ವೇಷಧಾರಿಗಳ ನಂಬಿ ಹಾಳಾಗುತ್ತಿದೆ ಜಗತ್ತು -ಮುಕ್ಕಣ್ಣ ಕರಿಗಾರ

ವೇಷಧಾರಿಗಳ ನಂಬಿ ಹಾಳಾಗುತ್ತಿದೆ ಜಗತ್ತು

ಲೇಖಕರು: ಮುಕ್ಕಣ್ಣ ಕರಿಗಾರ

ಚೆನ್ನಬಸವಣ್ಣನವರ ಒಂದು ವಚನ ;

ಊರ ಮುಂದೆ ಶ್ವಾನನ ಕಾಣಬಹುದಲ್ಲದೆ
ಸಿಂಹವ ಕಾಣಬಾರದು.
ನದಿಯ ಮುಂದೆ ಬಕನ ಕಾಣಬಹುದಲ್ಲದೆ
ಹಂಸನ ಕಾಣಬಾರದು.
ಪಸರದೊಳಗೆ ಗಾಜಿನ ಮಣಿಯ ಕಾಣಬಹುದಲ್ಲದೆ ರತ್ನವ ಕಾಣಬಾರದು.
ಧರೆಯ ಮೇಲೆ ವೇಷಧಾರಿಗಳ ಕಾಣಬಹುದಲ್ಲದೆ
ಶಿವಜ್ಞಾನಿಗಳ ಕಾಣಬಾರದು,
ಕೂಡಲಚೆನ್ನಸಂಗಮದೇವಾ.

ವೇಷಲಾಂಛನಧಾರಿಗಳೆ ನಿಜಯೋಗಿಗಳು,ಸಂನ್ಯಾಸಿಗಳು ಎಂದು ಭ್ರಮಿಸಿ,ಬಳಲಿ ಹಾಳಾಗುತ್ತಿರುವ ಮತಿಮೂಢರಿಗೆ ಗತಿಯನರಸುವ ಪಥದ ಶರಣನ ನಡೆ ಬೇರಿಹುದೆಂಬುದನ್ನು ಸಾರಿದ್ದಾರೆ ಚೆನ್ನಬಸವಣ್ಣನವರು ಈ ವಚನದಲ್ಲಿ.’ನಾನು ಗುರು’ ,’ನಾನು ಜಂಗಮ’ , ‘ನಾನು ಸಂ‌ನ್ಯಾಸಿ’ ಎಂದು ಹೇಳಿಕೊಂಡು ವೇಷಧಾರಿಗಳಾಗಿ ತಿರುಗುತ್ತಿರುವವರು ನಿಜಗುರುಗಳಲ್ಲ,ನಿಜಜಂಗಮರಲ್ಲ,ನಿಜವಾದ ಸಂನ್ಯಾಸಿಗಳೂ ಅಲ್ಲ ಎನ್ನುವುದು ಚೆನ್ನಬಸವಣ್ಣನವರ ಸ್ಪಷ್ಟಮಾತು,ಮತ.ಸಾಧಕರು,ಸಿದ್ಧರುಗಳು ಜನದೂರರಾಗಿ ಏಕಾಂತದೊಳಿರುತ್ತಾರೆ ತಾವಾಯಿತು ,ತಮ್ಮ ಸಾಧನೆ ಆಯಿತು ಎಂದು.ಆದರೆ ಜನರ ಮಧ್ಯೆ ಓಡಾಡಿಕೊಂಡು,ಜನರ ರಂಜನೆಯ ಮಾತುಗಳಿಗೆ ಕಿವಿಗೊಡುತ್ತ,ಪ್ರಪಂಚ ವ್ಯವಹಾರದಲ್ಲಿ ಆಸಕ್ತರಾಗುವವರು ಸಾಧಕರಲ್ಲ,ಸಿದ್ಧರಲ್ಲ,ಶಿವಜ್ಞಾನಿಗಳಲ್ಲ.ಲೋಕವು ವೇಷಧಾರಿಗಳನ್ನೆ ನಿಜಸಂತರು ಎಂದು ಪೂಜಿಸಿ,ಭಜಿಸಿ ಕೆಡುತ್ತಿದೆಯಲ್ಲದೆ ಲೋಕೋತ್ತಮರಾದ,ಲೋಕೋತ್ತರರಾದ ನಿಜಶರಣರ,ಶಿವಜ್ಞಾನಿಗಳ ಬೆಡಗನ್ನರಿಯದು ಎನ್ನುತ್ತಾರೆ ಚೆನ್ನಬಸವಣ್ಣನವರು.

