ಹರ ಹರ ಮಹಾದೇವ !
ಲೇಖಕರು: ಮುಕ್ಕಣ್ಣ ಕರಿಗಾರ
ಹಿಂದೆ,ರಾಜ- ಮಹಾರಾಜರುಗಳ ಕಾಲದಲ್ಲಿ ಯುದ್ಧಕ್ಕೆ ಮುನ್ನುಗುತ್ತಿರುವ ಸಂದರ್ಭದಲ್ಲಿ ಸೈನಿಕರು ‘ ಹರ ಹರ ಮಹಾದೇವ’ ಘೋಷಣೆ ಕೂಗುತ್ತ ಶತ್ರು ಸೈನ್ಯದ ಮೇಲೆ ಮುನ್ನುಗುತ್ತಿದ್ದರು.ತಣ್ಣಗೆ ಮನೆ, ಮಠ -ಮಂದಿರಗಳಲ್ಲಿ ಕುಳಿತು,ಶಾಂತ ಮನಸ್ಕರಾಗಿ ಸ್ಮರಿಸುವ ಶಿವನನ್ನು ಯುದ್ಧಕ್ಕೆ ಧುಮುಕುವ ಸೈನಿಕರು ನೆನೆಯುತ್ತಾರೆ! ಹೌದು,ನೆನೆಯಲೇಬೇಕು ಯುದ್ಧೋನ್ಮುಖಿ ಸೈನಿಕರು ಹರನಾದ ಮಹಾದೇವನನ್ನು ಯುದ್ಧದ ಗೆಲುವಿಗೆ ಇಲ್ಲವೆ ಭವಮುಕ್ತಿಗೆ ! ಹರಹರ ಮಹಾದೇವ ಘೋಷಣೆಯನ್ನು ಸಾಮೂಹಿಕವಾಗಿ ಕೂಗುವುದರಿಂದ ಹರನ ಆವೇಶ ಉಂಟಾಗಿ ಯುದ್ಧದಲ್ಲಿ ಗೆಲ್ಲಬಹುದು ಎಂಬ ನಂಬಿಕೆ ಅರಸರು ಮತ್ತು ಸೈನಿಕರಿಗೆ.
‘ ಹರ’ ಎಂದರೆ ಸಂಕಟಹಾರಿ,ಭವಹಾರಿ ಶಿವ ಎಂದರ್ಥ.ಗೆಲ್ಲಿಸುವವನು,ನಿವಾರಿಸುವವನು,ಪರಿಹರಿಸುವವನು ಎನ್ನುವ ಅರ್ಥಗಳಿವೆ ಹರನಿಗೆ.ಸೈನಿಕರು’ ಹರ ಮಹಾದೇವ’ ಎಂದು ಮಾತ್ರ ಕೂಗುತ್ತಿಲ್ಲ ‘ ಹರ ಹರ’ ಎಂದು ದ್ವಿರುಕ್ತಿಯಲ್ಲಿ ಸ್ಮರಿಸುತ್ತಿದ್ದಾರೆ ಶಿವನನ್ನು.’ಗೆಲ್ಲಿಸು ಗೆಲ್ಲಿಸು ದೇವರ ದೇವ ಶಿವನೆ’ ಎಂದು ಘೋಷಣೆ ಕೂಗುವ ಸೈನಿಕರ ಯುದ್ಧಘೋಷವಾಕ್ಯದ ಅರ್ಥವಾದರೂ ಏನು? ‘ಹರ’ ಭವನಿವಾರಿಸಿ ಮುಕ್ತಿಕೊಡುತ್ತಾನೆ ಎನ್ನುವ ನಂಬಿಕೆ.ಆದರೆ ಇವರೋ ಯುದ್ಧಕ್ಕೆ ಹೊರಟ ಸೈನಿಕರು! ಗೆದ್ದರೆ ರಾಜ್ಯಲಕ್ಷ್ಮೀಯನ್ನು ಸತ್ತರೆ ಸ್ವರ್ಗದಲ್ಲಿ ದೇವಕನ್ಯೆಯರ ಸಂಗಸುಖ ಅನುಭವಿಸುವವ ವೀರರು.