ನಾಯಿಕೊಡೆ ಮತ್ತು ಆಲದಮರ : ಮುಕ್ಕಣ್ಣ ಕರಿಗಾರ

ನಾಯಿಕೊಡೆ ಮತ್ತು ಆಲದಮರ

     ಲೇಖಕರು: ಮುಕ್ಕಣ್ಣ ಕರಿಗಾರ

ಮನುಷ್ಯ ಪ್ರಪಂಚ ಬಹಳಷ್ಟು ಸಂಕುಚಿತವಾಗಿದೆ,ಮನುಷ್ಯ ಸಂಬಂಧಗಳು ಸ್ವಾರ್ಥ ಮತ್ತು ಸ್ವಜನಪಕ್ಷಪಾತಗಳಿಂದ ಕೂಡಿವೆ.ವಿಜ್ಞಾನ,ನಾಗರಿಕತೆ,ತಂತ್ರಜ್ಞಾನಗಳಲ್ಲಿ ಅತ್ಯದ್ಭುತ ಸಾಧನೆ ಆಗಿದೆ; ಆದರೆ ಅದೇ ವೇಳೆಗೆ ಮನುಷ್ಯ ಬಹಳ ಸಣ್ಣವನು ಆಗಿದ್ದಾನೆ.ಸಣ್ಣವನು ಅಂದರೆ ದೇಹಗಾತ್ರದಲ್ಲಿ ಅಲ್ಲ,ತತ್ತ್ವ-ಆದರ್ಶ ಮತ್ತು ಮಾನವೀಯ ಮೌಲ್ಯಗಳಲ್ಲಿ.ಭೌತಿಕ ಪ್ರಗತಿಯು ಆತ್ಮವಿಕಸನಕ್ಕೆ ಪೂರಕವಾಗಬೇಕಿತ್ತು,ಹಾಗೆ ಆಗಲಿಲ್ಲ.ಆರ್ಥಿಕ ಪ್ರಗತಿಯು ವಿಶ್ವಕಲ್ಯಾಣಕ್ಕೆ ಸಹಾಯಕವಾಗಬೇಕಿತ್ತು,ಹಾಗೆ ಆಗಲಿಲ್ಲ.ಶಿಕ್ಷಣ ಉನ್ನತ ವ್ಯಕ್ತಿತ್ವಗಳ ನಿರ್ಮಾಣ ಮಾಡಬೇಕಿತ್ತು; ಹಾಗೆ ಆಗಲಿಲ್ಲ.’ ಹಾಗೆ ಆಗಲಿಲ್ಲ’ ಎನ್ನುವುದರ ಮೂಲ ಯಾವುದು ?ಮನುಷ್ಯ ಸ್ವಭಾವವೆ! ಶಿಕ್ಷಣ,ನಾಗರಿಕತೆ,ವಿಜ್ಞಾನಗಳು ಬೆಳೆದಂತೆ ವಿಶ್ವಮಾನವತೆ ನಮ್ಮ ಉಸಿರಾಗಬೇಕಿತ್ತು; ಪೂರ್ಣತೆ ನಮ್ಮ ಹೆಸರಾಗಬೇಕಿತ್ತು.ಆಗಿದೆಯಾ? ಕಾಡಿನಲ್ಲಿ ಮೃಗಗಳನ್ನು ಬೇಟೆಯಾಡಿ ಬದುಕುತ್ತಿದ್ದ ಆದಿಮಾನವ ನಮಗಿಂತ ಎಷ್ಟೋಪಾಲು ವಾಸಿ ! ಈ ವಿರೋಧಾಭಾಸದ,ಈ ವೈಪರಿತ್ಯದ ಕಾರಣವೇನು? ಕಲಿಯುಗದ ಯುಗಧರ್ಮ ಎನ್ನೋಣವೆ? ವಿನಾಶ ಕಾಲ ಎನ್ನೋಣವೆ? ಯಾವುದಾದರೂ ಆಗಿರಲಿ ಒಂದಂತೂ ನಿಶ್ಚಿತ, ಮನುಷ್ಯತ್ವ ಮರೆಯಾದ ಪ್ರಪಂಚದಲ್ಲಿ ನಾವು ಬದುಕುತ್ತಿದ್ದೇವೆ.ತತ್ತ್ವ,ಆದರ್ಶ,ಮೌಲ್ಯಗಳು ಮರೆಯಾಗಿ ಸ್ವಾರ್ಥ,ಸ್ವಜನಪಕ್ಷಪಾತ ಮತ್ತು ಮೌಲ್ಯರಹಿತ ಜೀವನ ಸಾಗಿಸುತ್ತಿದ್ದೇವೆ.