ಸಿದ್ಧಾಂತಗಳು ಮತ್ತು ಕೋತಿಗಳು
ಲೇಖಕರು: – ಚಾಮರಾಜ ಸವಡಿ, ಕೊಪ್ಪಳ
ಒಂದು ದೊಡ್ಡ ಬೋನಿನಲ್ಲಿ ಐದು ಕೋತಿಗಳನ್ನು ಬಿಡಿ. ಮೇಲಿನಿಂದ ಬಾಳೆಹಣ್ಣೊಂದು ನೇತಾಡುತ್ತಿರಲಿ. ಕೋತಿಗಳು ಅದನ್ನು ಸುಲಭವಾಗಿ ತಲುಪುವಂತೆ ಅಲ್ಲೊಂದು ಏಣಿ ಇರಲಿ.
ಇಂತಹ ಸಂದರ್ಭದಲ್ಲಿ ಕೋತಿಗಳು ಸಾಮಾನ್ಯವಾಗಿ ಏನು ಮಾಡುತ್ತವೆ?
ಹಣ್ಣನ್ನು ಗಮನಿಸಿದ ಕೂಡಲೇ ಅವುಗಳ ಪೈಕಿ ಒಂದು ಕೋತಿ ಹಣ್ಣು ತಿನ್ನಲೆಂದು ಏಣಿ ಏರಲು ಮುಂದಾಗುತ್ತದೆ. ಆಗ ಎಲ್ಲಾ ಕೋತಿಗಳ ಮೇಲೆ ರಭಸವಾಗಿ ನೀರು ಚೆಲ್ಲಿ.
ಅನಿರೀಕ್ಷಿತವಾಗಿ ನೀರು ಬಿದ್ದಿದ್ದರಿಂದ ಗೊಂದಲಕ್ಕೊಳಗಾದ ಕೋತಿಗಳು ಗದ್ದಲ ಮಾಡುತ್ತವೆ. ಅವುಗಳ ಗಲಾಟೆ ಶಾಂತವಾದ ನಂತರ, ಮತ್ತೊಂದು ಕೋತಿ ಹಣ್ಣು ತಿನ್ನಲೆಂದು ಏಣಿ ಏರಲು ಮುಂದಾಗುತ್ತದೆ. ಆಗ ಮತ್ತೆ ರಭಸವಾಗಿ ನೀರನ್ನು ಎಲ್ಲಾ ಕೋತಿಗಳ ಮೇಲೆ ಚೆಲ್ಲಿ.
ಹೀಗೆ ನಾಲ್ಕೈದು ಸಲ ನಡೆದ ನಂತರ, ಬೋನಿನಲ್ಲಿರುವ ಕೋತಿಗಳು ಬಾಳೆಹಣ್ಣು ತಿನ್ನುವ ಪ್ರಯತ್ನ ಬಿಟ್ಟುಬಿಡುತ್ತವೆ.
ಈಗ, ಒಂದು ಕೋತಿಯನ್ನು ಬೋನಿನಿಂದ ಹೊರತೆಗೆದು ಹೊಸ ಕೋತಿಯನ್ನು ಒಳ ಸೇರಿಸಿ. ಹಣ್ಣು ನೋಡುತ್ತಿದ್ದಂತೆ ಹೊಸ ಕೋತಿ ಏಣಿ ಏರಲು ಮುಂದಾಗುತ್ತದೆ. ಅದು ಏಣಿಯತ್ತ ಹೋಗುತ್ತಲೇ ಬಾಕಿ ನಾಲ್ಕು ಹಳೆಯ ಕೋತಿಗಳು ಜೋರಾಗಿ ಅರಚುತ್ತ ಅದನ್ನು ಕೆಳಗೆಳೆದು ಹಾಕುತ್ತವೆ; ತಮ್ಮ ಮೇಲೆ ಈ ಸಲ ನೀರು ಬೀಳದಿದ್ದರೂ! ಹೀಗೆ ಎರಡು ಮೂರು ಸಲ ನಡೆದಾಗ ಹೊಸ ಕೋತಿ ಏಣಿ ಏರಿ ಹಣ್ಣು ಪಡೆಯುವ ಸಾಹಸ ಕೈಬಿಡುತ್ತದೆ. ತಾನು ಏಣಿ ಏರಲು ಹೊರಟರೆ ಮಿಕ್ಕ ಕೋತಿಗಳಿಂದ ಅಪಾಯವಾಗುತ್ತದೆ ಎಂಬುದನ್ನು ಅದು ಅರ್ಥ ಮಾಡಿಕೊಂಡಿರುತ್ತದೆ.
ಈಗ ನಾಲ್ಕು ಹಳೆಯ ಕೋತಿಗಳ ಪೈಕಿ ಒಂದನ್ನು ಹೊರ ತೆಗೆದು, ಇನ್ನೊಂದು ಹೊಸ ಕೋತಿಯನ್ನು ಆ ಗುಂಪಿಗ ಸೇರಿಸಿ. ಹೊಸ ಕೋತಿ ಬಾಳೆಹಣ್ಣು ಪಡೆಯಲು ಏಣಿಯತ್ತ ಹೊರಡುತ್ತಿದ್ದಂತೆ, ಮತ್ತೆ ಅದಕ್ಕೆ ಅಡ್ಡಿಪಡಿಸುವ ಕೆಲಸ ಬಾಕಿ ಕೋತಿಗಳಿಂದ ಶುರು. ಈ ಸಲ ಹಳೆಯ ಕೋತಿಗಳ ಜೊತೆ ಮೊದಲನೆಯ ಹೊಸ ಕೋತಿಯೂ ಸೇರಿಕೊಂಡಿರುತ್ತದೆ.
