ಎಂಥಾ ಮರುಳಯ್ಯಾ ಇದು…-ಚಾಮರಾಜ ಸವಡಿ

  

          ಎಂಥಾ ಮರುಳಯ್ಯಾ ಇದು…

      ಲೇಖಕರು: ಚಾಮರಾಜ ಸವಡಿ
———————————————————
ತುಂಬ ದಿನಗಳ ಹಿಂದೆ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಸಂದರ್ಶನವೊಂದರಲ್ಲಿ ಹೇಳಿದ ಮಾತೊಂದು ನೆನಪಾಗುತ್ತಿದೆ. ಓದುಗರನ್ನು ಈ ಪರಿ ಸೆಳೆಯುವಲ್ಲಿ ನೀವು ಯಶಸ್ವಿಯಾಗಿದ್ದು ಹೇಗೆ? ಎಂಬಂರ್ಥದ ಪ್ರಶ್ನೆಗೆ ಯಂಡಮೂರಿ ಉತ್ತರ: ಅವರ ದೌರ್ಬಲ್ಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ.

ಇವತ್ತು ನಮ್ಮ ಸುತ್ತಮುತ್ತ ನಡೆಯುತ್ತಿರುವ ಹಲವಾರು ವಿಷಯಗಳನ್ನು ನೋಡಿದಾಗ ನನಗೆ ಈ ಮಾತು ಪದೆ ಪದೆ ನೆನಪಿಗೆ ಬರತೊಡಗಿದೆ.

ಸ್ವಾಮಿಗಳು, ಕಪಟ ಜ್ಯೋತಿಷಿಗಳು, ಬಹುತೇಕ ರಾಜಕಾರಣಿಗಳು, ಟಿವಿಗಳು, ಪತ್ರಿಕೆಯವರು, ಸರ್ಕಾರಿ ನೌಕರರು, ವಕೀಲರು, ವೈದ್ಯರು- ಹೀಗೆ ನೀವು ಯಾವುದೇ ರಂಗ ನೋಡಿದರೂ ಸಾಕು, ಯಂಡಮೂರಿ ಹೇಳಿದ ಮಾತು ಸತ್ಯ ಎಂಬುದು ಸ್ಪಷ್ಟವಾಗುತ್ತ ಹೋಗುತ್ತದೆ. ಪ್ರತಿಯೊಬ್ಬರೂ ಜನರ ದೌರ್ಬಲ್ಯ ಹಾಗೂ ಅನಿವಾರ್ಯತೆಗಳನ್ನೇ ಬಳಸಿಕೊಳ್ಳುವವರು. ಎಲ್ಲೋ ಒಬ್ಬಿಬ್ಬರು ಪುಣ್ಯಾತ್ಮರು ಇರಬಹುದು. ಆದರೆ, ಬಹುತೇಕರ ಜೀವನ ನಡೆಯುತ್ತಿರುವುದೇ ಜನರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದರಿಂದ.

ಸಾಮಾನ್ಯ ವ್ಯಕ್ತಿಯಂತೆ ಓಡಾಡಿಕೊಂಡವ ಕಾವಿ ಬಟ್ಟೆ ಧರಿಸಿದ ಕೂಡಲೇ ಆತ ಸ್ವಾಮೀಜಿಯಾಗಿಬಿಡುತ್ತಾನೆ. ಕಿಂಚಿತ್ತೂ ವಿಚಾರ ಮಾಡದೇ ಆತನ ಕಾಲಿಗೆ ಬೀಳಲು ಜನ ಹಾತೊರೆಯತೊಡಗುತ್ತಾರೆ. ಖಾಲಿ ಓಡಾಡಿಕೊಂಡವ, ಒಂದಕ್ಕೆರಡು ಪಟ್ಟು ಹಣ ಕೊಡುತ್ತೇನೆ ಎಂದ ಕೂಡಲೇ ಸಾಲ ಮಾಡಿ ಹಣ ಕೊಡಲು ಜನ ಮುಂದಾಗುತ್ತಾರೆ. ಜ್ಯೋತಿಷಿಗಳು ಹೇಳಿದಂತೆ ನಡೆದುಕೊಳ್ಳುವವರು, ಜಾಹೀರಾತು ನೋಡಿ ಔಷಧಿ ಕೊಳ್ಳುವವರು, ಕೆಲಸಕ್ಕೆ ಹಣ ಕಟ್ಟುವವರು, ಅರ್ಧ ರೇಟಿಗೆ ಚಿನ್ನ ಕೊಳ್ಳಲು ಹಾತೊರೆಯುವವರು, ಕೆಲಸ ಕೊಡುತ್ತೇನೆ ಎಂದರೆ ಕರೆದಲ್ಲಿಗೆ ಹೋಗುವವರು ನಮ್ಮ ಸುತ್ತಮುತ್ತಲೇ ಇದ್ದಾರೆ. ಮಾತಿಗೆ ಬಂದರೆ, ಅವರೂ ರಾಜಕಾರಣಿಗಳನ್ನು, ಜ್ಯೋತಿಷಿಗಳನ್ನು, ಸ್ವಾಮೀಜಿಗಳನ್ನು, ನಕಲಿ ವೈದ್ಯರನ್ನು, ವಂಚಕರನ್ನು ಬೈಯುವವರೇ. ಆದರೆ, ತಮಗೆ ಲಾಭವಾಗುತ್ತದೆ ಎಂದು ಅನಿಸಿದ ತಕ್ಷಣ ವಿವೇಚನೆ ಮರೆತುಬಿಡುತ್ತಾರೆ. ಕಣ್ಣು ಮುಚ್ಚಿಕೊಂಡು ಹಳ್ಳಕ್ಕೆ ಬೀಳುತ್ತಾರೆ.