ಜಾತಿ,ಮತ,ಧರ್ಮಗಳ ವಿಜೃಂಭಣೆಯಲ್ಲಿ ಮನುಷ್ಯತ್ವ ಮರೆಯಾಗಿದೆ.ಸ್ವಾರ್ಥ ಮೆರೆಯುತ್ತಿದ್ದು ಪರಹಿತಗುಣ ಗೌಣವಾಗಿದೆ.ಸ್ವಜನಪಕ್ಷಪಾತವು ಎಲ್ಲೆಮೀರಿದ್ದು ಬಂಧುತ್ವಭಾವನೆ ಇಲ್ಲವಾಗುತ್ತಿದೆ.ಮೌಲ್ಯವಿಮುಖ ಸಮಾಜದ ಧೋರಣೆಯನ್ನೇ ನಾನಿಲ್ಲಿ ನಾಯಿಕೊಡೆ ಮತ್ತು ಆಲದಮರಗಳನ್ನು ರೂಪಕವಾಗಿಟ್ಟುಕೊಂಡು ವಿವರಿಸುತ್ತಿದ್ದೇನೆ.

ನಾಯಿಕೊಡೆ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಹುಟ್ಟುತ್ತದೆ.ಸಂಜೆ ಆಗುವುದರೊಳಗಾಗಿ ಸತ್ತುಹೋಗುತ್ತದೆ ಇಲ್ಲವೆ ಅಳಿಲು,ಓತಿಕ್ಯಾತಗಳಂತಹ ಜೀವಿಗಳ ಆಹಾರವಾಗುತ್ತದೆ.ನಾಯಿಕೊಡೆಯು ಹೆಚ್ಚೆಂದರೆ ಎರಡು ಮೂರುದಿನಗಳ ಮಾತ್ರ ಬದುಕಬಲ್ಲದು.ಆದರೆ ಆಲದ ಮರ ಹಾಗಲ್ಲ.ಅದರ ಬೀಜವೆ ಬಹಳ ಚಿಕ್ಕದು.ಆಲದ ಮರ ನಿಧಾನವಾಗಿ ಬೆಳೆಯುತ್ತದೆ,ಬೆಳೆದು ವಿಸ್ತಾರವಾಗಿ ನೆಲದಿಂದೆದ್ದು ಆಕಾಶವನ್ನು ಅಳೆಯುತ್ತ ಭೂಮಿಯನ್ನು ತಬ್ಬಿಕೊಂಡು ಬದುಕುತ್ತದೆ ಸಾವಿರಾರು ವರ್ಷಗಳ ಕಾಲ.ಆಲದ ಮರ ಎಲ್ಲಿ ಅಂದರೆ ಅಲ್ಲಿ ಬೆಳೆಯದು,ಸತ್ತ್ವಯುತ ಮಣ್ಣಿನಲ್ಲಿ,ಗಟ್ಟಿ ನೆಲದಲ್ಲಿ ಮಾತ್ರ ಬೆಳೆಯುತ್ತದೆ ಆಲದ ಮರ.ಆದರೆ ನಾಯಿಕೊಡೆ ಹುಟ್ಟುವುದಾದರೂ ಎಲ್ಲಿ? ತಿಪ್ಪೆಗುಂಡಿಗಳಲ್ಲಿ,ಕೊಳೆತ ಕಸದಲ್ಲಿ ,ಗಿಡಮರಗಳ ಒಣಗಿ ಕೊಳೆತ ಭಾಗಗಳಲ್ಲಿ! ಈಗೀಗ ಅಣಬೆ ಬೇಸಾಯಮಾಡುವ,ಅಣಬೆ ಸೇವನೆ ನಗರಗಳಲ್ಲಿ ಸಾಮಾನ್ಯವಾಗುತ್ತಿದ್ದರೂ ಅಣಬೆಯು ತಾಮಸ ಆಹಾರವಾದ್ದರಿಂದ ಸಾತ್ವಿಕರು,ಸತ್ತ್ವಶೀಲರು,ಧಾರ್ಮಿಕ ವ್ಯಕ್ತಿಗಳು ಅಣಬೆಯನ್ನು ತಿನ್ನಬಾರದು.

