ಸತ್ತ್ವ – ತತ್ತ್ವಗಳ ಪ್ರತಿಪಾದನೆಯ ಅಪರೂಪದ ಸಾಹಿತಿ ಮುಕ್ಕಣ್ಣ ಕರಿಗಾರ’– ಬಸವರಾಜ ಸಿನ್ನೂರು

ನವೆಂಬರ್ ೦೧:ಸ ರಕಾರದ ಉನ್ನತ ಹುದ್ದೆಯಲ್ಲಿದ್ದೂ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ನಿರಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮುಕ್ಕಣ್ಣ ಕರಿಗಾರ ಅವರು ಸಾಹಿತ್ಯ ಮತ್ತು ಸಾರ್ವಜನಿಕ ಕ್ಷೇತ್ರಗಳೆರಡಕ್ಕೂ ಆದರ್ಶ.ಅವರ ಮೊದಲ ಕೃತಿ ‘ಬೂದಿಬಸವನ ತ್ರಿಪದಿಗಳು’ ಎನ್ನುವ ಪುಸ್ತಕವನ್ನು ಓದಿ ಅವರ ಪ್ರಭಾವಕ್ಕೆ ಒಳಗಾಗಿ,ಅವರ ಅಭಿಮಾನಿಯಾಗಿದ್ದು ನಾನು ಇಂದು ಅವರ ಪುಸ್ತಕವನ್ನು ಲೋಕಾರ್ಪಣೆಗೊಳಿಸುತ್ತಿರುವುದು ನನ್ನ ಬದುಕಿನ ಮಹತ್ವದ ಕ್ಷಣಗಳಲ್ಲಿ ಒಂದು.ಮುಕ್ಕಣ್ಣ ಕರಿಗಾರ ಅವರು ವೃತ್ತಿ- ಪ್ರವೃತ್ತಿಗಳೆರಡರಲ್ಲಿಯೂ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯಿಂದ ಬದುಕುವ ಮೂಲಕ ಇತರರಿಗೆ ಆದರ್ಶರಾಗಿದ್ದಾರೆ.ಸತ್ತ್ವಯುತ ಬರಹಗಾರರು ಮಾತ್ರವಲ್ಲದೆ ಅವರೊಬ್ಬ ತತ್ತ್ವಜ್ಞಾನಿ,ಸಂತ ಬರಹಗಾರ ಎನ್ನುವುದು ವಿಶೇಷ.ಅವರು ನೇರ- ನಿಷ್ಠುರ ನಿಲುವಿಗಾಗಿ ಹೆಸರಾಗಿರುವಂತೆ ಅವರ ಸಾಹಿತ್ಯವೂ ನೇರವೂ ಹೃದ್ಯವೂ ಆದುದು.ಹೇಳಬೇಕಾದುದುನ್ನು ಸ್ಪಷ್ಟವಾಗಿ,ಎಲ್ಲರಿಗೂ ತಿಳಿಯುವಂತೆ ಬರೆಯುವ ಅವರ ಕಥನಕೌಶಲ್ಯವು ವಿಶಿಷ್ಟವಾದುದು.ಅವರ ಸಂಪಾದಿತ ಕೃತಿಯಾದ ‘ ಬಸವಣ್ಣನವರ ೧೦೮ ವಚನಗಳ’ ಲ್ಲಿಯೂ ಅವರ ಲೋಕದರ್ಶನವಿದೆ.’

