ಕಾವ್ಯಲೋಕ: ದ್ಯಾವಣ್ಣ ಸುಂಕೇಶ್ವರ. ಅವರ ಕವನ *ಹೂವಿನ ಮಳೆ*

ಹೂವಿನ ಮಳೆ

       * ದ್ಯಾವಣ್ಣ ಸುಂಕೇಶ್ವರ

ಕನ್ನಡಿಗರಿಂದ ಜಯಘೋಷ ಮೊಳಗಲಿ,
ಮಾತೆ ಭುವನೇಶ್ವರಿಗೆ ಹೂ ಮಳೆ ಸುರಿಯಲಿ

ನಿನ್ನ ಒಡಲಲ್ಲಿ ಹರಿವ ತೊರೆಗಳು
ಭುವಿಗೆ ಹಸಿರ ತೋರಣಗಳು
ರೈತರ ಬದುಕಿಗೆ ಕನಕಾಭರಣಗಳು
ಜುಳು ಜುಳು ನಾದ ಗೈಯುವ ಜಲಪಾತಗಳು
ಮನಸ್ಸಿಗೆ ಮುದ ನೀಡುವ ಸುಮಧುರ ತಾಣಗಳು

ನಿನ್ನ ಮಡಿಲಿನಲಿ ಜನ್ಮ ಪಡೆದ ಕಲಿಗಳು
ಮಾತೃ ಜೀವವ ಕಾಯ್ದರು ಹಗಲಿರುಳು
ನಂಬಿ ಬಂದವರಿಗೆ ಆಶ್ರಯ ನೀಡಿದ ಸಾಹಸಿಗಳು
ಮುಗ್ಧರ ಹೃದಯವನು ಗೆದ್ದ ಮಹಾ ಪರಾಕ್ರಮಿಗಳು
ನಾಡಿನ ರಕ್ಷಣೆಗಾಗಿ ಅಸುನೀಗಿದ ಕರುನಾಡ ಕಣ್ಮಣಿಗಳು

ನಿನ್ನ ಕರುಳು ಬಳ್ಳಿಯಂತಿರುವ ಕವಿಗಳು
ಜ್ಞಾನಪೀಠ ಶಿಖರವನೇರಿದ ಮೇಧಾವಿಗಳು
ವಿಶ್ವಕ್ಕೆ ಕನ್ನಡಿಗರ ಜಾಣ್ಮೆಯನರುಹಿದ ಜ್ಞಾನಿಗಳು
ಒಗ್ಗಟ್ಟಿನ ಬೀಜವ ಬಿತ್ತಿ ಸಾರ್ಥಕ ಮೆರೆದ ಮೌನಿಗಳು
ಜ್ಞಾನಾಮೃತವನು ನೀಡುವ ಭಾವನಾತ್ಮಕ ಜೀವಿಗಳು

ನಿನ್ನ ಗಡಿ ಸಹೋದರಿಯರ ಭಾಷೆಗಳು
ಅತಿಕ್ರಮಿಸಿವೆ ಅವುಗಳಲ್ಲಿನ ಶಬ್ದಗಳು
ನಮ್ಮ ಭಾಷೆ ಮರೆಯಲಿಲ್ಲ ತನ್ನ ಪದಗಳು
ನಾವಾಡುವ ಕನ್ನಡ ಪದಗಳು, ಮುತ್ತುಗಳು
ಕನ್ನಡ ಭಾಷೆಯ ಪದರತ್ನಗಳು, ಅಭಿಮಾನಿಗಳು

ದ್ಯಾವಣ್ಣ ಸುಂಕೇಶ್ವರ
ಮುಖ್ಯಸ್ಥರು, ಕಲಾ‌ ವಿಭಾಗ,
ಲೊಯೋಲ ಪದವಿ ಕಾಲೇಜು, ಮಾನ್ವಿ.
ಮೊ:9880123488

One thought on “ಕಾವ್ಯಲೋಕ: ದ್ಯಾವಣ್ಣ ಸುಂಕೇಶ್ವರ. ಅವರ ಕವನ *ಹೂವಿನ ಮಳೆ*

Comments are closed.