಎನ್ನುತ್ತೇವಾದರೂ ಅದು ನಿಜಾರ್ಥದ ಆಶೀರ್ವಾದವಲ್ಲ,ಶುಭಹಾರೈಕೆ ಅಷ್ಟೆ!ಒಳಿತನ್ನು ಹಾರೈಸುವುದು ಬೇರೆ,ಆಶೀರ್ವದಿಸುವುದು ಬೇರೆ.

ದರ್ಶನವು ದೇವಸ್ಥಾನ- ಮಂದಿರಗಳಲ್ಲಿಯೇ ಸಿಗುತ್ತದೆ ಲೌಕಿಕ ಜನರಿಗೆ,ಪ್ರಪಂಚ ವ್ಯವಹಾರದಲ್ಲಿ ಮುಳುಗಿ ಏಳುವವರಿಗೆ.ಯೋಗಿಗಳು,ಸಾಧು- ಸಂತರುಗಳಿಗೆ ಪ್ರಪಂಚವೆಲ್ಲವೂ ದರ್ಶನವಾಗಿಯೇ ಕಾಣುತ್ತದೆ ಅವರು ‘ ಪೂರ್ಣದೃಷ್ಟಿ’ಯನ್ನು ಉಳ್ಳವರಾದ್ದರಿಂದ.ಸಾಮಾನ್ಯ ಜನರಿಗೆ ಪ್ರಪಂಚದಲ್ಲಿ ದ್ವಂದ್ವ- ಸಂದೇಹಗಳು ಕಾಣುತ್ತವೆ,ಕಾಡುತ್ತವೆಯಾದ್ದರಿಂದ ಅವರಿಗೆ ದೇವಸ್ಥಾನ-ಮಂದಿರಗಳಲ್ಲಿ ದರ್ಶನಾಶೀರ್ವಾದದ ಅಗತ್ಯವಿದೆ.ಯೋಗಿಗಳು,ಸಂತರುಗಳ ದೇಹವು ದಿವ್ಯತ್ವವನ್ನು ಒಳಕೊಂಡಿದ್ದರಿಂದ ಅಂಥವರನ್ನು ಕಂಡರೆ ಅದೇ ದರ್ಶನವಾಗುತ್ತದೆ,ಅವರು ಮಾತನಾಡಿದುದೇ ಆಶೀರ್ವಾದವಾಗುತ್ತದೆ.

‘ ದರ್ಶನ’ ಎಂದರೆ ಅಪೂರ್ವನೋಟ ,ಇದುವರೆಗೂ ಕಾಣದೆ ಇರುವುದನ್ನು ಕಾಣುವುದು ಎಂದರ್ಥ.ದೇವರ ಲಿಂಗ,ಮೂರ್ತಿ- ವಿಗ್ರಹಗಳಲ್ಲಿ ಶಕ್ತಿ ಮೈವೆತ್ತಿರುವುದರಿಂದ ಅಲ್ಲಿ ದರ್ಶನ ಸಿಗುತ್ತದೆ.ಸಂಸಾರದಲ್ಲಿ ಹೆಂಡಿರು- ಮಕ್ಕಳು,ತಂದೆ- ತಾಯಿಗಳು,ಬಂಧು- ಬಾಂಧವರ ಮುಖಗಳನ್ನು ನೋಡಿದಾಗ ಸಿಗದೆ ಇರುವ ಆನಂದ ದೇವರ ಲಿಂಗ,ಮೂರ್ತಿ- ವಿಗ್ರಹಗಳ ದರ್ಶನದಿಂದ ಲಭಿಸುತ್ತದೆ.ನಿತ್ಯ ಜೀವನದಲ್ಲಿ ಕಾಣುವ ಮುಖಗಳಲ್ಲಿ ತೇಜಸ್ಸು- ಓಜಸ್ಸುಗಳು ಇರುವುದಿಲ್ಲ,ಬರಿ ಚರ್ಮದ ದೇಹ,ಮಾಂಸದ ಮುದ್ದೆಯ ಮುಖಗಳವು.ದೇವರ ಲಿಂಗ,ಮೂರ್ತಿ,ವಿಗ್ರಹಗಳು ನಿರ್ಲಿಪ್ತವಾಗಿರುವುದರಿಂದ,ದ್ವಂದ್ವ- ದಂದುಗಗಳಿಗೆ ಅವು ಸಿಲುಕುವುದಿಲ್ಲವಾದ್ದರಿಂದ ಅವು ಪ್ರಸನ್ನಮುಖಮುದ್ರೆಯ,ಪ್ರಶಾಂತಭಾವವನ್ನು ಪ್ರಕಟಿಸುತ್ತವೆ.