ಬೆಳಕಿನ ಉತ್ಸವ ದೀಪಾವಳಿ – ಮುಕ್ಕಣ್ಣ ಕರಿಗಾರ

ಬೆಳಕಿನ ಉತ್ಸವ ದೀಪಾವಳಿ

ಲೇಖಕರು : ಮುಕ್ಕಣ್ಣ ಕರಿಗಾರ

ದೀಪಾವಳಿ ಹಬ್ಬ ಬಂದಿದೆ.ಸುಪ್ರೀಂಕೋರ್ಟಿನ ತೀರ್ಪಿನಿಂದಾಗಿ ಬಾಣಗಳ ಅಬ್ಬರ ಕಡಿಮೆ ಆಗಿದ್ದರೂ ಮಕ್ಕಳು ಹಸಿರು ಪಟಾಕಿಗಳನ್ನು ಸಿಡಿಸಿ,ಸಂಭ್ರಮಿಸುತ್ತಿದ್ದಾರೆ.ಮಹಿಳೆಯರು ದೀಪಾಲಂಕಾರದೊಂದಿಗೆ ಲಕ್ಷ್ಮೀ ಪೂಜೆ ಮಾಡುತ್ತ, ಭಕ್ತಿ ಮೆರೆಯುತ್ತಿದ್ದಾರೆ.ದೀಪಾವಳಿ ಎಂದರೆ ಸಂಭ್ರಮದ ಹಬ್ಬವೆ!

ಶರದೃತುವಿನ ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿ ಹಬ್ಬಕ್ಕೆ ಭಾರತೀಯ ಹಬ್ಬಗಳಲ್ಲಿ ವಿಶಿಷ್ಟಸ್ಥಾನವಿದೆ,ಮಹತ್ವವಿದೆ.ಮಹಾಕಾಲಿ,ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ ಎನ್ನುವ ತ್ರಿಗುಣಾತ್ಮಿಕೆಯಾಗಿ ನವರಾತ್ರಿಯಲ್ಲಿ ಪೂಜೆಗೊಂಡ ದೇವಿ ದುರ್ಗೆಯು ಈಗ ದೀಪದುರ್ಗೆಯಾಗಿ ತನ್ನ ಎರಡನೇ ರೂಪವಾದ ಮಹಾಲಕ್ಷ್ಮೀಯ ರೂಪದಲ್ಲಿ ಪ್ರಕಟಗೊಳ್ಳುತ್ತಾಳೆ.ಕಾರ್ತಿಕ ಮಾಸವು ಅತಿಹೆಚ್ಚು ಕತ್ತಲೆ ಇರುವ ಮಾಸವಾದ್ದರಿಂದ ಉತ್ತರಭಾರತದ ಕೆಲವೆಡೆ ಹಾಗೂ ಪಶ್ಚಿಮ ಬಂಗಾಳದಲ್ಲಿ ದೀಪಾವಳಿಯನ್ನು ‘ ಕಾಳಿ ಉತ್ಸವ್’ ಎಂದು ಆಚರಿಸುತ್ತಾರೆ.ಅತಿಯಾದ ಕತ್ತಲೆಯನ್ನು ‘ ಕಾರ್ತಿಕದ ಕತ್ತಲು’ ಎಂದೇ ಬಣ್ಣಿಸಲಾಗುತ್ತಿದೆ.ಕವಿದ ಕತ್ತಲೆಯ ನಡುವೆ ಭರವಸೆಯನ್ನರಸುವುದೇ ದೀಪಾವಳಿ ಹಬ್ಬದ ಅರ್ಥ ಮತ್ತು ವಿಶೇಷ.ದೀಪವು ಬೆಳಕಿನ,ಭರವಸೆಯ ಸಂಕೇತ.

