ಅಡ್ಡ ಹೆಸರು – ಮುಕ್ಕಣ್ಣ ಕರಿಗಾರ

ಅಡ್ಡ ಹೆಸರು

ಲೇಖಕರು: ಮುಕ್ಕಣ್ಣ ಕರಿಗಾರ

ನವೆಂಬರ್ ೦೧,೨೦೨೧ ರಂದು ಯಾದಗಿರಿಯಲ್ಲಿ ನಡೆದ ನನ್ನ ‘ ಬಸವಣ್ಣನವರ ನೂರೆಂಟು ವಚನಗಳು’ ಪುಸ್ತಕದ ಲೋಕಾರ್ಪಣೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಲ್ಲೊಬ್ಬರಾಗಿ ಪಾಲ್ಗೊಂಡಿದ್ದ ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ ಪ್ರವೀಣಕುಮಾರ ಅವರು’ ಅಡ್ಡಹೆಸರಿನ’ ಬಗ್ಗೆ ತಾವು ಮಾಹಿತಿ ಕೇಳಿದ್ದ ಸಂಗತಿಯನ್ನು ನೆನಪಿಸಿದರು.ಯಾದಗಿರಿಯ ನನ್ನ ಚಿಂತನಶೀಲಮಿತ್ರರ ಕೂಟದ ಸದಸ್ಯರೂ ಆತ್ಮೀಯರೂ ಆಗಿರುವ ಪ್ರವೀಣಕುಮಾರ ಅವರು ಆಗಾಗ ಅವರ ಓದುಗರು,ಸ್ನೇಹಿತರುಗಳು ಕೇಳುವ ಇಲ್ಲವೆ ಸ್ವತಃ ಅವರನ್ನೇ ಕಾಡುವ ಯಾವುದಾದರೂ ಸಮಸ್ಯೆಯ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಾರೆ,ಪ್ರಶ್ನೆ ಮಾಡಿ ಉತ್ತರ ಬಯಸುತ್ತಾರೆ.ದಸರಾ ಹಬ್ಬದ ಪೂರ್ವದಲ್ಲಿಯೇ ಅವರು ಅಡ್ಡಹೆಸರಿನ ಬಗ್ಗೆ ಮಾಹಿತಿ ಬಯಸಿದ್ದರು.ಈಗ ಮತ್ತೆ ನೆನಪಿಸಿದರು.ಆದ್ದರಿಂದ ಅಡ್ಡಹೆಸರಿನ ಕುರಿತಾದ ಪ್ರವೀಣಕುಮಾರ ಅವರ ಕುತೂಹಲವನ್ನು ತಣಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಅಡ್ಡಹೆಸರಿಗೆ ವಂಶನಾಮ,ಉಪನಾಮ ಎಂದು ಅರ್ಥವಿದೆ.ಇಂಗ್ಲೀಷಿನಲ್ಲಿ surname ಎನ್ನಲಾಗುವ ಅಡ್ಡಹೆಸರು ಭಾರತೀಯರಿಗೆ ಮಾತ್ರವಲ್ಲ ,ವಿಶ್ವದ ಎಲ್ಲ ಜನಾಂಗಗಳಲ್ಲೂ ಕಾಣುವ ವಿಶಿಷ್ಟ ಸಾಮಾಜಿಕ ಲಕ್ಷಣ.ಭಾರತದಲ್ಲಿ ವೇದಕಾಲದಿಂದಲೂ ನಾವು ಅಡ್ಡಹೆಸರುಗಳನ್ನು ಗಮನಿಸಬಹುದು.ವೇದಕಾಲದ ಋಷಿಗಳಿಗೂ ಅಡ್ಡ ಹೆಸರುಗಳಿದ್ದವು.ಅಡ್ಡಹೆಸರು ಎಂದರೆ ಕೆಟ್ಟಹೆಸರು ಎಂದು ಭಾವಿಸಬಾರದು ‘ ಅಡ್ಡಕಸುಬು’ ‘ ಅಡ್ಡನಾಲಿಗೆ’ ಗಳಂತೆ.ಅಡ್ಡಹೆಸರು ವ್ಯಕ್ತಿಗಳನ್ನು,ಮನೆತನಗಳನ್ನು ಗುರುತಿಸುವ ಒಂದು ವಿಶಿಷ್ಟ ಸಾಮಾಜಿಕ ಪ್ರಕ್ರಿಯೆ,ಪದ್ಧತಿಯಾಗಿ ನಾಗರಿಕತೆ ಬೆಳದಂತೆ ಬೆಳೆದುಬಂದಿದೆ.

