ಕಾವ್ಯಲೋಕ: ದ್ಯಾವಣ್ಣ ಸುಂಕೇಶ್ವರ ಅವರ ಕವನ ‘ಮೂಕ ಮನಸಿನ ಮೌನ ವೇದನೆ’

ಮೂಕ ಮನಸಿನ ಮೌನ ವೇದನೆ

              * ದ್ಯಾವಣ್ಣ ಸುಂಕೇಶ್ವರ

ಕೂಗು ಮುದ್ದು ಮಕ್ಕಳು ನರಳುವಾ ಕೂಗು
ವೇದನೆ ಜನ್ಮದಾತರ ಮೂಕ ವೇದನೆ!
ಅಯ್ಯೋ!.. ಅಯ್ಯೋ!…. ಯಾತನೆ ಆ ಕ್ಷಣ,
ಮಾತು ಬಾರದಾಯಿತು ಆ ದಿನ…
ಪುತ್ರರಿಬ್ಬರಿಗೂ ಅನಾರೋಗ್ಯ
ಇದನರಿತ ಜನಕನಿಗೆ ಭಯದ ಆತಂಕ
ಎದೆಗುಂದದೆ ಸಾಗಿದ ವೈದ್ಯನ ಬಳಿ
ಇರ್ವರಿಗೂ ಹರ್ನಿಯಾ ಸಮಸ್ಯೆ
ಶಸ್ತ್ರಚಿಕಿತ್ಸೆಯೊಂದೇ ಪರಿಹಾರ
ವೈದ್ಯರಿಂದ ಬಂದ ಉತ್ತರ!
ಹೃದಯದ ಬಡಿತ ಕ್ಷಣಹೊತ್ತು ಸ್ತಬ್ಧ
ಮಕ್ಕಳ ಜೀವ ಹೃದಯಕ್ಕೆ ಭಾರವೆ?
ಎರವಲು ಪಡೆದ ಹಣದಲಿ
ದಾಖಲಿಸಿದನಾಸ್ಪತ್ರೆಯಲಿ
ರೋಧಿಸುವರಾದಿನ ಸೂರ್ಯೋದಯದಿಂದ  ಸೂರ್ಯಾಸ್ತದವರೆಗೆ
ಗುಟುಕು ಉದಕವಿಲ್ಲ ಕರುಳಿನ‌ ವೆಜ್ಜದಲಿ
ಏನೂ ಅರಿಯದ ಮನ ಆ ಕ್ಷಣದಲ್ಲಿ ಮೌನ
ಕರುಳು ಕುಡಿಗಳು ಬೇಡುವ ಗುಟುಕು ವಾರಿ
ಕರುಳು ಕಿತ್ತಂತೆ ಭಾಸವಾಯಿತು.
ಮರಳಿ ಮರೆಮಾಚುವತ್ತ ಆತನ ಚಿತ್ತ
ಮುದ್ದಾಡಿ ಶೌಚಾಲಯದೆಡೆಗೆ ಸಾಗಿದನು
ನಲ್ಲಿಯ ನೀರು ಬೇಡಿದ ಸೂನುಗಳು
ಅಪ್ಪನೆದೆಯ ಮೇಲೆ ಜಾರಿದೆ ಕಂಬನಿಗಳು
ಆತ್ಮಜರ ಶಸ್ತ್ರಚಿಕಿತ್ಸೆ
ಬೆಡ್ ಮೇಲೆ ಹೊರಬಂದ ಸುತರು
ಹಸಿಯಾದವು ಕಣ್ಣುಗಳು
ಧೃತಿಗೆಡದೆ ಧೈರ್ಯವನು ತಾಳಿ
ನಿರ್ಜನ ಸ್ಥಳದೆಡೆಗೆ ಸಾಗಿ
ಹರಿಸಿದನು ಆಶ್ರುಧಾರೆಯನು
“ಅಯ್ಯೋ ದೇವರೇ!
ಮುದ್ದುಕಂದಮ್ಮಗಳಿಗ್ಯಾಕೀ ಶಿಕ್ಷೆ”
ಸಜ್ಜನರ ಮನದಲಿ ಕರುಣೆಯ ಕಡಲು
ಹರಿಯಿತೊಮ್ಮೆ ಹೊರಗೆ
ಆ ದಿನ ಜನಕನಿರುಳನು ಕಳೆದನು
ದುಃಖದ ಬೇಗೆಯಲಿ
ಮರುದಿನವೇ ತರಣಿ ಹೊರಬರಲು
ಸುತರ ನಗುವ ಮೊಗವನು ಕಂಡನು
ಮರೆತನು ದುಃಖವ ತೊರೆದನು‌ ಭಯವ
ಶಿರಬಾಗಿ ಕರ ಜೋಡಿಸಿದನು ಆಗೋಚರ ಶಕ್ತಿಗೆ.

ದ್ಯಾವಣ್ಣ ಸುಂಕೇಶ್ವರ
ಮುಖ್ಯಸ್ಥರು, ಕಲಾ‌ ವಿಭಾಗ,
ಲೊಯೋಲ ಪದವಿ ಕಾಲೇಜು, ಮಾನ್ವಿ.
ಮೊ:9880123488