ನಿಮಗೆಲ್ಲ ಕೈ ಮುಗಿದು ಒಂದು ವಿನಂತಿಯೊಂದಿಗೆ ಈ ವರ್ಷದ ದೀಪಾವಳಿಯ ಶುಭ ಕೋರುತ್ತ….
ಲೇಖಕರು: ದೀಪಕ್ ಶಿಂಧೆ
ದೀಪಾವಳಿ ಬಂತು ಎನ್ರೀ ಹಬ್ಬ ಜೋರಾ?? ಅಳಿಯಂದ್ರು,ಮಗಳು ಬಂದಿದ್ದಾರಾ?? ಸರಸೋತಮ್ಮ ಯಾವಾಗ ಬಂದ್ರಿ ಬೆಂಗಳೂರಿಂದ?? ಪಟಾಕಿ,ಸ್ವೀಟು ಎಲ್ಲಾ ತಂದ್ರಾ?? ಹೌದು ಹೀಗೆ ಗಲ್ಲಿ ಗಲ್ಲಿಯಲ್ಲಿ ದೀಪಗಳ ಹಬ್ಬ ದೀಪಾವಳಿಯ ದಿನ ಮಾತುಗಳು,ಉಭಯಕುಶಲೋಪರಿ,ಒಂದಷ್ಟು ನಗು ಎಲ್ಲಾ ಓಕೆ ಆದರೆ ನಾವು ಎಲ್ಲೋ ಒಂದು ಕಡೆ ಏನನ್ನೋ ಮರೆತು ಹೊರಟಿದ್ದೀವಿ ಅಲ್ಲವಾ?? ಮೊನ್ನೆಯಷ್ಟೆ ನಮ್ಮನ್ನು ಅಗಲಿದ ನಟ ಪುನೀತ್ ರಾಜಕುಮಾರ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಯಾರೋ ಒಂದಷ್ಟು ಅಪರಿಚಿತರು ಈ ಜಗತ್ತು ನೋಡುವ ಹಾಗೆ ಮಾಡಿ ನಿಜವಾದ ಬೆಳಕಾಗಿದ್ದಾರೆ.
ನಟಸಾರ್ವಭೌಮ ಡಾಕ್ಟರ್ ರಾಜಕುಮಾರ ನಡೆದ ಹಾದಿಯಲ್ಲಿ ನಮ್ಮೆಲ್ಲರ ಮೆಚ್ಚಿನ ನಟ ಅಪ್ಪು ಹೊರಟು ನಿಂತಿದ್ದು ಅವರ ಅಪ್ಪ ಅಮ್ಮ ಹಾಕಿಕೊಟ್ಟ ಸಂಸ್ಕಾರವನ್ನು ಕೊನೆಯ ಕ್ಷಣದ ತನಕ ಪಾಲಿಸಿದ್ದಾರೆ.ಒಂದಷ್ಟು ಶಾಲೆಯ ಮಕ್ಕಳ ಉಚಿತ ವಿದ್ಯಾಬ್ಯಾಸ,ಹತ್ತಾರು ಗೋಶಾಲೆಗಳಿಗೆ ಮತ್ತು ಹಲವಾರು ವೃದ್ದಾಶ್ರಮಗಳಿಗೆ ತಮ್ಮ ಆದಾಯದಲ್ಲಿ ಸಹಾಯ ಹಸ್ತ ಚಾಚುವ ಮೂಲಕ ಬೆಳಕು ಹರಡಿದ್ದ ನಟ ಅಪ್ಪು