ಪರಸ್ಪರ ಮನುಷ್ಯರನ್ನು ಗುರುತಿಸುವ ಕಾರಣದಿಂದ ಹುಟ್ಟಿದ ಅಡ್ಡಹೆಸರಿನಿಂದ ಕರೆಯುವ ಪದ್ಧತಿಯು ವ್ಯಕ್ತಿಗಳ,ಕುಟುಂಬಗಳ ವಿಶೇಷ ಪ್ರವೃತ್ತಿ,ಗುಣ ಲಕ್ಷಣಗಳ ಬಗ್ಗೆ ಬೆಳಕು ಚೆಲ್ಲುತ್ತದೆ.ಆದಿಮಾನವರಿಗೆ ಅಡ್ಡಹೆಸರು ಇರಲಿಲ್ಲ.ಅವರಿಗೆ ಹೆಸರಿಡುವುದು ಕೂಡ ಗೊತ್ತಿರಲಿಲ್ಲ.ಭಾಷೆಯನ್ನರಿಯದ ಅವರು ಮೊದಲು ಸಂಜ್ಞೆಗಳ ಮೂಲಕ ವ್ಯವಹರಿಸುತ್ತಿದ್ದರು.ಬರಬರುತ್ತ ಕಾಡಿನ ಪ್ರಾಣಿ ಪಕ್ಷಿಗಳ ಕೂಗು,ಅರಚುವಿಕೆಯನ್ನನುಸರಿಸಿ ಮಾತನಾಡುವುದನ್ನು ರೂಢಿಸಿಕೊಂಡರು.ಹೆಸರೇ ಇಲ್ಲದ ಆದಿಮಾನವರಿಗೆ ಅಡ್ಡಹೆಸರಿನ ಅಗತ್ಯವಾದರೂ ಏನಿತ್ತು? ಆದರೆ ಮನುಷ್ಯನ ಬುದ್ಧಿ ವಿಕಾಸವಾದಂತೆ ಅವನು ನದಿತೀರ,ಬಯಲುಗಳಲ್ಲಿ ಗುಂಪುಗುಂಪಾಗಿ ವಾಸಿಸತೊಡಗಿದಾಗ ಹೆಸರು ಮತ್ತು ಅಡ್ಡ ಹೆಸರಿನ ಅಗತ್ಯ ಕಂಡುಬಂದಿತು.ಒಂದು ಗುಂಪಿನಲ್ಲಿ ಕಲ್ಲಪ್ಪ ಎನ್ನುವ ನಾಲ್ಕಾರು ಜನರು ಇದ್ದಾಗ ಅವರಲ್ಲಿ ಯಾರೊಬ್ಬರನ್ನಾದರೂ ಕರೆಯಬೇಕಾದರೆ ಹೇಗೆ ಕರೆಯುವುದು? ಯಾವ ಕಲ್ಲಪ್ಪ ಎನ್ನುವುದು? ಈ ಸಮಸ್ಯೆ ಕಾಡಿದಾಗ ಮೊದಲು ಅವರು ಕಂಡುಕೊಂಡ ಪರಿಹಾರ ವ್ಯಕ್ತಿಗಳ ದೇಹಗಾತ್ರ,ಬಣ್ಣ ಮೊದಲಾದ ಶಾರೀರಕ ಲಕ್ಷಣಗಳಿಂದ ಗುರುತಿಸುವುದನ್ನು.ಒಂದು ಗುಂಪಿನಲ್ಲಿ ನಾಲ್ಕು ಜನ ಕಲ್ಲಪ್ಪ ಎನ್ನುವವರಿದ್ದರೆ ಅದರಲ್ಲಿ ಒಬ್ಬ ಇತರರಿಗಿಂತ ಎತ್ತರ ಇದ್ದವನು ದೊಡ್ಡಕಲ್ಲಪ್ಪ ಆಗಿ ಗುರುತಿಸಲ್ಪಟ್ಟ,ಎಲ್ಲರಿಗಿಂತ ಸಣ್ಣವನು ಸಣ್ಣಕಲ್ಲಪ್ಪ ಎಂದು ಕರೆಯಿಸಿಕೊಂಡ.