ಊರಮುಂದೆ ನಾಯಿ ಇರಬಹುದಲ್ಲದೆ ಸಿಂಹವು ಇರದು.ಮೃಗರಾಜನಾಗಿ ಕಾಡಿನ ಮಧ್ಯೆ ಇರುವ ಸಿಂಹವು ಜನರಿರುವ ಊರುಗಳಲ್ಲಿ ಬಾರದು.ಜನರ ನಡುವೆ ಬೊಗಳಿ,ಜನರ ಮನೆಗಳ ಕಾಯ್ದು ಎಂಜಲಿಗಾಸಿಸುವ ನಾಯಿಗಳೆ ಊರ ಮುಂದೆ ಬಿದ್ದಿರುತ್ತವೆ ಎಂಜಲುಂಬುವಾಸೆಯಲ್ಲಿ.ನದಿಯ ತಟದಿ ಕಣ್ಣುಮುಚ್ಚಿ ಧ್ಯಾನಕ್ಕೆ ಕುಳಿತನಟನೆಯೊಳಿರುವ ಬಕಪಕ್ಷಿಯನ್ನು ಕಾಣಬಹುದಲ್ಲದೆ ಅಲ್ಲಿ ಹಂಸಪಕ್ಷಿಯನ್ನು ಕಾಣಲಾಗದು.ನದಿಯಲ್ಲಿನ ಮೀನುಗಳನ್ನು ಹಿಡಿದು ತಿನ್ನಲು ಬಕಪಕ್ಷಿಯು ನದಿಯ ದಡದಿ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತು ಧ್ಯಾನಿಸುವಂತೆ ನಟಿಸುತ್ತದೆ.ಬಕವು ವಂಚಕ ಪಕ್ಷಿಯಲ್ಲದೆ ಧ್ಯಾನದೊಳಿರುವ ಪಕ್ಷಿಯಲ್ಲ;ಮೀನುಗಳು ತನ್ನತ್ತ ಹರಿದು ಬರಲಿ ಎಂದು ಕಣ್ಮುಚ್ಚಿ ಕುಳಿತುಕೊಂಡಿರುತ್ತದೆ.ಹಂಸಪಕ್ಷಿಯು ತಿಳಿನೀರಸರೋವರದಲ್ಲಿ ವಿಹರಿಸುತ್ತದೆ.ಅಂಗಡಿ,ಮಾರುಕಟ್ಟೆಗಳಲ್ಲಿ ಗಾಜಿನ ಮಣಿಗಳನ್ನು ಮಾರುತ್ತಾರಲ್ಲದೆ ಅಲ್ಲಿ ರತ್ನವು ದೊರಕದು.ರತ್ನದ ಹೆಸರಿನಲ್ಲಿ ಗಾಜಿನ ಮಣಿಗಳನ್ನೇ ಮಾರುತ್ತಾರೆ ವ್ಯಾಪಾರಿಗಳು.ಮುಗ್ಧಜನರು ರತ್ನವೆಂದು ಗಾಜಿನಮಣಿಗಳನ್ನು ಖರೀದಿಸಿ ಮೋಸಹೋಗುತ್ತಾರೆ.ಜಗತ್ತಿನಲ್ಲಿ ವೇಷಧಾರಿಗಳು,ಲಾಂಛನಧಾರಿಗಳೇ ಓಡಾಡಿಕೊಂಡಿದ್ದಾರೆ ಜನರ ಮಧ್ಯೆ, ಶಿವಜ್ಞಾನಿಗಳಿಲ್ಲ ಎನ್ನುತ್ತಾರೆ ಚೆನ್ನಬಸವಣ್ಣನವರು.

