ಬಲಿ’ ಯಾಗುವವರ ಹಣೆಬರಹ
ಲೇಖಕರು: ಮುಕ್ಕಣ್ಣ ಕರಿಗಾರ
ದೀಪಾವಳಿ ಹಬ್ಬವು ಲಕ್ಷ್ಮೀ ಆರಾಧನೆಯ ಬೆಳಕಿನ ಹಬ್ಬವೇ ಆಗಿದ್ದರೂ ನರಕಾಸುರ ಮತ್ತು ಬಲಿಯನ್ನು ಈ ಹಬ್ಬದೊಂದಿಗೆ ತಳುಕುಹಾಕಲಾಗಿದೆ.ನರಕಾಸುರನ ಸಂಹಾರವಾದ ದಿನ ನರಕಚತುರ್ದಶಿಯಾದರೆ ಬಲಿಯು ಪಾತಾಳಕ್ಕೆ ತುಳಿಯಲ್ಪಟ್ಟ ದಿನ ಬಲಿಪಾಡ್ಯಮಿ ಆಗಿದೆ.ವಿಷ್ಣು ವಾಮನಾವತಾರದಲ್ಲಿ ದಾನ ಧರ್ಮಕ್ಕೆ ಹೆಸರಾಗಿದ್ದ ಬಲಿಚಕ್ರವರ್ತಿಯಿಂದ ಮೂರುಪಾದ ಭೂಮಿಯನ್ನು ಕೇಳಿ,ತ್ರಿವಿಕ್ರಮನಾಗಿ ಬೆಳೆದು ಒಂದು ಪಾದವನ್ನು ಆಕಾಶದಲ್ಲಿ,ಇನ್ನೊಂದು ಪಾದವನ್ನು ಭೂಮಿಯಲ್ಲಿಟ್ಟು ತನ್ನ ಮೂರನೆಯ ಪಾದವನ್ನು ಬಲಿಯ ತಲೆಯಮೇಲಿಟ್ಟು ಅವನನ್ನು ಪಾತಾಳಕ್ಕೆ ತುಳಿದ ಎನ್ನುತ್ತವೆ ಕಥೆ- ಪುರಾಣಗಳು.ಬಲಿಯು ರಾಕ್ಷಸನೇ ಆಗಿದ್ದರೂ ದುಷ್ಟನಾಗಿರಲಿಲ್ಲ,ಅತ್ಯಾಚಾರ- ಅನಾಚಾರಗಳನ್ನು ಎಸಗುತ್ತಿರಲಿಲ್ಲ.ಬದಲಿಗೆ ಯಜ್ಞಯಾಗಾದಿಗಳನ್ನು ಮಾಡುತ್ತ ದಾನಧರ್ಮಾದಿ ಸತ್ಕಾರ್ಯಗಳಲ್ಲಿ ನಿರತನಾಗಿದ್ದ.ಆದರೂ ವಿಷ್ಣು ಅವನನ್ನು ತುಳಿದ!ಪುರಾಣಗಳು,ಕಥೆಗಳು ಏನೇ ಹೇಳಲಿ ನಿರ್ದೋಷಿಯಾದ ಬಲಿಯನ್ನು ವಿಷ್ಣು ತುಳಿದದ್ದು ಸರಿ ಅಲ್ಲವೆಂದು ಭಾವಿಸಿದ ಜನಪದರು ಪ್ರತಿವರ್ಷದ ಬಲಿಪಾಡ್ಯಮಿಯದಿನದಂದು ಆತನನ್ನು ಪಾತಾಳದಿಂದ ಆಹ್ವಾನಿಸಿ,ಪೂಜಿಸಿ ಸ್ಮರಿಸುತ್ತಾರೆ.ಪುರಾಣಕಾರರು ನಿರಪರಾಧಿಯೂ ಧರ್ಮಾತ್ಮನೂ ಆದ ಬಲಿಯನ್ನು ತುಳಿದು ಪಾತಾಳಕ್ಕಟ್ಟಿದ ಕಾರಣದಿಂದ ವಿಷ್ಣುವು ಬಲಿಗೆ ಪಾತಾಳದಲ್ಲಿ ಅರಮನೆಕಟ್ಟಿ ಆ ಅರಮನೆಯ ವೈಭವದಲ್ಲಿ ಬಲಿಯನ್ನು ಪ್ರತಿಷ್ಠಾಪಿಸಿ ತಾನು ಬಲಿಯ ಅರಮನೆಯನ್ನು ಕಾಯುತ್ತಾನೆ ಎಂದು ಕಥೆ ರಚಿಸುವ ಮೂಲಕ ವಿಷ್ಣುವು ಬಲಿಯನ್ನು ತುಳಿದೂ ಆತನನ್ನು ಉದ್ಧರಿಸಿದ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.