ಕಪ್ಪು ಬಣ್ಣದವನು ಕರಿಕಲ್ಲಪ್ಪ ಆದರೆ ಬೆಳ್ಳಗಿನ ಬಣ್ಣದವನು ಬಿಳಿಕಲ್ಲಪ್ಪ ಆದ.ಒಂದೇ ಕುಟುಂಬದಲ್ಲಿದ್ದ ಕಲ್ಲಪ್ಪನವರುಗಳನ್ನು ದೊಡ್ಡಕಲ್ಲಪ್ಪ,ನಡುವಿನ ಕಲ್ಲಪ್ಪ,ಸಣ್ಣಕಲ್ಲಪ್ಪ,ಕಡಿಕಲ್ಲಪ್ಪ ಅಂತ ಗುರುತಿಸಲು ಪ್ರಾರಂಭಿಸಿದರು.ವ್ಯಕ್ತಿಯ ಶಾರೀರಕ ಲಕ್ಷಣಗಳನ್ನಾಧರಿಸಿ ಗುರುತಿಸುವುದು ಅಡ್ಡಹೆಸರಿನ ಮೊದಲ ಹಂತ.

ಎರಡನೇ ಹಂತದಲ್ಲಿ ಜನಸಮೂಹಗಳು ವಾಸಿಸುತ್ತಿದ್ದ ಸ್ಥಳ ಅಥವಾ ನೆಲೆಗಳನ್ನು ಆಧರಿಸಿ ಅಡ್ಡಹೆಸರುಗಳನ್ನು ಇಡಲಾರಂಭಿಸಿದರು.ಪೂರ್ವದಿಕ್ಕಿಗೆ ನೆಲೆಗಳುಳ್ಳವರು’ ಮೂಡಲವರು’ , ಪಶ್ಚಿಮ ದಿಕ್ಕಿಗೆ ನೆಲೆಗಳಿದ್ದವರು’ ಪಡುವಣವರ್ ಅಥವಾ ಪಡಣರ್,ಉತ್ತರದಿಕ್ಕಿಗೆ ನೆಲೆ ಇದ್ದವರು ಬಡಗಣರ್ ಅಥವಾ ಬಡಣರ್ ದಕ್ಷಿಣ ದಿಕ್ಕಿಗೆ ಮನೆಇದ್ದವರು ತೆಂಕಣರ್,ತೆಂಕಣಿಗಳು,ತೆಂಕುಗಳು ,ತೆಂಕೇರು ಎಂದು ಕರೆಯಲ್ಪಟ್ಟರು.ಗ್ರಾಮದ ನಡುವೆ ವಾಸಿಸುತ್ತಿದ್ದವರು ‘ ನಡುವಿನವರ್’ ನಡುವಿನ್ಯೋರ್ ಆದರು.ಹಳ್ಳದ ಬಳಿ ಇದ್ದವರು ಹಳ್ಳದೋರ್ ಆದರು,ಬಾವಿಯ ಬಳಿ ಮನೆಇದ್ದವರು ಬಾವೇರು,ಬಾವಿಕಟ್ಟೇರು ಎಂದು ಕರೆಯಿಸಿಕೊಳ್ಳುತ್ತ ಅಪಭ್ರಂಶಗೊಂಡು ಬಾಯಿಕಟ್ಯೋರು ಆದರು.ಊರ ತುದಿಗೆ ಅಥವಾ ಕೊನೆಗೆ ಮನೆ ಇದ್ದವರು ಮೂಲಿಮನಿಗಳಾದರು,ಊರ ಮೊದಲ ಮನೆಯವರು ಆದಿಮನಿಗಳಾದರು.ಮನೆಮುಂದೆ ನೆಟ್ಟುಬೆಳಸಿದ ಗಿಡಮರಗಳ ಆಧಾರದಲ್ಲೂ ಅಡ್ಡಹೆಸರುಗಳಿವೆ.