ಇಂದು ನಮ್ಮ ಸುತ್ತ ಇರುವವರೆಲ್ಲ ವೇಷಧಾರಿಗಳೆ! ಕಾವಿ- ಕೌಪೀನಧಾರಿಗಳೆಂದು,ಗಡ್ಡ ಜಟೆಗಳನ್ನು ಬಿಟ್ಟು,ಮೈ ತುಂಬ ವಿಭೂತಿ ಬಳಿದುಕೊಂಡು,ರುದ್ರಾಕ್ಷಿ ಮಾಲೆಗಳನ್ನು ಧರಿಸಿ,ನಾನಾ ವಿಧದ ಫೋಷಾಕುಗಳನ್ನುಟ್ಟು,ತಲೆಯ ಮೇಲೆ ಬೆಳ್ಳಿ ಬಂಗಾರದ ಕಿರೀಟಗಳನ್ನಿಟ್ಟುಕೊಂಡು ದೊಡ್ಡವರೆಂದು ಬೀಗುತ್ತಿರುವವರೆಲ್ಲ ಶಿವಜ್ಞಾನಿಗಳಲ್ಲದ ವೇಷಧಾರಿಗಳು.ಈ ವೇಷಧಾರಿಗಳಲ್ಲಿ ಕೆಲವರಿಗೆ ಶಾಲೆ- ಕಾಲೇಜುಗಳ ಕಟ್ಟುವಾಸೆ,ಕೆಲವರಿಗೆ ಜಾತಿ ಜನಾಂಗಗಳ ಹಿತಕ್ಕೆ ಹೋರಾಡುವಾಸೆ,ಮತ್ತೆ ಕೆಲವರಿಗೆ ಗುಡಿ ಗುಂಡಾರ ದೇವಸ್ಥಾನಗಳ ಕಟ್ಟಿಸುವೆವು,ಜೀರ್ಣೋದ್ಧಾರ ಮಾಡುವೆವು ಎಂದು ಜನರಿಂದ ದೇಣಿಗೆ ಸಂಗ್ರಹಿಸುವಾಸೆ,ಇನ್ನೂ ಕೆಲವರಿಗೆ ತಾವು ಎಲ್ಲರಿಗಿಂತಲೂ ಶ್ರೇಷ್ಠರು,ಎಲ್ಲರೂ ತಮಗಿಂತ ಕಿರಿಯರಾಗಿದ್ದು ತಮಗೆ ತಲೆಬಾಗಿ ತಮ್ಮಡಿ ಕುಳಿತುಕೊಳ್ಳಬೇಕೆಂಬಾಸೆ– ಹೀಗೆ ಅನಂತ ಆಸೆಗಳಲ್ಲಿ ಮುಳುಗಿ ಏಳುತ್ತಿದ್ದಾರೆ ಈಶನ ಪಥವರಿಯದ ವೇಷಧಾರಿ ಗುರು,ಸ್ವಾಮಿ,ಸಂನ್ಯಾಸಿಗಳು.ಕಾವಿಯ ವೇಷತೊಟ್ಟ ಬಳಿಕ ಕಾವಿಯ ತತ್ತ್ವವನ್ನು ಎತ್ತಿಹಿಡಿಯಬೇಕಲ್ಲದೆ ಲೌಕಿಕರಂತೆ ಆಚರಿಸಲಾಗದು,ಆಚರಿಸಲೂ ಬಾರದು.ಸರ್ವಸಂಗ ಪರಿತ್ಯಾಗಿಯಾದ ಸಂನ್ಯಾಸಿಗೇಕೆ ಡೊನೇಶನ್ ಪಡೆಯುವ ಶಾಲೆ- ಕಾಲೇಜುಗಳ ಕಟ್ಟುವ ಆಸೆ? ವಿರಕ್ತನಾಗಿ ಜನರಿಂದ ದೂರವಿರಬೇಕಾದವರಿಗೇಕೆ ನಾನು ಈ ಜಾತಿಯವನ್ನು ಎನ್ನುವ ಅಜ್ಞಾನ ಮತ್ತು ಆ ಜಾತಿಯ ಹಿತಕ್ಕೆ ಹೋರಾಡುವ ಅಲ್ಪಮತಿ? ತಿರಿದುಂಡು ಧರೆಯಬೆಳಗಬೇಕಾದವರಿಗೇಕೆ ಎ ಸಿ ರೂಮುಗಳು,ಇನ್ನೊವಾ- ಫಾರ್ಚುನರ್,ಬಿ ಎಂ ಡಬ್ಯೂ ಕಾರುಗಳು? ಶಿವಜ್ಞಾನವಿಲ್ಲದ ವೇಷಧಾರಿಗಳನ್ನು ಅಜ್ಞಾನಿ ಜನರು ತಲೆಯಮೇಲೆ ಹೊತ್ತು ತಿರುಗುತ್ತಿದ್ದಾರೆ ಕಾಲದ ಮಹಿಮೆ ಎಂಬಂತೆ.

