ಪೂಜ್ಯಪಾದರು : ಮುಕ್ಕಣ್ಣ ಕರಿಗಾರ

ಪೂಜ್ಯಪಾದರು’

         ಲೇಖಕರು: ಮುಕ್ಕಣ್ಣ ಕರಿಗಾರ

ತಪಸ್ವಿಗಳು,ಸಿದ್ಧರು ಮತ್ತು ಮಹಾಂತರುಗಳನ್ನು ‘ ಪೂಜ್ಯಪಾದರು’ ಎಂದು ಗೌರವಿಸಲಾಗುತ್ತದೆ.ಅವರ ಪಾದಗಳು ಪೂಜೆಗೆ ಅರ್ಹವಾಗಿರುತ್ತವೆಯಾದ್ದರಿಂದ ಅವರು ಪೂಜ್ಯಪಾದರು.ಮಹಾತ್ಮರುಗಳಾದ ಸಾಧು- ಸಂತರುಗಳು ನಿಗ್ರಹಾನುಗ್ರಹ ಸಮರ್ಥರಿರುವುದರಿಂದ ಅವರ ಪಾದಗಳನ್ನು ತೊಳೆದು,ಪಾದಪೂಜೆ ಮಾಡಲು ಹೇಳಿದ್ದಾರೆ. ಹಿರಿಯರು.ಮಹಾಂತರುಗಳ ಪಾದಪೂಜೆ ಮಾಡಿದರೆ ಫಲ ಉಂಟು.ಸಿದ್ಧಪುರುಷರ ಇಡೀದೇಹವು ದಿವ್ಯದೇಹವಾಗಿರುವುದರಿಂದ ಅವರ ಪಾದಗಳಿಗೆ ಮಾಡುವ ಪೂಜೆ,ಸೇವೆಗಳು ಸಮರ್ಥನೀಯ.ಆದರೆ ಎಲ್ಲರ ಪಾದಗಳನ್ನು ಪೂಜಿಸತಕ್ಕದ್ದಲ್ಲ,ಎಲ್ಲರಿಗೂ ನಮಸ್ಕರಿಸತಕ್ಕದ್ದಲ್ಲ.ವ್ಯಕ್ತಿಪೂಜೆಯನ್ನು ಬಲವಾಗಿ ವಿರೋಧಿಸುವ ನಾನು ಸಾಧು,ಸತ್ಪುರುಷರುಗಳಂತಹ ಉನ್ನತ ಆಧ್ಯಾತ್ಮಿಕ ಸಾಧಕರುಗಳ ಪಾದಪೂಜೆಯನ್ನು ಮಾತ್ರ ಬೆಂಬಲಿಸುವೆ. ಮಠ-ಮಂದಿರಗಳಲ್ಲಿ ಸಂನ್ಯಾಸಿಗಳು,ಸ್ವಾಮಿಗಳು ಎಂದು ಹೇಳಿಕೊಳ್ಳುವವರು ಮತ್ತು ಜಾತಿಯ ಗುರುಗಳು,ಸ್ವಾಮಿಗಳಾದವರುಗಳೆಲ್ಲರೂ ಪೂಜ್ಯಪಾದರುಗಳಲ್ಲ.