ಬೇವಿನವರು,ಬೇವಿನಗಿಡದವರು,ಬೇವಿನಕಟ್ಟೆಯವರು ಆದರೆ ಹುಣಸಿಗಿಡಗಳುಳ್ಳವರು ಹುಣಸ್ಯೇರು,ಹುಣಸಿಗಿಡದೋರು ಆದರು.ಬಾರೆಕಾಯಿ ಮರ ಉಳ್ಳವರು ಬಾರಿಗಿಡದವರ್ ಆದರು.ಬನ್ನಿ ಅಥವಾ ಶಮೀವೃಕ್ಷದ ಬಳಿ ಮನೆ ಉಳ್ಳವರು ಜಂಬೇರು+ ಬನ್ನಿ ಮರವನ್ನು ಹಳ್ಳಿಗರು ಜಂಬಿ ,ಜಂಬೆ ಎನ್ನುತ್ತಾರೆ).ಬಿಲ್ವಪತ್ತೆ ಮರದ ಬಳಿ ಇದ್ದವರು ಪತ್ರೇರು ಆಗಿ ಗುರುತಿಸಲ್ಪಟ್ಟರು.

ಕಸುಬನ್ನು ಆಧರಿಸಿ ಅಡ್ಡಹೆಸರುಗಳನ್ನಿಡುವ ಪದ್ಧತಿ ಅಡ್ಡಹೆಸರುಗಳ ಮೂರನೇ ಹಂತ.ನದಿಬಯಲುಗಳಲ್ಲಿ ಪ್ರಾಣಿಗಳ ಬೇಟೆಯಾಡಿ ಬದುಕುತ್ತಿದ್ದ ಮನುಷ್ಯ ಹಟ್ಟಿ,ದೊಡ್ಡಿಗಳೆಂದು ಕರೆಯುವ ಒಂದೇ ವಂಶದ ಅಥವಾ ನಾಲ್ಕಾರು ವಂಶಗಳಲ್ಲಿ ನೆಲೆಕಂಡುಕೊಂಡಾಗ ಜೀವನೋಪಾಯಕ್ಕಾಗಿ ಮೊದಲು ಪಶುಸಂಗೋಪನೆಯನ್ನು ಕಂಡುಕೊಂಡ.ನಂತರ ಕೃಷಿ ಅಥವಾ ಒಕ್ಕಲುತನವನ್ನು ಕಂಡುಕೊಂಡು ಅದರೊಟ್ಟಿಗೆ ಕೃಷಿಪೂರಕ ಚಟುವಟಿಕೆಗಳನ್ನು ಕಂಡುಕೊಂಡ.ಪಶುಸಂಗೋಪನೆಯಲ್ಲಿ ಮೊದಲು ಸಾಕಿದ ಪ್ರಾಣಿ ಕುರಿ ಆದ್ದರಿಂದ ಕುರಿಸಾಕುವವರು ಕುರುಬರು ಆದರು.ಕುರಿಗಳ ಜೊತೆಗೆ ದನಗಳನ್ನು ಸಾಕುತ್ತಿದ್ದರು ಕುರುಬರು.ನಂತರ ದನಗಳನ್ನು ಮಾತ್ರ ಸಾಕುವವರು ‘ ಗೊಲ್ಲರು’ ಎಂದು ಕರೆಯಲಾಯಿತು.ತೆಲುಗಿನಲ್ಲಿ ಗೊರ್ಲ ಎಂದರೆ ಕುರಿ ಎಂದರ್ಥವಿದ್ದು ತೆಲುಗು ಭಾಷೆಯ ಸಂಪರ್ಕದಿಂದ ಕುರಿಕಾಯುವವರು ಗೊಲ್ಲರು ಆಗಿರಬಹುದು.ಯಾದವರಂತೂ ಉತ್ತರ ಭಾರತದವರು.