ತಾಯ್ನಾಡಿನ ರಕ್ಷಣೆಗಾಗಿ ಜೀವಬಲಿದಾನ ಗೈಯುವ ಪರಮವೀರರು!.ಇವರಿಗೆತ್ತಣ ಮೋಕ್ಷಾಪೇಕ್ಷೆ? ‘ ಹರ’ ಎನ್ನುವ ಶಬ್ದಕ್ಕೆ ‘ ಗೆಲ್ಲಿಸುವವನು’, ‘ಪರಿಹರಿಸುವವನು’ ಎನ್ನುವ ಅರ್ಥಗಳಿರುವಂತೆಯೇ ‘ ರಕ್ಷಿಸುವವನು’ ಎನ್ನುವ ಅರ್ಥವೂ ಇದೆ.’ ದೇವರ ದೇವ ಮಹಾದೇವ ಶಿವನೆ ,ನಮ್ಮನ್ನು ಯುದ್ಧದಲ್ಲಿ ಗೆಲ್ಲಿಸು,ನಮ್ಮ ಪ್ರಾಣಗಳನ್ನು ರಕ್ಷಿಸು ಅದಾಗದಿದ್ದರೆ ನಮ್ಮ ಹೆಂಡಿರು ಮಕ್ಕಳನ್ನು ರಕ್ಷಿಸು’ ಎನ್ನುವುದು ಸೈನಿಕರ ಘೋಷವಾಕ್ಯದ ಅರ್ಥ!
ಅರಸೊತ್ತಿಗೆಯ ಆ ಕಾಲದಲ್ಲಿ ಅರಸರ ರಕ್ಷಣೆ,ಸಾಮ್ರಾಜ್ಯ ವಿಸ್ತರಣೆಯ ಬಯಕೆಗಳೆದುರು ಜನಸಾಮಾನ್ಯರ ಜೀವಗಳಿಗೆ ಬೆಲೆ ಇರಲಿಲ್ಲ.ಜನಸಾಮಾನ್ಯರೇನಿದ್ದರೂ ಪ್ರಭುತ್ವದ ಹಿತರಕ್ಷಣೆಗಾಗಿ ಬಲಿಯಾಗಲೆಂದೇ ಹುಟ್ಟಿದ ‘ ಬಲಿಪಶುಗಳು’. ಆ ಕಾಲದಲ್ಲಿ ಪ್ರತಿ ಮನೆಯಿಂದ ಕನಿಷ್ಟ ಒಬ್ಬರಾದರೂ ಸೈನಿಕರಾಗಲೇಬೇಕಿತ್ತು.ಹಾಗೆ ಸೈನಿಕರಾಗುವುದು ಎಂದರೆ ರಾಜ್ಯದ,ಪ್ರಭುತ್ವದ ಹಿತಚಿಂತನೆಯಲ್ಲಿ ಸ್ವಂತ ಬದುಕನ್ನು ಬಲಿಗೊಟ್ಟು,ಬಾಳುವ ಕನಸುಗಳನ್ನು ಕಮರಿಸಿಕೊಂಡು ವೀರಯೋಧರಾಗಿ ರಾಜ್ಯಕ್ಕೆ ಸಮರ್ಪಿಸಿಕೊಳ್ಳುವುದು.ಯಾವಾಗ ಯುದ್ಧಕರೆಬರುವುದೋ ಎಂದು ಗೊತ್ತಿರದ ಅನಿಶ್ಚಿತತೆಯ ಭಯ- ಆತಂಕಗಳ ಕಾರ್ಮೋಡ ಕವಿದ ಬದುಕು ರಾಜರುಗಳ ಕಾಲದ ಸೈನಿಕರದು.