ದೀಕ್ಷೆಪಡೆದೆವು,ಗುರುವಾದೆವು,ಜಂಗಮವಾದೆವು,ಸಂನ್ಯಾಸಿಗಳಾದೆವು,ಸಂತರಾದೆವು ಎನ್ನುವವರು ತಾವು ಪಡೆದ ಉಪದೇಶದ ಪಥದಲ್ಲಿ ಮುಂದುವರೆಯಬೇಕೇ ಹೊರತು ಗುರುಪಥದಿಂದ,ಪರಮಾತ್ಮನ ಪಥದಿಂದ ವಿಮುಖರಾಗಬಾರದು.ಜನರಿಂದ ದೂರವಿದ್ದು,ಏಕಾಂತದಲ್ಲಿ ಸಾಧನೆ ಕೈಗೊಂಡು ಸಿದ್ಧರಾಗಬೇಕು.ನಮ್ಮ ಕಾವಿಧಾರಿಗಳಿಗೆ ಜನರನ್ನು ಬಿಟ್ಟು ಇರುವುದೆಂದರೆ ಆಗದ ಮಾತು.ಹಿಂದೆ ಮುಂದೆ ,ಎಡ- ಬಲದಿ ಯಾವಾಗಲೂ ಇರಬೇಕು ಜನ ಅವರಿಗೆ.ಪರಧನ- ಪರಸ್ತ್ರೀಯರ ಕಣ್ಣೆತ್ತಿ ನೋಡಬಾರದೆನ್ನುವ ಸಂನ್ಯಾಸಾಶ್ರಮದ ನಿಯಮಕ್ಕೆ ತಿಲಾಂಜಲಿಯನ್ನಿತ್ತು ಹಣಕ್ಕೆ ಕೈಯೊಡ್ಡುತ್ತಾರೆ,ಕಾಮಿನಿಯರ ಕೈವಶರಾಗುತ್ತಾರೆ.ತಮ್ಮನ್ನು ತಾವು ಉದ್ಧರಿಸಿಕೊಳ್ಳದವರು ಜನರನ್ನು,ಜಗತ್ತನ್ನು ಉದ್ಧರಿಸುವ ಉದ್ದುದ್ದನೆಯ ಮಾತುಗಳನ್ನಾಡುತ್ತಾರೆ.