ಗೊಲ್ಲರು ಈಗ ಯಾದವ ಅಂತ ಅಡ್ಡಹೆಸರಿಟ್ಟುಕೊಳ್ಳುವುದು ಕೃಷ್ಣನ ಪ್ರಭಾವ ಮತ್ತು ಉತ್ತರಭಾರತದ ಅನುಕರಣೆಯಾಗಿ.ಮೈಸೂರು ಮಹಾರಾಜರು ಯದುವಂಶದವರು ಎಂದು ಹೇಳಿಕೊಂಡರೂ ಅವರು ಕ್ಷತ್ರಿಯ ಪರಂಪರೆಯನ್ನು ಅನುಸರಿಸುತ್ತಾರೆ.ಕರ್ನಾಟಕದ ಯಾದವ ಅರಸುಮನೆತನಕ್ಕೂ ಈಗಿನ ಯಾದವ ಎಂದು ಅಡ್ಡಹೆಸರಿಟ್ಟುಕೊಳ್ಳುವವರಿಗೂ ಸಂಬಂಧವಿಲ್ಲ.ಬೆಳಗಾವಿ ಜಿಲ್ಲೆಯ ಕುರುಬರಲ್ಲಿ ಕೆಲವರು ಮೌರ್ಯರು ಅಂತ ಅಡ್ಡಹೆಸರು ಇಟ್ಟುಕೊಂಡು ತಾವು ಮೌರ್ಯರ ವಂಶದವರು ಎಂದು ಹೇಳುತ್ತಾರೆ.ಆದರೆ ಅದು ಮೋರೇರು ಎನ್ನುವ ಪದದ ಐತಿಹಾಸಿಕರಣದ ಪ್ರಯತ್ನ.ಮೋರಿ ಪದಕ್ಕೆ ಮೂರು ಅರ್ಥಗಳಿವೆ– ನವಿಲನ್ನು ಸಂಸ್ಕೃತದಲ್ಲಿ ಮಯೂರ ಎನ್ನುತ್ತಾರೆ.ಆ ಮಯೂರವನ್ನು ಸಾಕಿದವರು ಮಯೂರರು ಆಗಿರಬಹುದು.ಇಲ್ಲವೆ ಗ್ರಾಮದ ರಕ್ಷಣೆಗೆ ಅಥವಾ ಶತ್ರುಗಳ ದಾಳಿಗೆ ತುತ್ತಾದ ಸಂದರ್ಭದಲ್ಲಿ ಅರಸುಪರಿವಾರ ಪಾರಾಗಿ ಹೊರಹೋಗಲು ಇದ್ದ ಗುಪ್ತಕಿಂಡಿಯನ್ನು ಮೋರಿ ಎಂದು ಕರೆಯುತ್ತಾರೆ.ಬಚ್ಚಲು ನೀರು ಹಾಯ್ದುಹೋಗುವ ಮಾರ್ಗವನ್ನು ಸಹ ಮೋರಿ ಎನ್ನುತ್ತಾರೆ.ಮೌರ್ಯರ ವಂಶಸ್ಥರು ಇಂದಿನವರೆಗೂ ಮುಂದುವರೆದಿರಲು ಖಂಡಿತ ಸಾಧ್ಯವಿಲ್ಲ.ಕುರುಬರಲ್ಲಿ 82 ಬೆಡಗುಗಳಿವೆ.ಆ ಬೆಡಗುಗಳೇ ಅವರ ವಂಶದ ಅಡ್ಡಹೆಸರುಗಳಾಗಿವೆ.ಹಾಗೆಯೇ ಹೂಗಾರ,ಎಲಿಗಾರ,ಕಮ್ಮಾರ,ಕುಂಬಾರ,ಅಕ್ಕಸಾಲಿ,ಚಮ್ಮಾರ ಇವೆಲ್ಲ ಮೂಲದಲ್ಲಿ ವೃತ್ತಿಯಾಗಿದ್ದು ಬರಬರುತ್ತ ಕುಲಗಳಾಗಿ ಪರಿವರ್ತನೆಯಾಗಿ ಆಯಾ ಕಸುಬಿನವರ ಕುಲದಿಂದ ಗುರುತಿಸಲ್ಪಟ್ಟು ಅದೇ ಕುಲದಲ್ಲಿ ಹಲವಾರು ಅಡ್ಡಹೆಸರುಗಳು ಬಂದವು.