ನಿರಾಕರಣೆಯಲ್ಲ,ಆಕರಣೆ ಜೀವನ ಸಿದ್ಧಾಂತ :ಮುಕ್ಕಣ್ಣ ಕರಿಗಾರ

ನಿರಾಕರಣೆಯಲ್ಲ,ಆಕರಣೆ ಜೀವನ ಸಿದ್ಧಾಂತ

ಲೇಖಕರು: ಮುಕ್ಕಣ್ಣ ಕರಿಗಾರ

ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಒಂದು ಮಂತ್ರ,ಆಶಯ ;

ಮಾಹಂ ಬ್ರಹ್ಮ ನಿರಾಕುರ್ಯಾಂ
ಮಾ ಮಾ ಬ್ರಹ್ಮ ನಿರಾಕರೋತ್
ಅನಿರಾಕರಣಮಸ್ತ್ವನಿರಾಕರಣಂ ಮೇಸ್ತುs /

ಅಂದರೆ,
‘ಬ್ರಹ್ಮನನ್ನು ನಾನೆಂದೂ ನಿರಾಕರಿಸದಂತಾಗಲಿ;
ಬ್ರಹ್ಮನೂ ನನ್ನನ್ನು ನಿರಾಕರಿಸದಿರಲಿ ;
ನಿರಾಕರಣೆಯು ನನ್ನಿಂದ ದೂರವಿರಲಿ; ನಿರಾಕರಣೆಯು ದೂರವಿರಲಿ’.

ಭಕ್ತ ಮತ್ತು ಭಗವಂತರ ನಡುವಿನ ಸಂಬಂಧದ ಗಾಢತೆಯನ್ನು,ಅನ್ಯೋನ್ಯತೆಯನ್ನು ಪ್ರಸ್ತಾಪಿಸುವ ಮಂತ್ರ,ಪ್ರಾರ್ಥನೆ ಇದು.ಜೀವ- ಪರಮಾತ್ಮರು ಒಬ್ಬರನ್ನೊಬ್ಬರು ಅಗಲದೆ ಸದಾ ಒಂದಾಗಿ ಇರಬೇಕು ಎನ್ನುವ ಆಶಯ ಇಲ್ಲಿದೆ.ನಮ್ಮೊಳಗಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳೆರಡನ್ನೂ ಈ ಪ್ರಾರ್ಥನೆಯು ಪ್ರಸ್ತಾಪಿಸುತ್ತದೆ ಎನ್ನುವುದು ವಿಶೇಷ.ಸಕಾರಾತ್ಮಕ ( positive) ಭಾವನೆಯಿಂದ ನಮ್ಮ ವ್ಯಕ್ತಿತ್ವವು ವಿಕಸನಗೊಂಡರೆ ನಕಾರಾತ್ಮಕ( negative) ಭಾವನೆಗಳಿಂದ ನಮ್ಮ ವ್ಯಕ್ತಿತ್ವವು ಸಂಕುಚಿತಗೊಳ್ಳುತ್ತದೆ,ಕುಬ್ಜಗೊಳ್ಳುತ್ತದೆ.ನಕಾರಾತ್ಮಕ ಭಾವನೆಯ ಪರಿಣಾಮವಾಗಿ ಉಂಟಾಗುವ ನಿರಾಕರಣೆಯು ಬೇಡ ಎನ್ನುತ್ತಾರೆ ಉಪನಿಷತ್ತಿನ ಋಷಿಗಳು.