ನಮಗೆಲ್ಲಾ ಅನುಕರಣೆಯ ಚಪಲ. ಗುಪ್ತವಾಗಿ ಲಾಭ ಮಾಡಿಕೊಳ್ಳುವ ಆಸೆಬುರುಕತನ. ಜನ ಗುರುತಿಸಲಿ ಎಂಬ ಆಸೆ. ಯಾರಿಗೋ ಏನೋ ದಕ್ಕಿತು ಎಂಬುದನ್ನು ಕೇಳಿದ ಮನಸ್ಸು ಮರ್ಕಟನಂತಾಗುತ್ತದೆ. ಸಾರಾಸಾರ ವಿವೇಚನೆ ಮಾಡದೇ ಧುಮುಕುತ್ತದೆ. ಬೇಗ ಲಾಭ ಮಾಡಿಕೊಳ್ಳುವ ಆಸೆ ವಾಸ್ತವವನ್ನು ಮರೆಸುತ್ತದೆ. ಕಷ್ಟಪಡದೇ, ಶೀಘ್ರವಾಗಿ ಹಣ, ಮನ್ನಣೆ, ಲಾಭ ಗಳಿಸುವ ಆಸೆ ನಮಗೆಲ್ಲ. ಭೂಮಿಗೆ ವಿಷ ಉಣಿಸಿಯಾದರೂ ಹೆಚ್ಚು ಬೆಳೆಯುವ ದುರಾಸೆ, ಕಂದಮ್ಮನನ್ನು ಕೊಂದಾದರೂ ನಿಧಿ ಪಡೆಯುವ ನೀಚತನ, ಇದ್ದುದನ್ನೆಲ್ಲ ಮಾರಿಯಾದರೂ ಚುನಾವಣೆ ಗೆಲ್ಲುವ ಹುಮ್ಮಸ್ಸು, ಕೋತಿಯಂತೆ ಆಡಿಯಾದರೂ ಕ್ಯಾಮೆರಾಗಳಲ್ಲಿ ಕಾಣಿಸಿಕೊಳ್ಳುವ ಚಪಲತೆ ಹುಟ್ಟುವುದೇ ಇದರಿಂದಾಗಿ. ಒಮ್ಮೆ ಇದು ರೂಢಿಯಾದರೆ ಮುಗಿಯಿತು, ಮತ್ತೆ ಮತ್ತೆ ಮಾಡುವಂತೆ ಪ್ರಚೋದಿಸುತ್ತದೆ. ಕ್ರಮೇಣ ಅದೇ ಚಟವಾಗುತ್ತದೆ.