ಕೆಲವು ಉಗ್ರ ದೇವತೆಗಳು ಇರಬಹುದಾದರೂ ಆ ದೇವರುಗಳಲ್ಲಿಯೂ ‘ಅಭಯ ಸಾಮರ್ಥ್ಯ’ ಇರುತ್ತದೆ.ಬದುಕಿನ ಜಂಜಾಟ – ಹೊಯ್ದಾಟಗಳಿಂದ ಮನಸ್ಸನ್ನು ಮುಕ್ತಗೊಳಿಸಿ,ಆನಂದಾನುಭೂತಿಯನ್ನು ಉಂಟುಮಾಡುವುದರಿಂದ ದೇವರ ಲಿಂಗ,ಮೂರ್ತಿ- ವಿಗ್ರಹಗಳು ದರ್ಶನವನ್ನು ಕರುಣಿಸುತ್ತವೆ.ದರ್ಶನಪಡೆದವರ ಮನೋಬಯಕೆಗಳನ್ನು ಕೂಡ ದೇವರುಗಳನ್ನು ಈಡೇರಿಸುವುದರಿಂದ ಆಶೀರ್ವಾದವೂ ಲಭಿಸುತ್ತದೆ ದೇವಸ್ಥಾನ- ಮಂದಿರಗಳಲ್ಲಿ.

‘ ಆಶೀರ್ವಾದ’ ಎಂದರೆ ಅಭಯವಾಣಿ.ಭರವಸೆ ಕಳೆದುಕೊಂಡ ಬದುಕಿನಲ್ಲಿ ಭರವಸೆಯನ್ನು ತುಂಬಿ ಮತ್ತೆ ಜೀವನ್ಮುಖಿಗಳನ್ನಾಗಿ ಮಾಡುವುದೇ ಅಭಯ,ಆಶೀರ್ವಾದ.ರೋಗಗ್ರಸ್ಥ ಮೈ ಮನಸ್ಸುಗಳನ್ನು ಸ್ವಸ್ಥವಾಗುವಂತೆ ಮಾಡುವುದೇ ಆಶೀರ್ವಾದ.ವಿಧಿ- ಅನಿಷ್ಟಗಳಿಗೆ ಸಿಕ್ಕವರನ್ನು ಸಂಕಟಮುಕ್ತರನ್ನಾಗಿಸುವುದೇ ಆಶೀರ್ವಾದ.ಇದು ಸಾಮಾನ್ಯ ಜನರಿಂದ ಸಾಧ್ಯವಿಲ್ಲವಾದ್ದರಿಂದ ದೇವರು ಮತ್ತು ಯೋಗಿಗಳು ಮಾತ್ರ ಮಾಡಬಹುದಾದ ಲೀಲಾಕ್ರಿಯೆ.ಹಾಗಾಗಿ ಮನೆಯಲ್ಲಿ ತಂದೆ- ತಾಯಿಗಳು,ಹಿರಿಯರಾದವರು ಮಾಡುವ ಆಶೀರ್ವಾದ ಕೇವಲ ಹರಕೆಯ ರೂಪದಲ್ಲೇ ನಿಲ್ಲುತ್ತದೆ.ಆಶೀರ್ವಾದ ಮಾಡಲು ಆಧ್ಯಾತ್ಮಿಕ ಶಕ್ತಿ ಸಂಚಯಗೊಂಡಿರಬೇಕು.ಒಳಿತನ್ನು ಮಾಡುವ,ಒಳಿತನ್ನು ಬಯಸುವ ಮನಸ್ಸು ಒಳ್ಳೆಯದನ್ನು ಬಯಸಬಹುದಾದರೂ ಅದು ಆಶೀರ್ವಾದವಾಗದು.ತಂದೆ ತಾಯಿಗಳು,ಹಿರಿಯರು ಒಳಿತನ್ನು ಬಯಸುವ ಕ್ರಿಯೆಯೂ ಸ್ವಾರ್ಥಪ್ರೇರಿತವೆ! ಅಂದರೆ ತಮ್ಮ ಮಕ್ಕಳಿಗೆ ಒಳಿತನ್ನು ಬಯಸುವ ತಂದೆ ತಾಯಿಗಳು ಇತರರ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣರು,ಇತರ ಮಕ್ಕಳ ಏಳ್ಗೆಯನ್ನು ಬಯಸರು. ಪರಿಪೂರ್ಣ ಪ್ರೇಮದ ಅಭಾವವು ದರ್ಸದನವಾಗದು.