ನಿರಾಕರಣೆಗೆ ವಿರುದ್ಧವಾದುದು ಸ್ವೀಕರಣೆ .ಅದಕ್ಕೂ ಮಿಗಿಲರ್ಥ ಕೊಡುವ ‘ ಆಕರಣೆ’ ಪದವನ್ನು ನಾನಿಲ್ಲಿ ಬಳಸಿದ್ದೇನೆ.’ ಆಕರಣೆ’ ಎಂದರೆ ಪಂಥಾಹ್ವಾನ ಮತ್ತು ಕರೆಯುವಿಕೆ ಎನ್ನುವ ಅರ್ಥಗಳಿವೆ. ಆಕರಣೆಯ ಮೂಲರೂಪವಾದ ‘ ಆಕರ’ ಶಬ್ದವು ಹಲವು ಅರ್ಥಗಳನ್ನು ಹೊಮ್ಮಿಸುತ್ತಿದೆ.ಖಣಿ,ಗಣಿ,ಉತ್ಪತ್ತಿಸ್ಥಾನ,ಭಾಂಡಾರ,ದಕ್ಷ,ಶ್ರೇಷ್ಠ,ಪಟ್ಟು ಮತ್ತು ಬಾಯಾರಿಕೆ ಎನ್ನುವ ಅರ್ಥಗಳು ‘ಆಕರ’ ಕ್ಕೆ ಇದ್ದರೂ ಖಣಿ,ಗಣಿ,ಭಾಂಡಾರ ಎನ್ನುವ ಅರ್ಥಗಳು ನಮಗಿಲ್ಲಿ ಮುಖ್ಯ.ಬಂಗಾರ,ಬೆಳ್ಳಿ,ತಾಮ್ರ,ಹಿತ್ತಾಳೆ ಮತ್ತು ಕಬ್ಬಿಣಗಳಂತಹ ಲೋಹಗಳು ಭೂಮಿಯ ಅಂತರಾಳದಲ್ಲಿ ಹುದುಗಿವೆ ಖನಿಜ ರೂಪದಲ್ಲಿ.ಖನಿಜವನ್ನು ಹೊರತೆಗೆದು ಅದಿರನ್ನು ಸಂಸ್ಕರಿಸಿದರೆ ಬೆಲೆಬಾಳುವ ಲೋಹಸಿಗುತ್ತದೆ.ಮನುಷ್ಯರಾದ ನಾವು ಸಹ ಗುಣಗಳ ಖಣಿ ಅಥವಾ ಗಣಿಗಳು.ನಮ್ಮಲ್ಲಿ ಒಳ್ಳೆಯ ಗುಣಗಳೂ ಇವೆ,ಕೆಟ್ಟಗುಣಗಳೂ ಇವೆ ನಮ್ಮ ಮನಸ್ಸೆಂಬ ಭೂಮಿಯ ಅಂತರಾಳದಲ್ಲಿ.ನಮ್ಮ ಮನಸ್ಸಿನಾಳದ ಭಾವನೆಗಳಿಗೆ ನಾವು ಕೊಡುವ ಸಂಸ್ಕಾರವೇ ನಮ್ಮ ವ್ಯಕ್ತಿತ್ವ.ಒಳ್ಳೆಯ ಭಾವನೆಗಳನ್ನು ಜಾಗೃತಗೊಳಿಸಿಕೊಂಡರೆ ನಾವು ‘ಸುಸಂಸ್ಕೃತರು’ ‘ ಸದ್ಗುಣಿಗಳು’ ಎನ್ನಿಸಿಕೊಳ್ಳುತ್ತೇವೆ.ಕೆಟ್ಟಭಾವನೆಗಳ,ದುರಾಲೋಚನೆಗಳ ಬೆನ್ನುಹತ್ತಿದರೆ ‘ಅನಾಗರಿಕರು’ ‘ ದುರ್ಗುಣಿಗಳು’ ಎಂದು ಗುರುತಿಸುತ್ತಾರೆ ನಮ್ಮನ್ನು.ನಮ್ಮಮನಸ್ಸಿನಾಳದ ಭಾವನೆಗಳನ್ನು ನಾವು ಹೇಗೆ ಅಭಿವ್ಯಕ್ತಗೊಳಿಸುತ್ತೇವೋ ಅದರಂತೆಯೇ ಸಿದ್ಧವಾಗುತ್ತದೆ ನಮ್ಮ ವ್ಯಕ್ತಿತ್ವ.ನಮ್ಮಮನಸ್ಸಿನಾಳದ ಸದ್ ವಿಚಾರಗಳನ್ನು,ಸತ್ ಪ್ರವೃತ್ತಿಗಳನ್ನು ಜಾಗೃತಗೊಳಿಸಿಕೊಳ್ಳಬೇಕು.ಅದೇ ಆಕರಣೆ,ಕರೆಯುವಿಕೆ.ಒಳಗಣ ಮನಸ್ಸಿನ ಭಾವನೆಗಳನ್ನು ಹೊರಗೆ ಕರೆದು ತೋರ್ಪಡಿಸುವುದೇ ಆಕರಣೆ.ತೋರ್ಪಡಿಸುವುದು ಮಾತ್ರವಲ್ಲ, ಆ ಸದ್ಗುಣ ಸಂಪತ್ತನ್ನು ಇಮ್ಮಡಿ,ಮುಮ್ಮಡಿ,ನೂರ್ಮಡಿಯಾಗಿ ಪ್ರಕಟಗೊಳಿಸಿ ಸಹಜೀವಿಗಳು ಮತ್ತು ಸಮಾಜಕ್ಕೆ ಲೇಸನ್ನೆಸಗಬೇಕು.ಇಂತಹ ಲೇಸನ್ನೆಸಗುವವರೇ ಉನ್ನತಾತ್ಮರು,ಮಹಾತ್ಮರು.