‘ ಮುಕ್ಕಣ್ಣ ಕರಿಗಾರ ಅವರ ಸೇವೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಂತಹ ಕನ್ನಡ ಕಟ್ಟುವ ಇಲಾಖೆಗಳಿಗೆ ಅಗತ್ಯವಿದೆ.ಈಗಲಾದರೂ ಅವರು ಆ ಕಡೆ ಮನಸ್ಸು ಮಾಡಿದರೆ ಕನ್ನಡ ಸಾರಸ್ವತ ಲೋಕಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಸಿನ್ನೂರು ಅಭಿಪ್ರಾಯಿಸಿದರು.ಅವರು ಇಂದು ಮುಕ್ಕಣ್ಣ ಕರಿಗಾರ ಅವರ ‘ ಬಸವಣ್ಣನವರ ನೂರೆಂಟು ವಚನಗಳು’ ಕೃತಿಯ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪ್ರಜಾವಾಣಿ ದಿನಪತ್ರಿಕೆಯ ಯಾದಗಿರಿ ಜಿಲ್ಲಾ ವರದಿಗಾರ ಪ್ರವೀಣಕುಮಾರ ಅವರು ಮಾತನಾಡಿ ‘ಮುಕ್ಕಣ್ಣ ಕರಿಗಾರ ಅವರು ಅಧಿಕಾರಿ ಎನ್ನುವದಕ್ಕಿಂತ ಪ್ರಜಾವಾಣಿ ಹಿತೈಷಿ ಓದುಗರು ಮತ್ತು ಮುಕ್ತಮನಸ್ಸಿನ ಚಿಂತಕರು ಎನ್ನುವ ಕಾರಣದಿಂದ ನಾನು ಅವರನ್ನು ಆದರಾಭಿಮಾನಗಳಿಂದ ಕಾಣುವೆ. ಸರಕಾರದ ಹಿರಿಯ ಅಧಿಕಾರಿಯಾಗಿದ್ದೂ ಸೃಜನಶೀಲ ಸಾಹಿತ್ಯದ ಮಹತ್ವದ ಬರಹಗಾರರುಎನ್ನುವುದು ವಿಶೇಷ.ಯಾವ ಇಸಂಗಳಿಗೆ ಅಂಟಿಕೊಳ್ಳದೆ ಎಲ್ಲರನ್ನು ಒಳಗೊಂಡು ಬರೆಯುವ ಸಮಷ್ಟಿಹಿತಚಿಂತಕ ಬರಹಗಾರರು ಅವರು.ಯಾವುದೇ ವಿಷಯದ ಬಗ್ಗೆ ವೇದೋಪನಿಷತ್ತುಗಳಿಂದ ಹಿಡಿದು ಆಧುನಿಕ ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆಯೂ ನಿಖರವಾಗಿ ಬರೆಯಬಲ್ಲ ಅವರ ಸಾಮರ್ಥ್ಯದ ಹಿಂದೆ ಅವರ ಆಳವಾದ ಅಧ್ಯಯನ ಇದೆ.ಅವರ ಬರಹಗಳು ಮೊನಚಿನಿಂದ ಕೂಡಿದ್ದರೂ ಸಮಾಜವನ್ನು ಕಟ್ಟುವ ಉದ್ದೇಶ ಅವರ ಬರಹಗಳ ಮೂಲ ಆಶಯ.ಗ್ರಾಮ ಪಂಚಾಯತಿಯ ಸದಸ್ಯರುಗಳ ಮಾರ್ಗದರ್ಶನಕ್ಕೆ ಅವರು ಬರೆದ ಪುಸ್ತಕ ನಾನು ಓದಿದ್ದು ಅವರು ಯಾವುದೇ ವಿಷಯದ ಬಗ್ಗೆಯೂ ಅಧಿಕಾರಯುತವಾಗಿ ಬರೆಯಬಲ್ಲರು ಎನ್ನುವುದಕ್ಕೆ ಆ ಪುಸ್ತಕವು ನಿದರ್ಶನ’ ಎಂದರು.
ಯಾದಗಿರಿ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಯರಗೋಳ ಅವರು ಮಾತನಾಡುತ್ತ ‘ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಒತ್ತಡದ ಬದುಕಿನಲ್ಲೂ ಮುಕ್ಕಣ್ಣ ಕರಿಗಾರ ಅವರು ನಿರಂತರವಾಗಿ ಬರೆಯುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ.ಅವರ ಬದುಕು,ಸಾಧನೆಗಳು ನಮಗೆಲ್ಲ ಅನುಕರಣೀಯ ಆದರ್ಶ’ ಎಂದರು.