ನಾಯಿಕೊಡೆಯು ಕೊಳೆ- ಹೊಲಸು ಸ್ಥಳಗಳಲ್ಲಿ ಬೇಗನೆ ಹುಟ್ಟಿ ಬಹುಬೇಗನೆ ಸಾಯುವಂತೆ ಜಾತಿ,ಮತ,ಧರ್ಮಗಳಂತಹ ಸಂಕುಚಿತ ವಿಚಾರಗಳು ಬಹುದೀರ್ಘ ಕಾಲ ನಿಲ್ಲಲಾರವು ಪ್ರಪಂಚದಲ್ಲಿ.ಮನುಷ್ಯತ್ವ,ಉದಾರಭಾವನೆಗಳು,ಪರಹಿತದ ದುಡಿಮೆಯಂತಹ ಸತ್ಕಾರ್ಯಗಳು ಅನಂತಕಾಲದವರೆಗೂ ನಿಲ್ಲುತ್ತವೆ ಮುಂಬರುವ ಪೀಳಿಗೆಗಳಿಗೆ ಆದರ್ಶವಾಗಿ.ಇಂತಹ ಉದಾತ್ತ ವಿಚಾರಗಳನ್ನು ಹೇಳುವುದು ಮತ್ತು‌ ಪ್ರತಿಪಾದಿಸುವುದೇ ಮೂರ್ಖತನ ಎನ್ನುವಂತೆ ಆಗಿದೆ ಜಾತಿ ಧರ್ಮಗಳ ರೋಗಗ್ರಸ್ಥ ಮನಸ್ಸುಗಳುಳ್ಳವರ ನಡುವೆ.ನಾವು ಯಾವ ಜಾತಿಯಲ್ಲಿ ಹುಟ್ಟಿದ್ದೇವೆಯೋ ಆ ಜಾತಿಯ ಹಿತಕ್ಕಾಗಿ ಶ್ರಮಿಸಿದರೆ ಮಾತ್ರ ನಾವು ದೊಡ್ಡವರಾಗುತ್ತೇವೆ! ಇದು ಆಧುನಿಕ ಭಾರತದಲ್ಲಿ ದೊಡ್ಡವರು ಆಗುವ ಲಕ್ಷಣ.ಹುಟ್ಟಿದ ಜಾತಿಯನ್ನು ಬಿಟ್ಟು ನೀವು ಮನುಷ್ಯತ್ವದ ಪ್ರತಿಪಾದನೆಗೆ ತೊಡಗಿದಿರೊ ತೀರಿತು ನಿಮಗೆ ಕಟ್ಟುತ್ತಾರೆ ‘ ಜಾತಿ ವಿರೋಧಿ’ಹಣೆಪಟ್ಟಿ! ಜಾತಿಗಳ ಸಂಘಟನೆ,ಸಭೆ- ಸಮಾರಂಭಗಳಿಂದ ನೀವು ದೂರ ಉಳಿದಿರೋ ನಿಮನ್ನು ಅನುಮಾನದ ಕಣ್ಣುಗಳಿಂದ ನೋಡುತ್ತಾರೆ.ಎಲ್ಲ ಜಾತಿಗಳಲ್ಲಿಯೂ ಇದು ಸಾಮಾನ್ಯ ಸಂಗತಿ.