ಅದೇನೇ ಇದ್ದರೂ ಬಲಿಯ ಬಗ್ಗೆ ಗೌರವಾದರಗಳನ್ನು ಉಳ್ಳ ನಾಡಜನಪದರು ವಿಷ್ಣುವು ಬಲಿಯನ್ನು ಅನ್ಯಾಯವಾಗಿ ತುಳಿದ ಎನ್ನುವುದನ್ನು ಸ್ಮರಿಸುವುದಕ್ಕೋಸ್ಕರ ತಮ್ಮ ನಿತ್ಯಜೀವನದಲ್ಲಿ ಕೆಲವು ನುಡಿಗಟ್ಟುಗಳನ್ನು ಕಟ್ಟಿಕೊಂಡಿದ್ದಾರೆ.ನಿರುಪದ್ರಿವ್ಯಕ್ತಿಗಳಿಗೆ,ಸತ್ಪುರುಷರಿಗೆ ವ್ಯವಸ್ಥೆ ಮತ್ತು ಪಟ್ಟಭದ್ರರು ನೀಡುವ ಉಪಟಳ-ಉಪದ್ರವಗಳ ಚಿತ್ರಣ ಆ ನುಡಿಗಟ್ಟುಗಳಲ್ಲಿದೆ.ನೋಡೋಣ ಅವುಗಳನ್ನು ಒಂದಿಷ್ಟು;
೦೧ ಬಲಿದಾನ-
ನಾಡು,ರಾಷ್ಟ್ರಗಳ ಕ್ಷೇಮಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಳ್ಳುವವರನ್ನು ‘ ಬಲಿದಾನ ಮಾಡಿದರು’ ಎನ್ನುತ್ತಾರೆ.ದಾನವಾದರೂ ಅದು ಬಲಿಯೆ! ಅಂದರೆ ಬದುಕಬೇಕಾಗಿದ್ದ,ಕನಸು ಕನವರಿಕೆಗಳುಳ್ಳ ವ್ಯಕ್ತಿಯನ್ನು ಸಮಾಜ,ನಾಡಿನ ಹಿತದೃಷ್ಟಿಯನ್ನು ಉಪದೇಶಿಸಿ ಅವನು ಸ್ವಯಂಸಾಯುವಂತೆ ಪ್ರೇರೇಪಿಸುವುದು ಬಲಿದಾನ.ಆ ವ್ಯಕ್ತಿಗೆ ಬಲಿಯಾಗುವುದು ಇಷ್ಟವಿರದಿದ್ದರೂ ಸತ್ಕಾರ್ಯ ,ದೇವರು- ಧರ್ಮಗಳ ಹೆಸರಿನ ಅಮಲನ್ನೇರಿಸಿ ಅಥವಾ ಅಮಲು ಬರಿಸುವ ಪದಾರ್ಥಗಳನ್ನು ಆ ವ್ಯಕ್ತಿಗೆ ತಿನ್ನಿಸುವ ಮೂಲಕ ಆತನನ್ನು ಬಲಿಪಡೆಯುತ್ತಿದ್ದರು.ಹಿಂದೆ ಮಾರಿ- ಮಸಣಿಯರಂತಹ ಕ್ಷುದ್ರ ದೇವತೆಗಳಿಗೆ ‘ ನರಬಲಿ’ ನೀಡಲಾಗುತ್ತಿತ್ತು ಊರ ರಕ್ಷಣೆಗೆ.ಹಾಗೆ ನರಬಲಿಯಾಗುತ್ತಿದ್ದವರೆ ಬಲಿದಾನಿಗಳು.ಅರಸರುಗಳ ಕಾಲದಲ್ಲಿ ಅರಸರು ತೋಡಿಸಿದ ಕೆರೆ ಬಾವಿಗಳಲ್ಲಿ ನೀರು ಬೀಳದೆ ಇದ್ದಾಗ ಅಥವಾ ರಾಜ್ಯಕ್ಕೆ ಕ್ಷಾಮವು ತಲೆದೋರಿದಾಗ ಜನರನ್ನು ಬಲಿಕೊಡುತ್ತಿದ್ದರು.ಅಂತಹ ಬಲಿಜೀವರುಗಳೇ ಬಲಿದಾನಿಗಳು.ಹೀಗೆ ಬಲಿಯಾಗುವವರ ಬದುಕುವ ಅವಕಾಶ,ಸುಂದರ ಕನಸುಗಳನ್ನು ಕಸಿದುಕೊಂಡು ಅವರನ್ನು ಬಲಿಪಡೆಯಲಾಗುತ್ತಿತ್ತು.
