ಮಂತ್ರಮೂರ್ತಿ- ಮುಕ್ಕಣ್ಣ ಕರಿಗಾರ ಅವರ ಲೇಖನ

ಮಂತ್ರಮೂರ್ತಿ

        *ಮುಕ್ಕಣ್ಣ ಕರಿಗಾರ

ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅತಿ ಎತ್ತರದ ಸಾಧನೆ ಮಾಡಿದ ಸಿದ್ಧರನ್ನು ‘ ಮಂತ್ರಮೂರ್ತಿ’ ಎನ್ನಲಾಗುತ್ತದೆ.ಇದು ಎಲ್ಲರಿಂದಲೂ ಸಾಧ್ಯವಾಗುವ ಸಾಧನೆಯಲ್ಲ.ಮಂತ್ರಾನುಷ್ಠಾನಬಲದಿಂದ ಮಂತ್ರವೇ ಆಗುವ,ಅವ್ಯಕ್ತಮಂತ್ರದ ವ್ಯಕ್ತ ಇಲ್ಲವೇ ಪ್ರಕಟರೂಪವೇ ಆಗುವ ಅತಿದೊಡ್ಡಸಾಧನೆ.ಮಂತ್ರದ ಪ್ರಕಟರೂಪವೇ ಮಂತ್ರಮೂರ್ತಿ.

ಮಂತ್ರ ಎಂದರೆ ದೇವರು,ದೇವತೆಗಳ ಸೂತ್ರ,ದೇವರು- ದೇವತೆಗಳನ್ನು ಜಾಗೃತಗೊಳಿಸುವ ಸಾಧನ.ಎಲ್ಲ ದೇವದೇವಿಯರಿಗೆ ಅವರದೆ ಆದ ಮಂತ್ರ ಇದೆ.ಆ ಮಂತ್ರದಲ್ಲಿ ಆ ದೇವತಾಶಕ್ತಿ ಅಡಗಿರುತ್ತದೆ.ಮಂತ್ರವನ್ನು ಜಪಿಸಿ,ಅನುಷ್ಠಾನ ಮಾಡುವದರಿಂದ ಆಯಾ ದೇವರು,ದೇವತೆಗಳನ್ನು ಜಾಗೃತಗೊಳಿಸಿ ಅವರನ್ನು ಸಗುಣರನ್ನಾಗಿಸಿ ಅವರಿಂದ ವರ,ಅನುಗ್ರಹಗಳನ್ನು ಪಡೆಯುವ ಮೂಲಕ ಆ ದೇವತಾಶಕ್ತಿಯ ಮಹಿಮೆಯನ್ನು ಪ್ರಕಟಿಸಬಹುದು.ವಿಜ್ಞಾನದ ಸೂತ್ರಗಳು ಹೇಗೆ ಕರಾರುವಕ್ಕಾಗಿ ಇರುತ್ತವೆಯೋ ಹಾಗೆಯೇ ಮಂತ್ರಗಳು ಸಹ ಸತಸ್ಯಸತ್ಯ ದೇವಸೂತ್ರಗಳು.ಅದನ್ನು ಅರ್ಥಮಾಡಿಕೊಳ್ಳದ ಸಾಮರ್ಥ್ಯ ಇಲ್ಲದವರು ಏನಾದರೂ ಆಡಿಕೊಳ್ಳಬಹುದು.ಮಂತ್ರಸಿದ್ಧರು ಅಸಾಧ್ಯವನ್ನು ಸಾಧಿಸಿ ತೋರಬಲ್ಲರು; ಅಘಟಿತವು ಘಟಿಸುವಂತೆ ಮಾಡಬಲ್ಲರು.