ಮೆಚ್ಚಿನ ನಟ ಟೀಂ ಇಂಡಿಯಾದ ಟಿ-ಷರ್ಟ್ ಧರಿಸಿ ಕ್ರಿಕೆಟ್ ನೋಡಿದ ಎಂದ ಕೂಡಲೇ ಅವನ ಅಭಿಮಾನಿಗಳು ಅಂಥವೇ ಟಿ-ಷರ್ಟ್ ಕೊಂಡು, ತೊಟ್ಟು ಬೀಗುತ್ತಾರೆ. ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಕೂಡಲೇ ಸಾಲು ಸಾಲು ಆತ್ಮಹತ್ಯೆಗಳಾಗುತ್ತವೆ. ಯಾವುದೋ ಸಿನಿಮಾ ಯಶಸ್ವಿಯಾದರೆ, ಅಂಥವೇ ಮಾದರಿಯ ಸಿನಿಮಾಗಳು ರೀಲು ಸುತ್ತಿಕೊಂಡು ಬರುತ್ತವೆ. ಟಿವಿಯೊಂದರಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿದ ಕಾರ್ಯಕ್ರಮವೋ, ಧಾರಾವಾಹಿಯೋ ಜನಪ್ರಿಯವಾದರೆ, ಇತರ ಚಾನೆಲ್ಗಳೂ ಅವನ್ನೇ ಅನುಸರಿಸುತ್ತವೆ. ಪ್ರತಿಯೊಬ್ಬರಿಗೂ ಅನುಕರಣೆಯ ಚಪಲ. ಶೀಘ್ರ ಯಶಸ್ಸು ಗಳಿಸುವ ಹುಚ್ಚು. ಸ್ವಂತಿಕೆಯ ಕಷ್ಟದ ಮಾರ್ಗ ಯಾರಿಗೆ ಬೇಕು?

ಹೀಗಾಗಿ ಟಿವಿ ಕ್ಯಾಮೆರಾಗಳು ಸೀದಾ ಬೆಡ್ರೂಮಿಗೇ ನುಗ್ಗುತ್ತಿವೆ. ಜನ ಬಾಯಿ ಚಪ್ಪರಿಸಿಕೊಂಡು ನೋಡುತ್ತಾರೆ. ಅಲ್ಲೆಲ್ಲೋ ವಂಚಕನೊಬ್ಬನನ್ನು ಜನ ಅಟ್ಟಾಡಿಸಿ ಹೊಡೆದ ಸುದ್ದಿ ಬಿತ್ತರವಾಗುತ್ತಿದ್ದಂತೆ, ನೋಡಿದ ಊರುಗಳಲ್ಲೆಲ್ಲ ಜನರ ಕೈ ತುಡಿಯುತ್ತದೆ. ನಮ್ಮೂರಲ್ಲೂ ಅಂಥ ಒಂದು ಪ್ರಕರಣ ಸಿಗಬಾರದೇ ಎಂದು ಹಪಹಪಿಸುತ್ತಾರೆ. ಯಾವುದೋ ಊರಿನ ಗುಹೆಯಲ್ಲಿ ವಿಚಿತ್ರ ಸದ್ದು ಕೇಳುತ್ತಿದೆ ಎಂಬ ಕಾರ್ಯಕ್ರಮ ಬಿತ್ತರವಾಗುತ್ತಿದ್ದಂತೆ, ನಮ್ಮೂರಲ್ಲೂ ಅಂಥ ವಿಚಿತ್ರ ಶಬ್ದ ಬರುವ ಸ್ಥಳಗಳಿವೆ, ಬನ್ನಿ ಎಂಬ ಕರೆಗಳು ಟಿವಿ ಕಚೇರಿಗಳಿಗೆ ಬರತೊಡಗುತ್ತವೆ. ಇವತ್ತು ಸೂರ್ಯನ ಚಟುವಟಿಕೆ ಹೆಚ್ಚಾಗಿ, ಆಯಸ್ಕಾಂತೀಯ ಅಲೆಗಳು ಭೂಮಿಗೆ ಅಪ್ಪಳಿಸುತ್ತವೆ. ಮಧ್ಯಾಹ್ನದ ನಂತರ ಮೊಬೈಲ್ ಬಳಸಬೇಡಿ ಅಂತ ಒಂದು ಎಸ್ಸೆಮ್ಮೆಸ್ ಹಾಕಿ ಸುಮ್ಮನೇ ಕೂತರೆ, ಎರಡೇ ನಿಮಿಷದಲ್ಲಿ ಅದೇ ಸಂದೇಶ ನಿಮ್ಮ ಮೊಬೈಲ್ಗೇ ಫಾರ್ವರ್ಡ್ ಆಗಿರುತ್ತದೆ. ಸರಿಯಾ, ತಪ್ಪಾ ಎಂದು ಕೂಡ ಯೋಚಿಸದೇ ಜನ ಸಮೂಹಸನ್ನಿಗೆ ಒಳಗಾದವರಂತೆ ವರ್ತಿಸತೊಡಗುತ್ತಾರೆ.