ವೈರಾಗ್ಯದ ಪ್ರತೀಕವಾದ ಕಾಷಾಯವನ್ನು ಉಟ್ಟವರೇ ಅವರವರ ಜಾತಿಗಳ ಹಿತಕ್ಕಾಗಿ ಹೋರಾಟ,ಚಳುವಳಿಗಳನ್ನು ಮಾಡುತ್ತಿರುವ ವಿಪರೀತ ಕಾಲದಲ್ಲಿ ನಾವಿದ್ದೇವೆ.ಸಂನ್ಯಾಸವು ಜಾತಿಯಲ್ಲ,ಮತವಲ್ಲ ಅದೊಂದು ತತ್ತ್ವ,ಮಹಾತತ್ತ್ವ.ಈ ಸಾಮಾನ್ಯ ಜ್ಞಾನವೂ ಇಲ್ಲದವರು ಕಾವಿಧರಿಸುತ್ತಿರುವುದರಿಂದ ಅವರಿಂದ ಯಾವ ಘನಕಾರ್ಯ,ಮಹದುದ್ದೇಶ ನಿರೀಕ್ಷಿಸಲು ಸಾಧ್ಯ? ಆಧ್ಯಾತ್ಮಿಕವಾಗಿ ಶೂನ್ಯರಾದ ಕಾವಿಧಾರಿಗಳು ಜಾತಿಗಳ ಹಿತಕ್ಕಾಗಿ ಬಡಿದಾಡುತ್ತಾರೆ,ಸಮಾಜದ ಋಣ ತೀರಿಸುತ್ತೇನೆ ಎನ್ನುವ ಬಾಲಿಶ ಮಾತುಗಳನ್ನಾಡುತ್ತಾರೆ.ಎಲ್ಲ ಬಂಧನಗಳಿಂದ ಮುಕ್ತನಾದೆ ಎಂದು ಆಶ್ರಮ ತ್ಯಾಗ ಮಾಡುವವರು ಪೂರ್ವಾಶ್ರಮದ ಸ್ಮರಣೆ ಮಾಡಬಾರದು ಎನ್ನುತ್ತದೆ ಸಂನ್ಯಾಸಧರ್ಮ.ಪೂರ್ವಾಶ್ರದ ಜಾತಿಯ ಋಣದಲ್ಲಿದ್ದೇನೆ ಎನ್ನುವವರು ಹೇಗೆ ಸಂನ್ಯಾಸಿಗಳು? ಅಂಥವರು ಕಾವಿಧರ್ಮಕ್ಕೆ ಅಪಚಾರ ಎಸಗುವ ವ್ಯರ್ಥಜೀವಿಗಳು.ಸಂನ್ಯಾಸಿಗಳಾದವರೆ ಹೀಗೆ ಪಥಭ್ರಷ್ಟರು ತತ್ತ್ವಭ್ರಷ್ಟರು ಆಗಿ ಜಾತಿಗಳಿಗೆ ಜೋತುಬಿದ್ದಾಗ ನಮ್ಮಂತಹವರು ಜಾತಿಯ ಬಗ್ಗೆ ನಿರ್ಲಿಪ್ತರಾಗಿರುವುದು ಕೆಲವರ ಹುಬ್ಬೇರಿಸುವಂತೆ ಮಾಡಿದರೆ ಅದು ಆಶ್ಚರ್ಯದ ಮಾತಲ್ಲ.