ವೇದದ ಋಷಿಗಳು ಮೊದಲು ಮಂತ್ರಗಳನ್ನು ಸಾಕ್ಷಾತ್ಕರಿಸಿಕೊಂಡರು.ವೇದಮಂತ್ರಗಳು ಎಂದರೆ ಋಷಿಗಳಿಗೆ ಅವರ ಅತ್ಯುನ್ನತ ಆತ್ಮ ಪ್ರಜ್ಞೆಯ ಸ್ಥಿತಿಯಲ್ಲಿ ಗೋಚರಿಸಲ್ಪಟ್ಟ ದೇವಸೂತ್ರಗಳು.ವಿಶ್ವಾಮಿತ್ರರು ಗಾಯತ್ರಿ ಮಂತ್ರ ದ್ರಷ್ಟಾರರು ಎಂಬುದನ್ನು ನಾವೆಲ್ಲರೂ ಬಲ್ಲೆವು.ಗಾಯತ್ರಿ ಮಂತ್ರವು ವಿಶ್ವಾಮಿತ್ರರಲ್ಲಿ ಪ್ರಕಟವಾಯಿತು.ಹಾಗೆಯೇ ವೇದದಲ್ಲಿನ ಮುವ್ವತ್ತುಮೂರು ಋಷಿಗಳು ಹಲವಾರು ಮಂತ್ರಗಳನ್ನು ದರ್ಶಿಸಿ,ಸಾಕ್ಷಾತ್ಕರಿಸಿಕೊಂಡು ಮನುಕುಲದ ಉನ್ನತಿಗಾಗಿ ಸಂಗ್ರಹಿಸಿದ ಲೋಕೋಪಕಾರಕೃತಿಯೇ ವೇದಸಂಹಿತೆ.ಮೊದಲು ಒಂದೇ ಆಗಿದ್ದ ವೇದವನ್ನು ವ್ಯಾಸರು ವೇದದ ರಸ,ಭಾವ,ತತ್ತ್ವ ಮತ್ತು ಸಂದೇಶಗಳಂತೆ ಋಗ್ವೇದ,ಯಜುರ್ವೇದ,ಸಾಮವೇದ ಮತ್ತು ಅಥರ್ವಣವೇದಗಳೆಂದು ನಾಲ್ಕುಭಾಗಗಳನ್ನಾಗಿ ವಿಂಗಡಿಸಿ,ವೇದವ್ಯಾಸರು ಎನ್ನಿಸಿಕೊಂಡರು.ವೇದ ಕಾಲದ ನಂತರ ವೇದಾರ್ಥವನ್ನು ಪ್ರಕಟಿಸಲು ಬಂದ ಉಪನಿಷತ್ ಕಾಲದ ಋಷಿಗಳು ಜಗನ್ನಿಯಾಮಕನಾದ ಪರಮಾತ್ಮ ತತ್ತ್ವವನ್ನು ಅನ್ವೇಷಣೆ ಮಾಡಿ ಅವನನ್ನು ” ಓಂ” ಕಾರಸ್ವರೂಪಿ ಎಂದು ನಿರ್ಣಯಿಸಿದರು.ಓಂಕಾರ ಅಥವಾ ಪ್ರಣವವು ಉಪನಿಷತ್ ಕಾಲದ ಋಷಿಗಳ ದರ್ಶನ,ಕಾಣ್ಕೆ,ಕೊಡುಗೆ.ವೇದದಲ್ಲಿ ಓಂಕಾರವಿಲ್ಲ .ವೇದದ ಋಷಿಗಳು ವಿಶ್ವದ ಜೀವರುಗಳಿಗೆ ಉಪಕಾರಿಯಾಗಬಲ್ಲ ದೇವತಾಶಕ್ತಿಗಳನ್ನು ಸಾಕ್ಷಾತ್ಕರಿಸಿಕೊಳ್ಳುವಲ್ಲಿ ಆಸಕ್ತರಾಗಿದ್ದರು.ಹಾಗಾಗಿ ವೇದ ಋಷಿಗಳು ಮುವ್ವತ್ಮೂರು ದೇವತೆಗಳನ್ನು ಸಾಕ್ಷಾತ್ಕರಿಸಿಕೊಂಡರು.ಆ ಮುವ್ವತ್ಮೂರು ದೇವತೆಗಳು ಒಬ್ಬನೇ ಪರಮಾತ್ಮನ ವಿವಿಧ ಕ್ರಿಯಾಶಕ್ತಿಗಳು,ವಿಭೂತಿಗಳು ಎನ್ನುವುದು ವೇದಕಾಲದ ಋಷಿಗಳ ಅಭಿಮತ.ಪರಮಾತ್ಮನನ್ನು ಜಗನ್ನಿಯಾಕನಾಗಿ ಕಂಡ ಋಷಿಗಳು ಅವನು ” ಓಂಕಾರಸ್ವರೂಪಿ” ಎಂದು ನಿರ್ಣಯಿಸಿ,ಧ್ಯಾನಿಸಿ- ತಪಿಸಿದರು.