ಅಡ್ಡಹೆಸರಿನ ಮುಕ್ಕಾಲು ಪಾಲು ಕಸುಬನ್ನು ಆಧರಿಸಿದ ಹೆಸರುಗಳು.ಕಸುಬನ್ನು ಆಧರಿಸಿದ ಅಡ್ಡಹೆಸರುಗಳು ಇಂದಿಗೂ ಮುಂದುವರೆಯುತ್ತಿವೆ ಅವರವರ ವೃತ್ತಿಗನುಗುಣವಾಗಿ.ಕಾಯಿಪಲ್ಲೆ ಮಾರುವವರು ಕಾಯಿಪಲ್ಲ್ಯೋರು ಆದರೆ,ಉಪ್ಪು ಮಾರುವವರು ಉಪ್ಪಾರರು,ಮೀನು ಹಿಡಿಯುವವರು ಬೆಸ್ತರು ಇಲ್ಲವೆ ಅಂಬಿಗರು,ಅಂಗಡಿ ಇಟ್ಟವರು ಅಂಗಡಿಯವರು.ಈಗ ಕೆಲವರ ಹಿಂದೆ ಹೋಟೆಲ್ ಅಂತ ಅಡ್ಡ ಹೆಸರೂ ಇದೆ.ಹೋಟೆಲ್ ಗಳು ಬ್ರಿಟಿಷರ ನಂತರ ಕಾಣಿಸಿಕೊಂಡ ಚಹಾ,ತಿಂಡಿಗಳನ್ನು ಮಾರುವ ವ್ಯಾಪಾರಿ ಕೇಂದ್ರಗಳು.ಹೋಟೆಲ್ ಮಲ್ಲಪ್ಪ,ಚೆನ್ನಪ್ಪ ಹೋಟೆಲ್ ಎನ್ನುವಂತಹ ಅಡ್ಡಹೆಸರುಗಳು ಇತ್ತೀಚಿನ ಕಸುಬುಗಳನ್ನು ಆಧರಿಸಿವೆ.ಖಾನಾವಳಿ ಇಟ್ಟುಕೊಂಡವರಿಗೆ ಖಾನಾವಳಿ ಎನ್ನುವ ಅಡ್ಡಹೆಸರು ಬಂದಿದೆ.

ಬ್ರಿಟಿಷರ ಕಾಲದ ಸರಕಾರಿ ಹುದ್ದೆಗಳ ಮನೆತನಗಳು ಅದೇಹುದ್ದೆಯ ಅಡ್ಡಹೆಸರನ್ನು ಹೊಂದಿವೆ.ತಹಶೀಲ್ದಾರ,ಶಾನುಭೋಗ,ಕುಲ್ಕರ್ಣಿ,ಪಟೇಲ್,ಮೊದಲಾದವುಗಳು ಬ್ರಿಟಿಷರ ಕಾಲದಲ್ಲಿ ಕೆಲಸ ಮಾಡಿದವರ ಮನೆತನದ ಅಡ್ಡಹೆಸರುಗಳು.ಪಾಳೆಯಗಾರರ ಆಳ್ವಿಕೆಯಲ್ಲಿ ಅವರ ಸಾಮಂತರುಗಳನ್ನು ನಾಯಕ ಎಂದು ಕರೆಯಿತ್ತಿದ್ದರು.