ಯಾರ ಪಾದಗಳಲ್ಲಿ ಪೂಜಿಸುವವರ ಪಾಪ,ದೋಷಗಳನ್ನು ಕಳೆಯುವ ಸಾಮರ್ಥ್ಯ ಇದೆಯೋ ಅಂತಹ ಪೂಜ್ಯಪಾದರ ಪಾದಗಳನ್ನು ತೊಳೆಯಬೇಕು.ಯಾರ ಪಾದಗಳಲ್ಲಿ ಹಣೆಹಚ್ಚಿ ಮೈ ಮಣಿಯುವುದರಿಂದ ಭವಬಂಧನ,ಕರ್ಮಪಾಶ ಹರಿಯುವುದೋ ಅಂತಹವರ ಪಾದಗಳಿಗೆ ನಮಸ್ಕರಿಸಬೇಕು.ಪಾದಪೂಜೆಗೆ ಅನರ್ಹರಾದವರ ಪಾದಗಳನ್ನು ಪೂಜಿಸುವುದು,ನಮಸ್ಕರಿಸುವುದು ಪಾಪ ಇಲ್ಲವೆ ಕರ್ಮಸಂಪಾದನೆಗೆ ಕಾರಣವಾಗುತ್ತದೆ! ಪರಮಾತ್ಮನ ಚೈತನ್ಯ ಎಲ್ಲರಲ್ಲಿಯೂ ಇದೆ.ಆದರೆ ಕೆಲವರಲ್ಲಿ ಅದು ಪ್ರಕಟವಾಗಿದ್ದರೆ ಬಹಳಷ್ಟು ಜನರಲ್ಲಿ ಸುಪ್ತವಾಗಿರುತ್ತದೆ.ಪರಮಾತ್ಮನ ಚೈತನ್ಯಜಾಗೃತರಾದವರು ಪರಮಾತ್ಮನ ಚೈತನ್ಯ ಸುಪ್ತವಾಗಿರುವವನ್ನು ಬಡಿದೆಬ್ಬಿಸಿ ಅವರುಗಳನ್ನು ಸಹ ಜಾಗೃತಾತ್ಮರನ್ನಾಗಿ ಮಾಡಬೇಕು.ಸರಳವಾಗಿ ಹೇಳುವುದಾದರೆ ಎಣ್ಣೆ ಬತ್ತಿ ತುಂಬಿದ ಪ್ರಣತಿಗಳ ಸಾಲಿನಂತೆ ಜಗತ್ತಿನಲ್ಲಿ ಜೀವರುಗಳು.ಒಂದೆರೆಡು ಹಣತೆಗಳಿಗೆ ಮಾತ್ರ ಅಗ್ನಿಸ್ಪರ್ಶವಾಗಿ ಅವು ಪ್ರಜ್ವಲಿಸುತ್ತಿವೆ.ಪ್ರಜ್ವಲಿಸುತ್ತಿರುವ ಪ್ರಣತೆಗಳು ಬೆಂಕಿಯ ಕಿಡಿ ತಗುಲದ ಹಣತೆಗಳು ಪ್ರಜ್ವಲಿಸಲು ಆಸರೆ ಆಗಬೇಕು.ಒಂದು ಸಂಗತಿಯನ್ನು ಗಮನಿಸಬೇಕು ಸಾಲು ಪ್ರಣತಿಗಳಲ್ಲಿ ಬೆಳಗುತ್ತಿರುವ ಒಂದೆರಡು ಪ್ರಣತೆಗಳು ಸಹ ಸ್ವಯಂಪ್ರಕಾಶವಾಗಿ ತಮ್ಮಿಂದ ತಾವೇ ಬೆಳಗುತ್ತಿಲ್ಲ,ಯಾರೋ ಬೆಂಕಿಯನ್ನು ಮುಟ್ಟಿಸಿದ್ದರಿಂದ ಬೆಳಗುತ್ತಿವೆ.ಎಣ್ಣೆ,ಬತ್ತಿ ಇದ್ದರೂ ಪ್ರಣತೆ ಬೆಳಗಲು ಹೊರಗಿನವರ ನೆರವು- ಸಹಾಯ ಬೇಕು.