ಓಂ ಕಾರವು “ಅ” ಕಾರ,” ಉ” ಕಾರ ಮತ್ತು ” ಮ” ಕಾರಗಳ ಸಂಗಮ,ಸಂಯೋಜಿತ ತತ್ತ್ವ.ಅದರಲ್ಲಿ ನಾದ ಮತ್ತು ಬಿಂದು ತತ್ತ್ವಗಳೂ ಇವೆ.ಬ್ರಹ್ಮ,ವಿಷ್ಣು,ರುದ್ರರೆಂಬ ಮೂರು ರೂಪಗಳಲ್ಲಿ ಲೀಲೆತೋರುವ ಪರಮಾತ್ಮನು ತನ್ನ ಸೃಷ್ಟಿಯಾದ ಪಂಚಭೂತಗಳ ಮೂಲಕ ವಿಶ್ವವ್ಯವಹಾರವನ್ನು ನಿರ್ವಹಿಸುವನು .ಪಂಚಭೂತಗಳಲ್ಲಿ ಪರಶಿವನ ನಾದ ಮತ್ತು ಬಿಂದು ತತ್ತ್ವಗಳಿವೆ.ನಾದವು ಶಬ್ದವಾದರೆ ಬಿಂದು ರಸ ಅಥವಾ ಪ್ರಕೃತಿರೂಪದ ರಾಗ,ಅನುರಾಗ ಪ್ರತೀಕ.

ನಿರ್ದಿಷ್ಟ ದೇವತಾಶಕ್ತಿಯ ಅನುಗ್ರಹ ಅಥವಾ ವರ ಪಡೆಯಲು ಆ ದೇವತೆಯ ಮಂತ್ರವು ಮಾಧ್ಯಮವಾಗಿ ಕೆಲಸ ಮಾಡುತ್ತದೆ.ಶೈವರಲ್ಲಿ ” ನಮಃ ಶಿವಾಯ” ಎನ್ನುವ ಪಂಚಾಕ್ಷರಿ ಪ್ರಣವ ಸಹಿತ ” ಓಂ ನಮಃ ಶಿವಾಯ” ಎನ್ನುವ ಷಡಕ್ಷರಿ ಮಂತ್ರಗಳಿದ್ದರೆ ಶಿವಶಕ್ತಿಯರಲ್ಲಿ ಅಭೇದವನ್ನು ಕಲ್ಪಿಸಿದ ಮಹಾಶೈವವು ಶಿವ ಶಕ್ತಿಯರ ಪ್ರತೀಕವಾಗಿ ಆದಿ ಮತ್ತು ಅಂತ್ಯಪ್ರಣವಗಳ ” ಓಂ ನಮಃ ಶಿವಾಯ ಓಂ” ಶಿವ ಸಪ್ತಾಕ್ಷರಿ ಮಂತ್ರವನ್ನು ತನ್ನ ಮೂಲಮಂತ್ರವನ್ನಾಗಿ ಹೊಂದಿದೆ.ವೈಷ್ಣವರು ” ಓಂ ನಮೋ ನಾರಾಯಣಾಯ” ” ಓಂ ನಮೋ ಭಗವತೇ ವಾಸುದೇವಾಯ’ಎನ್ನುವ ಅಷ್ಟಾಕ್ಷರಿ ಮತ್ತು ದ್ವಾದಶಾಕ್ಷರಿ ಮಂತ್ರಗಳನ್ನು,ಶಾಕ್ತರು ” ಓಂ ಹ್ರೀಂ ದುಂ ದುರ್ಗಾಯೈ ನಮಃ” ಎನ್ನುವ ಅಷ್ಟಾಕ್ಷರಿಯನ್ನು ಹಾಗೂ ” ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೆ” ಎನ್ನುವ ನವಾರ್ಣ ಮಂತ್ರ ಸೇರಿದಂತೆ ಹಲವು ಮೂಲಮಂತ್ರಗಳನ್ನು ಹೊಂದಿದ್ದಾರೆ.ಗಾಣಪತೇಯರ ಮೂಲ ಮಂತ್ರ ” ಓಂ ಗಂ ಗಣಪತಯೇ ನಮಃ” ಎನ್ನುವುದಾಗಿದ್ದರೆ ” ಓಂ ನಮೋ ಭಗವತೇ ಆದಿತ್ಯಾಯ” ಅಥವಾ ” ಓಂ ನಮೋ ಭಗವತೇ ಸೂರ್ಯಾಯ” ಎನ್ನುವುದು ಸೌರರ ಮೂಲ ಮಂತ್ರ.