ಭಾನುವಾರದ ಗಜಲ್ ಘಮಲು– ಮಂಡಲಗಿರಿ ಪ್ರಸನ್ನ

ಗಜಲ್

*ಮಂಡಲಗಿರಿ ಪ್ರಸನ್ನ

ಕುಳಿತುಕೊ ಅಕ್ಕರೆಯ ಮಾತಾಡೋಣ ಒಂದಷ್ಟು
ಬೆಳ್ಳಕ್ಕಿಯಾಗಿ ಬಾನಲಿ ಹಾರಾಡೋಣ ಒಂದಷ್ಟು

ಒಣಮಾತನು ಮಥಿಸುತಿರೆ ಯುದ್ಧ ವಿರಾಮವಿಲ್ಲ
ಮನಸನು ಹಗುರಾಗಿಸಿ ತೇಲಾಡೋಣ ಒಂದಷ್ಟು

ಸುತ್ತಮುತ್ತ ತಲವಾರುಗಳ ಸದ್ದೇ ಕೇಳುತಿದೆಯಲ್ಲ
ಜಂಜಡವ ಕೆಲಹೊತ್ತು ಬಿಟ್ಟುಬಿಡೋಣ ಒಂದಷ್ಟು

ನೆಮ್ಮದಿಯ ತಾಣವ ಎಲ್ಲಿ ಹುಡುಕುವುದು ಹೇಳು
ಪಿಸುಮಾತಲಿ ಬೆರೆತು ನಲಿದಾಡೋಣ ಒಂದಷ್ಟು

ಉದ್ವೇಗದ ಮಾತು ಸಾಕಿನ್ನು ಮರೆತುಬಿಡು ‘ಗಿರಿ’
ಸ್ವಚ್ಛಂದ ಗಾಳಿಯಲಿ ಉಸಿರಾಡೋಣ ಒಂದಷ್ಟು

ಮಂಡಲಗಿರಿ ಪ್ರಸನ್ನ, ರಾಯಚೂರು
ಮೊ:9449140580