ನಾವೆಲ್ಲರೂ ಒಂದು ಮಾತನ್ನು ತಿಳಿದುಕೊಳ್ಳಬೇಕು,ನಾವು ಯಾವುದೇ ಜಾತಿ,ಮತಗಳ ಚೌಕಟ್ಟಿನಲ್ಲಿ ಹುಟ್ಟಿರಲಿ ಆ ಚೌಕಟ್ಟಿನಲ್ಲೇ ಬಂಧಿಗಳು ಆಗಬಾರದು.ನಾವು ಯಾವುದೇ ಜಾತಿಯಲ್ಲಿ ಹುಟ್ಟಿರಲಿ,ಯಾವುದೇ ಧರ್ಮದಲ್ಲಿ ಹುಟ್ಟಿರಲಿ,ಯಾವುದೇ ದೇಶದಲ್ಲಿ ಹುಟ್ಟಿರಲಿ,ನಾವೆಲ್ಲರೂ ಮನುಷ್ಯರೆ ! ಮನುಷ್ಯರು ಎನ್ನುವ ಒಂದೇ ಜಾತಿಗೆ ಸೇರಿದವರು ನಾವು.ಮೇಲು- ಕೀಳು,ಹಿಂದೂ- ಮುಸ್ಲಿಂ,ಕ್ರೈಸ್ತ- ಪಾರಸಿಕ,ಬಿಳಿಯ- ಕರಿಯ,ಭಾರತೀಯ- ಅಮೇರಿಕನ್ ಎನ್ನುವ ಉಪಾದಿಗಳೆಲ್ಲ ನಾವು ಅಂಟಿಸಿಕೊಂಡವುಗಳು.ನಾವು ಹುಟ್ಟಿದ ಸಮಾಜ,ನೆಲೆಗಳಂತೆ ಉಪಾದಿಗಳಿಂದ ನಮ್ಮನ್ನು ಗುರುತಿಸಿದರೂ ಆ ಉಪಾದಿಯೇ ನಿಜವಲ್ಲವಾದ್ದರಿಂದ ಅಂಟಿಕೊಳ್ಳಬಾರದು ನಾವದಕ್ಕೆ.ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ,ಯಾರೂ ಕನಿಷ್ಟರಲ್ಲ.ಬಣ್ಣದಿಂದ ಯಾರೂ ಹಿರಿಯರಲ್ಲ,ಯಾರೂ ಕಿರಿಯರಲ್ಲ.ಆಡುವ ಭಾಷೆಯಿಂದ ಯಾರೂ ದೊಡ್ಡವರಲ್ಲ,ಯಾರೂ ಸಣ್ಣವರಲ್ಲ.ಯಾವ ದೇಶದಲ್ಲೇ ಹುಟ್ಟಿರಲಿ,ಯಾವ ಜಾತಿ- ಧರ್ಮಗಳಲ್ಲೇ ಹುಟ್ಟಿರಲಿ,ಯಾವ ಭಾಷೆಯನ್ನೇ ಆಡುತ್ತಿರಲಿ ನಾವೆಲ್ಲ ಮನುಷ್ಯರು ಮಾತ್ರ! ಎಲ್ಲಮನುಷ್ಯರೂ ಒಂದೇ ರೀತಿಯಲ್ಲಿ ಹುಟ್ಟಿದ್ದೇವೆ .ಅಂದರೆ ಎಲ್ಲರೂ ತಂದೆಯ ವೀರ್ಯದಿಂದ ತಾಯಿಯ ಗರ್ಭದಲ್ಲಿ ಬೆಳೆದು ಯೋನಿಮಾರ್ಗದ ಮೂಲಕ ಜಗತ್ತಿಗೆ ಬಂದಿದ್ದೇವೆ.ನಮ್ಮಲ್ಲಿ ಯಾರೂ ಅಯೋನಿಜರು ಇಲ್ಲ ಶ್ರೇಷ್ಠರು ಎಂದು ಹೇಳಿಕೊಳ್ಳಲು.ಯೋನಿಜರಾಗದೆ ತಲೆಯ ಮೂಲಕ,ಕಣ್ಣು ಕಿವಿಗಳ ಮೂಲಕ ಹುಟ್ಟಿದ ಯಾರೊಬ್ಬರೂ ನಮ್ಮಲ್ಲಿ ಇಲ್ಲ.ಅಥವಾ ನೇರವಾಗಿ ಸ್ವರ್ಗದಿಂದ ಧುತ್ತೆಂದು ಅವತರಿಸಿದವರೂ ನಮ್ಮಲ್ಲಿಲ್ಲ.