ಶಿವಕುಮಾರ ಷಣ್ಮುಖ ಅಥವಾ ಸ್ಕಂದನ ಆರಾಧಕರ ಮೂಲ ಮಂತ್ರ” ಓಂ ನಮೋ ಶರವಣಭವಾಯ” ಅಥವಾ ” ಓಂ ನಮೋ ಸುಬ್ರಹ್ಮಣ್ಯಾಯ” ಎನ್ನುವುದು.ಹೀಗೆ ಶೈವ, ಶಾಕ್ತ, ವೈಷ್ಣವ, ಗಾಣಪತೇಯ, ಸೌರ ಮತ್ತು ಸ್ಕಂದ ಎನ್ನುವ ಷಣ್ಮತಗಳ ಅನುಯಾಯಿಗಳಿಗೆ ಅವರವರ ದೇವತೆಗಳ ಉಪಾಸ್ಯ ಮಂತ್ರಗಳಿವೆ.ಅವರವರ ಇಷ್ಟದ ಮತಕ್ಕನುಗುಣವಾದ ಮಠ ಮತ್ತು ಗುರು ಪರಂಪರೆಗಳಿವೆ.ಆ ಪರಂಪರೆಗಳ ಗುರುಗಳು,ಋಷಿಗಳು,ಸಿದ್ಧರುಗಳಿಂದ ಅನುಷ್ಠಾನಿಸಲ್ಪಟ್ಟ ಮಂತ್ರಗಳನ್ನು ಶಿಷ್ಯ ಅಥವಾ ಮಂತ್ರಾರ್ಥಿಯು ದೀಕ್ಷೆ ಇಲ್ಲವೆ ಉಪದೇಶ ಎನ್ನುವ ವಿಶಿಷ್ಟಕ್ರಿಯೆಯ ಮೂಲಕ ‘ ಗುರುಮುಖೇನ’ ಪಡೆಯುತ್ತಾನೆ.ಗುರುದೀಕ್ಷೆ,ಗುರುಬೋಧೆ ಅಥವಾ ಗುರುವಾನುಗ್ರಹ ಎನ್ನುವ ಪದಗಳೆಲ್ಲವೂ ಶಿಷ್ಯನಾದವನಿಗೆ ಗುರುವ ಉಪದೇಶಿಸಿಸುವ ಸೂತ್ರರೂಪಿ ಮಂತ್ರೋಪದೇಶ ಕ್ರಿಯೆಯೆ ! ಗುರುವು ಆ ಮಂತ್ರವನ್ನು ಸ್ವಯಂ ಅನುಷ್ಠಾನ ಮಾಡಿ ಸಿದ್ಧಿಸಿಕೊಂಡಿರುತ್ತಾನಾದ್ದರಿಂದ ಗುರುಮುಖೇನ ಅನುಗ್ರಹಿಸಲ್ಪಟ್ಟ ಮಂತ್ರವು ವಿಶಿಷ್ಟವಾಗಿರುತ್ತದೆ,ಶಕ್ತಿಯುತವಾಗಿರುತ್ತದೆ.ಬ್ರಾಹ್ಮಣರಲ್ಲಿ ತಂದೆಯೇ ಮಗನ ಗುರುವಾಗಿ ಉಪನಯನ ಸಂದರ್ಭದಲ್ಲಿ ಗಾಯತ್ರಿ ಮಂತ್ರೋಪದೇಶ ಮಾಡುತ್ತಾನೆ.ಆದರೆ ಬ್ರಾಹ್ಮಣರು ಯತಿಗಳಾಗುವ ಸಂದರ್ಭದಲ್ಲಿ ತಂದೆಯು ನೀಡಿದ ಯಜ್ಞೋಪವೀತ ಮತ್ತು ಗಾಯತ್ರಿ ಮಂತ್ರವನ್ನು ಪರಿತ್ಯಜಿಸಿ ಸಂನ್ಯಾಸ ದೀಕ್ಷೆಯನ್ನು ಅನುಗ್ರಹಿಸಿದ ಗುರು ಉಪದೇಶಿಸಿದ ಮಂತ್ರವನ್ನು ಸ್ವೀಕರಿಸುತ್ತಾರೆ ಪೂರ್ವಾಶ್ರಮದ ಹಂಗು- ಅಭಿಮಾನಗಳಿಂದ ಮುಕ್ತರಾಗಿ.ಕೆಲವು ಜನ ಯತಿಗಳು ಗುರುಗಳಿಂದ ಗಾಯತ್ರಿ ಮಂತ್ರೋಪದೇಶ ಪಡೆಯುತ್ತಾರೆ ಸಿದ್ಧಿಗಾಗಿ.ಹೀಗೆ ಮಂತ್ರವು ಗೃಹಸ್ಥರಿರಲಿ ಸಂನ್ಯಾಸಿಗಳಿರಲಿ ಒಂದು ಪರಂಪರೆಯಾಗಿ ಅನುಗ್ರಹ- ಸ್ವೀಕರಣೆಗಳ ಮೂಲಕ ಪ್ರವಹಿಸುತ್ತಿದೆ.