ದರ್ಶನ- ಆಶೀರ್ವಾದಗಳಲ್ಲಿ ಇಂತಹ ಕ್ಷುದ್ರ,ಸ್ವಾರ್ಥ ಭಾವನೆಗಳು ಇರುವುದಿಲ್ಲ.ದೇವರ ಬಳಿ ಯಾರೇ ಹೋಗಲಿ ಎಲ್ಲರನ್ನೂ ಸಮಾನವಾಗಿ ನೋಡುತ್ತಾರೆ ದೇವಸ್ಥಾನಗಳಲ್ಲಿ ಜಾಗ್ರತಗೊಂಡ ಲಿಂಗ- ಮೂರ್ತಿಗಳು. ಸಮತೆ,ಸಮಗ್ರತೆ,ಸಂಪೂರ್ಣತೆ ,ಸರ್ವಗ್ರಾಹ್ಯದೃಷ್ಟಿ ಇದ್ದರೆ ಮಾತ್ರ ಅದು ದರ್ಶನ.ಲೋಕೋಪಕಾರ ಬುದ್ಧಿ,ಭೂತಾನುಕಂಪೆ,ಸರ್ವರ ಏಳ್ಗೆಯನ್ನು ಬಯಸುವ ಸ್ವಾರ್ಥದೂರ ಮನಸ್ಸೇ ಆಶೀರ್ವಾದದ ಮೂಲ.

ದೇವಸ್ಥಾನಗಳಲ್ಲಿ ದೇವರ ಲಿಂಗ,ಮೂರ್ತಿ,ವಿಗ್ರಹಗಳು ಮಾತನಾಡುವುದಿಲ್ಲವಾದ್ದರಿಂದ ದೇವರು ಆಶೀರ್ವಾದ ನೀಡಿದರೋ ಇಲ್ಲವೋ ಎನ್ನುವ ಸಂದೇಹಕ್ಕೆ ಒಳಗಾದ ಮನುಷ್ಯರು ಮಠ- ಗುರುಮಂದಿರಗಳನ್ನು ಕಟ್ಟಿಕೊಳ್ಳಲಾರಂಭಿಸಿದರು’ ಮಾತನಾಡುವ ದೇವರ ‘ ಅನ್ವೇಷಣೆಗಾಗಿ.ದೇವಸ್ಥಾನಗಳಲ್ಲಿಯೇ ಗುರು,ಮಠ ಪೀಠಾಧೀಶರುಗಳ ಏರ್ಪಾಟು ಮಾಡಲಾಯಿತು.ದೇವರ ದರ್ಶನ ಪಡೆದಾದ ಬಳಿಕ ಗುರುಗಳೋ,ಸ್ಥಾನಾಚಾರ್ಯರೋ ಆಗಿ ನೇಮಿಸಲ್ಪಟ್ಟರನ್ನು ಕಾಣುವ ಪರಿಕ್ರಮ ರೂಪಿಸಲಾಯಿತು.ದೇವರು ದರ್ಶನ ನೀಡಿದರೆ ಗುರುಗಳು ಆಶೀರ್ವಾದ ನೀಡುತ್ತಾರೆ ಎನ್ನುವ ಭಾವನೆಯಿಂದ ದೇವಸ್ಥಾನಗಳಲ್ಲಿ ಪೂಜಾರಿ,ಗುರು,ಮಠಾಧೀಶರನ್ನು ಕೂಡಿಸುವ ವ್ಯವಸ್ಥೆ ರೂಢಿಯಾಯಿತು.ಗುರುಗಳು,ಯತಿಗಳು,ಮಠಾಧೀಶರು,ಸ್ವಾಮಿಗಳು ಎಂದು ಕರೆಯಬಹುದಾದ ಅವರಿಗೆ ಕೆಲವು ವಿಧಿ ನಿಯಮಗಳನ್ನು ವಿಧಿಸಿ ಅವರು ಮಾಡಬೇಕಾದ ಮತ್ತು ಮಾಡಬಾರದ ಕ್ರಿಯೆಗಳನ್ನು ನಿರ್ಧರಿಸಲಾಯಿತು.