ಕರವೇ ತಾಲೂಕು ಅಧ್ಯಕ್ಷ ಹಾಗೂ ಪುರಸಭೆಯ ಹಿರಿಯ ಸದಸ್ಯ ರಾಜಾ ಮಹೇಂದ್ರ ನಾಯಕ ನೇತೃತ್ವ: ಮಾನ್ವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ

ಮಾನ್ವಿ ನ.2: ಸ್ಥಳೀಯ ಪುರಸಭೆಯ ಹಿರಿಯ ಸದಸ್ಯ ರಾಜಾ ಮಹೇಂದ್ರ ನಾಯಕ ಕರ್ನಾಟಕ ರಕ್ಷಣಾ ವೇದಿಕೆ( ಸ್ವಾಭಿಮಾನಿ ಬಣ)ಯ ಮಾನ್ವಿ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕನ್ನಡ ನಾಡು, ನುಡಿ ಸೇವೆಗೆ‌‌ ಮುಂದಾಗಿದ್ದಾರೆ. ನ.1 ಸೋಮವಾರದಂದು ತಮ್ಮ ‌ನಿವಾಸದ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮಾನ್ವಿ ಪುರಸಭೆಗೆ ಸತತ ಐದು ಬಾರಿ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ದಾಖಲೆ ‌ನಿರ್ಮಿಸಿರುವ ಅವರು, ನೇರ ನಡೆ ನುಡಿಯ ದಿಟ್ಟ ನಾಯಕ ಎಂದು ಹೆಸರಾಗಿದ್ದಾರೆ.‌ ಸುಮಾರು ಮೂರು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ತಂದೆ ಮಾಜಿ ಸಂಸದ ರಾಜಾ ಅಂಬಣ್ಣ ನಾಯಕ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾಮಾಜಿಕ ಸೇವೆಯಲ್ಲಿ ಮುನ್ನಡೆದಿದ್ದಾರೆ.   ಸಹೋದರ ಹಾಗೂ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಮಾರ್ಗದರ್ಶನ, ಕಿರಿಯ ಸಹೋದರ ರಾಜಾ ರಾಮಚಂದ್ರ ನಾಯಕ ಬೆಂಬಲದಿಂದ ಮಾಜಿ ಸಂಸದ ರಾಜಾ ಅಂಬಣ್ಣನಾಯಕ ಫೌಂಡೇಶನ್ ಮೂಲಕ  ಉಚಿತ ಆರೋಗ್ಯ ತಪಾಸಣಾ ಶಿಬಿರ,  ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಗಳ ವಿತರಣೆ ಮುಂತಾದ ಸಾಮಾಜಿಕ ಕಾರ್ಯಗಳನ್ನು ಮಾಡಿರುವ ಅವರು, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಜನಾನುರಾಗಿ, ಜನನಾಯಕರಾಗಿದ್ದಾರೆ. ಬಡವರು, ಸಂಕಷ್ಟ ದಲ್ಲಿರುವವರಿಗೆ ಸಹಾಯ ಹಸ್ತ ಚಾಚುವಲ್ಲಿ ಅವರು ಸದಾ ಸಿದ್ಧರಾಗಿರುತ್ತಾರೆ. ಪ್ರತಿ ವರ್ಷ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪಠ್ಯ ಪುಸ್ತಕ ವಿತರಣೆ, ಶಾಲಾ ಕಾಲೇಜು ಶುಲ್ಕ ಪಾವತಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರಿ ಹಾಸ್ಟೆಲ್ ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ನೆರವಾಗುವ ಮೂಲಕ ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಇತರ ಕನ್ನಡಪರ ಸಂಘಟನೆಗಳ ನಾಡು, ನುಡಿ ಸೇವೆಯ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದ ರಾಜಾ ಮಹೇಂದ್ರ ನಾಯಕ ಇದೀಗ ಖುದ್ದಾಗಿ ಕರ್ನಾಟಕ ರಕ್ಷಣಾ ವೇದಿಕೆ( ಸ್ವಾಭಿಮಾನಿ ಬಣ)ಯ ಸಾರಥ್ಯವಹಿಸಿಕೊಂಡಿದ್ದಾರೆ.

ಉತ್ತಮ ಸಂಘಟನಾ ಚಾತುರ್ಯ ಹೊಂದಿರುವ ರಾಜಾ ಮಹೇಂದ್ರ ನಾಯಕ ಅವರು ಸೋಮವಾರ ಸಂಘಟಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ 100ಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ, ಎಂ.ಈರಣ್ಣ ಗುತ್ತೇದಾರ, ಹಿರಿಯ ವಕೀಲರಾದ ಎ.ಬಿ.ಉಪ್ಪಳಮಠ ಹಾಗೂ ಗುಮ್ಮಾ ಬಸವರಾಜ, ನಿವೃತ್ತ ಶಿಕ್ಷಣಾಧಿಕಾರಿ ಡಿ.ಜಿ.ಕರ್ಕಿಹಳ್ಳಿ, ಬಿ.ನಾಗರಾಜ, ಹುಸೇನಪ್ಪ ಕುರ್ಡಿ, ಡಿ.ವೀರನಗೌಡ, ಸೈಯದ್ ತಾಜುದ್ದೀನ್, ಮಹಮ್ಮದ್ ಮುಜೀಬ್ , ಡಿ.ಬಸನಗೌಡ, ಮತ್ತಿತರ ಗಣ್ಯರು ರಾಜಾ ಮಹೇಂದ್ರ ನಾಯಕ ಮತ್ತು ಇತರ ಪದಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕರವೇ ತಾಲೂಕು ಘಟಕದ ಅಧ್ಯಕ್ಷರಾಗಿ ನಾಡು, ನುಡಿ ಸೇವೆಗೆ ಮುಂದಾಗಿರುವ ರಾಜಾ ಮಹೇಂದ್ರ ನಾಯಕ ಅವರಿಗೆ ಎಲ್ಲರ ಪ್ರೋತ್ಸಾಹ, ಬೆಂಬಲ ಹಾಗೂ ಸಹಕಾರ ಸಿಗಲಿ ಎಂಬುದು ನನ್ನ ಹಾರೈಕೆ.