ತನಗೆ ಅನುಗ್ರಹಿಸಲ್ಪಟ್ಟ ಮಂತ್ರವು ತನ್ನ ಇಷ್ಟದೇವರು ಅಥವಾ ಇಷ್ಟದೇವತಾಸ್ವರೂಪವಾಗಿದ್ದು ಉಪಾಸಕನು ಆ ಮಂತ್ರದಲ್ಲಿ ಶ್ರದ್ಧೆ,ನಿಷ್ಠೆಗಳನ್ನಿಟ್ಟು ಸಾಧನೆ ಮಾಡಬೇಕು.ಸಾಧಕನ ನಂಬಿಕೆ ಅಥವಾ ಶ್ರದ್ಧೆಯೇ ಮಂತ್ರವನ್ನು ಜಾಗೃತಗೊಳಿಸುವ ಸಾಧನ.ಮಂತ್ರವನ್ನು ಸದಾ ಜಪಿಸುತ್ತಿರುವುದೇ ‘ಮಂತ್ರಯೋಗ’. ಭಾರತದಲ್ಲಿ ಅನುಷ್ಠಾನದಲ್ಲಿರುವ ಹಲವಾರು ಯೋಗಗಳಲ್ಲಿ ‘ ಮಂತ್ರಯೋಗ’ ವೂ ಒಂದು.ಕೇವಲ ಭಕ್ತಿ,ಜ್ಞಾನ ಮತ್ತು ಕರ್ಮಯೋಗಗಳು ಮಾತ್ರಯೋಗಗಳಲ್ಲ.ಪರಮಾತ್ಮನೊಡನೆ ಅನುಸಂಧಾನಕ್ಕೆ ಸಹಕಾರಿಯಾಗಬಲ್ಲ ಎಲ್ಲ ಪದ್ಧತಿಗಳೂ ಯೋಗಗಳೆ.’ಯೋಗ’ ಎಂದರೆ ಒಂದುಗೂಡುವುದು ಎಂದರ್ಥ.ಜೀವನು ಪರಮಾತ್ಮನೊಡನೆ ಒಂದುಗೂಡುವುದೇ ಯೋಗ.ಜೀವ ಪರಮಾತ್ಮರು ಒಂದುಗೂಡಲು ಇದೇ ಮಾರ್ಗ ಎಂದೇನೂ ನಿರ್ಣಯಿಸಿಲ್ಲ. ಪರಮೋದಾರಿಯಾದ ಪರಮಾತ್ಮನು ತನ್ನ ಭಕ್ತರನ್ನು ಒಲಿದು ಉದ್ಧರಿಸಲು ಯಾವುದೇ ನಿಯಮ- ಸೂತ್ರಗಳಿಗೆ ಕಾಯುವುದಿಲ್ಲ.ಆದರೆ ಎಲ್ಲರಿಗೂ ಪರಮಾತ್ಮನ ಅನುಗ್ರಹವಾಗುತ್ತದೆ ಎನ್ನುವ ಖಚಿತತೆ ಇಲ್ಲವಾದ್ದರಿಂದ ಮಂತ್ರವು ಪರಮಾತ್ಮನ ಸಾಕ್ಷಾತ್ಕಾರಕ್ಕೆ ಸಿದ್ಧಸೂತ್ರವಾಗಿ ಕಾರ್ಯನಿರ್ವಹಿಸುತ್ತದೆ.ನಿರಂತರ ಮಂತ್ರಾನುಷ್ಠಾನ ಇಲ್ಲವೇ ಮಂತ್ರಜಪವು ಆ ಮಂತ್ರದ ದೈವವನ್ನು ಜಾಗೃತಗೊಳಿಸುತ್ತದೆ.ದೇವತೆಗಳು ಪ್ರಕೃತಿಯಲ್ಲಿ ಸುಪ್ತವಾಗಿದ್ದುಕೊಂಡು ಅವರವರ ವಿಶಿಷ್ಟ ಕಾರ್ಯವನ್ನು ನೆರವೇರಿಸುತ್ತಿದ್ದಾರೆ.