‘ ತಮಸೋಮಾ ಜ್ಯೋತಿರ್ಗಮಯ’ ಎಂದರು ಋಷಿಗಳು.ಕತ್ತಲೆಯಿಂದ ಬೆಳಕಿನೆಡೆ ನಡೆಯುವ ಪಥವೇ ಬದುಕು; ಅದರ ಸಂಕೇತವೇ ದೀಪಾವಳಿ.ಕತ್ತಲೆ ಎಂದರೆ ಅಜ್ಞಾನ,ಅಂಧಕಾರ,ನೋವು ಮತ್ತು ನಿರಾಶೆ ಎಂದರ್ಥ.ಮನುಷ್ಯ ಜೀವನವು ಸದಾ ಸುಖದಲ್ಲೇ ಇರುವುದಿಲ್ಲ.ದುಃಖ,ನೋವು,ನಿರಾಶೆಗಳು ಬಾಧಿಸುತ್ತವೆ ಮನುಷ್ಯರನ್ನು.ಒಂದು ದಿನವಾಗಬೇಕಾದರೆ ಬರಿ ಹಗಲು ಇದ್ದರೆ ಮಾತ್ರ ಸಾಲದು,ರಾತ್ರಿಯೂ ಇರಬೇಕು.ಕತ್ತಲೆಯೂ ಬರಬೇಕು ನಮ್ಮ ಬಾಳು ಪೂರ್ಣವಾಗಬೇಕಾದರೆ! ಜಗತ್ತಿನಲ್ಲಿ ಒಳಿತು- ಕೆಡುಕುಗಳಿವೆ,ಇಷ್ಟ- ಅನಿಷ್ಟಗಳಿವೆ; ಶಿಷ್ಟರು ಇರುವಂತೆ ದುಷ್ಟರೂ ಇದ್ದಾರೆ.ಪರಮಾತ್ಮನ ಸೃಷ್ಟಿಯಾದ ಈ ವಿಶ್ವದಲ್ಲಿ ಈ ದ್ವಂದ್ವ,ವಿರೋಧಾಭಾಸಗಳು ಪೂರ್ಣತೆಗಾಗಿಯೇ ಇವೆ ಎನ್ನುವುದನ್ನು ಮನಗಾಣಬೇಕು.ಅಪೂರ್ಣತೆಯು ಕೇವಲ ಆಭಾಸವಷ್ಟೆ.