ಎಲ್ಲರೂ ಹುಟ್ಟುವ ಮಾರ್ಗ ಒಂದೇ.ಎಲ್ಲರ ದೇಹಗಳಲ್ಲಿಯೂ ರಕ್ತ- ಮಾಂಸಗಳಿವೆ.ಶ್ರೇಷ್ಠರು ಎಂದು ಬೀಗುವವರ ದೇಹದಲ್ಲಿ ರಕ್ತದ ಬದಲು ಹಾಲು ಹರಿಯುತ್ತಿಲ್ಲವಲ್ಲ.ಎಲ್ಲರಂತೆ ಸಹಜವಾಗಿಯೇ ಹುಟ್ಟಿದವರಲ್ಲಿ ಕೆಲವರು ತಾವು ಶ್ರೇಷ್ಠರು ಎಂದು ಕೊಚ್ಚಿಕೊಳ್ಳುವುದು ಹುಸಿಪ್ರತಿಷ್ಠೆ,ಅಂಟಿಸಿಕೊಂಡ ಮನೋರೋಗ.ಮನೋರೋಗಕ್ಕೆ ಮದ್ದಿಲ್ಲ.ಹಾಗೆಯೇ ಜಾತಿಪ್ರತಿಷ್ಠೆಯ ಜನರ ಅಜ್ಞಾನಕ್ಕೆ ಮದ್ದು ಇಲ್ಲ ಅವರನ್ನು ಸುಧಾರಿಸಬೇಕು ಎಂದರೆ! ಈ ವಿಶ್ವದಲ್ಲಿ ಹುಟ್ಟಿದ ನಾವೆಲ್ಲರೂ ಮನುಷ್ಯರೆ ಎಂದು ತಿಳಿದು ಮನುಷ್ಯತ್ವದ ಪ್ರತಿಪಾದನೆಗೆ ತೊಡಗುವುದೇ ಜೀವನದ ಶ್ರೇಯಸ್ಸು,ಸಾರ್ಥಕತೆ.ಮಾನವತೆಗಿಂತ ಮಿಗಿಲಾದ ಧರ್ಮವಿಲ್ಲ; ಮನುಷ್ಯತ್ವಕ್ಕಿಂತ ಹಿರಿದಾದ ತತ್ತ್ವವಿಲ್ಲ.ಮನುಷ್ಯರಾದ ನಾವು ಎಲ್ಲರೂ ಸಹೋದರರಂತೆ ಬಂಧು ಭಾವದಿಂದ ಬದುಕಬೇಕಾಗಿದೆ.ನಮಗಿರುವುದು ಒಂದೇ ವಿಶ್ವ.ನಮಗೆ ಬೆಳಕು- ಬೆಳದಿಂಗಳು ನೀಡುತ್ತಿರುವ ಸೂರ್ಯ- ಚಂದ್ರರೂ ಒಬ್ಬೊಬ್ಬರೇ ಇದ್ದಾರೆ.ಹೀಗಿದ್ದೂ ನಾವು ನಮ್ಮೊಳಗೆ ಆ ಜಾತಿ,ಈ ಧರ್ಮ ಎಂದು ಕಚ್ಚಾಡುವುದೇಕೆ ?ಸತ್ತಾಗ ಎಲ್ಲರನ್ನು ಹೂಳುತ್ತಾರೆ ಇಲ್ಲವೆ ಸುಡುತ್ತಾರೆ.ದೇವದೂತರೇನು ಬಂದು ಯಾರನ್ನೂ ಶರೀರ ಸಮೇತ ದೇವಲೋಕಕ್ಕೋ ಸ್ವರ್ಗಕ್ಕೋ ಕರೆದುಕೊಂಡು ಹೋಗುವುದಿಲ್ಲ.ಕಥೆ- ಪುರಾಣಗಳಲ್ಲಿ ಓದಬಹುದಾದ ಇಂತಹ ಅಸಹಜ ಸಂಗತಿಗಳು ಸೃಷ್ಟಿ ಆರಂಭವಾದಾಗಿನಿಂದ ಇಲ್ಲಿಯವರೆಗೂ ನಡೆದಿಲ್ಲ,ಮುಂದೆಯೂ ನಡೆಯುವುದಿಲ್ಲ.ಒಂದೇ ಭೂಮಿಯಲ್ಲಿ ಬಾಳುತ್ತಿರುವ ನಾವೆಲ್ಲರೂ ಬಂಧುಭಾವದಿಂದ ಬದುಕಿದರೆ ಭೂಮಿಯೇ ಸ್ವರ್ಗವಾಗುತ್ತದೆ.