ಭಕ್ತರು ಮತ್ತು ಭಗವಂತನ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಂತೆ ಇದ್ದ ಈ ದೇವಸ್ಥಾನಗಳ ಗುರುಗಳು ದೇವರ ಪೂಜೆ,ಆರಾಧನೆ ಮತ್ತು ಅನುಗ್ರಹಗಳಿಂದ ಆಶೀರ್ವಾದ ನೀಡುವ ಸಾಮರ್ಥ್ಯ ಪಡೆಯುತ್ತಿದ್ದರು.ದೇವಸ್ಥಾನಗಳಿಗೆ ಬರುವ ಭಕ್ತರ ಸಂಕಟ, ಮೊರೆ ಕೇಳಿ ಅವರನ್ನು ತಮ್ಮ ಶಕ್ತಿ ಸಾಮರ್ಥ್ಯಗಳಿಂದ ಸಂಕಟಮುಕ್ತರನ್ನಾಗಿಸುತ್ತಿದ್ದರು.ಹಿಂದೆ ಸಾಧಕವರೇಣ್ಯರುಗಳೇ ದೇವಸ್ಥಾನಗಳ ಗುರು,ಸ್ಥಾನಾಚಾರ್ಯರುಗಳಾಗಿ ಆಯ್ಕೆ ಗೊಳ್ಳುತ್ತಿದ್ದರಿಂದ ಅಂತಹ ‘ಸರ್ವಸಮರ್ಥರು’ ಗಳಿಂದ ಆ ದೇವಸ್ಥಾನಗಳು ಬೆಳೆದು ,ಪ್ರಸಿದ್ಧಿಗೆ ಬರುತ್ತಿದ್ದವು.ದೇವರಿಂದ ಗುರು ಬೆಳೆಯುತ್ತಿದ್ದ; ಗುರುವಿನಿಂದ ದೇವಸ್ಥಾನ ಬೆಳೆಯುತ್ತಿತ್ತು.ಬರಬರುತ್ತ ಇದೊಂದು ಶುಷ್ಕ ಸಂಪ್ರದಾಯ ಮಾತ್ರವಾಗಿ ಪ್ರತಿದೇವಸ್ಥಾನಕ್ಕೆ ಒಬ್ಬ ಗುರುಗಳೋ,ಯತಿಗಳೋ,ಸ್ವಾಮಿಗಳೋ ಆದವರನ್ನು ನೇಮಿಸುವ ಪರಿಪಾಠ ರೂಢಿಯಾಯಿತು.ದೇವಸ್ಥಾನ- ಮಂದಿರಗಳ ಗುರುಗಳು,ಯತಿಗಳು,ಸ್ವಾಮಿಗಳನ್ನು ಮೊದಲು ಸಮಾಜ,ಗ್ರಾಮಸ್ಥರೇ ಆಯ್ಕೆ ಮಾಡುತ್ತಿದ್ದರು.ಬರಬರುತ್ತ ಇಂತಹ ಗುರು- ಸ್ಥಾನಾಚಾರ್ಯರುಗಳು ಪ್ರಬಲರಾಗಿ ಅವರುಗಳೇ ಅವರ ಪೀಠಪರಂಪರೆಗಳನ್ನು ಕಲ್ಪಿಸಿಕೊಂಡು ತಮಗೆ ಬೇಕಾದವರನ್ನು ತಮ್ಮ ಉತ್ತರಾಧಿಕಾರಿಗಳು ಎಂದು ಆಯ್ಕೆಮಾಡುವ,ದೇವಸ್ಥಾನಗಳ ಪೂಜಾದಿ ಕ್ರಿಯೆಗಳೂ ಸೇರಿದಂತೆ ಆಸ್ತಿಪಾಸ್ತಿಗಳಲ್ಲಿ ಅವರ ನಿರ್ಣಯವೇ ಅಂತಿಮ ಎನ್ನುವ ನಿರಂಕುಶ ಅಧಿಕಾರ ಚಲಾಯಿಸತೊಡಗಿದರು.ದೇವಸ್ಥಾನ- ಮಂದಿರಗಳ ಆಸ್ತಿಯ ಅಧಿಕಾರ ಪಡೆದುಕೊಂಡು ಅವುಗಳ ನಿರ್ವಹಣೆಯತ್ತ ಆಸಕ್ತಿ ವಹಿಸಿದರು.ದೇವರಿಗೆ ಸಲ್ಲಿಸಲ್ಪಡುವ ಕಾಣಿಕೆ- ಕೊಡುಗೆಗಳ ಮೇಲೆ ಕಣ್ಣಿಟ್ಟರು.