೦೨. ಬಲಿಪಶು — ಮನುಷ್ಯರ ಬಲಿಯು ಭೀಭತ್ಸವೆನ್ನಿಸಿದ್ದರಿಂದಲೋ ಅಥವಾ ಬಲಿಯಾಗುವವರ ಪ್ರತಿರೋಧವೋ ಕಾರಣವಾಗಿ ನರಬಲಿಯು ನಿಂತು ಅದರ ಬದಲಿಗೆ ಪ್ರಾಣಿ- ಪಶುಗಳನ್ನು ಬಲಿಕೊಡುವ ಪದ್ಧತಿ ಆಚರಣೆಗೆ ಬಂದಿತು.ಇಲ್ಲೂ ಕೂಡ ಮಾರಿಯಂತಹ ಕ್ಷುದ್ರದೇವಿಯರಿಗೆ ಕುರಿ,ಕೋಳಿ,ಕೋಣಗಳನ್ನು ಬಲಿನೀಡುತ್ತಾರೆ.ಪ್ರಾಣಿಗಳಿಗೂ ಬದುಕುವ ಹಕ್ಕಿದೆ.ಬಾಯಿಲ್ಲ ಎನ್ನುವ ಕಾರಣಕ್ಕೆ ಅವು ತಮ್ಮ ನೋವು,ಸಂಕಟಗಳನ್ನು ಹೊರಹಾಕವು.ಮೂಕಪ್ರಾಣಿಗಳನ್ನು ಮಾತುಬಲ್ಲ ಮನುಷ್ಯ ತನ್ನ ಸ್ವಾರ್ಥಕ್ಕೆ ಬಲಿಕೊಡುತ್ತಾನೆ.ಅಸಹಾಯಕರು,ಮುಗ್ಧರು ವ್ಯವಸ್ಥೆಯ ಕರಾಳಮುಖದಡಿ ಸಿಕ್ಕು ತೊಂದರೆ ಅನುಭವಿಸುವುದನ್ನು ‘ ಬಲಿಪಶು’ ನುಡಿಗಟ್ಟು ಸೂಚಿಸುತ್ತದೆ.
೦೩. ಬಲಿಪಡೆ — ಬಲಿಯಾಗುವ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ,ಬಲವಂತವಾಗಿ ಆತನನ್ನು ಕೊಲ್ಲುವುದು ‘ಬಲಿಪಡೆಯುವುದು’. ಬಲಿಪಡೆಯುವ ಈ ಕ್ರಿಯೆಯು ಪಟ್ಟಭದ್ರರ ಹಿತಾಸಕ್ತಿಗಳನ್ನು ಕಾಯಲೋಸುಗ ಅಮಾಕರನ್ನು ತುಳಿಯುವ,ಅವಕಾಶವಂಚಿತರನ್ನಾಗಿ ಮಾಡುವ ಪ್ರಯತ್ನವಾಗಿರುತ್ತದೆ.ದ್ರೋಣಾಚಾರ್ಯರು ಅರ್ಜುನನಿಗೋಸ್ಕರ ಏಕಲವ್ಯನ ಹೆಬ್ಬೆರಳು ಪಡೆದದ್ದು ‘ ಬಲಿಪಡೆಯುವ’ ಕ್ರಿಯೆಗೆ ಸನಾತನ ನಿದರ್ಶನ,ಹಳೆಯಕಾಲದ ಸಾಕ್ಷಿ!