ಯುದ್ಧಘೋಷಣೆ ಆದಾಗ ಮದುವೆಮಂಟಪದಲ್ಲಿರಲಿ,ಹೆಂಡತಿಗೆ ಹೆರಿಗೆಯಾಗುತ್ತಿರಲಿ ಅಥವಾ ವೃದ್ಧ ತಂದೆ- ತಾಯಿಗಳು ಅಂತಿಮಕ್ಷಣಗಳಲ್ಲಿರಲಿ ಅದಾವುದೂ ಮುಖ್ಯವಲ್ಲ– ಊಟಕ್ಕೆ ಕುಳಿತವರು ತಟ್ಟೆಬಿಟ್ಟು ಏಳಲೇಬೇಕಾದ ಅನಿವಾರ್ಯತೆ,ಅರಸರ ಆಜ್ಞೆ ! ಸೈನಿಕರಾದವರು ಬದುಕುವ ಆಸೆ ಇಟ್ಟುಕೊಂಡಿದ್ದರೂ ರಾಜರ ಆಣತಿಗಳನ್ನು ಧಿಕ್ಕರಿಸುವಂತೆ ಇರಲಿಲ್ಲ.ಆ ಕಾರಣದಿಂದ ಸೈನಿಕರುಗಳು ತಮ್ಮ ಕವಾಯತುಶಾಲೆಗಳಲ್ಲೇ ಕಂಡುಕೊಂಡ ಘೋಷವಾಕ್ಯ ‘ ಹರಹರ ಮಹಾದೇವ’. ನಮ್ಮನ್ನು ಯುದ್ಧದಲ್ಲಿ ಗೆಲ್ಲಿಸು,ಒಂದು ವೇಳೆ ನಾವು ಯುದ್ಧದಲ್ಲಿ ಬಲಿಯಾಗುವುದನ್ನೇ ಹಣೆಬರಹವನ್ನಾಗಿ ಪಡೆದು ಬಂದಿದ್ದರೆ ಮಹಾದೇವನೆ, ನಮ್ಮ ಹೆಂಡಿರು ಮಕ್ಕಳನ್ನಾದರೂ ರಕ್ಷಿಸು’ ಎನ್ನುವ ಆರ್ತಧ್ವನಿ,ಅಸಹಾಯಕ ನುಡಿ ಅಡಗಿದೆ ಈ ಘೋಷವಾಕ್ಯದ ಹಿಂದೆ.’ಮನುಷ್ಯರು ,ಅದರಲ್ಲೂ ಸೈನಿಕರಾಗಿ ಹುಟ್ಟಿದ ನಮ್ಮ ಬಾಳು ನಮ್ಮ ಕೈಯಲ್ಲಿ ಇಲ್ಲ ಮಹಾದೇವನೆ,ಅರಸರ ಎದುರು ನಿವೇದಿಸಿಕೊಳ್ಳಲಾಗದ ಸಂಕಟವನ್ನು ಪರಮಕರುಣಾಕರನಾದ ನಿನ್ನೆದುರು ನಿವೇದಿಸಿಕೊಳ್ಳುತ್ತಿದ್ದೇವೆ.ಆಲಿಸು, ಮೊರೆಕೇಳು ನಮಗೆ ಮುಂದಿನ ಜನ್ಮ ಇರುವುದಾದರೆ ದಯವಿಟ್ಟು ನಮ್ಮನ್ನು ಸೈನಿಕರನ್ನಾಗಿ ಹುಟ್ಟಿಸಬೇಡ’ ಎನ್ನುವ ಸೈನಿಕರ ಮನಕಲಕುವ ಪ್ರಾರ್ಥನೆ ಯುದ್ಧಗಳನ್ನು ನಿಲ್ಲಿಸಬೇಕಿತ್ತು.ಆದರೆ ಆಳರಸರ ಸ್ವಾರ್ಥ ಮತ್ತು ಪ್ರತಿಷ್ಠೆಗಳಿಗೆ ಜನಸಾಮಾನ್ಯರು ಯಕಃಶ್ಚಿತ ಕೀಟಗಳಂತೆ ಸಾಯಬೇಕಿದ್ದ ದಾರುಣ ದಿನಗಳವು.ಸೈನಿಕರಿಗೆ ಮೊರೆಯಲು ಹರನಲ್ಲದೆ ಮತ್ತಾರು ಇದ್ದಾರು?