ಇಕ್ಕೇರಿ,ಕಿತ್ತೂರು ಮೊದಲಾದ ಸಂಸ್ಥಾನದ ಬೀಗರು ಬಂಧುಗಳು,ಅವರ ಸಾಮಂತರು,ಅವರ ಪ್ರಭಾವಕ್ಕೆ ಒಳಗಾದವರು ಮತ್ತು ನಿಜಾಮರ ಆಳ್ವಿಕೆಗೆ ಒಳಪಟ್ಟ ಭಾಗಗಳಲ್ಲಿ ಹೆಚ್ಚಿನ ಭೂಮಿ ಹೊಂದಿದವರು ನಾಡಗೌಡರು ಎಂದು ಕರೆದುಕೊಂಡರು.ಸ್ವಲ್ಪ ಹಿಡುವಳಿಗಳನ್ನು ಹೊಂದಿದವರು ಗೌಡ ಆದರೆ ಜಾಸ್ತಿ ಹಿಡುವಳಿ ಹೊಂದಿದವರು ದೊಡ್ಡಗೌಡ,ಹಿರೇಗೌಡರ್ ಆದರು.ಗ್ರಾಮೀಣಭಾಗದಲ್ಲಿ ಒಕ್ಕಲಿಗ ಜಾತಿಗೆ ಸೇರಿದವರಲ್ಲಿ ಎರಡು ಅಡ್ಡಹೆಸರಿನ ಜನರಿದ್ದಾರೆ ಪೋಲಿಸ್ ಗೌಡರು ಮತ್ತು ಮಾಲಿಗೌಡರು ಎಂದು.ಪೋಲೀಸ್ ಗೌಡರು ನಿಜಾಮರ ಕಾಲದ ಗ್ರಾಮಗಳ ನ್ಯಾಯ ನೀತಿಗಳನ್ನು ನೋಡಿಕೊಳ್ಳುತ್ತಿದ್ದವರು.ಮಾಲೀಗೌಡರು ಎಂದರೆ ಹೆಚ್ಚಿನ ಆಸ್ತಿಹೊಂದಿದ್ದ ಶ್ರೀಮಂತಗೌಡರು.ಒಕ್ಕಲಿಗರಲ್ಲಿ ಈಗ ಪಾಟೀಲ್ ಅಂತ ಅಡ್ಡಹೆಸರು ಇಟ್ಟುಕೊಳ್ಳುವುದು ಒಂದು ಫ್ಯಾಶನ್ನೇ ಆಗಿದೆ‌.ಪಾಟೀಲ್ ಎನ್ನುವುದು ನಿಜಾಮರ ಕಾಲದ ಗ್ರಾಮದ ಮುಖ್ಯಸ್ಥನಿಗೆ ಕೊಡುತ್ತಿದ್ದ’ ಪಟೇಲ್’ ಇನಾಮಿನ ರೂಪಾಂತರ.

ಅಡ್ಡಹೆಸರಿನ ಕುರಿತು ಹಲವು ಸಂಪುಟಗಳಾಗುವಷ್ಟು ಬರೆಯಬಹುದು.ಅಷ್ಟೊಂದು ಪುರಸೊತ್ತು ನನಗೆ ಇಲ್ಲವಾದ್ದರಿಂದ ಸ್ವತಂತ್ರ ಸಂಶೋಧಕರೋ ,ವಿಶ್ವವಿದ್ಯಾಲಯಗಳ ಸಂಶೋಧಕರುಗಳೋ ಆ ನಿಟ್ಟಿನಲ್ಲಿ ಪ್ರಯತ್ನಿಸಬಹುದು ಎಂದು ಹೇಳುತ್ತ ಸ್ನೇಹಿತ ಪ್ರವೀಣಕುಮಾರ ಅವರ ಆಸಕ್ತಿಯನ್ನು ತಣಿಸಲು ‘ ಮಜ್ಜಿಗೆ ರಾಮಾಯಣ’ ದಂತೆ ಸಂಕ್ಷಿಪ್ತವಾಗಿ ಅಡ್ಡಹೆಸರಿನ ಪುರಾಣ ಮುಗಿಸುವೆ.

ಮುಕ್ಕಣ್ಣ ಕರಿಗಾರ
ಮೊ: 94808 79501

06.11.2021