ಬಹುಪ್ರಾಚೀನ ಕಾಲದಲ್ಲಿ ಋಷಿಗಳು ಅಗ್ನಿಯನ್ನು ಮೊದಲು ಸಾಕ್ಷಾತ್ಕರಿಸಿಕೊಂಡರು .ಅಗ್ನಿಯಿಂದಲೇ ಜೀವನ.ಅಗ್ನಿಯ ಆರಾಧನೆಗಾಗಿ ಯಜ್ಞ ಮತ್ತು ಹೋಮಗಳ ಏರ್ಪಾಟು.ಯಜ್ಞ ಅಥವಾ ಹೋಮ ಎಂದರೆ ಅಗ್ನಿಯ ಪ್ರಜ್ವಲನ ಕಾರ್ಯ.ಅಗ್ನಿಯು ಉರಿಯತೊಡಗಿದರೆ ಕತ್ತಲೆ ಕರಗುತ್ತದೆ,ಬೆಳಕು ಮೂಡುತ್ತದೆ.ಕಾಡಿನಲ್ಲಿರುವ ಹುಲಿ ಸಿಂಹ ಚಿರತೆಗಳಂತಹ ಕ್ರೂರಪ್ರಾಣಿಗಳು ಬೆಂಕಿಯನ್ನು ಕಂಡು ದೂರ ಓಡುತ್ತವೆ.ಆಶ್ರಮವಾಸಿಗಳಾಗಿದ್ದ ಋಷಿಗಳು ರಾತ್ರಿಯ ಹೊತ್ತು ತಮ್ಮ ಆಶ್ರಮಗಳ ಮುಂದೆ ಅಗ್ನಿಯನ್ನು ಪ್ರಜ್ವಲಿಸುತ್ತಿದ್ದರು ಕ್ರೂರಮೃಗಗಳಿಂದ ರಕ್ಷಣೆ ಪಡೆಯಲು.ದೇವಿ ದುರ್ಗೆಯು ಅಗ್ನಿಸ್ವರೂಪಳು.ವೇದದ ‘ ದುರ್ಗಾಸೂಕ್ತವು’ ದುರ್ಗೆಯನ್ನು ‘ ಜಾತವೇದ’ ಸ್ವರೂಪಳೆಂದೇ ಬಣ್ಣಿಸಿದೆ.ಅಗ್ನಿಯ ಏಳು ನಾಲಗೆಗಳೇ ಸಪ್ತಮಾತೃಕೆಯರಾಗಿ ಶಾಕ್ತಪಂಥದಲ್ಲಿ ಪ್ರಕಟಗೊಂಡ ಶಾಕ್ತತತ್ತ್ವ.ಕಾಡಿನಲ್ಲಿದ್ದ ಋಷಿಗಳು ಜ್ವಲಿಸುತ್ತಿದ್ದ ಅಗ್ನಿಯ ಸಂಕೇತವೇ ಕಾರ್ತಿಕ ಮಾಸದಲ್ಲಿ ಗ್ರಾಮ- ನಗರಗಳಲ್ಲಿ ಮನೆಗಳ ಮುಂದೆ ಬೆಳಗುವ ದೀಪಗಳು.ಕಾಡಿನಲ್ಲಿ ಕ್ರೂರ ಮೃಗಗಳಿದ್ದರೆ ನಾಡಿನಲ್ಲಿ ದುಷ್ಟರಿದ್ದಾರೆ ಹೊರಗೆ,ದುರ್ಗುಣಗಳಿವೆ ನಮ್ಮೊಳಗೆ.ಹೊರಗಿನ ದುಷ್ಟರ ಭೀತಿ ಒಳಗಿನ ದುರ್ಗುಣಗಳ ಕಾಟದಿಂದ ಮುಕ್ತರಾಗಲು ಹೊತ್ತಿಸಬೇಕು ದೀಪಗಳನ್ನು,ಬೆಳಗಬೇಕು ಹಣತೆಗಳನ್ನು.ತಮಂಧದಿಂದ ಬಿಡುಗಡೆ ಹೊಂದಲು ಅರಸಬೇಕು ಬೆಳಕಿನ ಪಥವನ್ನು.ನಿರಾಶೆಯಿಂದ ಮುಕ್ತರಾಗಲು ಬೆಳಕಿನ ಭರವಸೆಯನ್ನು ಹೊತ್ತಿಸಬೇಕು.ದೀಪಾವಳಿಯಲ್ಲಿ ಮನೆಗಳ ಮುಂದೆ ಹಚ್ಚುವ ಸಾಲುಪ್ರಣತೆಗಳ ಬೆಳಕಿನಡಿ ಮೈ ಮನಗಳನ್ನು ಅರಳಿಸಿಕೊಂಡು ಸತ್ಪಥದಿ ಮುನ್ನಡೆಯಬೇಕು.ಅಸತ್ಯದಿಂದ ಸತ್ಯದೆಡೆಡಗೆ,ಕತ್ತಲೆಯಿಂದ ಬೆಳಕಿನೆಡೆಗೆ,ಮೃತ್ಯುವಿನಿಂದ ಅಮೃತತ್ವದೆಡಗೆ ಸಾಗಲಿ ಜೀವನ ಪಯಣ’ ಎನ್ನುವ ಋಷಿವರ್ಯರ ಸಂದೇಶವನ್ನು ಸಾರುವ ದೀಪಾವಳಿಯನ್ನು ಮನೆಗಳ ಮುಂದೆ ಪ್ರಣತೆಗಳನ್ನು ಬೆಳಗಿಸುತ್ತ ಆಚರಿಸುವ ಮೂಲಕ ಬಾಳಲ್ಲಿ ಕವಿದ ಅಜ್ಞಾನ,ಅಂಧಕಾರ,ಅವಿಚಾರಗಳ ಕತ್ತಲೆಯನ್ನು ಹೊಡೆದೋಡಿಸಬೇಕು.ದೀಪಗಳನ್ನು ಮನೆಗಳ ಮುಂದೆ ಮಾತ್ರವಲ್ಲ,ಮನಗಳಲ್ಲೂ ಬೆಳಗಿಸಬೇಕು.ಮನಸ್ಸುಗಳನ್ನು ಕವಿದ ಅಲ್ಪತೆ,ಕ್ಷುದ್ರತೆಗಳಿಂದ ಮುಕ್ತರಾಗಿ ತತ್ತ್ವಮಸಿ,ಸೋಹಂಭಾವವನ್ನು ಮೈಗೂಡಿಸಿಕೊಳ್ಳಬೇಕು.ನಾನು ಅಲ್ಪನಲ್ಲ,ಆತ್ಮನು; ನಾನು ಜೀವಿಯಲ್ಲ ದೇವನು; ಅಪರಿಪೂರ್ಣವಲ್ಲ ನಾನು,ನಾನು ಪರಿಪೂರ್ಣನೇ ಇದ್ದೇನೆ ಎಂದು ಪೂರ್ಣದಿಂದ ಹೊರಹೊಮ್ಮಿದ ಈ ವಿಶ್ವದಲ್ಲಿ ನಾವೂ ಪೂರ್ಣರು ಎಂದು ತಿಳಿದು ನಡೆಯುವ ಪೂರ್ಣಪಥದ ಜೀವನಸಂದೇಶವೇ ಬೆಳಕಿನ ಹಬ್ಬದೀಪಾವಳಿ.

ಮುಕ್ಕಣ್ಣ ಕರಿಗಾರ
ಮೊ: 94808 79501

04.11.2021