ಈ ವಚನದಲ್ಲಿ ಚೆನ್ನಬಸವಣ್ಣನವರು ಸಿಂಹ,ಹಂಸ,ರತ್ನಗಳ ವಿಶೇಷತೆಗಳೊಂದಿಗೆ ಶಿವಜ್ಞಾನಿಗಳ ವೈಶಿಷ್ಟ್ಯವನ್ನು ಎತ್ತಿತೋರಿಸಿದ್ದಾರೆ.ಸಿಂಹವು ಕಾಡಿನಲ್ಲಿ ಒಂಟಿಯಾಗಿಯೇ ಬದುಕುತ್ತದೆ,ನಾಯಿಗಳಂತೆ ಗುಂಪುಗೂಡಿ ಬೊಗಳುವುದಿಲ್ಲ.ಆತ್ಮದ ಸಂಕೇತವಾಗಿರುವ ಹಂಸವು ಅತ್ಯಂತ ಪರಿಶುದ್ಧ ನೀರಿರುವ ಸರೋವರ ಅಥವಾ ಕೊಳಗಳಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತದೆಯಲ್ಲದೆ ಮೀನುಗಳನ್ನು ತಿನ್ನುವ ಬಕಪಕ್ಷಿಯಂತೆ ಕಣ್ಮುಚ್ಚಿ ನಟಿಸುವುದಿಲ್ಲ.ಬೆಲೆಬಾಳುವ ರತ್ನವು ಸುಲಭಲಭ್ಯವಲ್ಲ ಗಾಜಿನ ಮಣಿಗಳಂತೆ.ಸಾಧಕರು,ಶಿವಯೋಗಿಗಳು ಜನರ ನಡುವೆ ಇರಬಾರದು,ಜನರ ರಂಜನೆಯ ಮಾತುಗಳಿಗೆ ಕಿವಿಕೊಡಬಾರದು.ಲೌಕಿಕ ಪ್ರಪಂಚವನ್ನು ಒದ್ದು ನಡೆದು ಅಲೌಕಿಕ ಸಂಪದವನ್ನು ಸಂಪಾದಿಸಬೇಕಾದವರು ಲೌಕಿಕ ಸಂಪತ್ತು,ಹಣ – ಅಧಿಕಾರಗಳ ಬೆನ್ನು ಹತ್ತಬಾರದು.ಉಡಲೊಂದು ತುಂಡು ಬಟ್ಟೆ,ಇರಲೊಂದು ಮುರುಕು ಗುಡಿಸಲು ಸಾಕಲ್ಲವೆ? ಹಸಿವೆನಿಸಿದರೆ ಭಿಕ್ಷೆ ಬೇಡುವುದು.ನೀಡಿದರೆ ತಿನ್ನುವುದು,ನೀಡದಿದ್ದರೆ ಇದುವೆ ಸುಖ ಎಂದು ನಿಶ್ಚಿಂತರಾಗಿರುವುದು.ಇದು ಯೋಗಿಯ ಲಕ್ಷಣ,ಶಿವಜ್ಞಾನಿಯ ಕುರುಹು‌. ಇಂಥವರು ದುರ್ಲಭರೆಂಬುದನ್ನು ಮುಂಗಂಡೇ ಚೆನ್ನಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲೇ ಮರುಳಜನರಜಾತ್ರೆಯಾಗುವ ಧರ್ಮ- ಆಧ್ಯಾತ್ಮಪಥಗಳು ವಿಪರೀತಾರ್ಥಕ್ಕೆ ಸಿಕ್ಕಿ ಬಳಲುವ ಕಾಲವಿಪರೀತದ ಮುನ್ಸೂಚನೆ ನೀಡಿದ್ದಾರೆ.

ಮುಕ್ಕಣ್ಣ ಕರಿಗಾರ
ಮೊ: 94808 79501

03.11.2021