ಈ ಪ್ರಯೋಗವನ್ನು ಬೋನಿನಲ್ಲಿರುವ ಮತ್ತೊಂದು ಹಳೆಯ ಕೋತಿಯನ್ನು ಹೊರತೆಗೆದು ಹೊಸ ಕೋತಿಯನ್ನು ಸೇರಿಸುವ ಮೂಲಕ ಮುಂದುವರಿಸಿ. ಪ್ರತಿ ಸಲ ಹೊಸದಾಗಿ ಬಂದ ಕೋತಿಯನ್ನು ಕೆಳಗೆಳೆಯಲು ಮುಂದಾಗುವ ಮುಂಚಿನ ಹೊಸ ಕೋತಿಗಳಿಗೆ, ತಾವೇಕೆ ಹಾಗೆ ಮಾಡುತ್ತಿದ್ದೇವೆ ಎಂಬುದೇ ತಿಳಿದಿರುವುದಿಲ್ಲ. ಅವುಗಳ ಮೇಲೆ ನೀರೂ ಬಿದ್ದಿರುವುದಿಲ್ಲ. ಆದರೂ ಅವು ತಮಗಿಂತ ಮುಂಚೆ ಬೋನಿನಲ್ಲಿದ್ದ ಕೋತಿಗಳ ರೀತಿ ಹೊಸ ಕೋತಿ ಏಣಿ ಏರದಂತೆ ಅಡ್ಡಿಪಡಿಸಲು ಮುಂದಾಗುತ್ತವೆ.
ಹೀಗೆ ಬೋನಿನಲ್ಲಿದ್ದ ಕೊನೆಯ ಹಳೆಯ ಕೋತಿಯ ಜಾಗದಲ್ಲಿ ಹೊಸ ಕೋತಿ ಸೇರಿಸಿದಾಗ, ಅಲ್ಲಿರುವ ನಾಲ್ಕು ಹಿಂದಿನ ಹೊಸ ಕೋತಿಗಳು ಅರಚುತ್ತ ಹೊಸ ಕೋತಿ ಏಣಿ ಏರದಂತೆ ಅಡ್ಡಿಪಡಿಸುತ್ತವೆ. ಆ ನಾಲ್ಕೂ ಕೋತಿಗಳಿಗೂ ತಾವೇಕೆ ಹೊಸ ಕೋತಿಯ ಪ್ರಯತ್ನವನ್ನು ಅಡ್ಡಿಪಡಿಸುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ.
ಮುಂದೆ ಆ ಐದೂ ಕೋತಿಗಳೂ ಬೋನಿನಲ್ಲಿ ನೇತಾಡುತ್ತಿರುವ ಬಾಳೆಹಣ್ಣಿನ ಗೊಡವೆಗೆ ಹೋಗುವುದಿಲ್ಲ.
ಏಕೆ?
ಬೆಟ್ಟಗುಡ್ಡಗಳ ಗುಹೆಗಳಲ್ಲಿದ್ದ ಅನಾದಿ ಕಾಲದ ಮನುಷ್ಯನಿಂದ ಹಿಡಿದು ಇಂದಿನ ಆಧುನಿಕ ಸಮಾಜದವರೆಗೆ, ಜಾತಿಗಳು, ಧರ್ಮಗಳು, ಆಚಾರಗಳು, ನಂಬಿಕೆಗಳು, ಭಕ್ತಿ, ದೇವರು, ದೆವ್ವ, ಭಯ, ಇವನ್ನೆಲ್ಲ ಮೀರಿಸುವ ‘ಇಸಂ’ಗಳು, ಸಿದ್ಧಾಂತಗಳು, ನಿಷ್ಠೆ, ರಾಜಕೀಯ- ಇವೆಲ್ಲ ಆ ಐದು ಕೋತಿಗಳ ಕತೆಯ ರೀತಿಯಲ್ಲೇ ಬೆಳೆದುಕೊಂಡು ಬಂದಿವೆ.
ಈಗಿರುವುದಕ್ಕಿಂತ ಚೆನ್ನಾಗಿ ಬದುಕಿದರೆ ಖಂಡಿತ ಹಣ್ಣು ಸಿಗುತ್ತದೆ. ಆದರೆ, ಆ ಪ್ರಯತ್ನಕ್ಕೆ ಮುಂದಾದರೆ ಇತರ ಕೋತಿಗಳು- ತಾವೇಕೆ ಹಾಗೆ ಮಾಡುತ್ತಿದ್ದೇವೆ ಎಂಬುದು ತಿಳಿದಿರದಿದ್ದರೂ- ಅಡ್ಡಿಪಡಿಸುವುದನ್ನು ಬಿಡುವುದಿಲ್ಲ.
ನಾವೆಲ್ಲ ಯೋಚಿಸುವುದನ್ನು ಕಲಿಯದಿದ್ದರೆ ಥೇಟ್ ಆ ಕೋತಿಗಳ ರೀತಿ ಆಗಿಬಿಡುತ್ತೇವೆ.

ಕೊಪ್ಪಳ
ಮೊ:9886317901