ಅಸಲಿಗೆ ದೀಪಗಳು ಬೆಳಗಬೇಕಿರುವದು ಮನೆಗಳಲ್ಲಿ ಅಲ್ಲ ಮನಸುಗಳಲ್ಲಿ ಅನ್ನುವದನ್ನ ನಮಗೆಲ್ಲ ತೋರಿಸಿಕೊಟ್ಟಿದ್ದಾರೆ.ನಮ್ಮ ಬದುಕಿನಲ್ಲಿ ನಾವೆಲ್ಲ ಎಷ್ಟು ಗಳಿಸಿದೆವು?? ಅನ್ನುವದಕ್ಕಿಂತ ಏನನ್ನ ಗಳಿಸಿದೆವು?? ಅನ್ನುವದೇ ಕೊನೆಯ ಕ್ಷಣದಲ್ಲಿ ಸಾರ್ಥಕ್ಯದ ಭಾವವನ್ನ ಮೂಡಿಸುತ್ತದೆ.ತನ್ನ ಪಕ್ಕದ ಮನೆಯ ಅಜ್ಜಿಗೆ ಕಿರಾಣಿ ಅಂಗಡಿಗೆ ಓಡಿ ಹೋಗಿ ಹಾಲು ತಂದು ಕೊಡುವ ಒಬ್ಬ ಪುಟಾಣಿಯಿಂದ ಹಿಡಿದು ಕೆಲಸಕ್ಕೆ ಹೊರಡುವ ಮುನ್ನ ಮಕ್ಕಳೇ ಇಲ್ಲದೆ ಯಾವುದೋ ಚಿಂತೆಯಲ್ಲಿ ಗೇಟಿಗೆ ನಿಂತ ವಯೋವೃದ್ದನಿಗೆ ಟೀ ಆಯ್ತಾ ಅಂಕಲ್ ಅನ್ನುವ ಮಾಡರೇಟ್ ಹೆಣ್ಣುಮಗಳ ತನಕ,ಎರಡು ಮೂರು ಸಾವಿರ ಕಿಲೋಮೀಟರ್ ದೂರದಲ್ಲಿ ತನ್ನ ಮನೆಯವರನ್ನ ಬಿಟ್ಟು ತಳ್ಳುವ ಗಾಡಿಯಲ್ಲಿ ಪಾನಿಪೂರಿ ಮಾರುವ ಹುಡುಗನಿಗೆ ಔರ್ ಕೈಸಾ ಚಲ್ ರಹಾ ಹೇ ಅನ್ನುತ್ತ ಒಂದು ಸ್ವೀಟ್ ಬಾಕ್ಸ ಕೊಟ್ಟು ರಕ್ ಲೇ ಯಾರ್…ಅನ್ನುವ ಮಧ್ಯವಯಸ್ಕನ ತನಕ ಹೀಗೆ ದಿನವೂ ಬದುಕು ಸೋತವರ ಮನಸ್ಸಿನಲ್ಲಿ ಒಂದಷ್ಟು ಆಶಾಕಿರಣಗಳನ್ನ ಹುಟ್ಟಿಸುವ ಸಹೃದಯರಿಗೆ ನಾವು ಧನ್ಯವಾದಗಳನ್ನಷ್ಟೇ ಹೇಳಿದರೆ ಸಾಕೆ.?? ಬದುಕಿನ ಹಲವು ಮಗ್ಗುಲುಗಳಲ್ಲಿ ಅಂಧಕಾರಗಳನ್ನು ,ಎದುರಾದ ಅಪಮಾನ,ನಿಂದನೆ,ಮಾನಸಿಕ ಆಘಾತಗಳನ್ನು ಮೆಟ್ಟಿ ನಿಲ್ಲುತ್ತ ಬೆಳೆದು ನಿಂತ ಹಲವು ಹಿರಿಯರ ಆದರ್ಶಗಳನ್ನು ನಾವೆಲ್ಲ ಪಾಲಿಸಬೇಕಾಗಿದೆ.ಸಮಾಜ ನಮಗೇನು ಕೊಟ್ಟಿತು ಅಂತ ಯೋಚಿಸುವ ಬದಲು ಈ ಸಮಾಜಕ್ಕೆ ನಾವೇನು ಕೊಟ್ಟೆವು ಅಂತ ಏಕಾಂತದಲ್ಲಿ ಕುಳಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯ ಎಲ್ಲರಿಗೂ ಇದೆ.