ವಡಗೇರಾ ತಾಲೂಕಾ ಪಂಚಾಯತಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಸಂಗವಾರ್ ಅವರು ಮಾತನಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಒತ್ತಡದಲ್ಲೇ ಬದುಕುತ್ತಿರುವ ನಾವು ‘ ಸರ್ ಯಾದಗಿರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಎಂದು ಬಂದ ಈ ಎರಡು ವರ್ಷಗಳಲ್ಲಿ ಸಂಜೆ ಸರ್ ಅವರ ಸಾಹಿತ್ಯಕ,ಸಾಂಸ್ಕೃತಿಕ ಗ್ರೂಪ್ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಒತ್ತಡ ಮುಕ್ತರಾಗುತ್ತಿದ್ದೇವೆ’ ಎಂದರು

ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಮುಕ್ಕಣ್ಣ ಕರಿಗಾರ ಅವರು ‘ ಬಸವಣ್ಣನವರ ವಿಶ್ವವಿಭೂತಿ ವ್ಯಕ್ತಿತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಬಸವಣ್ಣನವರ ಉಪಲಬ್ಧ ೯೬೧ ವಚನಗಳಲ್ಲಿ ೧೦೮ ವಚನಗಳನ್ನು ಆಯ್ದು ಇಲ್ಲಿ ಪ್ರಕಟಿಸಿದ್ದೇನೆ.ಬಸವಣ್ಣನವರ ಭವ್ಯೋಜ್ವಲ ವ್ಯಕ್ತಿತ್ವವನ್ನು ಜನಸಾಮಾನ್ಯರೂ ಸೇರಿದಂತೆ ಎಲ್ಲರೂ ಅರ್ಥಮಾಡಿಕೊಳ್ಳಲಿ ಎನ್ನುವ ಸದುದ್ದೇಶದಿಂದ ಇಲ್ಲಿ ವಚನಗಳನ್ನು ಸಂಕಲಿಸಿದೆ.ಎಲ್ಲ ವಚನಕಾರರ ಜೀವನ ಸಾಧನೆ- ಸಿದ್ಧಿಗಳನ್ನು ಪರಿಚಯಾತ್ಮಕ ಗ್ರಂಥಗಳ ಮೂಲಕ ಪರಿಚಯಿಸುವ ಗುರಿಯನ್ನು ಕಲ್ಯಾಣ ಕರ್ನಾಟಕ ಸಾಹಿತ್ಯ ಪರಿಷತ್ತು ಹೊಂದಿದೆ’ ಎಂದರು.

ಕರುನಾಡವಾಣಿ ಆನ್ ಲೈನ್ ಪತ್ರಿಕೆಯ ಸಂಪಾದಕ ಬಸವರಾಜ ಕರೆಗಾರ,ಗುರುಮಿಠಕಲ್ ತಾಲೂಕಾ ಪಂಚಾಯತಿಯ ಸಹಾಯಕ ನಿರ್ದೇಶಕ ಮಲ್ಲಣ್ಣ ವೇದಿಕೆಯಲ್ಲಿದ್ದರು.ಕಿಶನ್ ರಾಠೋಡ್ ಅವರು ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು.ಜಿಲ್ಲಾ ಪಂಚಾಯತಿಯ ಸಿಬ್ಬಂದಿಯವರು ಮತ್ತು ಮುಕ್ಕಣ್ಣ ಕರಿಗಾರ ಅವರ ಸಾಹಿತ್ಯಾಸಕ್ತ ಅಭಿಮಾನಿಗಳು ಪಾಲ್ಗೊಂಡಿದ್ದರು.