ಬೆಳಕನುಂಡವರು ಇತರರಿಗೆ ಬೆಳಕಾಗಬೇಕು.ಒಂದು ಹಣತೆ ಸಾವಿರ ಹಣತೆಗಳನ್ನು ಬೆಳಗಿಸಬೇಕು.ಇದು ಗುರುಗಳು,ಸ್ವಾಮಿಗಳು ಆದವರು ಮಾಡಬೇಕಾದ ಕೆಲಸ.ಪರಮಾತ್ಮನ ಕೃಪೆಯಿಂದ ಗುರುವಾನುಗ್ರಹದಿಂದ ನನಗೆ ದೊರೆತ ಬೆಳಕಿನ ಕಿಡಿಯನ್ನು ಎಲ್ಲರ ಆತ್ಮಜ್ಯೋತಿಗಳಲ್ಲಿ ಪ್ರಜ್ವಲಿಸುವಂತೆ ಮಾಡುವೆ ಎನ್ನುವ ಸಂಕಲ್ಪ ಮಾಡಿ ಆತ್ಮಜಾಗೃತಿಗೆ ಕಾರಣರಾಗಬೇಕು.ಇದನ್ನು ಬಿಟ್ಟು ನಾನು ಕುಳಿತ ಗದ್ದುಗೆಯಿಂದಲೇ ದೊಡ್ಡವನು ಎಂದು ಭ್ರಮಿಸಿ ಅವರಿವರು ನಮಸ್ಕರಿಸಲಿ ಎಂದು ಪಾದಕೊಡುತ್ತ,ಪಾದಪೂಜೆ ಮಾಡಿಸಿಕೊಳ್ಳುವುದು ಅಜ್ಞಾನ ಮತ್ತು ಭ್ರಮೆ.ನನ್ನ ಪಾದಗಳಿಗೆ ನಮಸ್ಕರಿಸುವವರನ್ನು ನಾನು ಉದ್ಧರಿಸುತ್ತೇನೆ ಎನ್ನುವ ಸಾಮರ್ಥ್ಯ ಉಳ್ಳವರು ಅವರ ಶಿಷ್ಯರು,ಅನುಯಾಯಿಗಳಿಗೆ ಪಾದ ಕೊಡಬಹುದು.ಆದರೆ ಹುಸಿಪ್ರತಿಷ್ಠೆಗೆ ಪಾದಕೊಟ್ಟು ಪಾಪಭಾಜನರಾಗಬೇಡಿ,ಪರಮಾತ್ಮನ ಪಥದಿಂದ ದೂರ ಆಗಬೇಡಿ.ಮಲಭಾಂಡದೇಹಿಗಳ ಪಾದಗಳಿಗೆ ನಮಸ್ಕರಿಸುವುದರಿಂದ ಅವರ ಪಾಪ,ಕರ್ಮ,ರೋಗಗಳು ನಮಸ್ಕರಿಸಿದವರನ್ನೂ ಕಾಡುತ್ತವೆ.ಪಾದ ಕೊಡುವುದು ಒಂದು ಪ್ರತಿಷ್ಠೆ ಆಗಬಾರದು,ಒಂದು ತತ್ತ್ವ ಆಗಬೇಕು.ನನ್ನ ಪಾದಗಳಲ್ಲಿ ಶರಣು ಬಂದವರ ಕರ್ಮಕ್ಷಯ ಮಾಡಿ,ಅವರನ್ನು ಕಾಡುವ ಸಕಲ ಪೀಡೆ- ಅನಿಷ್ಟಗಳಿಂದ ಅವರನ್ನು ಮುಕ್ತರನ್ನಾಗಿ ಮಾಡಬಲ್ಲೆ ಎನ್ನುವ ಯೋಗಸಾಮರ್ಥ್ಯ ಉಳ್ಳವರು,ಲೋಕಾನುಗ್ರಹಬದ್ಧರು,ಸಂಕಲ್ಪಸಿದ್ಧರು ಪಾದಗಳನ್ನು ಕೊಟ್ಟು ಉದ್ಧರಿಸಬಹುದು