ಯಾರೋ ಒಬ್ಬ ಹಸಿದವರಿಗೆ ಒಂದು ಹೊತ್ತಿನ ಊಟ ಅಥವಾ ಬಾಯಾರಿದವರಿಗೆ ನೀರು ಕೊಡುವದು ನಮ್ಮಿಂದ ಅಸಾಧ್ಯವಾದ ಕೆಲಸವಂತೂ ಖಂಡಿತಾ ಅಲ್ಲ. ಈ ಹಬ್ಬ ಹರಿದಿನಗಳು ಬಂದಾಗೆಲ್ಲ ನನ್ನ ಮನಸ್ಸು ಇಂತಹದ್ದೇ ಹಳವಂಡಗಳಿಗೆ ಬೀಳುತ್ತದೆ ಅನ್ನುವದು ನಿಜವಾದರೂ ಕೂಡ ಹನಿ ಹನಿ ಕೂಡಿದರೆ ಹಳ್ಳ ,ತೆನೆ ತೆನೆ ಕೂಡಿದರೆ ರಾಶಿ ಅನ್ನುವ ಮಾತಿನಂತೆ ರಾಜ್ಯದ ನವ ಯುವಕರು ಅಲ್ಲಲ್ಲಿ ಕಟ್ಟಿಕೊಂಡ ಸಂಘಟನೆಗಳನ್ನ ಕೇವಲ ತಮ್ಮ ಜಾತಿಯವರಿಗೆ,ಅಥವಾ ಸಮುದಾಯಕ್ಕೆ ಅಂತ ಸೀಮಿತಗೊಳಿಸದೆ ಇಡೀ ಸಮಾಜಕ್ಕೆ ಅಂತ ಕೆಲಸ ಮಾಡುವ ಹಾಗೆ ಪ್ರೇರೇಪಿಸುವದು ನಮ್ಮಿಂದ ಸಾಧ್ಯವಿದೆ ಅಲ್ಲವೇ?? ಎನ್ ಮರೀ ದೊಡ್ಡೋನಾದ ಮೇಲೆ ಏನಾಗ್ತೀಯ ಅಂತ ಕನ್ನಡ ಶಾಲೆಯ ಮಕ್ಕಳನ್ನು ಒಮ್ಮೆ ಕೇಳಿ ನೋಡಿ… ಅವರು ಯಾರೂ ಇಂಜನೀಯರ್ ಆಗ್ತೀನಿ,ದೊಡ್ಡ ಬ್ಯಜಿನೆಸ್ ಮೆನ್ ಆಗ್ತೀನಿ ಅಂತ ಖಂಡಿತ ಹೇಳೋದಿಲ್ಲ.ಪೋಲಿಸ್ ಆಗ್ತೀನಿ,ಲಾಯರ್ ಆಗ್ತೀನಿ,ಜಿಲ್ಲಾಧಿಕಾರಿ ಆಗ್ತೀನಿ ಡಾಕ್ಟರ್ ಆಗ್ತೀನಿ ಅಂತ ಖಂಡಿತ ಹೇಳುತ್ತಾರೆ ಯಾಕೆಂದರೆ ತಮ್ಮಂತಹದೇ ಬಡ ಮಕ್ಕಳಿಗೆ ಸಹಾಯ ಮಾಡುವ,ಮತ್ತು ಅನ್ಯಾಯಗಳನ್ನು ಮೆಟ್ಟಿ ನಿಲ್ಲುವ ಕನಸುಗಳು ಅಲ್ಲಿ ಚಿಗುರಿಕೊಂಡಿರುತ್ತವೆಯೆ ಹೊರತು ಹಣ ಗಳಿಕೆಯ ಬ್ಯುಜಿನೆಸ್ ಮೆನ್,ದೊಡ್ಡ ಬಿಲ್ಡಿಂಗ್ ಕಟ್ಟುವ ಇಂಜಿನೀಯರ್ ಅಂತಹ ಕೋರ್ಸುಗಳತ್ತ ಅವರು ಎಂದೂ ವಾಲುವದೇ ಇಲ್ಲ.ಅಂತಹ ಮಕ್ಕಳ ಕನಸುಗಳಿಗೆ ನೀರು ಎರೆದು ಪೋಷಿಸುವ ಕೆಲಸಕ್ಕೆ ನಾವೆಲ್ಲ ಮುಂದಾಗುವ ಅಗತ್ಯ ನಮ್ಮ ದೇಶಕ್ಕೆ ತುರ್ತಾಗಿ ಬೇಕಾಗಿದೆಯೇ ಹೊರತು ಅದಕ್ಕೆಲ್ಲ ತುಂಬಾ ದುಡ್ಡುಬೇಕು ಮರಿ ಅಂತ ಹಾದಿ ತಪ್ಪಿಸಬಾರದು ಅಲ್ಲವೇ??