ದೇವಸ್ಥಾನದ ಆಸ್ತಿ- ಕಾಣಿಕೆಗಳ ಮೇಲೆ ಕಣ್ಣು ಇಟ್ಟಿದ್ದರಿಂದ ‘ನಾಸಿಕಾಗ್ರದ ಮೇಲೆ ದೃಷ್ಟಿ ಇಟ್ಟು’ ದೇವರನ್ನು ಕಾಣುವ ಸಾಮರ್ಥ್ಯ ಕಳೆದುಕೊಂಡರು.ಜನರು,ಆಸ್ತಿ- ಅಂತಸ್ತುಗಳಿಗೆ ಸಮೀಪರಾದ ಅಂತಹ ಮಠ ಪೀಠಗಳ ಸ್ವಾಮಿಗಳು ದೇವರಿಂದ ದೂರವಾದರು; ದೇವರುಗಳು ಸಹ ಅವರಿಂದ ದೂರವಾದರು.ದೇವರಿಂದ ದೂರವಾಗಿ ಸ್ವಾರ್ಥಪ್ರೇರಣೆಯಿಂದ ಜನರಿಗೆ ಹತ್ತಿರರಾದ್ದರಿಂದ ಹಲವು ಶಾಸ್ತ್ರಗಳು,ಸ್ಮೃತಿ- ಸಂಹಿತೆಗಳನ್ನು ರಚಿಸಿಕೊಂಡು ತಮ್ಮ ಸ್ವರಕ್ಷಣೆ ಮಾಡಿಕೊಂಡು ಗುರುಕಾಣಿಕೆ,ಗುರುದಕ್ಷಿಣೆ ಪಡೆಯುತ್ತ ಜೀವನ ಸಾಗಿಸತೊಡಗಿದರು.ಇದೇ ಜೀವನಕ್ರಮವಾಗಿ ಅವರು ದರ್ಶನ ಮತ್ತು ಆಶೀರ್ವಾದ ಸಾಮರ್ಥ್ಯಗಳನ್ನು ಕಳೆದುಕೊಂಡರು.ಕಾಣಬೇಕಾದುದನ್ನು ಬಿಟ್ಟು ಕಾಣಬಾರದುದನ್ನು ಕಂಡ ಪರಿಣಾಮ ಕಣ್ಣುಗಳಿಗೆ ಪೊರೆ ಬಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕನ್ನಡಕ ಹಾಕಿಸಿಕೊಂಡರು.ಶಸ್ತ್ರಚಿಕಿತ್ಸೆಯ ಮೂಲಕ ಪೊರೆಹರಿದುಕೊಂಡು ಕನ್ನಡಕಗಳನ್ನು ಸಿಂಗರಿಸಿಕೊಂಡ ಮುಖಗಳಿಗೆ ದರ್ಶನಸಾಮರ್ಥ್ಯವಾಗಲಿ,ಆಶೀರ್ವಾದ ಸಾಮರ್ಥ್ಯವಾಗಲಿ ಇರುವುದಿಲ್ಲ ! ದೇವಸ್ಥಾನ ಮಂದಿರಗಳಲ್ಲಿ ಹಲವು ಕೃತ್ರಿಮ ಪೂಜಾಪದ್ಧತಿಗಳನ್ನೇರ್ಪಡಿಸುವ ಮೂಲಕ ದೇವರುಗಳ ದರ್ಶನಾನುಗ್ರಹ ಸಾಮರ್ಥ್ಯವನ್ನು ಸಹ ಹಾಳುಮಾಡಿದರು.ಈಗ ದೇವರುಗಳು ಶಕ್ತಿಹೀನರು,ಗುರು ಸ್ವಾಮಿಗಳೂ ಶಕ್ತಿಹೀನರುಗಳು.ದರ್ಶನವಾಗಲಿ,ಅನುಗ್ರಹವಾಗಲಿ ಸಿಗುವುದು ದುರ್ಲಭವಾದ ಪ್ರಪಂಚದಲ್ಲಿ ನಾವಿದ್ದೇವೆ ಎನ್ನುವುದೇ ವಿಪರ್ಯಾಸದ ಸಂಗತಿ.

ಮುಕ್ಕಣ್ಣ ಕರಿಗಾರ
ಮೊ: 94808 79501

‌08.11.2021