ತಪಸ್ವಿಗಳು,ಸಿದ್ಧಪುರುಷರಾದವರ ಜೊತೆಗೆ ತಂದೆ- ತಾಯಿಗಳು ಮತ್ತು ದೀಕ್ಷೆ ನೀಡಿದ ಗುರುವಿನ ಪಾದಗಳಿಗೆ ನಮಸ್ಕರಿಸುವುದು ಸಮರ್ಥನೀಯ ಮತ್ತು ಅದು ಸಂಸ್ಕೃತಿ.ತಂದೆ- ತಾಯಿಗಳು,ಗುರುಗಳಿಗಿಂತ ಪೂಜ್ಯರಾದವರು ಬೇರೆ ಯಾರೂ ಇಲ್ಲ.ಮನೆಯಲ್ಲಿ ವೃದ್ಧ ತಂದೆ ತಾಯಿಗಳ ಸೇವೆ- ಆರೈಕೆ ಮಾಡದೆ ಮಠ ಮಂದಿರಗಳ ಗುರುಗಳ ಮುಂದೆ ಅಡ್ಡ ಉದ್ದ ಬಿದ್ದರೆ ಉದ್ಧಾರವಾಗುವುದಿಲ್ಲ.ದೀಕ್ಷಾಗುರುವನ್ನು ಸಾಮಾನ್ಯ ಮನುಷ್ಯನೆಂದು ಉಪೇಕ್ಷಿಸಿ ದೊಡ್ಡ ದೊಡ್ಡ ಮಠ ಪೀಠಗಳ ಸ್ವಾಮಿಗಳ ಸೇವೆ ಮಾಡಿದರೆ ನರಕವಲ್ಲದೆ ಮೋಕ್ಷ ದೊರಕದು,ಸದ್ಗತಿ ಸಿಗದು.ಶಾಪಾನುಗ್ರಹಸಮರ್ಥರಾದ ಪೂಜ್ಯರು ಎಲ್ಲೋ ಕೋಟಿಗೆ ಒಬ್ಬರಾಗಿ ಅಲ್ಲಲ್ಲಿ ಇರುತ್ತಾರೆ ನಮ್ಮ ಗಮನಕ್ಕೆ ಬಾರದೆ.ನಮ್ಮ ಕಣ್ಣುಗಳ ಮುಂದೆ ದೊಡ್ಡವರಾಗಿ ಮೆರೆಯುತ್ತಿರುವವರೆಲ್ಲ ಆಧ್ಯಾತ್ಮಿಕವಾಗಿ ಶೂನ್ಯರೆ! ಆತ್ಮಜ್ಞಾನಿಯಾದವನು ಜಗತ್ತಿನ ಎಲ್ಲೆಡೆ ಆತ್ಮವನ್ನೇ ಕಾಣುತ್ತಾನೆ.ಪರಮಾನುಭವಿಯಾದವನು ವಿಶ್ವದ ಎಲ್ಲರಲ್ಲಿಯೂ ಪರಮಾತ್ಮನನ್ನೇ ಕಾಣುತ್ತಾನೆ.ಆತ್ಮಜ್ಞಾನಿಯು ಜನರ ವಂದನೆ- ನಿಂದನೆಗಳಲ್ಲಿ ಆಸಕ್ತನಿರದೆ ನಿರ್ಲಿಪ್ತನಾಗಿರುತ್ತಾನೆ.ಆತ್ಮಜ್ಞಾನಿಯು ಯಾರಿಗೂ ಪಾದಗಳನ್ನು ನೀಡುವುದಿಲ್ಲ,ಪಾದಗಳನ್ನು ಪೂಜಿಸಲು ಹೇಳುವುದಿಲ್ಲ.ಹುಸಿಪ್ರತಿಷ್ಠೆಯ ಭ್ರಮೆಗೆ ಒಳಗಾದವರು ಆತ್ಮತತ್ತ್ವವನ್ನರಿಯದೆ ಜನರು ಬಂದೊಡನೆ ನಮಸ್ಕರಿಸಲಿ ಎಂದು ಕಾಲುಗಳನ್ನು ಮುಂದೆಮಾಡುತ್ತಾರೆ!