ಕಾಣದ ಸ್ವರ್ಗಸುಖದ ಆಸೆಯಲ್ಲಿ ಮರ್ತ್ಯದ ಬಾಳನ್ನು ನರಕ ಮಾಡಿಕೊಳ್ಳಬಾರದು.ಸತ್ತಾಗ ಏನಾಗುತ್ತದೊ ,ಯಾರು ಬಲ್ಲರು? ಇರುವಷ್ಟುದಿನ ಚೆನ್ನಾಗಿ ಬಾಳುವುದು ನಮ್ಮ ಕೈಯಲ್ಲಿದೆ.ಇರುವಷ್ಟು ದಿನವೇ ಬದುಕಬಹುದಾದ ನಾವು ಆ ಇರುವಷ್ಟು ದಿನಗಳನ್ನು ಇತರರೊಂದಿಗೆ ಪ್ರೀತಿ,ವಿಶ್ವಾಸ,ಬಂಧುಭಾವದಿಂದ ಬದುಕಬಾರದೆ? ನನ್ನ ಜಾತಿ ಹಿಂದುಳಿದಿದೆ,ಅವರ ಜಾತಿ ಮುಂದುವರೆದಿದೆ ಎನ್ನುವ ವ್ಯರ್ಥಾಭಿಮಾನಕ್ಕೆ ಕಟ್ಟು ಬೀಳದೆ ಎಲ್ಲ ಜಾತಿಗಳಲ್ಲಿಯೂ ಬಡವರು ಇದ್ದಾರೆ,ಶೋಷಿತರು ಇದ್ದಾರೆ ಎಂದು ತಿಳಿದು ದುರ್ಬಲರಾದವರೆಲ್ಲರಿಗೂ ಆಸರೆಯಾಗುವುದೇ ಧರ್ಮ.ನಮ್ಮ ಅಜ್ಞಾನ,ಅಂಧತ್ವಗಳು ನಮ್ಮನ್ನು ತುಳಿಯುತ್ತವಲ್ಲದೆ ಬೇರೆ ಯಾರನ್ನೂ ನಮ್ಮನ್ನು ತುಳಿಯಲಾರರು.ಹೀಗಿದ್ದೂ ನಮ್ಮನ್ನು ಅವರು ತುಳಿಯುತ್ತಾರೆ,ಇವರು ತುಳಿಯುತ್ತಾರೆ ಎನ್ನುವುದು ಭ್ರಾಂತಿ.ಒಡೆದು ಆಳುವ ನೀತಿಯ ಜನರು ಬರೆದಿಟ್ಟ ಇತಿಹಾಸವನ್ನೇ ನಿಜವೆಂದು ಭ್ರಮಿಸಿ ಸಹೋದರರಂತೆ ಬದುಕಬೇಕಾದವರು ಸಂಘರ್ಷಕ್ಕೆ ಎಳಸುವುದು ದಾರಿತಪ್ಪಿದ ನಡೆ.ಈ ಎಲ್ಲ ಭ್ರಮೆಗಳಿಂದ ಮುಕ್ತರಾಗಿ ಎಲ್ಲ ಮಾನವರು ಒಂದೇ,ನಾವೆಲ್ಲರೂ ಒಂದೇ ಪ್ರಪಂಚಕ್ಕೆ ಸೇರಿದವರು ಎಂದು ಅರಿತು ಬಾಳುವುದೇ ಶ್ರೇಷ್ಠತೆ.ಸರ್ವರೇಳ್ಗೆಯ,ಸರ್ವೋದಯ ಸಿದ್ಧಾಂತದ,ಮನುಷ್ಯ ಧರ್ಮವನ್ನು ಎತ್ತಿಹಿಡಿಯುವವರೇ ಮಹಾತ್ಮರು.ಆಲದ ಮರವು ಇಂತಹ ಮಹಾತ್ಮರು,ಮಹಾಪುರುಷರನ್ನು ಸಂಕೇತಿಸುತ್ತದೆ.ಆಲದ ಮರಗಳಾಗುವುದು ನಮ್ಮ ಗುರಿಯಾಗಬೇಕು,ನಾಯಿಕೊಡೆಗಳಾಗುವುದು ಅಲ್ಲ.

ಮುಕ್ಕಣ್ಣ ಕರಿಗಾರ
ಮೊ: 94808 79501