ಜನರ ಈ ದೌರ್ಬಲ್ಯಗಳನ್ನು ಚೆನ್ನಾಗಿ ಬಳಸಿಕೊಂಡವ ಯಶಸ್ವಿ ವ್ಯಕ್ತಿ ಎನಿಸಿಕೊಳ್ಳುತ್ತಿದ್ದಾನೆ. ಪಿಗ್ಗಿ ಬಿದ್ದ ಮೂರ್ಖ ಮುಗ್ಧನೆಂಬ ಪಟ್ಟ ಗಿಟ್ಟಿಸಿಕೊಳ್ಳುತ್ತಿದ್ದಾನೆ. ಇವರ ನಡುವೆ ವಿವೇಚನೆಯ ಮಾತು ವ್ಯರ್ಥ ಪ್ರಲಾಪದಂತೆ ಕೇಳಿಸುತ್ತದೆ. ದುರ್ಘಟನೆಯಲ್ಲಿ ಹೆಣ ಬಿದ್ದರೂ, ಟಿವಿ ಕ್ಯಾಮೆರಾಗಳು ಬರುವವರೆಗೆ ಅಂತ್ಯ ಸಂಸ್ಕಾರ ಮಾಡದೇ ಕಾಯುವವರಿದ್ದಾರೆ. ಸುದ್ದಿ ಕಚೇರಿಗಳಿಗೆ ಫೋನ್ ಮಾಡಿಯೇ ದಿಢೀರ್ ಪ್ರತಿಭಟನೆ ಮಾಡುವವರು ಹೆಚ್ಚಾಗಿದ್ದಾರೆ. ಪೀಪ್ಲಿ ಲೈವ್ ಹಳ್ಳಿ ಹಳ್ಳಿಗೂ ಹೊಕ್ಕಿದೆ. ಮನೆಮನೆಗಳನ್ನೂ ತುಂಬಿಕೊಂಡಿದೆ. ಸುದ್ದಿ ಯಾವುದು, ಲದ್ದಿ ಯಾವುದು ಎಂಬ ಭೇದವೇ ಮರೆಯಾಗುತ್ತಿದೆ.

ನನಗೆ ಮತ್ತೆ ಮತ್ತೆ ಯಂಡಮೂರಿ ವೀರೇಂದ್ರನಾಥ್ ಮಾತು ನೆನಪಾಗುತ್ತದೆ. ಅವರ ಆ ಸಂದರ್ಶನ ಓದಿದಾಗ ನಾನಿನ್ನೂ ಪಿಯುಸಿಯಲ್ಲಿದ್ದೆ. ಆ ಮಾತು ಓದಿ ನನಗೆ ಸಿಟ್ಟು ಬಂದಿತ್ತು. ಓದುಗರನ್ನು ಈ ವ್ಯಕ್ತಿ ಹೀಗೆ ಹೀಯಾಳಿಸಿದ್ದಾರಲ್ಲ ಎಂದು ಕೋಪಿಸಿಕೊಂಡಿದ್ದೆ. ಒಂದಷ್ಟು ದಿನ ಅವರ ಕಾದಂಬರಿಗಳನ್ನು ಓದುವುದನ್ನೂ ಬಿಟ್ಟಿದ್ದೆ. ಮುಂದೆ ಪತ್ರಿಕೋದ್ಯಮ ಹೊಕ್ಕು, ಅದರ ರಾಡಿ-ರಂಗುಗಳನ್ನು ಅತಿ ಹತ್ತಿರದಿಂದ ನೋಡತೊಡಗಿದಾಗ, ನನಗೆ ಯಂಡಮೂರಿ ಅವರ ನೇರವಂತಿಕೆ ಇಷ್ಟವಾಗತೊಡಗಿತು.

ಆದರೆ, ಆ ಮಾತಿನ ವಾಸ್ತವ ಜೀರ್ಣಿಸಿಕೊಳ್ಳಲು ಮಾತ್ರ ಇವತ್ತಿಗೂ ಕಷ್ಟವಾಗುತ್ತಿದೆ.

ಚಾಮರಾಜ ಸವಡಿ, ಹಿರಿಯ ಪತ್ರಕರ್ತರು,
ಕೊಪ್ಪಳ
ಮೊ:9886317901