ದೇವತೆಗಳು ಕಾರ್ಯ ಎಸಗುತ್ತಿದ್ದಾರೆ ಎಂದೇ ಪ್ರಪಂಚ ವ್ಯವಹಾರ ಸುಸೂತ್ರವಾಗಿ ನಡೆಯುತ್ತಿದೆ.ಅತಿಮಾನುಷಕಾಯರಾದ ದೇವತೆಗಳು ಚರ್ಮಚಕ್ಷು ಅಥವಾ ಬರಿಗಣ್ಣಿಗೆ ಕಾಣಿಸುವುದಿಲ್ಲ.ಒಳಗಣ್ಣು ಅಥವಾ ಅಂತರ್ ಚಕ್ಷು ಜಾಗೃತಗೊಂಡವರಿಗೆ ಮಾತ್ರ ದೇವತೆಗಳು ಗೋಚರಿಸುತ್ತಾರೆ.ಮಂತ್ರಾನುಷ್ಠಾನವು ಅಂತರಂಗದ ಕಣ್ಣು ಅಥವಾ ಅಂತರಾತ್ಮನನ್ನು ಜಾಗೃತಗೊಳಿಸಿ ತನ್ಮೂಲಕ ಮಂತ್ರದೇವತೆಯ ಸಾಕ್ಷಾತ್ಕಾರವನ್ನು ಸಾಧಿಸುತ್ತದೆ.

ಪ್ರತಿ ಮಂತ್ರವು ಅದರದೆ ಆದ ನಿರ್ದಿಷ್ಟ ಸಂಖ್ಯೆಯ ಅಕ್ಷರಗಳನ್ನು ಹೊಂದಿದೆ.ಏಕಾಕ್ಷರಿಯಿಂದ ಶತಾಕ್ಷರಿಯವರೆಗೆ ಮಂತ್ರಗಳಿವೆ.ಓಂಕಾರವು ಏಕಾಕ್ಷರಿ ಮಂತ್ರವಾದರೆ ಶತಾಕ್ಷರಿ ಗಾಯತ್ರಿಯು ನೂರು ಅಕ್ಷರಗಳ ಮಂತ್ರ.ಮಂತ್ರದ ಅಕ್ಷರಗಳ ಸಂಖ್ಯೆಗೆ ಅನುಗುಣವಾಗಿ ಆ ಮಂತ್ರ ಜಪಿಸುವ ಮೂಲಕ ಆ ಮಂತ್ರಸಿದ್ಧಿಯಾಗುತ್ತದೆ.ಮಂತ್ರಸಿದ್ಧಿಯಾಗದ ಹೊರತು ಆ ಮಂತ್ರವು ಕಾರ್ಯನಿರ್ವಹಿಸದು.ಓಂಕಾರವು ಏಕಾಕ್ಷರಿ ಮಂತ್ರವಾಗಿದ್ದು ಸಾಧಕನು ಒಂದು ಲಕ್ಷಸಾರೆ ಆ ಮಂತ್ರವನ್ನು ಜಪಿಸಿದರೆ ಆ ಮಂತ್ರ ಸಿದ್ಧಿಯಾಗುತ್ತದೆ.ಪಂಚಾಕ್ಷರಿ ಮಂತ್ರವನ್ನು ಐದುಲಕ್ಷಸಾರೆ ,ಷಡಕ್ಷರಿ ಮಂತ್ರವನ್ನು ಆರು ಲಕ್ಷಸಾರೆ,ಸಪ್ತಾಕ್ಷರಿ ಮಂತ್ರವನ್ನು ಏಳುಲಕ್ಷ ಸಾರೆ,ಅಷ್ಟಾಕ್ಷರಿಯ‌ನ್ನು ಎಂಟುಲಕ್ಷಸಾರೆ,ನವಾಕ್ಷರಿಯನ್ನು ಒಂಬತ್ತು ಲಕ್ಷ ಸಾರೆ,ದಶಾಕ್ಷರಿಯನ್ನು ಹತ್ತು ಲಕ್ಷಸಾರೆ ಹೀಗೆ ಆಯಾ ಮಂತ್ರವು ಒಳಗೊಂಡ ಅಕ್ಷರಗಳಿಗೆ ಲಕ್ಷಗಳಂತೆ ಜಪಿಸಿದರೆ ಆ ಮಂತ್ರವು ಸಿದ್ಧಿಯಾಗುತ್ತದೆ.