ಒನ್ಸ ಅಗೇನ್ ನಾನಿಲ್ಲಿ ಹೇಳಲು ಹೊರಟಿರುವದು ಒಳ್ಳೆಯ ಕೆಲಸ ಮಾಡಲು ಮತ್ತು ಸಹಾಯ ಮಾಡಲು ಮುಂದೆ ಬರಲು ದುಡ್ಡಿನ ಅಗತ್ಯ ಖಂಡಿತ ಇಲ್ಲ.ಮತ್ತೊಬ್ಬರ ಬೆನ್ನು ತಟ್ಟುವ ಪ್ರೋತ್ಸಾಹದ ಮಾತುಗಳನ್ನು ಆಡುವ ಒಳ್ಳೆಯತನಕ್ಕಾಗಿ ನಮ್ಮಲ್ಲಿ
ಇರಬೇಕಾಗಿರುವದು ವಿಶಾಲವಾದ ಹೃದಯ ಮತ್ತು ನೊಂದವರ ಕಣ್ಣೀರು ಒರೆಸಲು ಮುಂದಾಗುವ ನಿಷ್ಕಲ್ಮಷವಾದ ಮನಸ್ಸು ಅಷ್ಟೇ.ಅಸಹಾಯಕ,ಅಬಲ,ಮತ್ತು ನಿರ್ಗತಿಕರಿಗೆ ನಿಮ್ಮಿಂದ ಏನಾದ್ರೂ ಸಹಾಯ ಮಾಡಬಹುದು ಅನ್ನಿಸಿತಾ?? ಜಸ್ಟ ಗೋ ಅಹೆಡ್ ಕುಚೇಲನ ಮನೆಗೆ ಬಂದ ಕೃಷ್ಣನಿಗೆ ಸಿಕ್ಕಿದ್ದು ಒಂದೇ ಅಗುಳು ಅವಲಕ್ಕಿ ಆದರೂ ಅಲ್ಲಿ ಮನೆ ಮಾಡಿದ ಸಂತೃಪ್ತಿಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಅಂದ ಹಾಗೆ ಹೇಳಲು ಮರೆತಿದ್ದೆ ಈ ದೀಪಾವಳಿಗೆ ರಿಲಯನ್ಸ್ ನ ಮೋರ್,ಅಮೇಜಾನ್,ಪ್ಲಿಪ್ ಕಾರ್ಟ,ಬಿಗ್ ಬಜಾರ, ಝೋಮ್ಯಾಟೋ,ಪಿಜ್ಜಾ, ಡೋಮಿನೋಜ್,ಹೀಗೆ ತರಹೇವಾರಿ ಹೆಸರಿನ ನೂರಾರು ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಮುಗಿಬಿದ್ದು ಖರೀದಿಸಿ ವಿದೇಶದ ದೊಡ್ಡ ಬಂಡವಾಳ ಶಾಹಿಗಳಿಗೆ ಕೋಟ್ಯಂತರ ಲಾಭ ಮಾಡಿಕೊಟ್ಟು ಅವರಲ್ಲಿ ದೀಪಾವಳಿಯ ಖರೀದಿಗೆ ಬಂಪರ್ ಆಫರ್ ಹೆಸರಿನಲ್ಲಿ ಒಂದು ಖರೀದಿಗೆ ಒಂದನ್ನು ಉಚಿತವಾಗಿ ಕೊಡುವ ಮಕ್ಮಲ್ ಟೋಪಿ ಹಾಕಿಕೊಳ್ಳುವ ಬದಲು ನಮ್ಮದೇ ಊರಿನ,ನಮ್ಮದೇ ಗಲ್ಲಿಯ ರಸ್ತೆ ಪಕ್ಕದಲ್ಲಿ ಕುಳಿತ ಅಜ್ಜಿಯೊಬ್ಬಳ ಬುಟ್ಟಿಯಲ್ಲಿ ಇರುವ ಒಂದಷ್ಟು ಹಣ್ಣುಗಳನ್ನ,ಹೊಟ್ಟೆಪಾಡಿಗೆ ಅಲ್ಲಾಸಾಬಿಯೊಬ್ಬ ಮಾರಲು ಇಟ್ಟ ಪಟಾಕಿಗಳನ್ನ,ಗಿರಾಕಿಗೆ ಕಾಯುತ್ತ ಕುಳಿತ ವಿಧವೆ ಹೆಂಗಸೊಬ್ಬಳು ಮಾರಾಟಕ್ಕೆ ತಂದ ದೀಪಗಳನ್ನ ಯಾವುದೇ ಚೌಕಾಸಿ ಇಲ್ಲದೆ ಖರೀದಿಸಿ ಅವರ ಮನೆಯಲ್ಲೂ ಒಂದಷ್ಟು ದೀಪದ ಬೆಳಕು ಚೆಲ್ಲೋಣ ಅಲ್ಲವೆ..??
ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತ,ಕರುಣೆಯ ಬೆಳಕನ್ನು ಪಸರಿಸುತ್ತ,ಒಲವಿನ ದೀಪಗಳ ಹಚ್ಚುತ್ತ ದೀಪಾವಳಿಯನ್ನ ಅರ್ಥಪೂರ್ಣಗೊಳಿಸೋಣ ಏನಂತೀರಿ?? ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಪತ್ರಕರ್ತ, ಅಥಣಿ
ಮೊ:9482766018