ಋಷಿಯ ಆಶಯ ಬ್ರಹ್ಮನನ್ನು ನಾವು ನಿರಾಕರಿಸಬಾರದು,ಬ್ರಹ್ಮನೂ ನಮ್ಮನ್ನು ನಿರಾಕರಿಸಬಾರದು.ಇಬ್ಬರ ನಡುವಿನ ಸಂಬಂಧದ ಗಾಢತೆಗೆ ಅಡ್ಡಿಯಾಗುವ,ತೊಡರಾಗುವ ನಿರಾಕರಣೆಯು ನಮ್ಮಿಂದ ದೂರವಾಗಲಿ.ಅಂದರೆ ದೂರವಾಗಬೇಕಾದದ್ದು ನಿರಾಕರಣೆಯ ಮೂಲ ಗುಣವೇ ಹೊರತು ಬ್ರಹ್ಮನಲ್ಲ,ಜೀವನೂ ಅಲ್ಲ.ನಿರಾಕಾರನೂ ನಿರ್ಗುಣನೂ ನಿರಂಜನನೂ ಆದ ಪರಮಾತ್ಮನನ್ನು ಇಲ್ಲಿ ‘ ಬ್ರಹ್ಮ’ ಎಂದು ಕರೆಯಲಾಗಿದೆ.ಬ್ರಹ್ಮ ಮತ್ತು ಆತ್ಮರು ಪರಸ್ಪರ ಸಂಬಂಧಿಗಳು.ಆತ್ಮನಿಗಾಗಿ ಬ್ರಹ್ಮನು ಇದ್ದರೆ ಬ್ರಹ್ಮನಿಗಾಗಿ ಆತ್ಮನು ಇದ್ದಾನೆ.ತಾನು ಬ್ರಹ್ಮನಿಂದ ಭಿನ್ನನಲ್ಲ ಎನ್ನುವ ಭಾವನೆ ಮೊಳೆದಾಗ ಆತ್ಮನು ಬ್ರಹ್ಮಭಾವದೊಳು ಒಂದಾಗುವನು,ಬ್ರಹ್ಮಸಾಕ್ಷಾತ್ಕಾರವನ್ನು ಅನುಭವಿಸುವನು.ಬ್ರಹ್ಮ ಮತ್ತು ಆತ್ಮರ ನಡುವೆ ಅಡ್ಡಿ ಆಗಿರುವುದು ಪ್ರಕೃತಿ ಅಥವಾ ಮಾಯೆ.ಮಾಯೆಯು ತನ್ನ ಪರದೆಯನ್ನು ಅಡ್ಡಹಿಡಿಯುವ ಮೂಲಕ ಬ್ರಹ್ಮ ಮತ್ತು ಆತ್ಮರ ನಡುವಣ ಸಂಬಂಧಕ್ಕೆ ಅಡ್ಡಿಯಾಗುತ್ತಾಳೆ.ಮಾಯೆಯೊಡ್ಡಿದ ಸೆರಗನ್ನು ಹರಿದೊಗೆದು ಬ್ರಹ್ಮನನ್ನು ಕಾಣಬೇಕು.

ಬ್ರಹ್ಮ ಮತ್ತು ಆತ್ಮನಾದ ತಾನು ಒಂದೇ ಎಂದು ತಿಳಿಯುವುದೇ ಸತ್ಯ .ಆ ಸತ್ಯದ ಜ್ಞಾನವೇ ನಾವು ಕರೆದು ಸಂಗ್ರಹಿಸಬೇಕಾದ ಆಕರಣೆ.ಬ್ರಹ್ಮನಂತೆ ಆತ್ಮನೂ ಅವಿನಾಶಿಯು,ಅನಂತನೂ ಆಗಿರುವನು.ಮಾಯೆಯ ಪ್ರಭಾವಕ್ಕೆ ಒಳಗಾಗಿ ಆತ್ಮನು ತಾನು ಜೀವನು ಮಾತ್ರ,ಬ್ರಹ್ಮನಿಂದ ಭಿನ್ನನಿರುವೆನು ಎಂದು ಭ್ರಮಿಸುವನು ಕವಿದ ಮಾಯೆಯ ಆವರಣದಿಂದ ತನ್ನ ಸ್ವಸ್ವರೂಪವನ್ನು ಮರೆತು ಬಳಲುವನು.ತನ್ನ ಸ್ವಸ್ವರೂಪದ ಮರೆವು ಅಥವಾ ವಿಸ್ಮರಣೆಯೇ ಜೀವರ ದುಃಖದ ಕಾರಣವು.ಬ್ರಹ್ಮನು ಆನಂದದ ಪ್ರತೀಕ.ತಾನು ಆನಂದ ಸ್ವರೂಪನೇ ಎಂದು ತಿಳಿಯಬೇಕು ಜೀವರುಗಳು.