೦೪ ಭೂತಬಲಿ — ಹಿಂದೆ ಹಳ್ಳಿಗಳಲ್ಲಿ ಗ್ರಾಮದ ಕ್ಷೇಮಕ್ಕಾಗಿ ಭೂತಬಲಿ ಎನ್ನುವ ಅನಿಷ್ಟವನ್ನು ಆಚರಿಸಲಾಗುತ್ತಿತ್ತು.ಗ್ರಾಮವನ್ನು ಭೂತ,ಪೀಡೆ- ಪಿಶಾಚಿಗಳು,ಕ್ಷುದ್ರಶಕ್ತಿಗಳು ಬಾಧಿಸಿದಾಗ ಅಥವಾ ಬಾಧಿಸಬಾರದು ಎನ್ನುವ ಮುನ್ನೆಚ್ಚರಿಕೆಯ ಕ್ರಮವಾಗಿ ಹನ್ನೆರಡು ವರ್ಷಗಳಿಗೊಮ್ಮೆ ಭೂತಬಲಿಯನ್ನು ಆಚರಿಸಲಾಗುತ್ತಿತ್ತು.ದಲಿತಸಮುದಾಯಕ್ಕೆ ಸೇರಿದ ಮನೆತನದ ವ್ಯಕ್ತಿಯೊಬ್ಬರನ್ನು ‘ ಬಲಿಪುರುಷ’ ಎಂದು ಆಯ್ಕೆ ಮಾಡಿ ಆತನನ್ನು ಅಮವಾಸೆಯ ರಾತ್ರಿ ಹೊತ್ತು ಬೆತ್ತಲೆಯಾಗಿ ಊರ ಸುತ್ತ ಪ್ರದಕ್ಷಿಣೆ ಮಾಡಲು ಹೇಳಲಾಗುತ್ತಿತ್ತು.ಆತನ ಕೈಯಲ್ಲಿ ಅನ್ನದ ಪುಟ್ಟಿಯನ್ನು ಕೊಟ್ಟು ಊರ ಹೊರಗೆ ಅನ್ನವನ್ನು ಚೆಲ್ಲುವ ಮೂಲಕ ಆತ ಭೂತಗಳನ್ನು ಸಂಪ್ರೀತಗೊಳಿಸುತ್ತಿದ್ದ.ಆತ ಭೂತಗಳಿಗೆ ನೈವೇದ್ಯ ನೀಡಲು ಹೋಗುವಾಗ ಆತನ ಹೆಂಡತಿ ತನ್ನ ಮುತ್ತೈದೆತನದ ಸಂಕೇತವಾದ ತಾಳಿ ಅಥವಾ ಮಾಂಗಲ್ಯವನ್ನು ತೆಗೆದಿರಿಸುತ್ತಿದ್ದಳು ತನ್ನ ಗಂಡ ಬದುಕಿ ಬರುವ ಸಾಧ್ಯತೆಗಳಿಲ್ಲ ಎನ್ನುವುದು ಮನವರಿಕೆಯಾಗಿ.ಭೂತಗಳಿಗೆ ನೈವೇದ್ಯವನ್ನು ಸಮರ್ಪಿಸಿ ಹಣೆಬರಹ ಗಟ್ಟಿ ಇದ್ದರೆ ಆ ವ್ಯಕ್ತಿ ಮರಳಿ ಬರುತ್ತಿದ್ದ.ಆಗ ಊರವರು ಪುನಃ ಆತನಿಗೆ ಮದುವೆಮಾಡಿ ಹೆಂಡತಿಗೆ ತಾಳಿ ಕಟ್ಟಿಸುತ್ತಿದ್ದರು.ಭೂತಪುರುಷನನ್ನು ದುಷ್ಟಶಕ್ತಿಗಳು,ಕ್ಷುದ್ರಶಕ್ತಿಗಳು ಬಲಿಪಡೆಯುತ್ತಿದ್ದವಾದ್ದರಿಂದ ಆತ ವಿಚಿತ್ರರೀತಿಯಲ್ಲಿ ಸಾವಿಗೆ ಈಡಾಗುತ್ತಿದ್ದ.
ವಿಷ್ಣುವು ದೇವತೆಗಳ ಮಾತು ಕೇಳಿ ನಿರುಪದ್ರವಿಯಾದ ಬಲಿಚಕ್ರವರ್ತಿಯನ್ನು ತುಳಿದ.ವ್ಯವಸ್ಥೆಯ ರಕ್ಷಣೆ,ಭದ್ರತೆ ಮತ್ತು ಹಿತಾಸಕ್ತಿಯ ಹೆಸರಿನಲ್ಲಿ ಮುಗ್ಧರು,ದುರ್ಬಲರುಗಳನ್ನು ತುಳಿಯುವ ,ಅವಕಾಶವಂಚಿತರನ್ನಾಗಿ ಮಾಡುವ ಮನುಷ್ಯರ ಹುನ್ನಾರವನ್ನು ಬಲಿಚಕ್ರವರ್ತಿನೆನಪಿನೊಂದಿಗೆ ಸ್ಮರಿಸುತ್ತಾರೆ ನಾಡಜನಪದರು.

ಮೊ: 94808 79501
06.11.2021
ತುಂಬಾ ಚೆನ್ನಾಗಿದೆ ಲೇಖನ