‘ ಹರ’ ನು ರಕ್ಷಕ ದೇವನಾಗಿ ಪೂಜಿಸಲ್ಪಡುತ್ತಿದ್ದಾನೆ ಬಹುಹಿಂದಿನ ಕಾಲದಿಂದ.ದೇವಿ ದುರ್ಗೆಯು ರಕ್ಷಕದೇವಿಯಾಗಿ ಪ್ರಕಟಗೊಳ್ಳುವ ಮುಂಚೆ ಹರನೇ ರಕ್ಷಕನಾಗಿದ್ದ,ಶತ್ರುಸಂಹಾರಕನಾಗಿದ್ದ,ಸಂಕಟನಿವಾರಕನಾಗಿದ್ದ.ಸಾಮೂಹಿಕ ಹರನಾಮಸ್ಮರಣೆಯೊಂದಿಗೆ ಯುದ್ಧಕ್ಕೆ ಧುಮುಕಿದಾಗ ಗೆಲುವು ಲಭಿಸುತ್ತಿತ್ತು .ಕೆಲವರು ಮರಣವನ್ನಪ್ಪುತ್ತಿದ್ದರು.ಗೆಲ್ಲಿಸು-ರಾಜ್ಯ ಸುಖ ಅನುಭವಿಸುತ್ತೇವೆ;ಸತ್ತರೆ ಸದ್ಗತಿಯನ್ನು ಕರುಣಿಸು’ ಎಂದು ಪ್ರಾರ್ಥಿಸುವ ಸೈನಿಕರ ಕೂಗು ಹರನಿಗೆ ಕೇಳದೆ ಇರುತ್ತದೆಯೆ? ದೊರೆಗಳ ಮೊದ್ದು ಕಿವಿಗಳಿಗೆ ಕೇಳದೆ ಇದ್ದರೂ ಒಡಲಿಲ್ಲದ ಪರಶಿವನ ಕಿವಿಗೆ ಅಸಹಾಯಕ ಯೋಧರ ಆರ್ತಪ್ರಾರ್ಥನೆ ಕೇಳಿಸುತ್ತಿತ್ತು.ಗುಡಿ ಗುಂಡಾರಗಳಲ್ಲಿ ತನ್ನನ್ನು ವೈಭವೋಪೇತವಾಗಿ ಪೂಜಿಸುವವರನ್ನು ಬಿಟ್ಟು,ಯಜ್ಞ- ಯಾಗಾದಿಗಳಲ್ಲಿ ಹವಿಸ್ಸನ್ನರ್ಪಿಸುವವರನ್ನು ತೊರೆದು ತನ್ನನ್ನು ನಂಬಿ ಕೂಗಿ,ಕರೆದ ಸೈನಿಕರ ರಕ್ಷಣೆಗೆ ಯುದ್ಧಭೂಮಿಗೆ ಧಾವಿಸುತ್ತಿದ್ದ ಮಹಾದೇವ ಶಿವ! ‘ ಹರಹರ ಮಹಾದೇವ’ ಘೋಷಣೆ ಕೂಗಿದ ಸೈನಿಕರಿಗೆ ಗೆಲುವಾಗುತ್ತಿತ್ತು ಬಹುತೇಕ ಯುದ್ಧಗಳಲ್ಲಿ.ಆ ಕಾರಣದಿಂದ ಆಳರಸರುಗಳೆಲ್ಲ ‘ ಹರಹರ ಮಹಾದೇವ’ ಘೋಷಣೆಯನ್ನು ಯುದ್ಧಘೋಷಣೆಯಾಗಿ ಸ್ವೀಕರಿಸಿದ್ದರು.
ಹರನನ್ನು ಸ್ಮರಿಸಿ ಯುದ್ಧಕ್ಕೆ ತೊಡಗಿ ಗೆದ್ದರೆ ಹೆಂಡಿರು ಮಕ್ಕಳೊಂದಿಗೆ ಬದುಕು ಸಾಗಿಸುವ ಅವಕಾಶಪಡೆಯುತ್ತಿದ್ದರು; ಸತ್ತರೆ ಶಿವನಾಮಸ್ಮರಣೆಯ ಫಲವಾಗಿ ಸದ್ಗತಿಯನ್ನು ಪಡೆಯುತ್ತಿದ್ದರು.ಸಾಯುವ ಮುನ್ನ ಹರನಾಮ ಸ್ಮರಿಸಿದರೆ ದುರಿತ ಕಂಟಕಗಳಿಲ್ಲ.ಹರನಾಮ ಸ್ಮರಿಸುತ್ತ ಸತ್ತರೆ ನರಕ ಇಲ್ಲ,ಸದ್ಗತಿ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿಂದ ಸೈನಿಕರು ‘ ಹರ ಹರ ಮಹಾದೇವ’ ಘೋಷಣೆ ಕೂಗುತ್ತಿದ್ದರು.

ಮೊ: 94808 79501
03.11.2021