ಪೂಜ್ಯರಾದವರಿಗೆ ನಂಬಿದ ಭಕ್ತರನ್ನು ಉದ್ಧರಿಸುವ ಸಾಮರ್ಥ್ಯ ಇರುತ್ತದೆಯಾಗಿ ಅಂಥವರನ್ನು ಪೂಜಿಸಬೇಕು,ಗೌರವಿಸಬೇಕು.ಜಗತ್ತಿನಲ್ಲಿ ನಾವು ಯಾರನ್ನೂ ತ್ಯಾಜರೂ ನಿಕೃಷ್ಟರು ಎಂದು ಪರಿಗಣಿಸಬಾರದು; ಆದರೆ ಕಂಡಕಂಡವರನ್ನೆಲ್ಲ ಪೂಜ್ಯರು ಎಂದು ಭ್ರಮಿಸಬಾರದು.ಯಾರ ಪಾದಗಳಲ್ಲಿ ಸಕಲತೀರ್ಥಗಳಿರುತ್ತವೆಯೋ ಅವರೇ ಪೂಜ್ಯಪಾದರು.ಬ್ರಾಹ್ಮಣರು ತಮ್ಮ ಯತಿಗಳನ್ನು ‘ತೀರ್ಥಪಾದರು’ ಎಂದು ಗೌರವಿಸುತ್ತಾರೆ.ಅದರ ಅರ್ಥ ಗುರುವಾದವನ ಪಾದಗಳಲ್ಲಿ ಎಲ್ಲ ತೀರ್ಥಗಳು ಇರುತ್ತವೆ ಎನ್ನುವುದು.ತೀರ್ಥಸ್ನಾನ ಮಾಡುವುದರಿಂದ ಪಾಪಗಳು ಕಳೆಯುವಂತೆ ಪೂಜ್ಯರ ಪಾದಗಳಲ್ಲಿ ಹಣೆಮಣಿದರೆ ಪಾಪ ಮುಕ್ತರಾಗಬಹುದು ಎನ್ನುವ ನಂಬಿಕೆಯು ‘ತೀರ್ಥಪಾದರು’ ಶಬ್ದ ಹುಟ್ಟಲು ಕಾರಣ.ದೀಕ್ಷೆಪಡೆವರು ತಮ್ಮಗುರುಗಳ ಪಾದಗಳನ್ನು ‘ ಗುರುಪಾದ’ ಎಂದು ಭಕ್ತಿ,ಗೌರವಗಳಿಂದ ಪೂಜಿಸುತ್ತಾರೆ.ಕತ್ತಲೆಯನ್ನು ಕಳೆಯುವ,ಭವದ ಬಳ್ಳಿಯನ್ನು ಹರಿದೊಗೆಯುವ ಪಾದಗಳು ಗುರುಪಾದಗಳು.ಯಾರ ಪಾದಗಳಲ್ಲಿ ನಮಸ್ಕರಿಸುವುದರಿಂದ ಪಾಪಗಳು ದೂರವಾಗಿ ಪರಮಾತ್ಮನ ಅನುಗ್ರಹಪ್ರಾಪ್ತಿಯಾಗುವುದೇ ಅಂಥವರೇ ಪೂಜ್ಯಪಾದರು.ಅಂತಹ ಪೂಜ್ಯರನ್ನು ಸೇವಿಸಿದರೆ ಪರಮಾತ್ಮನನ್ನೇ ಸೇವಿಸಿದಂತೆ.ಅಂತಹ ಪೂಜ್ಯರುಗಳ ಪಾದಗಳನ್ನು ತೊಳೆದರೆ ಸಕಲ ತೀರ್ಥಗಳಲ್ಲಿ ಮಿಂದಂತೆ.ಅಂತಹ ಪೂಜ್ಯರ ಪಾದಗಳನ್ನು ಪೂಜಿಸಿದರೆ ಪರಮಾತ್ಮನನ್ನೇ ಪೂಜಿಸಿದಂತೆ.

ಮುಕ್ಕಣ್ಣ ಕರಿಗಾರ
ಮೊ: 94808 79501

23.10.2021