ನಿಷೇಧಾತ್ಮಕ ಭಾವನೆಗಳಿಂದ ಹೊರಬಂದು ಎಲ್ಲೆಲ್ಲಿಯೂ ಪೂರ್ಣವನ್ನು ಕಾಣಬೇಕು.ಎಲ್ಲದರ ಹಿಂದೆಯೂ ಪರಮಾತ್ಮನ ಪ್ರೇರಣೆ ಇದೆ ಎಂದರಿಯಬೇಕು.ಎಲ್ಲರಲ್ಲಿಯೂ ಪರಮಾತ್ಮನು ಇದ್ದಾನೆ ಎನ್ನುವ ಸತ್ಯವನ್ನು ಮನಗಾಣಬೇಕು.ಇಂತಹ ಪೂರ್ಣದೃಷ್ಟಿಯು ಅಳವಟ್ಟುದಾದರೆ ಜಗತ್ತು ಪೂರ್ಣವಾಗಿ ಕಾಣುತ್ತದೆ,ಸರ್ವರೂ ಬ್ರಹ್ಮಸ್ವರೂಪರಾಗಿಯೇ ಕಾಣುತ್ತಾರೆ; ಸರ್ವವೂ ಬ್ರಹ್ಮಮಯವಾಗುತ್ತದೆ.

ಬಸವಣ್ಣನವರ ಇಷ್ಟಲಿಂಗದ ಪರಿಕಲ್ಪನೆಯ ಸ್ಫೂರ್ತಿ ಈ ಉಪನಿಷತ್ ವಾಕ್ಯದಲ್ಲಿ ಇದ್ದಂತೆ ಕಾಣುತ್ತದೆ.ಬಸವಣ್ಣನವರು ಭಕ್ತ ಮತ್ತು ಪರಶಿವನ ಅನೋನ್ಯತೆಯನ್ನು ಪ್ರತಿಪಾದಿಸಲು,ಪ್ರತಿಷ್ಠಾಪಿಸಲು ಕಂಡುಕೊಂಡ ದರ್ಶನವೇ ಇಷ್ಟಲಿಂಗ.ಅದರ ಹಿಂದೆ ಈ ಉಪನಿಷತ್ ವಾಕ್ಯದ ಪ್ರೇರಣೆ ಇರುವುದನ್ನು ಮನಗಾಣಬಹುದು.ಪರಮಾತ್ಮನನ್ನು ಜೀವರು ನಿರಾಕರಿಸಬಾರದು,ಜೀವರುಗಳನ್ನು ಪರಮಾತ್ಮನು ನಿರಾಕರಿಸಬಾರದು ಎನ್ನುವ ಕಾರಣದಿಂದ ಬಸವಣ್ಣನವರು ಪರಶಿವನ ಪ್ರತೀಕವಾದ ಇಷ್ಟಲಿಂಗವನ್ನು ಕೊರಳಲ್ಲಿ ಕಟ್ಟಿಕೊಳ್ಳುವಂತೆ ನಿಯಮಿಸುವರು.ಇಷ್ಟಲಿಂಗಧಾರಣೆಯ ಪರಿಣಾಮವಾಗಿ ಆತ್ಮನು ಪರಮಾತ್ಮನಿಂದ ದೂರ ಸರಿಯಲಾರ; ಪರಮಾತ್ಮನು ಅನವರತ ಆತ್ಮನೊಂದಿಗೆ ಇರುವನು.ಪರಮಾತ್ಮ ಮತ್ತು ಆತ್ಮರ ನಡುವೆ ಅಡ್ಡಿಯಾಗಿರುವ ಮಾಯೆಯ ಆವರಣವನ್ನು ಛೇದಿಸುವ ಇಷ್ಟಲಿಂಗವು ಪರಮನ ಪ್ರಭೆಯಲ್ಲಿ ಆತ್ಮನು ಸದಾ ವಿಹರಿಸುವಂತೆ ಮಾಡುತ್ತದೆ.

ಮುಕ್ಕಣ್ಣ ಕರಿಗಾರ
ಮೊ: 94808 79501

24.10.2021