ಕಾವ್ಯ ಲೋಕ: ಲಕ್ಷ್ಮೀ ಮಾನಸ ಅವರ ಕವನ “ಆತ್ಮ ಸಂಗಾತಿ’

ಆತ್ಮ ಸಂಗಾತಿ

      *ಲಕ್ಷ್ಮೀ ಮಾನಸ

ಎರಡು ಆತ್ಮಗಳು ಮಿಲನ
ಅಮೂರ್ತ ಪ್ರೀತಿಯ ಜಗದಲ್ಲಿ
ಒಂದನ್ನೊಂದು ಸ್ಪರ್ಶಿಸದೆ…..

ಎವೆಯಿಕ್ಕದೆ ನೋಡುವೆ
ಅವನೆದೆಯಾಳದ ಚಿತ್ರಪಟಗಳ,
ಹೊಳೆಯುತಿವೆ ಹಲವು
ನೇಸರನೇ ನಾಚುವಂತೆ…
ಕೆಲವು ಮಾಸಿವೆ
ಕಾಲ ಸರಿಯುತಲೇ..
ಅಪೂರ್ಣಗೊಂಡಿವೆ ಕೆಲವು
ಏಕಾಂತದ ಹಾದಿಯಲ್ಲಿ…

ನಿನ್ನ ಕಣ್ಣೀರ ಹನಿಯಲ್ಲಿ
ಮೂಡುವವು
ನನ್ನ ಅಳಲ ಅಲೆಗಳು,

ಮನ ನರ್ತಿಸುವುದು ನವಿಲಂತೆ,
ನಿನ್ನ ನಾಮ ನೆನೆದು,
ಮಾತು ಮಲಗುವುದು
ಮೌನದ ಮಡಿಲಲ್ಲಿ
ನಿನ್ನ ದನಿಯನ್ನಾಲಿಸಿ…

ವಿರಹದ ಗೆಜ್ಜೆ ಕಟ್ಟಿ
ಛಿದ್ರವಾಗುವುದಕ್ಕಿಂತ
ಈ ಜೀವ
ನೀರಾಗಲಿ ಬಾಯಾರಿದ
ಮಸಣಕ್ಕೆ….

ನಾನೊಂದು ಅಲೆ
ಅವನ ಕಡಲಲ್ಲಿ,

ಕಾಣದ ಯುದ್ಧದಲ್ಲಿ,
ಸಂಘರ್ಷದ ಬಿರುಗಾಳಿಯಲ್ಲಿ,
ಅರಿಯದೇ ಕೋಪಾಗ್ನಿಯಲ್ಲಿ,
ಕಡಲು ಘರ್ಜಿಸಿ,
ಅಲೆಯು ಮೇಲೇಳಲು,

ಕೋಗಿಲೆಯಾಗುವುದು
ಶಾಂತ ಕಡಲು
ಪ್ರೇಮ ಗೀತೆಯ ಹಾಡಲೆಂದು,
ಮರಳಿ ಅಲೆಯು
ತನ್ನ ಮಡಿಲ ಸೇರಲೆಂದು…

ಅವನು ಎಂಬ ಚಂದಿರನಿಗೆ
ಕಾಯವ ಚಕೋರಿ ನಾನಾಗಲು,
ಬಯಸುವೆ ನಲ್ಮೆಎಂಬ
ಬೆಳದಿಂಗಳ
ನನ್ನುಸಿರು ಮರೆಯದಿರಲು….

ಲಕ್ಷ್ಮೀ ಮಾನಸ, ಬಿ.ಎ ವಿದ್ಯಾರ್ಥಿನಿ, ಕಾರಟಗಿ