ಸಿದ್ಧಿಯಾದೊಡನೆ ಆ ಮಂತ್ರವು ಕಾರ್ಯನಿರ್ವಹಿಸಲು ತೊಡಗುತ್ತದೆ.ಸಾಧಕನು ಸಿದ್ಧಿಯಾದ ಮಂತ್ರವನ್ನು ಅನವರತ ಜಪಿಸುತ್ತಾ ಹೋದರೆ ಮಂತ್ರಾಂತರ್ಗತ ದೈವಶಕ್ತಿಯು ಸಾಧಕನತ್ತ ಕೃಪೆಬೀರಲು ಪ್ರಾರಂಭಿಸುತ್ತದೆ.ಮಂತ್ರ ಸಾಧಕನ ಸಾಧನೆಯ ಉದ್ದೇಶ ಏನಿದೆ ಎನ್ನುವುದನ್ನರಿತುಕೊಂಡ ದೇವತೆಗಳು ಅದಕ್ಕನುಗುಣವಾದ ವರನೀಡಲು ಅಣಿಯಾಗುತ್ತಾರೆ.ಜಪಸಂಖ್ಯೆಯು ಒಂದು ನಿರ್ದಿಷ್ಟಸಂಖ್ಯೆಯು ತಲುಪಿದ ದಿನ ದೇವತೆ ಅಥವಾ ದೇವರು ಸಾಧಕನೆದುರು ಪ್ರತ್ಯಕ್ಷರಾಗುತ್ತಾರೆ.ಇದೇನು ಕಲ್ಪನೆ ಅಲ್ಲ,ಸುಳ್ಳೂ ಅಲ್ಲ.ಏಕಾಗ್ರನಿಷ್ಠೆಯಿಂದ ಅನುಷ್ಠಾನಕೈಗೊಳ್ಳುವವರು ಕಾಣಬಹುದಾದ ಸತ್ಯ.ಹೀಗೆ ದೇವತೆ ಅಥವಾ ಪರಮಾತ್ಮನನ್ನು ಪ್ರತ್ಯಕ್ಷ ಕಂಡವರೇ ಮಂತ್ರಮೂರ್ತಿಗಳು.ಮಂತ್ರದ ಸ್ವರೂಪವೇ ಅವರಾಗುತ್ತಾರೆ,ಆ ದೇವರ ಪ್ರಕಟರೂಪ ಅಥವಾ ವಿಭೂತಿಗಳಾಗಿ ಅವರು ಲೋಕಕಲ್ಯಾಣ ಕಾರ್ಯವನ್ನೆಸಗುತ್ತಾರೆ.ಮಂತ್ರಮೂರ್ತಿಗಳು ಕಾಲವಾದ ಬಳಿಕವೂ ಸಾವಿರಾರು ವರ್ಷಗಳ ಕಾಲ ತಮ್ಮ ಜಾಗೃತಾತ್ಮದ ಮೂಲಕ ಲೋಕಕಲ್ಯಾಣವನ್ನು ಸಾಧಿಸುತ್ತಾರೆ.ಅವರು ಸಿದ್ಧಿಸಿಕೊಂಡು ಮಂತ್ರವು ಅವರ ಶರೀರದ ಮೂಲಕ ಲೋಕೋದ್ಧಾರ ಕಾರ್ಯ ಮಾಡುತ್ತದೆ.

ಮುಕ್ಕಣ್ಣ ಕರಿಗಾರ
ಮೊ: 94808 79501

02.11.2021